Shri Guru Charitre - Chapter 41

 

 

ಶ್ರೀ ಗುರು ಚರಿತ್ರೆ


ಅಧ್ಯಾಯ ೪೧

||ಹರಿಃ ಓಂ ಶ್ರೀ ಗುರುಭ್ಯೋ ನಮಃ || 

ನಾಮಧಾರಕನೇ ಗುರುಗಳ ಕೀರ್ತಿಯು ನಾಡಿನ ತುಂಬೆಲ್ಲ ಹರಡಿಹೋಗಿತ್ತು. ಅದನ್ನು ಜನಮುಖದಿಂದ ತಿಳಿದ ನಿಮ್ಮ ಪೂರ್ವಜನಾದ ಸಾಯಂದೇವನು, ಗುರುಗಳಲ್ಲಿ ಭಕ್ತಿ ಹೊಂದಿ, ಅವರನ್ನು ಪುನಃ ದರ್ಶನ ಮಾಡಿಕೊಳ್ಳುವ ಲವಲವಿಕೆಯಿಂದ ಗಾಣಗಾಪುರಕ್ಕೆ ಬಂದನು, ಗಾಣಗಾಪುರವು ದೂರದಿಂದ ದೃಷ್ಟಿಗೆ ಬಿದ್ದೊಡನೆಯೇ ನಿಂತಲ್ಲಿಯೇ ಸಾಷ್ಟಾಂಗ ನಮಸ್ಕಾರ ಹಾಕಿದನು. ಮಠಕ್ಕೆ ಬಂದು ಗುರುಗಳನ್ನು ಕಂಡು ಅವರ ಚರಣ ಕಮಲಗಳ ಮೇಲೆ ಬಹುಭಕ್ತಿಯಿಂದ ಹೊರಳಾಡಿದನು. ಗುರುಗಳನ್ನು ನಾನಾಬಗೆಯಿಂದ ಸ್ತುತಿಸಿ ಜೈಜೈಕಾರ ಮಾಡಿದನು. ಗುರುಗಳು ಸಂತುಷ್ಟರಾಗಿ ಆತನ ತಲೆಯ ಮೇಲೆ ಹಸ್ತವನ್ನಿಟ್ಟು, “ಸಾಯಂದೇವಾ ! ನೀನು ನಮ್ಮ ಪರಮಭಕ್ತನು, ನಿನಗೆ ವಂಶಪರಂಪರೆಯಾಗಿಯೂ ನಮ್ಮ ಸೇವಾ ಭಾಗ್ಯ ಲಭಿಸುವದು. ನೀನು ಬೇಗ ಸಂಗಮಕ್ಕೆ ಹೋಗಿ ಸ್ನಾನ ಮಾಡಿ, ಅಶ್ವತ್ಥ ಸೇವೆಯನ್ನು ಮುಗಿಸಿಕೊಂಡು ಬಾ ! ಇಂದು ನಮ್ಮ ಪ೦ಕ್ತಿಯಲ್ಲಿಯೇ ಭೋಜನವಾಗಲಿ,'' ಎಂದು ಹೇಳಿದರು. ಸಾಯ೦ದೇವನು ಗುರುಗಳ ಆದೇಶದಂತೆ ಸ್ನಾನ ಅಶ್ವತ್ಥ ಸೇವೆಗಳನ್ನು ಮುಗಿಸಿಕೊಂಡು ಬಂದು, ಗುರುಪೂಜೆ ಮಾಡಿ, ಶ್ರೀ ಗುರುಗಳಿಗೆ ಭಿಕ್ಷೆ ಹಾಕಿದನು. ಶಿಷ್ಯರು ಸಮೇತರಾಗಿ ಗುರುಗಳು ಅಂದು ಬಹು ತೃಪ್ತಿಯಿಂದ ಊಟ ಮಾಡಿದರು. ಊಟದ ನಂತರ ಗುರುಗಳು ಸಾಯಂದೇವನಿಗೆ “ನೀನು ಎಲ್ಲಿರುವಿ ?. ನಿನ್ನ ಹೆಂಡತಿ ಮಕ್ಕಳಲ್ಲಿರುವರು ? ನಿಮ್ಮ ಕ್ಷೇಮ ಸಮಚಾರವೇನು ?'' ಎಂದು ಮುಂತಾಗಿ ಪ್ರಶ್ನೆ ಮಾಡಿದರು. ಅದಕ್ಕೆ ಸಾಯಂದೇವನು, “ಗುರುವೇ ! ತಮ್ಮ ಅನುಗ್ರಹದಿಂದ ನಾವೆಲ್ಲರೂ ಕ್ಷೇಮವಾಗಿದ್ದೇವೆ. ಸಧ್ಯಕ್ಕೆ ಉತ್ತರ ಕಂಚಿಯಲ್ಲಿ ವಾಸವಾಗಿರುವೆವು. ತಮ್ಮ೦ದಿರ ಮೇಲೆ ನನ್ನ ಮಕ್ಕಳ ಸ೦ಸಾರ ಭಾರವಿಟ್ಟು, ನಿಮ್ಮ ಸನ್ನಿಧಿಯಲ್ಲಿಯೇ ಆಯುಷ್ಯ ತೀರಿಸಬೇಕೆಂಬ ಅಭಿಲಾಷೆ ನನ್ನದಾಗಿದೆ'' ಎಂದು ನುಡಿದನು. ಗುರುಗಳು ನಮ್ಮ ಸೇವೆ ಬಹಳ ಕಠಿಣವಾಗಿದೆ ಸಾಯಂದೇವಾ ! ಯಾಕೆಂದರೆ ನಾವು ಊರಲ್ಲಿರುವೆವೋ, ಅರಣ್ಯದಲ್ಲಿರುವೆವೋ ಹೇಳಲಿಕಾಗದು'' ಎಂದು ನುಡಿದರು. ಅಂಥ ಸ್ಥಿರ ಮನಸ್ಸು ನಿನಗಿದ್ದರೆ, ಇಂದಿನಿಂದಲೇ ನೀನು ನಮ್ಮ ಸೇವೆಯನ್ನು ಕೈಗೊಳ್ಳಬಹುದು !' ಎಂದು ಅಭಯವನ್ನಿತ್ತರು. ಸಾಯಂದೇವನು ಗುರು ಸೇವೆಯಲ್ಲಿ ನಿರತನಾದನು. 4 ತಿ೦ಗಳ ಕಾಲ ಕಳೆಯಿತು. ಒಂದು ದಿನ ಸಾಯಂಕಾಲ ಗುರುಗಳು ಸಾಯಂದೇವನೊಬ್ಬನನ್ನೇ ಸಂಗಡ ಕರೆದುಕೊಂಡು ಸಂಗಮಕ್ಕೆ ಹೋದರು. ಮರದಡಿಯಲ್ಲಿ ಮಾತಾಡುತ್ತ ಕುಳಿತಾಗ ಒಮ್ಮಿಂದೊಮ್ಮಿಲೇ ಬಿರುಗಾಳಿ ಬೀಸಿ ಮಳೆ ಸುರಿಯಲಾರಂಭಿಸಿತು. ಸಾಯಂದೇವನು ಮಳೆಯ ಹನಿಗಳು ಗುರುಗಳಿಗೆ ಸಿಡಿಯದಂತೆ ತನ್ನ ಅಂಗವಸ್ತ್ರವನ್ನು ಗುರುಗಳಿಗೆ ಮರೆ ಮಾಡಿಕೊಂಡು ನಿಂತನು. ಮಳೆಯು ಸ್ವಲ್ಪ ಕಡಿಮೆಯಾಯಿತು. ತಂಗಾಳಿ ಬೀಸತೊಡಗಿತು. ಗುರುಗಳು ಸಾಯಂದೇವನ ಶ್ರದ್ಧೆಯನ್ನು ಪರೀಕ್ಷೆ ಮಾಡಲೆಂದು. ಸಾಯಂದೇವಾ ! ನನಗೀಗ ಚಳಿಯಾಗತೊಡಗಿದೆ. ನೀನು ಬೇಗ ಮಠಕ್ಕೆ ಹೋಗಿ ಅಗ್ಗಿಷ್ಟಿಕೆಯನ್ನು ಹೊತ್ತಿಸಿಕೊಂಡು ಬಾ !” ಎಂದು ಹೇಳಿದರು. ಸಾಯಂದೇವನು, “ಅಪ್ಪಣೆ ಗುರುಗಳೇ !' ಎಂದು ಹೊರಡತೊಡಗಿದನು. ಗುರುಗಳು ಆತನನ್ನು ಎಚ್ಚರಿಸುತ್ತ “ನೀನು ಹೋಗುವಾಗ, ಅಥವಾ ಬರುವಾಗ, ಎಡಬಲಗಳಿಗೆ ತಿರುಗಿನೋಡದಂತೆ ಬಾ !?” ಎಂದು ಗಟ್ಟಿಯಾಗಿ ಕೂಗಿ ಹೇಳಿದರು. ಸಾಯಂದೇವನು ಗುರುಗಳ ನಾಮಸ್ಮರಣೆ ಮಾಡುತ್ತ ಅವಸರದಿಂದ ಹೊರಟನು. ರಾತ್ರಿಯಾಗಿತ್ತು ಅದರಲ್ಲಿಯೂ ಆಕಾಶದ ತುಂಬೆಲ್ಲಾ ಮೋಡಕವಿದಿತ್ತು ಮಿಂಚಿದಾಗ ಮಾತ್ರ ಸ್ವಲ್ಪ ದಾರಿ ಕಾಣಿಸುತ್ತಿತ್ತು, ಅಂಥದರಲ್ಲಿಯೇ ಸಾಯಂದೇವನು ಅಗಸೆಯ ಬಾಗಿಲಿಗೆ ಬಂದು ತಲುಪಿದನು. ಮಠಕ್ಕೆ ಹೋಗಿ, ದ್ವಾರಪಾಲಕನಿಗೆ ವಿಷಯ ತಿಳಿಸಿ, ಅವಸರದಿಂದ ಅಗ್ಗಿಷ್ಟಿಕೆಯನ್ನು ಸಿದ್ಧಪಡಿಸಿಕೊಂಡು, ಸಂಗಮದತ್ತ ಹೊರಟನು, ಅರ್ಧದಾರಿ ಸಾಗಿದಾಗ 'ಗುರುಗಳು ಎಡಬಲಗಳ ಕಡೆಗೆ ನೋಡಬೇಡ ಎಂದು ಯಾಕೆ ಸೂಚಿಸಿದರು ?' ಎಂಬ ಕುತೂಹಲದಿಂದ ಬಲಕ್ಕೆ ನೋಡಿದನು. ದೊಡ್ಡ ಘಟಸರ್ಪವೊಂದು ಆತನೊಂದಿಗೆ ಮಾರ್ಗದ ಬದಿಯಿಂದ ಧಾವಿಸಿ ಬರತೊಡಗಿತ್ತು ಭೀತಿಗೊಂಡು ಎಡಕ್ಕೆ ನೋಡಿದನು. ಅಲ್ಲಿಯೂ ಅಂಥದೇ ಒಂದು ಸರ್ಪ ಎಡಬದಿಯ ರಸ್ತೆಗುಂಟ ಧಾವಿಸಿ ಈತನೆಡೆಗೆ ಬರತೊಡಗಿತ್ತು, ಸಾಯಂದೇವನ ಎದೆಯಲ್ಲಿ ನೀರು ಸುರವಿದಂತಾಯಿತು. ಜೀವದ ಮೇಲಿನ ಹಂಗುದೊರೆದು ಅಗ್ಗಿಷ್ಟಿಕೆಯೊಂದಿಗೆ ಸಂಗಮದತ್ತ ಓಡ ತೊಡಗಿದನು. ಗುರುನಾಮವು ಆತನ ನಾಲಿಗೆಯಲ್ಲಿ ನಲಿದಾಡುತ್ತಿರಲು, ಸಹಸ್ರ ದೀಪಗಳ ಬೆಳಕಿನಲ್ಲಿ ಗುರುಗಳು ಬಹಳಷ್ಟು ಜನರೊಂದಿಗೆ ಕುಳಿತಿರುವದು, ದೂರದಿಂದಲೇ ಆತನಿಗೆ ಗೋಚರಿಸಿತು. ಆದರೆ ಗುರುಗಳನ್ನು ಸಮೀಪಿಸುತ್ತಿದ್ದಂತೆಯೇ ಅವೆಲ್ಲಾ ಅದೃಶ್ಯವಾಗಿ ಹೋದವು. ಆತನನ್ನು ಬೆಂಬತ್ತಿ ಬಂದ ಸರ್ಪಗಳೂ, ಸಂಗಮಕ್ಕೆ ಬಂದೊಡನೆಯೇ ಕಾಣದಂತಾದವು. ಸಾಯಂದೇವನು ಅಗ್ಗಿಷ್ಟಿಕೆಯನ್ನು ಗುರುಗಳೆದುರು ತಂದಿಟ್ಟು, ಬೆಂಕಿಯನ್ನು ಪ್ರಜ್ವಲಗೊಳಿಸತೊಡಗಿದನು, ಅಂಥ ಚಳಿಯಲ್ಲಿಯೂ ಆತನ ಮುಖದ ಮೇಲೆ ಮೂಡಿದ್ದ ಬೆವರ ಹನಿಗಳನ್ನು ಗಮನಿಸಿದ ಗುರುಗಳು ನೀನು ಇಷ್ಟೇಕೆ ಅಂಜಿರುವಿ ?” ಎಂದು ಸಾಯಂದೇವನಿಗೆ ಪ್ರಶ್ನೆ ಮಾಡಿದರು. ಸಾಯಂದೇವನು ಉತ್ತರಿಸದೇ ಅತ್ತಿತ್ತ ನೋಡಿದಾಗ “ಓಹೋ ! ಆ ಸರ್ಪಗಳನ್ನು ನಾವೇ ನಿನ್ನ ಬೆಂಬಲಕ್ಕಾಗಿ ಕಳಿಸಿಕೊಟ್ಟಿದ್ದೆವು !'' ಎಂದು ಹೇಳಿ ನಗತೊಡಗಿದರು. ಸಾಯಂದೇವನು ಗುರುವೇ ! ನನ್ನ ಭಕ್ತಿ ಇನ್ನಷ್ಟು ಸ್ಥಿರವಾಗುವಂತೆ ಅನುಗ್ರಹಿಸು !' ಎಂದು ಪ್ರಾರ್ಥಿಸಿದನು. ಗುರುಗಳು ಆ ರಾತ್ರಿಯನ್ನು ಅಲ್ಲಿಯೇ ಕಳೆಯುವ ಉದ್ದೇಶದಿಂದ ಸಾಯಂದೇವನಿಗೆ ಒಂದು ಕಥೆಯನ್ನು ಹೇಳತೊಡಗಿದರೆಂಬಲ್ಲಿಗೆ ಸಾರರೂಪ ಶ್ರೀಗುರು ಚರಿತ್ರೆಯ ನಾಲ್ವತ್ತೊಂದನೆಯ ಅಧ್ಯಾಯ ಮುಕ್ತಾಯವಾಯಿತು.

Comments

Popular posts from this blog

Hanumane Tandeyu Hanumane Thayiyu lyrics

Sankshipta Guru Charitre in kannada

Sri Rama Chandirane