Shri Guru Charitre - Chapter 37
ಅಧ್ಯಾಯ ೩೭
||ಹರಿಃ ಓಂ ಶ್ರೀ ಗುರುಭ್ಯೋ ನಮಃ ||
ನಾಮಧಾರಕಾ ಗುರುಗಳು ಆ ಬ್ರಾಹ್ಮಣನಿಗೆ ಆಚಾರ ಧರ್ಮೋಪದೇಶಗಳನ್ನು ಮುಂದುವರಿಸುತ್ತ “ಬ್ರಾಹ್ಮಣನಾದವನ ಮನೆಯಲ್ಲಿ ಗೋವು, ಕೃಷ್ಣಾಜಿನ, ದರ್ಭೆ, ಒಣ ಕಟ್ಟಿಗೆಗಳು ಸದಾಕಾಲ ಇರಬೇಕು ! ಮನೆಯನ್ನು ಸ್ವಚ್ಛವಾಗಿ ಸಾರಿಸಿ ಇಡಬೇಕು! ದೇವರ ಮನೆಯಲ್ಲಿ ರಂಗವಲ್ಲಿ ಹಾಕಬೇಕು ಮಾನಸ ಪೂಜೆಯು ಅತ್ಯಂತ ಮಹತ್ವದ್ದಾಗಿರುವದರಿಂದ ಅದನ್ನು ಆಚರಿಸಬೇಕು ! ದೇವರಮೂರ್ತಿ, ಪ್ರತಿಮಾದಿಗಳನ್ನು ಪೂಜಿಸಿದರೆ, ಅವೇ ದೇವರಾಗಿ ಫಲಕೊಡುವವು. ವಿಷ್ಣುವಿಗೆ ತುಲಸಿ, ಶಿವನಿಗೆ ಬಿಲ್ವ, ಗಣಪತಿಗೆ ಕರಿಕೆ, ಇವು ಅತ್ಯಂತ ಪ್ರೀತಿಯ ವಸ್ತುಗಳಾಗಿರುವದರಿಂದ, ಅವುಗಳಿಂದಲೇ ದೇವತಾ ಪೂಜೆ ಮಾಡಬೇಕು. ಪವಿತ್ರಾಸನದ ಮೇಲೆ ಕುಳಿತು ಪ್ರಾಣಾಯಾಮ ಮಾಡಬೇಕು ! ಮಧ್ಯಾಹ್ನದ ವೇಳೆಗೆ ಮನೆಗೆ ಬಂದ ಅತಿಥಿ ಯಾವ ಕುಲದವನಾದರೂ ಆತನನ್ನು ಊಟಕೊಟ್ಟು ಸಂತೃಪ್ತಿಪಡಿಸಬೇಕು ! ಊಟಕ್ಕೆ ಮುತ್ತುಗ, ಬಾಳೆ, ತಾವರೆಯ ಎಲೆಗಳನ್ನು ಉಪಯೋಗಿಸಬೇಕು. ಕಂಚಿನ ಪಾತ್ರೆಯಲ್ಲಿ ಊಟ ಮಾಡಬಹುದು ! ಮೊದಲು ಪಾಯಸ, ನಡುವೆ ಬಿರುಸಾದ ಅನ್ನ, ಊಟದ ಕೊನೆಯಲ್ಲಿ ಮೊಸರನ್ನವನ್ನು (ದ್ರವ್ಯಾನ್ನ) ಊಟ ಮಾಡಬೇಕು ! ಊಟವಾದ ಮೇಲೆ ತಾಂಬೂಲ ಸೇವಿಸಬೇಕು ! ಬಹಳ ಉಪ್ಪು ಹಾಕಿದ ಅನ್ನ, ತಂಗಳ ಅನ್ನ, ಬಹಳ ಪದಾರ್ಥಗಳು ಕೂಡಿದ ಅನ್ನವನ್ನು ಉಣ್ಣಬಾರದು. ಆದರೆ ತುಪ್ಪ, ಅಥವಾ ಎಣ್ಣೆಯಲ್ಲಿ ಕರಿದ ಅನ್ನಕ್ಕೆ ದೋಷವಿಲ್ಲ. ಊಟವಾದ ಮೇಲೆ ಒಂದು ಪ್ರಹರದವರೆಗೆ ವೇದಾಧ್ಯಯನ ಮಾಡಬೇಕು! ಸ್ಮಶಾನ, ನದೀತೀರ, ನಾಲ್ಕು ದಾರಿ ಕೂಡುವ ಜಾಗೆ, ಮುರುಕ ಗುಡಿ, ಇಂಥಲ್ಲಿ ಮಲಗಬಾರದು. ಬ್ರಾಹ್ಮಣನೇ ! ಹೀಗೆ ಪರಾಶರ ಋಷಿಗಳು ಆಚರಣೆಯ ಧರ್ಮವನ್ನು ಹೇಳಿರುವರು. ಹೀಗೆ ಶ್ರದ್ಧೆಯಿಂದ ಆಚರಿಸುವವನಿಗೆ ದುಃಖ, ದಾರಿದ್ರಗಳಿಲ್ಲ. ಲಕ್ಷ್ಮಿಯು ತಾನೇ ಅಂಥವನ ಮನೆಯಲ್ಲಿ ವಾಸವಾಗುವಳು. ಆತನು ಬ್ರಹ್ಮಜ್ಞಾನಿಯಾಗುವನು' ಎಂದು ಹೇಳಿದರು. ಆ ಬ್ರಾಹ್ಮಣನು ಗುರುಗಳಿಗೆ ವಂದಿಸುತ್ತ'ಕೃಪಾಸಾಗರನೇ ! ನಮ್ಮಂಥ ದೀನ ಭಕ್ತರನ್ನು ಉದ್ಧರಿಸುವದಕ್ಕಾಗಿ, ಅವತರಿಸಿ ಬಂದ ಪರಮಾತ್ಮ ನೀನು ! ನಿನ್ನ ಕೃಪಾಕಟಾಕ್ಷಕ್ಕೊಳಗಾಗುವವನಿಗೆ, ತಾನಾಗಿಯೇ ಜ್ಞಾನೋದಯವಾಗುವದು'' ಎಂದು ಸ್ತುತಿಸಿದನು. ಸಂಪ್ರೀತನಾದ ಶ್ರೀ ಗುರುನಾಥನು ಆ ಬ್ರಾಹ್ಮಣನಿಗೆ ಅನುಗ್ರಹ ಮಾಡಿದನೆಂಬಲ್ಲಿಗೆ ಸಾರರೂಪ ಶ್ರೀಗುರು ಚರಿತ್ರೆಯ 37ನೆಯ ಅಧ್ಯಾಯ ಮುಗಿಯಿತು.
Comments
Post a Comment