Shri Guru Charitre - Chapter 48
ಅಧ್ಯಾಯ ೪೮
||ಹರಿಃ ಓಂ ಶ್ರೀ ಗುರುಭ್ಯೋ ನಮಃ ||
ನಾಮಧಾರಕಾ ! ಗುರುಗಳ ಇನ್ನೊಂದು ಲೀಲೆಯನ್ನು ಕೇಳು ! ಗುರುಗಳು ನಿತ್ಯದಲ್ಲಿ ಗಾಣಗಾಪುರದಿಂದ ಸ೦ಗಮಕ್ಕೆ ಅನುಷ್ಠಾನಕ್ಕಾಗಿ ಹೋಗಿ ಬರುತ್ತಿದ್ದರು. ದಾರಿಯ ಬದಿಗಿದ್ದ ಹೊಲದೊಳಗಿನ ರೈತನೊಬ್ಬನು, ಗುರುಗಳು ಹೋಗುವಾಗೊಮ್ಮೆ ಬರುವಾಗೊಮ್ಮೆ ತನ್ನ ಹೊಲದಿಂದ ಓಡಿ ಬಂದು, ಬಹುಭಕ್ತಿಯಿಂದ ಸಾಷ್ಟಾಂಗ ನಮಸ್ಕಾರ ಮಾಡಿ ಹೋಗುತ್ತಿದ್ದನು, ಹೀಗೆಯೇ ಕೆಲದಿನ ಕಳೆಯಲು, ಒಂದು ದಿನ ಗುರುಗಳು, “ಅಪ್ಪಾ ! ದಿನ ನಿತ್ಯದಲ್ಲೂ ಯಾಕೆ ಹೀಗೆ ಕಷ್ಟ ಪಟ್ಟು ಓಡಿ ಬಂದು ನಮಸ್ಕಾರ ಮಾಡುವಿ ? ನಿನ್ನಿಚ್ಛೆ ಏನಿದೆ ?” ಎಂದು ಪ್ರಶ್ನೆ ಮಾಡಿದರು. ಅದಕ್ಕೆ ಆ ಒಕ್ಕಲಿಗನು, “ಗುರುಗಳೇ ! ನನ್ನ ಹೊಲದಲ್ಲಿ ಜೋಳ ಬಿತ್ತಿರುವೆ. ತಮ್ಮ ಅನುಗ್ರಹದಿಂದಲೇ ಆ ಪೈರು ಚೆನ್ನಾಗಿ ಬೆಳೆದು, ಈಗ ಬೆಳಸಿಗಾಳಿಗೆ ಬಂದಿದೆ, ದಯವಿಟ್ಟು ತಾವು ನಾಲ್ಕು ಹೆಜ್ಜೆ ನಡೆದು ಬಂದು ಆ ಪೈರಿನ ಮೇಲೆ ತಮ್ಮ ಅಮೃತ ದೃಷ್ಟಿ ಹಾಯಿಸಿರಿ ! ಅಂದರೆ ನನಗೆ ಇಮ್ಮಡಿ ಕಾಳಿನ ಲಾಭವಾಗುತ್ತದೆ !'' ಎಂದು ಪ್ರಾರ್ಥಿಸಿಕೊಂಡನು. ಗುರುಗಳು ಆತನ ಪ್ರಾರ್ಥನೆಯಂತೆ ಅವನ ಹೊಲದವರೆಗೆ ಹೋಗಿ ಪೈರನ್ನು ನೋಡಿದರು. ಜೋಳದ ಬೆಳೆ ತುಂಬಾ ಚೆನ್ನಾಗಿ ಬೆಳೆದು, ಹಾಲುಗಳಾಗಿತ್ತು, ಗುರುಗಳು ಆ ರೈತನನ್ನು ಕುರಿತು, ಭಕ್ತಾ! ನೀನು ನಾವು ಹೇಳಿದಂತೆ ನಿಷ್ಠೆಯಿಂದ ಆಚರಿಸುವದಾದರೆ, ನೀನು ಪ್ರತಿವರ್ಷ ಪಡೆಯುವದಕ್ಕಿಂತ ಹತ್ತುಪಟ್ಟು ಹೆಚ್ಚಿನಕಾಳು ಒಕ್ಕಬಹುದು, ಆದರೆ ಅದಕ್ಕೆ ಭಕ್ತಿ ವಿಶ್ವಾಸಗಳು ಬೇಕು !'' ಎಂದು ನುಡಿದರು. ಒಕ್ಕಲಿಗನು ವಿಧೇಯತೆಯಿಂದ 'ಗುರುಗಳೇ ! ತಮ್ಮ ಆಜ್ಞೆಯೇ ನನಗೆ ವೇದವಾಕ್ಯ ! ಅಪ್ಪಣೆ ಕೊಡಿಸುವ ಕೃಪೆಯಾಗಬೇಕು !'' ಎಂದನು. ಗುರುಗಳು, “ನಾವು ಈಗ ಸಂಗಮಕ್ಕೆ ಹೊರಟಿದ್ದೇವೆ. ಅನುಷ್ಠಾನ ಮುಗಿಸಿಕೊಂಡು ಮಧ್ಯಾಹ್ನ ಮಠಕ್ಕೆ ಮರಳುತ್ತೇವೆ. ನಾವು ಸಂಗಮದಿಂದ ತಿರುಗಿ ಬರುವಷ್ಟರಲ್ಲಿಯೇ ನೀನು ಈ ಬೆಳೆಯನ್ನೆಲ್ಲ ಕೊಯ್ದು ಹಾಕಿಬಿಡು!” ಎಂದು ಆಜ್ಞೆ ಮಾಡಿ ಹೊರಟರು. ಗುರುಗಳ ಮಾತಿನಲ್ಲಿ ವಿಶ್ವಾಸ ಹೊಂದಿದ್ದ ರೈತನು ತಡಮಾಡದೇ ಊರೊಳಗೆ ಬಂದನು ನಾಲ್ಕಾರು ಕೂಲಿಯ ಆಳುಗಳನ್ನು ಮಾಡಿಕೊಂಡು ಹೊಲಕ್ಕೆ ಬಂದು ಜೋಳದ ಪೈರನ್ನು ಕೊಯ್ಯತೊಡಗಿದನು. ಅದನ್ನು ನೋಡಿ ಆತನ ಹೆಂಡತಿ ಹಾಗೂ ಮಕ್ಕಳು, “ನಿನಗೆ ತಲೆ ಕೆಟ್ಟಿದೆಯೇನೋ ? ಹಾಲು ಬೆಳೆಯಿಸಿಯಿರುವ ಪೀಕನ್ನೇಕೆ ಕೊಯ್ಯುವಿ?” ಎಂದು ಹರಕತ್ತು ಮಾಡಲಿಕ್ಕೆ ಬಂದರು. ಆದರೆ ಆ ಒಕ್ಕಲಿಗನು ಅವರ ಮಾತಿಗೆ ಲಕ್ಷ್ಯಕೊಡದೇ ಅವರನ್ನೆಲ್ಲ ಕಲ್ಲು ತೂರಿ ಊರ ಕಡೆಗೆ ಓಡಿಸಿಬಿಟ್ಟನು. ಗುರುಗಳು ಅನುಷ್ಠಾನ ಮುಗಿಸಿಕೊಂಡು ಮರಳುವಷ್ಟರಲ್ಲಿಯೇ ಒಕ್ಕಲಿಗನು ಪೈರನ್ನೆಲ್ಲ ಕೊಯ್ದು ಮುಗಿಸಿದ್ದನು. ಗುರುಗಳನ್ನು ಕರೆದೊಯ್ದು ಅದನ್ನೆಲ್ಲ ತೋರಿಸಿ “ತಮ್ಮ ಆಜ್ಞೆ ಪಾಲಿಸಿರುವೆ'' ಎಂದು ವಿಧೇಯತೆಯಿಂದ ನಮಸ್ಕರಿಸಿದನು. ಗುರುಗಳು ನಗುತ್ತ 'ಹುಚ್ಚಪ್ಪಾ ! ನಾವು ವಿನೋದಕ್ಕಾಗಿ ಹೇಳಿದ ಮಾತನ್ನು ನಿಜವೆಂದು ನಂಬಿಬಿಟ್ಟಿಯಾ ?'' ಎಂದರು. ಒಕ್ಕಲಿಗನ ಚಿತ್ತವು ಅದರಿಂದ ವಿಚಲಿತವಾಗಲಿಲ್ಲ. “ನಿಮ್ಮಾಜ್ಞೆಯೇ ನನಗೆ ಕಾಮಧೇನು ! ಎಂದು ದೃಢ ವಿಶ್ವಾಸದಿಂದ ಹೇಳಿಬಿಟ್ಟನು. ಗುರುಗಳು ನಸುನಗುತ್ತ ಸರಿ; ನಿನ್ನ ವಿಶ್ವಾಸದ೦ತೆಯೇ ನಿನಗೆ ಫಲ ದೊರೆಯಲಿ !?” ಎಂದು ಆಶೀರ್ವದಿಸಿ ಹೊರಟುಹೋದರು. ಮರುದಿವಸ ಬಿರುಗಾಳಿಯೊಂದಿಗೆ ಬಹುದೊಡ್ಡ ಮಳೆ ಸುರಿಯಿತು. ಅದರ ಫಲವಾಗಿ ಉಳಿದ ರೈತರ ಪೀಕುಗಳೆಲ್ಲ ನೆಲಕ್ಕೆ ಬಿದ್ದು, ನೀರಿನಲ್ಲಿ ಕೊಚ್ಚಿಕೊಂಡು ಹೋದವು. ಹೀಗಾಗಿ ಎಲ್ಲ ರೈತರೂ ಹಾನಿಗೊಳಗಾದರು. ಈ ರೈತನ ಹೊಲದಲ್ಲಿ ಮಾತ್ರ, ಕೊಯ್ದಿದ್ದ ಕೋಲಿಗಳಿಗೆ ಹತ್ತು ಕುಳೆಗಳೊಡೆದು ಸೊಕ್ಕಿನಿಂದ ಬೆಳೆಯತೊಡಗಿದವು. ಆ ರೈತನು ಜೋಳವನ್ನೊಕ್ಕಿದಾಗ, ಗುರುವಾಕ್ಯದಂತೆ ಆತನಿಗೆ ಪ್ರತಿವರ್ಷ ಬೆಳೆಯುವ ಜೋಳದ ಹತ್ತು ಪಟ್ಟು ಹೆಚ್ಚಿಗೆ ಕಾಳು ಲಭ್ಯವಾದವು. ರೈತನು ಸಂಪ್ರೀತನಾಗಿ ತನ್ನ ಹೆಂಡತಿ ಮಕ್ಕಳೊಂದಿಗೆ ಗುರುಗಳ ಬಳಿಗೆ ಬಂದು, ಗುರುಗಳನ್ನು ಬಹುಭಕ್ತಿಯಿಂದ ಪೂಜಿಸಿ ಆಶೀರ್ವಾದ ಪಡೆದುಕೊಂಡು ಹೋದನೆಂದು, ನಾಮಧಾರಕನಿಗೆ ಸಿದ್ಧಮುನಿಯು ತಿಳಿಸಿದನೆಂಬಲ್ಲಿಗೆ ಸಾರರೂಪ ಶ್ರೀ ಗುರುಚರಿತ್ರೆಯ 48ನೆಯ ಅಧ್ಯಾಯ ಮುಗಿಯಿತು.
Comments
Post a Comment