Shri Guru Charitre - Chapter 36

 

ಶ್ರೀ ಗುರು ಚರಿತ್ರೆ

ಅಧ್ಯಾಯ ೨೩

||ಹರಿಃ ಓಂ ಶ್ರೀ ಗುರುಭ್ಯೋ ನಮಃ || 

ನಾಮಧಾರಕನೇ ! ಗುರು ಮಹಿಮೆಯ ಮುಂದಿನ ಭಾಗವನ್ನು ಹೇಳುತ್ತೇನೆ; ಆಲಿಸು ! ಗಾಣಗಾಪುರದಲ್ಲಿ ಆಶಾರಹಿತನಾದ ಸದಾಚಾರಿ ಬ್ರಾಹ್ಮಣನಿದ್ದನು, ಆತನು ಪರಾನ್ನ ಊಟ ಮಾಡುತ್ತಿರಲಿಲ್ಲ. ಅದು ಆತನ ವ್ರತವಾಗಿತ್ತು, ನಿತ್ಯ ಮಧುಕರಿ ಬೇಡಿ ತಂದು ಮನೆಯಲ್ಲಿ ಊಟ ಮಾಡುವದು ಆತನ ಪದ್ಧತಿಯಾಗಿತ್ತು. ಆತನ ಹೆಂಡತಿಗೆ ಇದು ಸರಿ ಬರುತ್ತಿರಲಿಲ್ಲ. ಗಾಣಗಾಪುರದಲ್ಲಿ ನಿತ್ಯದಲ್ಲೂ ಬ್ರಾಹ್ಮಣ ಆರಾಧನೆ ನಡೆಯುತ್ತಿದ್ದರೂ ಒಂದು ದಿನವಾದರೂ ಮೃಷ್ಟಾನ್ನ ಉಣ್ಣುವ ಭಾಗ್ಯಪಡೆಯದ ನಾನೆಂಥ ಹತಭಾಗಿನಿ ? ಎಂದು ಅವಳು ಮನದಲ್ಲಿಯೇ ಮರುಗುತ್ತಿದ್ದಳು. ಈ ವಿಷಯವು ಗುರುಗಳಿಗೆ ಗೊತ್ತಾಯಿತು. ಆ ಬ್ರಾಹ್ಮಣನನ್ನು ಕರೆದು ಇಂದು ನೀನು ವ್ರತವನ್ನು ಮುರಿದುಕೊಂಡು, ನಿನ್ನ ಹೆ೦ಡತಿಯ ಅಪೇಕ್ಷೆಯಂತೆ ಔತಣ ಸ್ವೀಕರಿಸು !” ಎಂದು ಆಜ್ಞೆ ಮಾಡಿದರು. ವಿಪ್ರನು ಗುರ್ವಾಜ್ಞೆ ಮೀರಲಾರದೇ “ಆಗಲಿ” ಎಂದು ಮನೆಗೆ ಬಂದನು. ಶ್ರೀಮಂತ ಬ್ರಾಹ್ಮಣರೊಬ್ಬರು ಅವರ ಮನೆಗೆ ಔತಣ ಕೊಡಲು ಬಂದರು. ಇಂದು ನಮ್ಮ ಸಮಾರಾಧನೆಯ ಸೇವೆ ಇದೆ. ದಂಪತಿಗಳಿಬ್ಬರೂ ಊಟಕ್ಕೆ ಬರಬೇಕೆಂದು ಆಮಂತ್ರಿಸಿ ಹೋದನು. ಸಮಾರಾಧನೆ ನಡೆಯಿತು ಬ್ರಾಹ್ಮಣ ದಂಪತಿಗಳು ಒಂದೆಡೆಗೆ ಊಟಕ್ಕೆ ಕುಳಿತಿದ್ದರು. ಎಲೆಯಲ್ಲಿ ನಾನಾತರದ ಪಕ್ವಾನ್ನಗಳನ್ನು ಬಡಿಸಿದ್ದರು. ಆದರೆ ಆ ನಾರಿಗೆ ಮಾತ್ರ ತಾನು, ನಾಯಿಗಳೊಂದಿಗೂ, ಹಂದಿಗಳೊಂದಿಗೂ, ಒಂದೇ ಎಲೆಯಲ್ಲಿ ಊಟ ಮಾಡುತಿರುವಂತೆ ಭಾಸವಾಗತೊಡಗಿತು, ಊಟ ಮಾಡುವದಕ್ಕೆ ಅಸಹ್ಯವೆನಿಸಿತು. ಮನೆಗೆ ಬರುವಾಗ ಅವಳು ಪತಿಯೆದುರು ತನ್ನ ಸ್ಥಿತಿಯನ್ನು ಹೇಳಿದಳು. ಅದಕ್ಕೆ ವಿಪ್ರನು ಅವಳ ಮೇಲೆ ಹರಿಹಾಯುತ್ತ ನಿನ್ನ ದುರಾಸೆಯನ್ನು ತೃಪ್ತಿ ಪಡಿಸುವದಕ್ಕಾಗಿ ಗುರ್ವಾಜ್ಞೆ ಮೀರಲಾಗದೇ ನಾನು ನನ್ನ ವ್ರತ ಕೆಡಿಸಿಕೊಂಡು, ಹಂದಿ ನಾಯಿಗಳೊಂದಿಗೆ ಊಟ ಮಾಡಬೇಕಾಯಿತು!” ಎಂದು ನುಡಿದನು, ಗುರುಗಳು ಆತನನ್ನು ಕರಿಸಿ, ಈಗೇನೂ ನಿನ್ನ ವ್ರತ ಭಂಗವಾಗಿಲ್ಲ. ನಿನ್ನ ಹೆಂಡತಿಯ ಅಪೇಕ್ಷೆ ತೀರಿಸುವದಕ್ಕಾಗಿ, ನಾವೇ ನಿನಗೆ ಆಜ್ಞೆ ಮಾಡಿದ್ದರಿಂದ, ನಿನಗೆ ವ್ರತಭಂಗದ ದೋಷ ತಟ್ಟಲಾರದು. ಇನ್ನು ಮುಂದೆ ನಿನ್ನ ಹೆಂಡತಿಯು ಎಂದೆಂದೂ ಪರಾನ್ನ ಭೋಜನಕ್ಕೆ ಅಪೇಕ್ಷೆ ಪಡಲಾರಳು.” ಎಂದು ನಗುತ್ತ ನುಡಿದರು ಮತ್ತು ಆ ಬ್ರಾಹ್ಮಣನನ್ನು ಕುರಿತು ಗುರು,ಶಿಷ್ಯ, ಮಾವ, ಸೋದರಮಾವ, ಸಾಧು ಸಜ್ಜನರು, ಇಂಥವರ ಮನೆಗೆ ಊಟಕ್ಕೆ ಹೋದರೆ, ಅದು ಪರಾನ್ನವೆಂದು ತಿಳಿಯಬಾರದು. ಜಿಪುಣ, ಸ್ತ್ರೀಘಾತುಕ, ಗರ್ವಿಷ್ಟ, ವಂಚಕ, ಇಂಥವರ ಮನೆಯಲ್ಲಿ ಎಂದೆಂದೂ ಊಟ ಮಾಡಬಾರದು. ದಿನಾಲು ಉಷಃಕಾಲದಲ್ಲೆದ್ದು ಗುರು ಹಿರಿಯರನ್ನು ವಂದಿಸಿ, ಬಹಿರ್ದೆಸೆಗೆ ಹೋಗಿ ಬರಬೇಕು ! ನಿತ್ಯ ಪ್ರಾಥಃಸ್ನಾನ ಮಾಡಬೇಕು ! ಸಂಧ್ಯಾ ವಂದನೆ, ಗಾಯತ್ರೀ ಜಪ, ದೇವತಾರ್ಚನೆಗಳನ್ನು ಎಂದೆಂದೂ ಬಿಡಬಾರದು. ಎಂದು ಗುರುಗಳು ಆ ಬ್ರಾಹ್ಮಣನಿಗೆ ಆಚಾರ ಧರ್ಮವನ್ನು ತಿಳಿಸಿ ಹೇಳತೊಡಗಿದರೆಂಬಲ್ಲಿಗೆ ಸಾರರೂಪ ಶ್ರೀ ಗುರು ಚರಿತ್ರೆಯ ಮೂವತ್ತಾರನೆಯ ಅಧ್ಯಾಯ ಮುಗಿಯಿತು.

Comments

Popular posts from this blog

Hanumane Tandeyu Hanumane Thayiyu lyrics

Sankshipta Guru Charitre in kannada

Sri Rama Chandirane