Shri Guru Charitre - Chapter 53

 

ಶ್ರೀ ಗುರು ಚರಿತ್ರೆ

ಅಧ್ಯಾಯ ೫೩

||ಹರಿಃ ಓಂ ಶ್ರೀ ಗುರುಭ್ಯೋ ನಮಃ || 

ಶ್ರೀ ಗುರುಚರಿತ್ರೆಯನ್ನು ಶ್ರವಣ ಮಾಡಿ, ನಾಮಧಾರಕನ ಮನವು ಬ್ರಹ್ಮಾನಂದದಲ್ಲಿ ನಿಮಗ್ನವಾಯಿತು. ಅವನ ಮೈಮೇಲೆ ರೋಮಾಂಚನಗಳೆದ್ದವು, ಕಂಠವು ಭಕ್ತಿಭಾವದಿಂದ ಗದ್ಗುದಿತವಾಯಿತು. ಅಂಗಾಂಗಗಳು ನಡುಗತೊಡಗಿದವು. ಕಣ್ಣುಗಳ ಹೊಳಪು ಹೆಚ್ಚಾಗಿ ಅವುಗಳಿಂದ ಧಾರಾಕಾರವಾಗಿ ಆನಂದಾಶ್ಯಗಳು ಉದುರ ತೊಡಗಿದವು. ಸಮಾಧಿ ಸುಖಕ್ಕೀಡಾದ ಅವನು ಮೂಕನಂತಾದನು. ದೇಹವು ಅಲುಗಾಡದಾಯಿತು. ಅವನ ಮುಖದಲ್ಲಿ ಸಾತ್ವಿಕ ಅಷ್ಟಭಾವಗಳು ಮೂಡಿ ನಿಂತವು !

