Shri Guru Charitre - Chapter 39
ಅಧ್ಯಾಯ ೩೯
||ಹರಿಃ ಓಂ ಶ್ರೀ ಗುರುಭ್ಯೋ ನಮಃ ||
ನಾಮಧಾರಕಾ ! ಗಾಣಗಾಪುರದಲ್ಲಿ ಸೋಮನಾಥ-ಗಂಗಾದೇವಿ ಎಂಬ ಹೆಸರಿನ ವೃದ್ಧ ದಂಪತಿಗಳಿದ್ದರು. 60 ವರ್ಷ ವಯಸ್ಸಾದರೂ ಗಂಗಾದೇವಿ ಬಂಜೆಯಾಗಿಯೇ ಉಳಿದಿದ್ದಳು, ಪತಿವೃತೆಯಾದ ಅವಳು ನಿತ್ಯ ಗುರುವಿನ ಸೇವೆಗೆ ಬಂದು ನೀಲಾಂಜನ ಹಚ್ಚಿ ಆರತಿ ಬೆಳಗುತ್ತಿದ್ದಳು. ಅವಳ ಸೇವೆಯಿಂದ ಸಂತುಷ್ಟರಾದ ಗುರುಗಳು ಒಂದು ದಿನ ಅವಳನ್ನು ಕುರಿತು, ಗಂಗಮ್ಮಾ! ನಿನ್ನ ಇಚ್ಛೆ ಏನಿದೆಯೋ ಕೇಳಿಕೋ ! ಭಗವಂತನು ಅದನ್ನು ಪೂರ್ತಿಗೊಳಿಸುತಾನೆ'' ಎಂದು ನುಡಿದರು. ಆಗ ಗಂಗಾದೇವಿಯು ಕೈಮುಗಿದು ಗುರುನಾಥಾ ಸರ್ವಾ೦ತಯಾಮಿ ಎನಿಸುವ ನಿಮಗೆ ಗೊತ್ತಿಲ್ಲದ ವಿಷಯ ಯಾವುದೂ ಇಲ್ಲ, ಈ ಜನ್ಮದಲ್ಲಿ ನಾನು ಅಪುತ್ರವತಿಯಾದದ್ದರಿಂದ ಬಂಜೆ ಎನಿಸಿಕೊಳ್ಳುತ್ತ ಲೋಕನಿಂದೆಗೆ ಗುರಿಯಾದೆ. “ಮಕ್ಕಳಿಲ್ಲದವರಿಗೆ ಮೋಕ್ಷವಿಲ್ಲ...?” ಎಂಬ ಚಿಂತೆಯೂ ನನ್ನನ್ನು ಕಾಡಿ ಹಣ್ಣುಗೊಳಿಸಿದೆ. ಆದ ಕಾರಣ ನನಗೆ ಮುಂದಿನ ಜನ್ಮದಲ್ಲಿಯಾದರೂ ಸತ್ಪುತ್ರರು ಉದಯಿಸುವಂತೆ ಅನುಗ್ರಹ ಮಾಡಿರಿ!” ಎಂದು ಪ್ರಾರ್ಥಿಸಿಕೊಂಡಳು. ಅದಕ್ಕೆ ಗುರುಗಳೂ ನಗುತ್ತ ''ಮುಂದಿನ ಜನ್ಮವನ್ನು ಕಂಡವರಾರು ? ಇದೇ ಜನ್ಮದಲ್ಲಿಯೇ ಸಂತತಿ ಭಾಗ್ಯ ಲಭಿಸುವದು'' ಎಂದು ನುಡಿದರು. ಗಂಗಾದೇವಿಯು 'ಗುರುಗಳೇ ! ಇನ್ನು ಮೇಲೆ ಈ ಜನ್ಮದಲ್ಲಿ ಮಕ್ಕಳಾಗಲು ಹೇಗೆ ಸಾಧ್ಯ ? ಈಗಾಗಲೇ ನನ್ನ ಮುಟ್ಟು ಸಹಿತ ನಿಂತುಹೋಗಿದೆ'' ಎಂದು ನುಡಿದಳು. ಗುರುಗಳು ಗಂಗಮ್ಮಾ ! ನೀನು ಸಲ್ಲಿಸಿದ ಸೇವೆ ವ್ಯರ್ಥವಾಗುವದಿಲ್ಲ ದಿನಾಲೂ ನೀನು ಸಂಗಮ ಕ್ಷೇತ್ರಕ್ಕೆ ಹೋಗಿ ಅಲ್ಲಿ ಅಶ್ವತ್ಥ ಸೇವೆಯನ್ನು ಮನಃಪೂರ್ವಕವಾಗಿ ಮಾಡು ! ನಿನಗೊಬ್ಬ ಪುತ್ರನು ಜನಿಸುವನು ! ಸಂದೇಹ ಪಡಬೇಡ ?' ಎಂದು ಹೇಳಿದರು. ಗುರುವಾಕ್ಯದಲ್ಲಿ ನಿಷ್ಠೆಯಿಟ್ಟ ಗಂಗಾದೇವಿಯು ಅವರ ಆಜ್ಞೆಯಂತೆ ಅಶ್ವತ್ಥ ಸೇವೆ ಮಾಡತೊಡಗಿದಳು. ಮೂರನೆಯ ದಿನದ ರಾತ್ರಿ ಸ್ವಪ್ನದಲ್ಲಿ ಅವಳಿಗೊಬ್ಬ ಬ್ರಾಹ್ಮಣನು ಕಾಣಿಸಿಕೊಂಡು, “ಅಮ್ಮಾ! ನೀನು ನರಸಿಂಹ ಸರಸ್ವತಿ ಯತಿಗಳಿಗೆ ಭಕ್ತಿಯಿಂದ ಏಳು ಪ್ರದಕ್ಷಿಣೆ ಹಾಕಿ ನಮಸ್ಕಾರ ಮಾಡು | ಅವರು ಕೊಡುವ ಪ್ರಸಾದವನ್ನು ಭಕ್ಷಿಸು ! ನಿನ್ನ ಇಚ್ಛೆ ಈಡೇರುವದು !'' ಎಂದು ನುಡಿದು ಅದೃಶ್ಯನಾದನು. ಗಂಗಾದೇವಿಯು ತಟ್ಟನೇ ಎಚ್ಚತ್ತಳು, ಬೆಳಗು ಹರಿದಿತ್ತು ಸಂಗಮಕ್ಕೆ ಹೋಗಿ ಸ್ನಾನ ಮಾಡಿ ಅಶ್ವತ್ಥ ಸೇವೆ ಮುಗಿಸಿದಳು. ನಂತರ ಗುರುಮಠಕ್ಕೆ ಬಂದಳು. ಗುರುಗಳಿಗೆ ಏಳು ಪ್ರದಕ್ಷಿಣೆ ಹಾಕಿ ನಮಸ್ಕರಿಸಿದಳು. ಗುರುಗಳು ನಸುನಗುತ್ತ ಅವಳಿಗೆ ಎರಡು ಬಾಳೆಯ ಹಣ್ಣುಗಳನ್ನು ಕೊಟ್ಟರು. ಗುರು ಪ್ರಸಾದ ಭಕ್ಷಿಣೆಯ ಪ್ರಭಾವದಿ೦ದಾಗಿ ಅವಳು ಅಂದೇ ರಜಸ್ವಲೆಯಾದಳು. ಅವಳು ಹವಿಷ್ಯಾನ್ಯವನ್ನು ಉಣ್ಣುತ್ತ ಮೂರು ದಿನಗಳನ್ನು ಮೌನವಾಗಿ ಕಳೆದಳು. ನಾಲ್ಕನೆಯ ದಿನ ಸ್ನಾನ ಮಾಡಿ ಪತಿ, ಹಾಗೂ ಗುರುಗಳ ದರ್ಶನ ಪಡೆದಳು. ಗುರುಗಳು ಅವಳಿಗೆ “ಪುತ್ರವತೀ ಭವ !?” ಎಂದು ಆಶೀರ್ವದಿಸಿದರು. ಆ ರಾತ್ರಿ ದಂಪತಿಗಳಿಬ್ಬರೂ ಸಂತೋಷದಿಂದಿರಲು, ಗುರು ಕೃಪೆಯಿಂದ ಅಂದೇ ಅವಳಿಗೆ ಗರ್ಭ ನಿಂತಿತು. ಗಂಗಾದೇವಿ ಬಂಜೆತನದಿಂದ ಮುಕ್ತಳಾದಳೆಂಬ ವಿಷಯ ತಿಳಿದು, ಎಲ್ಲರೂ ಸಂತೋಷಪಟ್ಟರು. ನವಮಾಸಗಳು ತುಂಬಿ ಗಂಗಮ್ಮನು ಹೆಣ್ಣು ಮಗುವೊಂದಕ್ಕೆ ಜನ್ಮ ಕೊಟ್ಟಳು, ಜ್ಯೋತಿಷಿಗಳು ಮಗುವಿನ ಜಾತಕ ಬರೆದು, ಈ ಮಗಳು ಮೂರು ಮಕ್ಕಳಿಗೆ ತಾಯಿಯಾಗುವಳೆಂದು ಭವಿಷ್ಯ ನುಡಿದರು. 10ನೇ ದಿನ ಸ್ನಾನ ಮುಗಿಸಿದ ಗಂಗಾದೇವಿ, ಮಗುವಿನೊಂದಿಗೆ ಮಠಕ್ಕೆ ಬಂದು, ಮಗುವನ್ನು ಗುರುಚರಣಗಳ ಮೇಲೆ ಹಾಕಿ, ತಾನೂ ನಮಸ್ಕರಿಸಿದಳು. ಶ್ರೀ ಗುರುವು ಅವಳಿಗೆ ಈ ಮಗು ಶತಾಯುಷಿಯಾಗಿ ಪುತ್ರ-ಪುತ್ರಿಯರನ್ನು ಪಡೆಯುವಳು. ಇವಳ ಗಂಡನು ಜ್ಞಾನಿಯಾಗುವನು. ಪತಿವ್ರತೆಯಾದ ಇವಳು ಎಲ್ಲರಿಗೂ ಪೂಜ್ಯಳೆನಿಸುವಳು. ದಕ್ಷಿಣ ದೇಶದ ಅರಸನೊಬ್ಬನು ಇವಳಿಗೆ ದರ್ಶನ ಕೊಡುವನು.” ಎಂದು ವರವನ್ನಿತ್ತರು. ಗಂಗಾದೇವಿಯು ತನಗೆ ಇನ್ನೊಂದು ಗಂಡುಮಗುವನ್ನು ಕರುಣಿಸಬೇಕೆಂದು ಗುರುಗಳಲ್ಲಿ ಪ್ರಾರ್ಥಿಸಿಕೊಂಡಳು ! ಗುರುಗಳು ನಗುತ್ತನಿನಗೆ ನೂರು ವರ್ಷ ಬಾಳುವ ಮೂರ್ಖ ಮಗಬೇಕೋ ? ಅಥವಾ 30 ವರ್ಷ ಜೀವಿಸುವ ಸುಪುತ್ರಬೇಕೋ ?” ಎಂದು ಪ್ರಶ್ನೆ ಮಾಡಿದರು. “ನನಗೆ ಸುಪುತ್ರನೇ ಜನಿಸಲಿ ! ಆದರೆ ಆ ಮಗನಿಗೆ 5 ಮಕ್ಕಳ ಭಾಗ್ಯವಿರಬೇಕು !'' ಎಂದು ಪ್ರಾರ್ಥಿಸಿದಳು. ಗುರುಗಳು ತಥಾಸ್ತು!' ಎಂದು ನುಡಿದರು. ಗುರುವಾಕ್ಯದಂತೆ ಗಂಗಾದೇವಿಗೆ ಹುಟ್ಟಿದ ಮಗನು, ವೇದ ಶಾಸ್ತ್ರ ಪಂಡಿತನಾಗಿ, ಐವರು ಮಕ್ಕಳನ್ನು ಪಡೆದನು. ಹೀಗಿದೆ ಗುರುಕೃಪೆಯ ಪ್ರಭಾವ !” ಎಂದು ಸಿದ್ಧಮುನಿಯು ನಾಮಧಾರಕನಿಗೆ ತಿಳಿಸಿದರೆಂಬಲ್ಲಿಗೆ ಸಾರರೂಪ ಶ್ರೀಗುರು ಚರಿತ್ರೆಯ 39ನೆಯ ಅಧ್ಯಾಯ ಮುಕ್ತಾಯವಾಯಿತು.
Comments
Post a Comment