Shri Guru Charitre - Chapter 40

 

 

ಶ್ರೀ ಗುರು ಚರಿತ್ರೆ


ಅಧ್ಯಾಯ ೪೦

||ಹರಿಃ ಓಂ ಶ್ರೀ ಗುರುಭ್ಯೋ ನಮಃ || 

ನಾಮಧಾರಕಾ ! ಒಂದು ದಿನ ನರಹರಿ ಎಂಬ ಹೆಸರಿನ ಯಜುರ್ವೇದೀ ಬ್ರಾಹ್ಮಣನೊಬ್ಬನು ಕುಷ್ಠ ರೋಗದಿಂದ ಪೀಡಿತನಾಗಿ, ಗುರು ಕೃಪೆಗಾಗಿ ಬಂದನು. ಆತನು ಗುರುಗಳೆದುರು ತನ್ನ ದೀನ ಸ್ಥಿತಿಯನ್ನು ಹೇಳಿಕೊಳ್ಳುತ್ತ ಸದ್ಗುರುನಾಥಾ ನಾನು ಯಜುರ್ವೇದವನ್ನು ಅಭ್ಯಾಸ ಮಾಡಿದ್ದರೂ ಸಹಿತ, ಪೂರ್ವಜನ್ಮದ ಪಾಪ ಕರ್ಮಗಳಿಂದಾಗಿ, ಈ ಹೀನ ಬೇನೆಯು ನನಗೆ ಅಂಟಿಕೊಂಡಿದೆ. ಇದರಿಂದಾಗಿ ನನಗೆ ಜನರಲ್ಲಿ ಮಯ್ಯಾದೆಯಿಲ್ಲದಂತಾಗಿದೆ, ಯಾರೂ ನನ್ನನ್ನು ಸಮೀಪಕ್ಕೆ ಬರಿಸಿಗೊಡದಾಗಿದ್ದಾರೆ. ದಯಾಳುಗಳಾದ ತಾವು ನನ್ನನ್ನು ಉದ್ಧಾರ ಮಾಡುವಿರೆಂದು ವಿಶ್ವಾಸದಿಂದ ತಮ್ಮ ದರ್ಶನಕ್ಕೆ ಬಂದಿರುವೆ.” ಎಂದು ಪ್ರಾರ್ಥಿಸಿಕೊಂಡನು. ಗುರುಗಳು ಮಠದ ಹತ್ತಿರ ಉರುವಲಕ್ಕಾಗಿ ತಂದು ಹಾಕಿದ್ದ ಕಟ್ಟಿಗೆಗಳಲ್ಲಿದ್ದ ಒಂದು ಔದುಂಬರದ ಕಟ್ಟಿಗೆಯನ್ನು ಕೈಗೆತ್ತಿಕೊಂಡು ಆ ಬ್ರಾಹ್ಮಣನಿಗೆ ಕೊಟ್ಟರು. ಆ ಕಟ್ಟಿಗೆಯನ್ನು ಸಂಗಮದ ಪೂರ್ವ ಭಾಗದಲ್ಲಿ ನೆಡಿಸಿ, ತ್ರಿಕಾಲದಲ್ಲಿಯೂ ನದೀ ಸ್ನಾನ ಮಾಡಿ, ಅದಕ್ಕೆ ಕೊಡದಿಂದ ನೀರು ಹಾಕು ! ಅದು ಎಂದು ಚಿಗುರೊಡೆದು ಮರವಾಗುವದೋ ಅಂದೇ ನಿನ್ನ ಬೇನೆ ನಿವಾರಣೆ ಆಗುವದು !” ಎಂದು ಆಜ್ಞೆ ಮಾಡಿದರು.

ಗುರುಗಳ ಆಜ್ಞೆಯಂತೆ ಧೃಡ ಸಂಕಲ್ಪ ಮಾಡಿಕೊಂಡ ಆ ಬ್ರಾಹ್ಮಣನು ಅಂದೇ ಆ ಕಟ್ಟಿಗೆಯನ್ನು ಸಂಗಮದ ಪೂರ್ವದಿಕ್ಕಿನಲ್ಲಿ ಒಂದು ಮಡಿ ಮಾಡಿ ಮರದಂತೆ ಹುಗಿದ, ಸ್ನಾನ ಮಾಡಿ ಉಪವಾಸ ವ್ರತದಿಂದಲೇ ಅದಕ್ಕೆ ತ್ರಿಕಾಲದಲ್ಲಿಯೂ ನೀರು ಹೊತ್ತು ಹಾಕತೊಡಗಿದನು. ಆತನು ಒಣ ಕಟ್ಟಿಗೆಗೆ ನೀರು ಹೊತ್ತೊತ್ತು ಹಾಕುವ ಕೌತುಕವನ್ನು ಕಂಡ ಕೆಲವರು, ಎಲೋ ಬ್ರಾಹ್ಮಣಾ ! ನೀನು ವ್ಯರ್ಥವಾಗಿ ಶ್ರಮಪಡುತ್ತಿರುವಿ ! ಒಣ ಕಟ್ಟಿಗೆಯು ಎಂದಾದರೂ ಚಿಗುರೊಡೆಯಬಲ್ಲದೇ ? “ನಿನ್ನದು ನಿವಾರಣೆಯಾಗದ ಬೇನೆ' ಎಂದು ತಿಳಿದೇ ಗುರುಗಳು ನಿನಗೆ ಈ ರೀತಿ ಆಜ್ಞೆ ಮಾಡಿದ್ದಾರೆ. ಇನ್ನೂ ತಿಳಿಯಬಾರದೇ ನಿನಗೆ !”” ಎಂದು ಮೂದಲಿಸಿ ಮಾತನಾಡತೊಡಗಿದರು. ಅದಕ್ಕೆ ಆ ಬ್ರಾಹ್ಮಣನು ಗುರುಗಳ ಮಾತಿನಲ್ಲಿ ನನಗೆ ವಿಶ್ವಾಸವಿದೆ. ಅವರ ಕೃಪೆಯಾದರೆ ಈ ಕಟ್ಟಿಗೆ ಚಿಗಿಯುವದೇನೊ ದೊಡ್ಡ ವಿಷಯವಲ್ಲ, ನನ್ನ ಪ್ರಾಣ ಇರುವವರೆಗೂ ಇದಕ್ಕೆ ನೀರು ಹಾಕುತ್ತೇನೆ. ಇದು ಚಿಗುರೊಡೆದರೆ ಒಡೆಯಲಿ; ಇಲ್ಲದಿದ್ದರೆ ಗುರುಸ್ಥಾನದಲ್ಲಿ ನನಗೆ ಮರಣವಾದರೂ ಪ್ರಾಪ್ತವಾಗಲಿ!' ಎಂದು ನಿರ್ಧಾರದಿಂದ ನುಡಿದು ಮತ್ತೆ ನೀರು ಹೊರತೊಡಗಿದನು. ಎರಡು ಮೂರು ದಿನಗಳು ಕಳೆದವು ಉಪವಾಸದಿ೦ದ ನರಹರಿಯು ಶಕ್ತಿ ಕುಂದಿತು. ಆದರೂ ಆತ ತನ್ನ ನಿರ್ಧಾರ ಬದಲಿಸದೇ ಒ೦ದೇ ಸವನೇ ಶ್ರಮಪಡುತ್ತ ಆ ಒಣ ಕಟ್ಟಿಗೆಗೆ ನೀರು ಹೊತ್ತು ಹಾಕುವ ಕಾರ್ಯದಲ್ಲಿ ನಿರತನಾಗಿದ್ದನು. ಮಠದ ಶಿಷ್ಯರಿಗೆ ಆತನ ಸ್ಥಿತಿ ಕ೦ಡು ಕನಿಕರ ಉ೦ಟಾಯಿತು. ಅವರು ಗುರುಗಳ ಬಳಿ ಬಂದು ಗುರುಗಳೇ ! ಆ ಮತಿಗೇಡಿ ಬ್ರಾಹ್ಮಣನು ಉಪವಾಸದಿಂದ ಒಣ ಕಟ್ಟಿಗೆಗೆ ನೀರು ಹೊತ್ತು ಹಾಕಿ ಹಾಕಿ ಸಾಯುವಂತಾಗಿದ್ದಾನೆ. ಆದರೂ ತನ್ನ ಛಲ ಬಿಟ್ಟಿಲ್ಲ'' ಎಂದು ನಗುತ್ತ ಹೇಳಿದರು, ಗುರುಗಳು ಶಿಷ್ಯರನ್ನು ಕುರಿತು, ಶಿಷ್ಯರೇ | ಹೃದಯದಲ್ಲಿಯ ಭಾವಕ್ಕನುಸಾರವಾಗಿ ಮನುಷ್ಯನಿಗೆ ಸಿದ್ಧಿ ಲಭಿಸುವದು ! ಭಾವಶುದ್ಧವಾಗಿದ್ದವನು ಎಂದೂ ಅಪಯಶಸ್ಸನ್ನು ಪಡೆಯಲಾರನು. ಈ ಬಗ್ಗೆ ನಿಮಗೊಂದು ಉದಾಹರಣೆ ಹೇಳುತ್ತೇವೆ. ಕೇಳಿರಿ! ಬಹು ದಿನಗಳ ಹಿಂದೆ ಪಾಂಚಾಲ ದೇಶದಲ್ಲಿ ಸಿಂಹಕೇತು ಎಂಬ ರಾಜನ ಮಗನಾದ ಧನ೦ಜಯನು, ಒಂದು ದಿವಸ ಬೇಟೆಗಾಗಿ ಅರಣ್ಯಕ್ಕೆ ಹೋಗಿದ್ದನು. ಆತನು ತನ್ನ ಜೊತೆಯಲ್ಲಿ ಒಬ್ಬ ಕಿರಾತ ಜಾತಿಯ ಸೇವಕನನ್ನು ಕರೆದೊಯ್ದಿದ್ದನು. ಅರಣ್ಯದಲ್ಲಿ ನೀರಡಿಸಿದ ಅವರು ನೀರಿಗಾಗಿ ಹುಡುಕಾಡುತ್ತಿರುವಾಗ ಆ ಬೇಡರ ದೃಷ್ಟಿಗೆ ಭಿನ್ನವಾದ ಶಿವಲಿಂಗವೊಂದು ನೆಲದಲ್ಲಿ ಬಿದ್ದಿರುವದು ಗೋಚರಿಸಿತು. ಕಿರಾತನು ಆ ಸುಂದರವಾದ ಕಲ್ಲನ್ನು ತಟ್ಟನೆ ಕೈಗೆತ್ತಿಕೊಂಡನು. “ಒಡೆಯಾ ಈ ಕಲ್ಲು ಎಷ್ಟು ಅಂದವಾಗಿದೆಯಲ್ಲಾ?' ಎಂದು ಪ್ರಶ್ನೆ ಮಾಡಿದನು. ಅದನ್ನು ನೋಡಿ ರಾಜಕುಮಾರನು, ನಗುತ್ತ “ಎಲೋ ಇದು ಕಲ್ಲಲ್ಲ: ಶಿವಲಿಂಗ ! ಇದು ಭಿನ್ನವಾಗಿದೆ ಅದಕ್ಕಾಗಿಯೇ ಹೀಗೆ ಪೂಜೆಯಿಲ್ಲದೆ ಈ ಭೂಮಿಯಲ್ಲಿ ಬಿದ್ದಿದೆ !'' ಎಂದು ಹೇಳಿದನು. ಅದಕ್ಕೆ ಬೇಡನು “ಜೀಯಾ ! ಲಿಂಗವನ್ನು ಪೂಜಿಸಿದರೆ ಏನಾಗುತ್ತದೆ ?'' ಎಂದು ಮುಗ್ಧತೆಯಿಂದ ಪ್ರಶ್ನೆ ಮಾಡಿದನು. ಅದಕ್ಕೆ ರಾಜಕುಮಾರನ್ನು ಆ ಏಕ ನಿಷ್ಠೆಯಿಂದ ಲಿಂಗವನ್ನು ಪೂಜಿಸುವವನಿಗೆ ಶಿವನು ಪ್ರತ್ಯಕ್ಷನಾಗಿ, ಬೇಕಾದ ಸಿರಿ ಸೌಭಾಗ್ಯ, ? ಮುಕ್ತಿ ಸಹಿತ ದಯಪಾಲಿಸುತ್ತಾನೆ ಎಂದು ನುಡಿದನು. ರಾಜಕುಮಾರನ ಮಾತಿನಿಂದ ಬೇಡನಿಗೆ ತಾನು ಶಿವಪೂಜೆ ಮಾಡಬೇಕೆಂಬ ಆಸೆ ಉತ್ಪನ್ನವಾಯಿತು. ರಾಜಕುಮಾರನಿಂದ ಆ ಶಿವ ಲಿಂಗದ ಪೂಜೆಯನ್ನು ಹೇಗೆ ಮಾಡಬೇಕೆಂಬ ವಿಧಾನವನ್ನೆಲ್ಲ ಕೇಳಿ ತಿಳಿದು ಕೊ೦ಡನು. ರಾಜಕುಮಾರನೇ ಗುರುವೆಂದು ಭಾವಿಸಿ ಆತನಿಂದ ಪಂಚಾಕ್ಷರೀ ಮಂತ್ರೋಪದೇಶ ಪಡೆದುಕೊಂಡನು, ಮತ್ತೂ ಬಹು ಭಕ್ತಿಯಿಂದ ಆ ಲಿಂಗವನ್ನು ಅಡವಿಯಲ್ಲಿಯೇ ಇದ್ದ ತನ್ನ ಗುಡಿಸಿಲಿಗೆ ಹೊತ್ತುಕೊಂಡು ಬಂದನು. ಮಡದಿಯೆದುರು ಶಿವಲಿಂಗವನ್ನು ಪೂಜಿಸಿದರೆ ಕೈಲಾಸವೇ ದೊರೆಯುವದೆಂದು ಹೇಳಿದನು. ಅವಳೂ ಬಹು ಸಂಭ್ರಮಪಟ್ಟುಕೊಂಡಳು. ಶಿವಲಿಂಗ ಪೂಜೆಗೆ, ಗಂಡನಿಗೆ ನಿತ್ಯವೂ ಬೇಕಾಗುವ ಸಲಕರಣೆಗಳನ್ನು ಒದಗಿಸಿಕೊಡುವದರಲ್ಲಿ ಸಹಕಾರಿಯಾದಳು, ಆತನು ಆ ಶಿವಲಿಂಗವನ್ನು ಪ್ರತಿಷ್ಠಾಪಿಸಿ ಅಭಿಷೇಕ, ಪುಷ್ಪ, ಧೂಪ, ದೀಪ, ಚಿತಾಭಸ್ಮಗಳಿಂದ ಪೂಜಿಸಿ, ನೈವೇದ್ಯ ಮಾಡಿದ ನಂತರವೇ ಗಂಡಹೆಂಡಿರು ಊಟ ಮಾಡುವ ಪದ್ಧತಿಯನ್ನಿಟ್ಟು ಕೊಂಡರು. ಎಷ್ಟೋ ದಿನಗಳು ಕಳೆದು ಹೋದವು ಒಂದು ದಿನ ಆತನಿಗೆ ಎಷ್ಟು ಹುಡುಕಾಡಿದರೂ ಶಿವಪೂಜೆಗಾಗಿ ಚಿತಾಭಸ್ಮ ದೊರೆಯದಾಯಿತು. ಬಹುದಿವಸಗಳಿಂದ ನಡೆಸಿಕೊಂಡು ಬಂದ ವೃತವು ವ್ಯರ್ಥ ವಾಗಬಾರದೆಂಬ ವಿಚಾರದಿಂದ ಹೆಂಡತಿಯ ಸಲಹೆಯಂತೆ ಆತನು ಹೆಂಡತಿ ಸಮೇತನಾಗಿ ತನ್ನ ಗುಡಿಸಿಲಿಗೆ ಬೆಂಕಿ ಹಚ್ಚಿದನು. ಅದೇ ಚಿತಾಭಸ್ಮದಿಂದ ಶಿವಲಿಂಗವನ್ನು ಪೂಜಿಸಿದನು. ಪೂಜೆಯಾದ ನಂತರ ನಿತ್ಯ ಪದ್ಧತಿಯಂತೆ ತೀರ್ಥ ಪ್ರಸಾದಗಳನ್ನು ಸ್ವೀಕರಿಸಲು ಹೆಂಡತಿಯನ್ನು ಕೂಗಿ ಕರೆದನು. ಅವಳು ತಕ್ಷಣವೇ ಓಡಿಬಂದು ಭಕ್ತಿಯಿಂದ ತೀರ್ಥಪ್ರಸಾದಗಳನ್ನು ಸೇವಿಸಿದಳು. ಆ ಗುಡಿಸಿಲು ಮೊದಲಿದ್ದಂತೆಯೇ ಕಂಗೊಳಿಸತೊಡಗಿತ್ತು. ಇದೆಲ್ಲ ಪರಮೇಶ್ವರನ ಲೀಲೆಯೆಂದರಿತು, ದಂಪತಿಗಳಿಬ್ಬರ ಭಕ್ತಿಪರವಶರಾದರು. ಆಗ ಅವರಿಗೆ ಶಿವನ ಸಾಕ್ಷಾತ್ಕಾರವಾಯಿತು. ಶಿಷ್ಯರೇ ! ಗುರುವಚನದಲ್ಲಿ ವಿಶ್ವಾಸವಿಟ್ಟವನಿಗೆ ಆತನ ಭಾವನೆಯಂತೆಯೇ ಫಲಪ್ರಾಪ್ತಿಯಾಗುವದೆಂಬುದರಲ್ಲಿ ಸ೦ದೇಹವಿಲ್ಲ !'' ಎಂದು ವಿವರಣೆ ನೀಡಿದರು. ಸಾಯಂಕಾಲದ ವೇಳೆಯಲ್ಲಿ ಗುರುಗಳು ಸಹಜವಾಗಿ ಸಂಗಮದತ್ತ ಹೋದರು. ನರಹರಿಯ ಶ್ರದ್ಧೆ, ಉಪವಾಸಗಳಿಂದ ಕಷ್ಟಪಟ್ಟು ಆ ಕಟ್ಟಿಗೆಗೆ ನೀರು ಹೊತ್ತು ಹಾಕುತ್ತಿರುವದನ್ನು ಕಣ್ಣಾರೆ ನೋಡಿದರು. ಆ ಭಕ್ತನ ಮೇಲೆ ಅವರಿಗೆ ಕರುಣೆಯುಂಟಾಯಿತು ತಮ್ಮ ಕಮಂಡಲೋದಕವನ್ನು ಆತ ನಡಿಸಿದ್ದ ಕಟ್ಟಿಗೆಗೆ ಸಿಂಪಡಿಸಿದರು. ತಕ್ಷಣವೇ ಆ ಕಟ್ಟಿಗೆಯು ಚಿಗರೊಡೆದು ಹಸುರಾಗಿ ಕಂಗೊಳಿಸತೊಡಗಿತು. ಅದರೊಂದಿಗೆ ನರಹರಿಯ ಕುಷ್ಠರೋಗ ನಿವಾರಣೆಯಾಗಿ ಆತನ ದೇಹವು ಸುವರ್ಣಕಾಂತಿ ತಳೆಯಿತು. 