ನಾಮಧಾರಕನಿಗುಂಟಾದ ಈ ಸ್ಥಿತಿಯನ್ನು ನೋಡಿ, ಸಿದ್ಧಮುನಿಯು ಆನ೦ದ ಹೊ೦ದಿದನು. ಈತನಿಗೆ ಈಗ ಸಮಾಧಿ ಸುಖಲಭಿಸಿತು. ಇವನನ್ನು ಇದೇ ಸ್ಥಿತಿಯಲ್ಲಿ ಉಳಿಯಗೊಟ್ಟರೆ, ಲೋಕೋಪಕಾರದ ಕರ್ತವ್ಯಕ್ಕೆ ವ್ಯತ್ಯಯ ಬರುವದು. ಇವನನ್ನು ಶುದ್ದಿಯ ಮೇಲೆ ತರುವದೇ ಒಳಿತು! ಎಂದು ಯೋಚಿಸಿ, ಸಿದ್ಧಮುನಿಯು, “ಎಲೈ ಶಿಷ್ಯತ್ತಮನಾದ ನಾಮಧಾರಕನೇ !! ಬೇಗ ಎಚ್ಚರಾಗು ! ಎಂದು ಆತನ ಮೈಮೇಲೆ ಕೈಯ್ಯಾಡಿಸಿ, ಪ್ರೇಮ ಭಾವದಿಂದ ಅಪ್ಪಿಕೊಂಡನು. ಮತ್ತು ಆತನನ್ನು ಕುರಿತು, ನಾಮಧಾರಕಾ ನೀನಿನ್ನು ಭವಸಾಗರವನ್ನು ದಾಟಿದಂತಾಯಿತು. ನೀನು ಹೀಗೆ ಸಮಾಧಿ ಸ್ಥಿತಿಯಲ್ಲಿ ಕುಳಿತರೆ, ದಿವ್ಯವಾದ ಜ್ಞಾನವು ನಿನ್ನ ಹೃದಯದಲ್ಲಿಯೇ ಇದ್ದು ಉಳಿದುಬಿಡುತ್ತದೆ. ಅದರಿಂದ ಲೋಕೋದ್ಧಾರವಾಗಲಾರದು ! ನೀನಿನ್ನು ಹೀಗೆ ಕೂಡ್ರಬೇಡಾ ! ಶಾಸ್ತ್ರಾಧಾರವನ್ನನುಸರಿಸಿ ನಿನ್ನ ಬಾಹ್ಯ ದೇಹದ ಸ್ಥಿತಿ ಇರಲಿ ! ನೀನು ಗುರು ಚರಿತ್ರೆ ಶ್ರವಣ ಮಾಡುವಾಗ ಕೇಳಿದ ಪ್ರಶ್ನೆಗಳಿಂದ, ನನಗೆ ಶ್ರೀ ಗುರುಗಳ ಅಮೃತವಾಣಿಗಳು ನೆನಪಿಗೆ ಬಂದವು. “ನೀನು ಈಗ ಕೇಳಿದ್ದನ್ನೆಲ್ಲ ಜಗತ್ತಿನ ಜನರಿಗೆ ವಿಸ್ತರಿಸಿ ಹೇಳು !” ಎಂದು ಆತನಿಗೆ ಅನೇಕ ರೀತಿಯಿಂದ ಉಪದೇಶ ಮಾಡಲು ನಾಮಧಾರಕನು ಸಮಾಧಿಯಿಂದ ಎಚ್ಚತ್ತು ಮೆಲ್ಲನೇ ಕಣ್ಣು ತೆರೆದನು. ಹಾಗೂ ಸಿದ್ಧ ಮುನಿಯ ಎದುರಿನಲ್ಲಿ ಕೈ ಮುಗಿದು ನಿಂತುಕೊಂಡನು. “ಹೇ ಗುರುವೇ! ಶ್ರೀ ಗುರುಚರಿತ್ರೆಯು ಅಮೃತಕ್ಕಿಂತ ಹೆಚ್ಚಿನದಾಗಿದೆ. ನಾನು ಶ್ರೀ ಗುರು ಚರಿತ್ರೆಯನ್ನು ಕೇಳಿ ಕೃತಾರ್ಥನಾದೆನು.” ಎಂದು ನುಡಿಯುತ್ತ ನಾಮಧಾರಕನು ಸಿದ್ಧಮುನಿಯ ಚರಣಗಳ ಮೇಲೆ ಮಸ್ತಕವನ್ನಿಟ್ಟನು. ಸಿದ್ಧಮುನಿಯು ನಾಮಧಾರಕನಿಗೆ ಶ್ರೀ ಗುರುಚರಿತ್ರೆಯ ಸಾರವನ್ನು ಸಂಗ್ರಹ ರೂಪವಾಗಿ ಹೇಳಿದನು. (1) ಮಂಗಲಾಚರಣ, ನಾಮಧಾರಕನಿಗೆ ಗುರುದರ್ಶನ (2) ಬ್ರಹ್ಮತ್ಪತ್ತಿ ದೀಪಕನ ಗುರುಸೇವೆ (3) ಅಂಬರೀಷ, ದುರ್ವಾಸರ ಮಹಿಮೆ (4) ಅನುಸೂಯಾ ಪ್ರಭಾವ, ದತ್ತಜನ್ಮ (5) ದತ್ತಾತ್ರಯನ್ನು ಶ್ರೀಪಾದ ವಲ್ಲಭ ಅವತಾರ ಧಾರಣ ಮಾಡಿದ್ದು (6) ಗೋಕರ್ಣದಲ್ಲಿ ವಿಶ್ಲೇಶ್ವರನು ರಾವಣನು ತಂದ ಪ್ರಾಣಲಿಂಗವನ್ನು ಸ್ಥಾಪಿಸಿದ್ದು (7)ಗೋಕರ್ಣ ಮಹಾತ್ಮ (8) ಶನಿ ಪ್ರದೋಷ ವ್ರತ (9) ರಜಕನಿಗೆ ರಾಜ್ಯ ಪ್ರಾಪ್ತಿ (10) ವಲ್ಲಭೇಶನ ರಕ್ಷಣೆ (11) ನರಹರಿಯ ಜನ್ಮ (12) ನರಸಿಂಹ ಸರಸ್ವತಿ ಯತಿಯಾದದ್ದು (13) ವಿಪ್ರೋದರ ವ್ಯಥಾ ನಿರಶನ (14) ಯವನ ಭಯ ನಿವಾರಣೆ (15) ತೀರ್ಥಯಾತ್ರೆ (16) ಶಿಷ್ಯನಿಗೆ ವಿವೇಕ ಬೋಧೆ (17) ಔದುಂಬರದಲ್ಲಿ ದ್ವಿಜನಿಗೆ ಜ್ಞಾನವಾಗುವಂತೆ ಅನುಗ್ರಹಿಸಿದ್ದು (18) ಅವರೀ ಬಳ್ಳಿಯಿಂದ ವಿಪ್ರದೈನ್ಯ ಹರಣ (19) ಗಂಗಾನುಜನ ಉದ್ಧಾರ (20) ಬ್ರಹ್ಮ ಸಂಬಂಧ ಪರಿಹಾರ (21) ಬಾಲ ಸಂಜೀವನ (22) ವಂಧ್ಯಾ ಮಹಿಷಿ ದೋಹನ (23) ಬ್ರಹ್ಮ ರಾಕ್ಷಸನಿಗೆ ಮೋಕ್ಷ ಪ್ರಾಪ್ತಿ (24) ತ್ರಿವಿಕ್ರ ಮನಿಗೆ ವಿಶ್ವರೂಪ ದರ್ಶನ (25) ದ್ವಿಜಪ್ರಶಂಸೆ. (26) ಪಂಡಿತರಿಗೆ ಹಿತೋಪದೇಶ (27) ಪತಿತನು ಬ್ರಹ್ಮಜ್ಞಾನಿಯಾದದ್ದು (28) ಪತಿತನು ಪುನಃ ಪತಿತನಾದದ್ದು. (29) ಭಸ್ಮ ಮಹಾತ್ಮ (30) ಸತಿಯ ಶೋಕ (31) ಯೋಗಿಯ ಉಪದೇಶ (32) ಪ್ರೇತ ಸಂಜೀವನ (33) ರುದ್ರಾಕ್ಷಿ ಮಹಿಮೆ
(34) ರುದ್ರಾಭಿಷೇಕ ತೀರ್ಥದ ಮಹತ್ವ (35) ಸೀಮಂತಿನಿಯ ಕಥೆ (36) ಪರಾನ್ನದ ಪ್ರಾಯಶ್ಚಿತ್ತ (37) ಬ್ರಹ್ಮಕರ್ಮ ನಿರೂಪಣೆ (38) ಅನ್ನ ಪೂರ್ತಿ ಮಾಡಿದ್ದು (39) ವೃದ್ಧ ವಂದ್ಯಾ ಪ್ರಸವ (40) ಶುಷ್ಕ ಕಾಷ್ಟ ಸಂಜಿವನ (41) ಸಾಯ೦ದೇವನ ಸೇವೆ (42) ಕಾಶೀಕ್ಷೇತ್ರ ಮಹಾತ್ಮ (43) ಸಾಯಂದೇವನಿಗೆ ವರಪ್ರದಾನ (44) ಶ್ರೀಶೈಲ ಯಾತ್ರೆ (45) ದ್ವಿಜ ಕುಷ್ಠ ಪರಿಹಾರ (46) ಕಲ್ಲೇಶ್ವರನ ಮಹಿಮೆ (47) ಅಷ್ಟರೂಪ ಧಾರಣೆ (48) ಶೂದ್ರನಿಗೆ ವರಪ್ರದಾನ (49) ರತ್ನಾಯಿಯ ಪಾಪ ವಿಮೋಚನೆ (50) ಸಾರ್ವಭೌಮ ಸ್ಫೋಟಕ ಶಮನ, (51+52) ಶ್ರೀ ಗುರು ಸಮಾಧಿ ಯೋಗ (53) ಅವತರಣಿಕಾ !

