Shri Guru Charitre - Chapter 42
ಅಧ್ಯಾಯ ೪೨
||ಹರಿಃ ಓಂ ಶ್ರೀ ಗುರುಭ್ಯೋ ನಮಃ ||
ಸಾಯಂದೇವನೇ ಕೇಳು ! 'ಗುರು ಸೇವೆಯನ್ನು ಮಾಡುವದು ಎಷ್ಟು ಕಠಿಣವಿದೆ' ಎಂಬ ಬಗ್ಗೆ ನಿನಗೊಂದು ಕಥೆ ಹೇಳುವೆವು. ಬ್ರಹ್ಮಾಂಶ ಸಂಭೂತವಾದ ತ್ವಷ್ಟ ಬ್ರಹ್ಮನಿಗೆ, ವಿನಯಶೀಲನೆಂಬ ಮಗನಿದ್ದನು. ಆತನು ಗುರುಕುಲದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಾಗ್ಗೆ ಒಂದು ಮಳೆಗಾಲದಲ್ಲಿ ಗುರುಗಳ ಕುಟೀರವು ಸೋರತೊಡಗಿತು. ಆದ್ದರಿಂದ ಗುರುಗಳು ಆತನಿಗೆ ಬೇರೊಂದು ಪರ್ಣ ಕುಟಿಯನ್ನು ನಿರ್ಮಿಸಲು ತಿಳಿಸಿದರು ಅದೇ ಸಮಯದಲ್ಲಿ ಗುರುಪತ್ನಿಯೂ ತನಗೆ “ಹೊಲಿಗೆ ಇಲ್ಲದ ಕುಪ್ಪಸವನ್ನು ತಂದುಕೊಡು !'' ಎಂದು ಆಜ್ಞೆ ಮಾಡಿದಳು ಗುರುಪುತ್ರನು ತನಗೆ ನೀರ ಮೇಲೆ ನಡೆಯುವದಕ್ಕೂ ಮನಬಂದಂತೆ ಚಲಿಸುವದಕ್ಕೂ ಸಮರ್ಥವಾದ ಒಂದು ಜೊತೆ ಪಾದುಕೆಗಳು ಬೇಕೆಂದು ತಿಳಿಸಿದನು. ಗುರುಪುತ್ರಿಯು, ತನಗೆ ಬೇಕಾದಲ್ಲಿಗೆ ತೆಗೆದುಕೊಂಡು ಹೋಗಲು ಬರುವಂಥ ಒಂದು ಮನೆ ಬೇಕು !” ಎಂದು ಅದೇ ಸಮಯದಲ್ಲಿ ಹೇಳಿದಳು. ಆ ಬ್ರಹ್ಮಚಾರಿಯು ದಿಕ್ಕುಗಾಣದೇ ಗುರುನಾಮಸ್ಮರಣೆ ಮಾಡುತ್ತ ಹೊರಟನು. ಆತನಿಗೆ ಅವಧೂತನೊಬ್ಬನದರ್ಶನವಾಯಿತು ಅವಧೂತನು ಆತನಿಗೆ ಕಾಶೀಯಾತ್ರೆಯ ಮಹತ್ವ ತಿಳಿಸಿ, “ನೀನು ವಿಶ್ವನಾಥನ ದರ್ಶನ ಪಡೆದರೆ ಎಲ್ಲಾ ಸಮಸ್ಯೆಗಳು ಪರಿಹಾರವಾಗುವವು ನನ್ನೊಂದಿಗೆ ಕಾಶಿಗೆ ಬಾ !” ಎಂದು ನುಡಿದು, ಆತನನ್ನು ಮನೋವೇಗದಿಂದ ಕಾಶೀ ಕ್ಷೇತ್ರಕ್ಕೆ ಕರೆದೊಯ್ದು ವಿಶ್ವನಾಥನ ದರ್ಶನ ಮಾಡಿಸಿದನು, ವಿಶ್ವನಾಥನು ವಿನಯಶೀಲನಿಗೆ ಪ್ರತ್ಯಕ್ಷನಾಗಿ, ಆತ ಬಯಸಿದ ವಸ್ತುಗಳನ್ನು ವರವಾಗಿ ಕೊಟ್ಟನು. ಅವುಗಳನ್ನೆಲ್ಲ ಬ್ರಹ್ಮಚಾರಿಯು, ಗುರು, ಗುರು ಪತ್ನಿ, ಗುರುಪುತ್ರ, ಪುತ್ರಿಯರಿಗೆ ಸಕಾಲಕ್ಕೆ ತಂದು ಒದಗಿಸಿದನು. ಗುರುಗಳು ಆತನ ಮೇಲೆ ಪ್ರಸನ್ನರಾಗಿ ಆಶೀರ್ವದಿಸಿದರು. ಮುಂದೆ ಅದೇ ಶಿಷ್ಯನು 'ವಿಶ್ವಕರ್ಮ'ನೆಂಬ ಬಿರುದು ಪಡೆದು ಪ್ರಖ್ಯಾತರಾದನೆಂದು” ಗುರುಗಳು ಸಾಯಂದೇವನಿಗೆ ತಿಳಿಸಿ, “ಗುರುಸೇವೆಯು ಇಷ್ಟು ಕಠಿಣವಾಗಿದೆ !' ಎಂದು ಹೇಳಿದರು. ಸಾಯಂದೇವನು ಗುರುಮಹಿಮೆಯನ್ನು ಹಾಡಿಹೊಗಳಲು ಗುರುಗಳು ಸಂಪ್ರೀತರಾದರು. ಇನ್ನು ಮೇಲೆ ಕುಟುಂಬ ಸಮೇತ ಗಾಣಗಾಪುರದಲ್ಲಿಯೇ ವಾಸಮಾಡು !'' ಎಂದು ಆಜ್ಞೆಮಾಡಿ ಆಶೀರ್ವದಿಸಿದರೆಂಬಲ್ಲಿಗೆ ಸಾರರೂಪ ಶ್ರೀಗುರು ಚರಿತ್ರೆಯ 42ನೆ ಅಧ್ಯಾಯ ಮುಗಿಯಿತು.
Comments
Post a Comment