ನರಹರಿಯು ಭಕ್ತಿಪರವಶನಾಗಿ ಗುರುಗಳನ್ನು ಸ್ತೋತ್ರ ಮಾಡತೊಡಗಿದನು. ಜನ್ಮತಃ ಕವಿಯಾಗಿದ್ದ ನರಹರಿಯ ಸುಶ್ರಾವ್ಯವಾಗಿ ಅಷ್ಟಕವನ್ನು ರಚಿಸಿ ಹಾಡಿದನು. ಗುರುಗಳು ಸಂಪ್ರೀತರಾಗಿ ಆತನಿಗೆ 'ಯೋಗೀಶ್ವರನೆಂಬ ಅಭಿದಾನದಿಂದ ಕೂಗಿದರು. ನಂತರ ನರಹರಿಯು ಕುಟುಂಬ ಸಮೇತನಾಗಿ ಗಾಣಗಾಪುರದಲ್ಲಿಯೇ ಉಳಿದನು. ಗುರುಗಳು ಆತನ ಮೇಲಿನ ಪ್ರೀತಿಯಿಂದ ಅವನಿಗೆ ವಿದ್ಯಾ ಸರಸ್ವತಿ'' ಮಂತ್ರವನ್ನು ಉಪದೇಶ ಮಾಡಿದರೆಂದು ಸಿದ್ಧಮುನಿಯು, ನಾಮಧಾರಕನಿಗೆ ತಿಳಿಸಿದನೆಂಬಲ್ಲಿಗೆ ಸಾರರೂಪ ಶ್ರೀ ಗುರು ಚರಿತ್ರೆಯ ನಾಲ್ವತ್ತನೆಯ ಅಧ್ಯಾಯ ಮುಗಿಯಿತು.

Comments

Popular posts from this blog

Hanumane Tandeyu Hanumane Thayiyu lyrics

Sankshipta Guru Charitre in kannada

Sri Rama Chandirane