ಶೋತೃಗಳೇ ! ಕಲಿಯುಗದಲ್ಲಿ ಅಧರ್ಮವು ಹೆಚ್ಚಾಗುವದೆಂಬ ಕಾರಣದಿಂದ ಗುರುಗಳು ಗುಪ್ತರಾದರು. ಆದರೆ ಭಕ್ತ ಜನರಿಗೆ ಈಗಲೂ ದರ್ಶನ ಕೊಡುವರು. ಶ್ರೀಗುರುಚರಿತ್ರೆಯನ್ನು ಶುದ್ಧಾಂತಃ ಕರಣದಿಂದ ಓದಬೇಕು ! ಗುರುಗಳಿಗೆ ಸಂಗೀತದ ಮೇಲೆ ಹೆಚ್ಚಿನ ಆಸಕ್ತಿಯಿತ್ತು. ಆದ ಕಾರಣ ಅವರ ಗುಣಗಾನವನ್ನು ಮಾಡಬೇಕು. 'ಶಾಸ್ರೋಕ್ತವಾಗಿ ಗುರು ಚರಿತ್ರೆಯ ಪಾರಾಯಣ ಮಾಡಬೇಕು. ಪಾರಾಯಣ ಪ್ರಾರಂಭಿಸುವಾಗ ನಂದಾದೀಪವನ್ನು ಹಚ್ಚಿ ಇಡಬೇಕು. ಓದಲು ಕೂಡುವ ಸ್ಥಳವನ್ನು ಶುಚಿಯಾಗಿ ಸಾರಿಸಿ ರಂಗವಲ್ಲಿ ಹಾಕಬೇಕು ! ಪ್ರವಚನಕ್ಕೆ ಪೂರ್ವ ಅಥವಾ ಉತ್ತರಾಭಿಮುಖವಾಗಿ ಕೊಡಬೇಕು. ಸಂಕಲ್ಪ ಮಾಡಿ ಗುರುಚರಿತ್ರ ಪ್ರಾರಂಭಿಸಬೇಕು. ಸಪ್ತಾಹ ಪಾರಾಯಣದ ಮಧ್ಯದಲ್ಲಿ ಸ್ಥಳವನ್ನು ಬದಲಿಸಬಾರದು. ಮೊದಲನೆಯ ದಿನ 9, ಎರಡನೆಯ ದಿನ 21. ಮೂರನೆಯ ದಿನ 29. ನಾಲ್ಕನೆಯ ದಿನ 35, ಐದನೆಯ ದಿನ 38. ಆರನೆಯ ದಿನ 43. ಏಳನೆಯ ದಿನ 53. ಅಧ್ಯಾಯಗಳನ್ನು ಮುಗಿಸಿ ಉತ್ತರ ಪೂಜೆ, ಆರತಿ, ನೈವೇದ್ಯ ಮಾಡಬೇಕು ನಿತ್ಯ ಉಪವಾಸ ಮಾಡಬೇಕು. ಕೊನೆಯ ದಿನ ಅನ್ನಸಂತರ್ಪಣೆ ದಾನ, ಧರ್ಮಾದಿಗಳನ್ನು ಮಾಡಬೇಕು. ಅಂದರೆ ಖಂಡಿತ ಗುರುದರ್ಶನವಾಗುವದು. ಗುರುಗಳು ನಾಮಧಾರಕನನ್ನು ನಿಮಿತ್ತ ಮಾಡಿಕೊಂಡು ಗುರುಚರಿತ್ರವನ್ನು ಪಾನ ಮಾಡುವದಕ್ಕೆ ಅಮೃತದಂತೆ ಒದಗಿಸಿ ಕೊಟ್ಟಿದ್ದಾರೆ, ಇದು ಭಕ್ತರ ಮನೋರಥವನ್ನು ಪೂರ್ತಿಗೊಳಿಸುವದು, ಎಲೈ ಗುರು ಸ್ವರೂಪಿಯಾದ ನಾರಾಯಣನೇ ! ನಮಗೆ ಗುರುಗಳನ್ನೂ, ಸಿದ್ಧ ಮುನಿಯನ್ನು ಇದರ ಬರಹಕ್ಕೆ ಕಾರಣನಾದ ನಾಮಧಾರಕನನ್ನೂ ನಮ ಸ್ಕರಿಸುವಂತೆ ಬುದ್ಧಿಕೊಡು, ನಾರಾಯಣ ರೂಪಿಯಾದ ಗುರುನಾಥನಿಗೆ ನಮಸ್ಕಾರವು ! ಶ್ರೀಗುರು ಚರಿತ್ರೆಯನ್ನು ಕೇಳಿ, ಜೀವನ್ಮುಕ್ತನಾದ ನಾಮಧಾರಕನಿಗೆ ನಮಸ್ಕಾರವು !!

ಇತಿ ಸಾರರೂಪ ಗುರುಚರಿತ್ರೆ ಸಂಪೂರ್ಣ೦

ಶ್ರೀ ದತ್ತಾತ್ರೇಯಾರ್ಪಣಮಸ್ತು

Comments

Popular posts from this blog

Hanumane Tandeyu Hanumane Thayiyu lyrics

Sankshipta Guru Charitre in kannada

Sri Rama Chandirane