ಶ್ರೀ ಗುರು ಚರಿತ್ರೆ - ಅಧ್ಯಾಯ ೩೮


ಶ್ರೀ ಗುರು ಚರಿತ್ರೆ


ಅಧ್ಯಾಯ ೩೮

||ಹರಿಃ ಓಂ ಶ್ರೀ ಗುರುಭ್ಯೋ ನಮಃ || 

ನಾಮಧಾರಕಾ ! ಗಾಣಗಾ ಪುರದಲ್ಲಿ ದಿನಾಲೂ ಗುರು ಸಮ್ಮುಖದಲ್ಲಿ ಬ್ರಾಹ್ಮಣ ಸಮಾರಾಧನೆ ನಡೆಯುತಲೇ ಇತ್ತು. ಒಂದು ದಿನ ಭಾಸ್ಕರನೆಂಬ ಹೆಸರಿನ ಕಾಶ್ಯಪಗೋತ್ರದ ಬಡ ಬ್ರಾಹ್ಮಣನೊಬ್ಬನು ಗುರುಗಳ ದರ್ಶನಕ್ಕಾಗಿ ದೂರದ ಊರಿನಿಂದ ಬಂದನು. ಆತನಿಗೆ ಶ್ರೀ ಗುರುಗಳಿಗೆ ಭಿಕ್ಷೆ ಮಾಡಿಸಬೇಕೆಂಬ ಅಭಿಲಾಷೆಯಿತ್ತು. ಆದರೆ ಅವನು ಊರಿನಿಂದ ತಂದ ಅಕ್ಕಿ, ಬೇಳೆ, ಬೆಲ್ಲ, ಗೋದಿ ಹಿಟ್ಟು, ತುಪ್ಪ ಮುಂತಾದವುಗಳು ಮೂರು ನಾಲ್ಕು ಜನರಿಗೆ ಸಾಲುವಷ್ಟು ಮಾತ್ರ ಇದ್ದವು, ಗುರುಗಳಿಗಾದರೋ ಅಪಾರವಾದ ಶಿಷ್ಯ ಸಮುದಾಯವಿತ್ತು ಹೀಗಾಗಿ ಮುಂದೆ ಹೇಗೆ ಮಾಡುವದೆಂದು ಆತನು ವಿಚಾರದ ಗೊಂದಲಕ್ಕೆ ಬಿದ್ದನು. ಅಷ್ಟರಲ್ಲಿ ಅಂದು ಸಮಾರಾಧನೆ ಮಾಡಿಸಿದ ಭಕ್ತರು, ಬ್ರಾಹ್ಮಣರನ್ನೆಲ್ಲ ಊಟಕ್ಕೆ ಕರೆದರು. ಬ್ರಾಹ್ಮಣರೊಂದಿಗೆ ಭಾಸ್ಕರನೂ ಊಟ ಮಾಡಿಬಂದನು. ರಾತ್ರಿಯಾಗಲು, ತಾನು ಊರಿನಿಂದ ಗಂಟು ಕಟ್ಟಿಕೊಂಡು ಬ೦ದಿದ್ದ ಸಾಮಗ್ರಿಗಳನ್ನು ತಲೆದಿಂಬಿಗಿಟ್ಟುಕೊಂಡು ಮಠದ ಒಂದು ಮೂಲೆಯಲ್ಲಿ ಮಲಗಿದನು. ಭಾಸ್ಕರನಿಗೆ ಗುರುಗಳೆದುರು ತನ್ನ ಆಸೆ, ಪರಿಸ್ಥಿತಿಗಳನ್ನು ಹೇಳಿಕೊಳ್ಳುವ ಧೈಯ್ಯವಿಲ್ಲ. ಹೀಗಾಗಿ ಮೂರು ತಿಂಗಳ ಕಾಲದವರೆಗೂ, ದಿನ ನಿತ್ಯವೂ ಇದೇ ಕ್ರಮವು ನಡೆದುಹೋಯಿತು. ಭಾಸ್ಕರನು ಗುರುಗಳಿಗೆ ಸಮಾರಾಧನೆ, ಭಿಕ್ಷೆ, ಮಾಡಿಸುವ ಉದ್ದೇಶದಿಂದ ಬಂದಿರುವನೆಂಬುದನ್ನು ತಿಳಿದುಕೊಂಡಿದ್ದ ಕೆಲವು ಕುತ್ಸಿತ ಬುದ್ಧಿಯ ಬ್ರಾಹ್ಮಣರು, ಹಿಂದೆ ಮುಂದೆ ಆಡಿಕೊಳ್ಳುತ್ತ 'ತಾನು ನೋಡಿದರೆ, ಒಂದು ಪಾವು ಅಕ್ಕಿ ಕಟ್ಟಿಕೊಂಡು ಬಂದಿದ್ದಾನೆ. ಇಷ್ಟೆಲ್ಲಾ ಶಿಷ್ಯ ಬಳಗವಿದ್ದ ಗುರುಗಳಿಗೆ ಭಿಕ್ಷೆ ಮಾಡಿಸುತ್ತಾನಂತೆ ! ಇವನ ಯೋಗ್ಯತೆ ನೋಡಿರಿ !' ಎಂದು ಮುಸಿ ಮುಸಿ ನಗುತ್ತಿದ್ದರು. ಭಾಸ್ಕರನು ಆ ಬ್ರಾಹ್ಮಣರ ವ್ಯಂಗೋಕ್ತಿಗಳನ್ನು ಅನಿವರ್ಯವಾಗಿ ಸಹಿಸಿಕೊ೦ಡು ಸುಮ್ಮನಿರುತ್ತಿದ್ದನು. ಒಂದು ದಿನ, ಭಾಸ್ಕರನು ತಮಗೆ ಭಿಕ್ಷೆ ಮಾಡಿಸಬೇಕೆಂಬ ಆಸೆಯಿಂದ ಇಲ್ಲಿಗೆ ಬಂದಿರುವನೆಂಬ ವಿಷಯವು ಗುರುಗಳ ಕಿವಿಯವರೆಗೂ ತಲುಪಿಬಿಟ್ಟಿತು. ಗುರುಗಳೂ ಆತನನ್ನು ಕರೆದು, “ಭಾಸ್ಕರಾ ! ಇಂದು ನೀನೇ ಸ್ವಯಂ ಪಾಕ ಮಾಡಿ, ನಮಗೆ ಭಿಕ್ಷೆ ಮಾಡಿಸಬೇಕು !' ಎಂದು ಆಜ್ಞೆ ಮಾಡಿದರು. ಭಾಸ್ಕರನು ಆಗಲಿ ಗುರುಗಳೇ ತಮ್ಮ ಅನುಗ್ರಹ !' ಎಂದು ನುಡಿದು, ಗುರುಗಳಿಗೆ ನಮಸ್ಕಾರ ಮಾಡಿದನು, ಗುರ್ವಾಜ್ಞೆಯಂತೆ ಸ್ನಾನಮಾಡಿ ಬಂದು, ತಾನು ಊರಿನಿಂದ ಕಟ್ಟಿಕೊಂಡು ಬಂದಿದ್ದ ಅಲ್ಪ ಪ್ರಮಾಣದ ಪದಾರ್ಥಗಳಿಂದಲೇ ಅಡುಗೆ ಸಿದ್ಧಪಡಿಸಿದನು. ಗುರುಗಳ ಹತ್ತಿರ ಬಂದು ಕೈಜೋಡಿಸಿ, “ಸ್ವಾಮಿನ್ ! ಅಡುಗೆ ಸಿದ್ಧವಾಗಿದೆ ಎಂದು ಹೇಳಿದನು. ಹೊರಗೆ ಕುಳಿತಿದ್ದ ಕೆಲವು ಬ್ರಾಹ್ಮಣರು. ಇಂದು ಭಾಸ್ಕರನ ಸಮಾರಾಧನೆ ಎಂದ ಮೇಲೆ, ನಾವೆಲ್ಲಾ ನಮ್ಮ ನಮ್ಮ ಮನೆಗಳಲ್ಲಿಯೇ ಊಟ ಮಾಡಬೇಕೆಂದಾಯಿತು. ಯಾಕೆಂದರೆ, ಆತ ಕೇವಲ ಒಂದು ಪಾವಿನಷ್ಟು ಅಕ್ಕಿ ಮಾತ್ರ ಕಟ್ಟಿಕೊಂಡು ಬಂದಿದ್ದಾನೆ !” ಎಂದು ತಮ್ಮ ತಮ್ಮೊಳಗೆ ಮಾತಾಡಿಕೊಂಡು ನಗುತ್ತಿರುವದು ಗುರುಗಳ ಕಿವಿಗೆ ಬಿತ್ತು ಗುರುಗಳು ತಮ್ಮ ಶಿಷ್ಯನಿಂದ ಹೊರಗಿದ್ದ ಬ್ರಾಹ್ಮಣರನ್ನೆಲ್ಲ ಒಳಗೆ ಕರಿಸಿಕೊಂಡರು ! ಮತ್ತೂ ಭಾಸ್ಕರನಿಂದ ಈ ದಿವಸ ನಾನು ಬ್ರಾಹ್ಮಣ ಸಮಾರಾಧನೆ ಮಾಡಿಸುತ್ತೇನೆ. ನೀವೆಲ್ಲರೂ ಸ್ನಾನ ಮಾಡಿ ನಿಮ್ಮ ಕುಟುಂಬ ಪರಿವಾರ ಸಮೇತ ಊಟಕ್ಕೆ ಬರಬೇಕು ! ಎಂದು ಔತಣ ಹೇಳಿಸಿದರು. ಬ್ರಾಹ್ಮಣರಲ್ಲಿ ಕೆಲವರು ಮುಸಿ ಮುಸಿ ನಕ್ಕರು. ಭಾಸ್ಕರನ ಮಾತಿನಲ್ಲಿ ಬ್ರಾಹ್ಮಣರಿಗೆ ವಿಶ್ವಾಸವಿಲ್ಲವೆಂಬುದನ್ನು ಮನಗಂಡ ಗುರುಗಳು ಆ ಬ್ರಾಹ್ಮಣರನ್ನು ಕುರಿತು, ಬ್ರಾಹ್ಮಣೋತ್ತಮರೇ ! ಇಂದು ನಮ್ಮ ಭಕ್ತ ಭಾಸ್ಕರನು ನಿಜವಾಗಿಯೂ ಎಲ್ಲ ಬ್ರಾಹ್ಮಣರಿಗೂ ತೃಪ್ತಿಯಾಗುವಂತೆ, ಪಂಚ ಪಕ್ಷಾನ್ನಗಳಿಂದ ಸಮಾರಾಧನೆ ಮಾಡಿಸುತ್ತಾನೆ. ನೀವೆಲ್ಲಾ ಬೇಗ ಬೇಗ ನಿಮ್ಮ ಮನೆಮಂದಿ, ಪರಸ್ಥಳಗಳಿಂದ ಬಂದ ಅತಿಥಿ ಅಭಾಗ್ಯತರನ್ನೆಲ್ಲಾ ಕರೆದುಕೊಂಡು, ಊಟಕ್ಕೆ ಬನ್ನಿ !'' ಎಂದು ಅಪ್ಪಣೆ ಕೊಡಿಸಿ ದರು, ಗುರುಗಳೇ ಹೇಳಿದ ಮೇಲೆ ಮಠದಲ್ಲಿ ಸಮಾರಾಧನೆಯಿದೆಯೆಂಬುದು ಜನರಿಗೆ ವಿಶ್ವಾಸವಾಯಿತು. “ಬಹುಶಃ ಮಠದಲ್ಲಿರುವ ಸಾಮಗ್ರಿಗಳಿಂದ ಗುರುಗಳೇ ಬೇರೆ ಅಡುಗೆ ಮಾಡಿಸಬಹುದೆಂದು'' ಮಾತಾಡಿಕೊಳ್ಳುತ್ತ ಅವರೆಲ್ಲಾ ಸ್ನಾನಕ್ಕೆ ತೆರಳಿದರು. ಭಾಸ್ಕರನಿಗೆ ಗುರುಗಳೂ ಆತ ಮಾಡಿದ್ದ ಅಡುಗೆಯನ್ನೆಲ್ಲ ತಂದು ತಮ್ಮ ಮುಂದೆ ಇಡುವಂತೆ ಆಜ್ಞೆ ಮಾಡಿದರು. ತಮ್ಮ ಹೆಗಲ ಮೇಲಿದ್ದ ಶ್ಯಾಟಿಯನ್ನು ಆ ಅಡುಗೆಯ ಪಾತ್ರೆಗಳ ಮೇಲೆ ಮುಚ್ಚಿಸಿದರು. ನಂತರ ಆ ಶ್ಯಾಟಿಯ ಮೇಲೆ ತೀರ್ಥವನ್ನು ಪ್ರೋಕ್ಷಿಸಿದರು. ಮಠದ ಆವರಣದಲ್ಲಿ ಒಂದು ಸಾವಿರ ಎಲೆಗಳನ್ನು ಊಟಕ್ಕಾಗಿ ಹಾಕಿಸಿದರು. ಊಟಕ್ಕೆ ಬಡಿಸುವ ಬ್ರಹ್ಮಚಾರಿಗಳಿಗೆ, ಪಾತ್ರೆಗಳ ಮೇಲೆ ಹೊದಿಸಿದ ಶ್ಯಾಟಿಯನ್ನು ಸಂಪೂರ್ಣವಾಗಿ ತೆರೆಯದೇ, ಬೇರೆ ಬೇರೆ ಪಾತ್ರಗಳಲ್ಲಿ ತೋಡಿಕೊಂಡು ಊಟಕ್ಕೆ ಬಡಿಸತಕ್ಕದ್ದೆಂದು ಆಜ್ಞೆ ಮಾಡಿದರು. ಗುರುಗಳು ಮತ್ತೊಂದು ಸಲ ಎಲ್ಲ ಬ್ರಾಹ್ಮಣರನ್ನೂ ಭಾಸ್ಕರನಿಂದ ಊಟಕ್ಕೆ ಕರಿಸಿದರು. ಬ್ರಾಹ್ಮಣರೆಲ್ಲರೂ ತಮ್ಮ ಪರಿವಾರದೊಂದಿಗೆ ಬಂದು, ಸಾಲಾಗಿ ಹಾಕಿದ್ದ ಎಲೆಗಳ ಮುಂದೆ ಕುಳಿತರು. ಗುರುಗಳಿಗೆ ಸ್ವಲ್ಪ ಎತ್ತರದ ಸ್ಥಳದಲ್ಲಿ ಎಲೆ ಹಾಕಲಾಗಿತ್ತು ಬ್ರಹ್ಮಚಾರಿಗಳು ಬಡಿಸುವ ಕಾರ್ಯ ಪ್ರಾರಂಭಿಸಿದರು. ಅಷ್ಟರಲ್ಲಿ ಭಾಸ್ಕರನು ಗುರುಗಳ ಪಾದ ಪೂಜೆ ಮುಗಿಸಿದ್ದನು. ತೀರ್ಥ ಗಂಧಗಳನ್ನು ಊಟಕ್ಕೆ ಕೂಡುವವರಿಗೆ ಕೊಡಲಾಯಿತು. ಅನ್ನ ಪೂರ್ಣಾ ಸ್ತೋತ್ರದ ನಂತರ, ಗುರುಗಳ ಜೈ ಜೈಕಾರದೊಂದಿಗೆ ಬ್ರಾಹ್ಮಣ ಭೋಜನವು ಪ್ರಾರಂಭವಾಯಿತು. ಅನ್ನ, ಸಾರು, ಪಾಯಸ, ಪರಮಾನ್ನ, ತುಪ್ಪ ಮುಂತಾದವುಗಳನ್ನು ಎಷ್ಟೆಷ್ಟು ಬಡಿಸಿದರೂ ಆ ಪಾತ್ರಗಳು ಬರಿದಾಗಲೇ ಇಲ್ಲ. ಇದನ್ನು ಕಂಡು ಜನರು ಬೆರಗಾದರು, ಬಂದ ಬ್ರಾಹ್ಮಣರೆಲ್ಲ ಯಥೇಚ್ಛವಾಗಿ ಊಟ ಮಾಡಿ ಸಂತೃಪ್ತರಾದರು ತುಪ್ಪದ ಪಾತ್ರೆಯಲ್ಲಿದ್ದ ಎರಡು ಸೇರು ತುಪ್ಪದಲ್ಲಿ ಒಬ್ಬೊಬ್ಬರು ಎರಡೆರಡು ದೊನ್ನೆ ತುಪ್ಪ ಹಾಕಿಸಿಕೊಂಡು ಉಂಡರೂ ಪಾತ್ರೆಯಲ್ಲಿಯ ತುಪ್ಪ ಮೊದಲಿದ್ದಷ್ಟೇ ಉಳಿದಿತ್ತು ಬ್ರಾಹ್ಮಣ ಭೋಜನ ಮುಗಿದು, ಊರೊಳಗಿನ ಇತರ ಜನಾಂಗದವರು ಬಂದು ಊಟ ಮಾಡಿದರು. ಆದರೂ ಅಡುಗೆ ತೀರಲಿಲ್ಲ. ಎಲ್ಲರೂ ಉಂಡು ತೃಪ್ತರಾದ ಮೇಲೆ, ಭಾಸ್ಕರನೂ ಊಟಮಾಡಿದನು, ನಂತರ ಗುರ್ವಾಜ್ಞೆಯಂತೆ ಶೇಶಾನ್ನವನ್ನು ಪಾತ್ರೆ ಸಮೇತ ನದಿಗೆ ಹೊತ್ತುಕೊಂಡು ಹೋಗಿ, ಸುರುವಿದನು ಜಲಚರ ಪ್ರಾಣಿಗಳೆಲ್ಲವೂ ಗುರು ಪ್ರಸಾದದಿಂದ ಸಂತೃಪ್ತಿಹೊಂದಿದವು ನಂತರ ಗುರುಗಳು ಭಾಸ್ಕರನನ್ನು ಕರೆದು, “ನೀನು ಮಾಡಿಸಿದ ಭಿಕ್ಷೆ ಹಾಗೂ ಬ್ರಾಹ್ಮಣ ಸಮಾರಾಧನೆಯಿಂದ ನಾವು ಸಂತೃಪರಾದೆವು.'' ಎಂದು ನುಡಿಯಲು, ಭಾಸ್ಕರನು ಭಕ್ತಿಪುಲಕಿತನಾಗಿ ಗುರುದೇವಾ ! ಇದೆಲ್ಲಾ ನಿಮ್ಮ ಲೀಲೆಯೇ ಹೊರತು, ಪಾಮರನಾದ ನಾನು ಸಾವಿರಾರು ಜನರನ್ನು ಊಟ ಮಾಡಿಸಲು ಹೇಗೆ ಸಾಧ್ಯವಾದೀತು. ಕರುಣಾಳುಗಳಾದ ತಾವು ದೊಡ್ಡ ಮನಸ್ಸು ಮಾಡಿ, ನನ್ನ ಮರ್ಯಾದೆ ಕಾಪಾಡಿದಿರಿ !'' ಎಂದು ನಿಗರ್ವದಿಂದ ನುಡಿದು ಗುರುಚರಣಕ್ಕೆರಗಿದನು ಗುರುಗಳು ಹಸನ್ಮುಖದಿಂದ ಆತನ ಬೆನ್ನು ತಟ್ಟಿ ಭಲೇ ! ಇಂದಿನಿಂದ ನಿನ್ನ ದಾರಿದ್ರ, ಹಿಂಗಿ ಹೋಯಿತು ! ನೀನಿನ್ನು ನಿನ್ನ ಗ್ರಾಮಕ್ಕೆ ಹೋಗಿ ಸುಖವಾಗಿ ಬಾಳಿಕೊಂಡಿರು !' ಎಂದು ಆಶೀರ್ವದಿಸಿ ಕಳಿಸಿ ಕೊಟ್ಟರೆಂಬಲ್ಲಿಗೆ ಸಾರರೂಪ ಶ್ರೀ ಗುರು ಚರಿತ್ರೆಯ 38ನೆಯ ಅಧ್ಯಾಯ ಮುಕ್ತಾಯವಾಯಿತು.

Comments

Popular posts from this blog

Hanumane Tandeyu Hanumane Thayiyu lyrics

Sankshipta Guru Charitre in kannada

Sri Rama Chandirane