Shri Guru Charitre - Chapter 51

 

ಶ್ರೀ ಗುರು ಚರಿತ್ರೆ


ಅಧ್ಯಾಯ ೫೧

||ಹರಿಃ ಓಂ ಶ್ರೀ ಗುರುಭ್ಯೋ ನಮಃ || 

ನಾಮಧಾರಕನೇ ! ನಂತರ ಒಂದು ದಿವಸ ಸಂಗಮದಲ್ಲಿ ಗುರುಗಳು ತಮ್ಮ ಶಿಷ್ಯ ಬಳಗವನ್ನೆಲ್ಲ ಕರೆದು, “ಶಿಷ್ಯರೇ ! ಈಗ ನಮ್ಮ ಕೀರ್ತಿಯು ಎಲ್ಲ ಕಡೆಗೂ ಹಬ್ಬಿ ಹೋಗಿದೆ, ಇನ್ನು ನಮಗೆ ಭಕ್ತರ ಉಪದ್ರವವು ಹೆಚ್ಚಾಗುವ ಸಂಭವವಿದೆ, ರಾಜ್ಯದಲ್ಲಿ ಯವನ ಆಳಿಕೆಯು ಹೆಚ್ಚಾಗಿದೆ. ಅವರೆಲ್ಲಾ ನಾನಾ ತರದ ಕಾಮನೆಗಳನ್ನು ಹೊತ್ತು ಕೊಂಡು ಬಂದು, ಸುಮ್ಮನೇ ನಮಗೆ ತೊಂದರೆ ಕೊಡುವರು. ಅದಕ್ಕಾಗಿ ನಾವಿನ್ನು ಲೌಕಿಕಾರ್ಥವಾಗಿ ಶ್ರೀಶೈಲಕ್ಕೆ ಹೊರಟು, ಅಲ್ಲಿಯೇ ಗುಪ್ತರಾಗುವೆವು. ನಾವು ನಿಮಿತ್ಯ ಮಾತ್ರಕ್ಕೆ ಇಲ್ಲಿಂದ ಹೊರಟು ಹೋದರೂ ಸಹಿತ ಇಲ್ಲಿಯ ನಮ್ಮ ಪಾದುಕೆ ಹಾಗೂ ಅಶ್ವತ್ಥ ವೃಕ್ಷಗಳಲ್ಲಿ ಸದಾ ನಮ್ಮ ವಾಸ್ತವ್ಯವಿರುವದು. ಗಾಯನ ರೂಪದಿಂದ ನಮ್ಮನ್ನು ಸ್ತುತಿಸುವವರಿಗೆ, ಅನನ್ಯ ಭಕ್ತಿಯಿಂದ ಆರಾಧಿಸುವವರಿಗೆ, ನಾವು ಸ್ವಪ್ನ ಮುಖಾಂತರ ದರ್ಶನ ಕೊಟ್ಟು, ಅವರ ಕಷ್ಟ ನಿವಾರಿಸುತ್ತೇವೆ. ಆ ಬಗ್ಗೆ ನೀವಾರೂ ಸಂಶಯ ತಳೆಯಕೂಡದೂ !'' ಎಂದು ಹೇಳಿ, ಅಭಯ ಹಸ್ತ ತೋರಿ, ಒಮ್ಮಿಂದೊಮ್ಮಿಲೇ ಅದೃಶ್ಯರಾದರು. ಶಿಷ್ಯರೆಲ್ಲರೂ ವಿವಂಚನೆಗೀಡಾದರು. ಅವರು ಚಿಂತಾ ಕುಲರಾಗಿ ಮಠಕ್ಕೆ ಬಂದರು. ಆದರೆ ಮಠದಲ್ಲಿ ನಿತ್ಯ ಕೂಡುವ ಸ್ಥಳದಲ್ಲಿ ಗುರುಗಳು ಕುಳಿತುಕೊಂಡದ್ದು ಕಾಣಿಸಿತು. ಮತ್ತೆ ಸ್ವಲ್ಪ ವೇಳೆಯಲ್ಲಿ ಅವರು ಅಂತರ್ಧಾನರಾದರು. ಜನರಿಗೆ ಬಹು ಆಶ್ಚದ್ಯವೆನಿಸಿತು, 'ತಾವು ಇನ್ನು ಮುಂದೆಯೂ ಮಠದಲ್ಲಿ ಇದೇ ರೀತಿಯಾಗಿ ಗುಪ್ತರೀತಿಯಿಂದ ಇರುತ್ತೇವೆ' ಎಂಬುದನ್ನು ಗುರುಗಳೂ ಸೂಚಿಸುವದಕ್ಕಾಗಿ ಹಾಗೆ ಹೇಳಿ ಮಾಡಿ ತೋರಿಸಿದರು.

ನಂತರ ಗುರುಗಳು ಗಾಣಗಾಪುರದ ಭಕ್ತ ಸಮುದಾಯಕ್ಕೆ ಸಾಂತ್ವನ ಹೇಳಿ ಶಿಷ್ಯರೊಂದಿಗೆ ಶ್ರೀಶೈಲಕ್ಕೆ ಬಂದರು. ಅಲ್ಲಿ ಪಾತಾಳ ಗಂಗೆಯ ತೀರದಲ್ಲಿ ಇಳಿದರು. ಶಿಷ್ಯರಿಗೆ, ಬೇಗ ನಮಗಾಗಿ ಒಂದು ಪುಷ್ಪಾ ಸನವನ್ನು ಸಿದ್ಧಪಡಿಸಿರಿ !'' ಎಂದು ಆಜ್ಞೆ ಮಾಡಿದರು ಶಿಷ್ಯರು ನಾನಾತರದ ಹೂವುಗಳನ್ನು ತಂದು ಬಾಳೆಯ ಎಲೆಯ ಮೇಲೆ ಆ ಹೂವುಗಳನ್ನು ಹೊಂದಿಸಿ, ಚೆನ್ನಾಗಿ ಬಿಗಿದು ಕಟ್ಟಿ, ಒಂದು ಸುಂದರವಾದ ಪುಷ್ಪಾಸನವನ್ನು ಸಿದ್ಧಪಡಿಸಿದರು. ಅದನ್ನು ನೀರಿನಲ್ಲಿ ಬಿಡಿಸಿ ಗುರುಗಳು ಅದರ ಮೇಲೆ ಪದ್ಮಾ ಸನ ಹಾಕಿಕೊಂಡು ಕುಳಿತರು. ಶಿಷ್ಯರೆಲ್ಲರೂ ದುಃಖಕ್ಕೊಳಗಾದರು. ಗುರುಗಳು ಅವರಿಗೆ ಅಭಯ ಹಸ್ತತೋರಿ, ''ಶಿಷ್ಯತ್ತಮರೇ ! ನಾವು ಲೌಕಿಕಾರ್ಥವಾಗಿ ಹೋಗುತ್ತಿದ್ದೇವೆ. ಆದರೆ ಗಾಣಗಾಪುರದಲ್ಲಿ ನಾವು ನಿಶ್ಚಯವಾಗಿ ನೆಲೆಸಿರುತ್ತೇವೆ. ನನ್ನನ್ನು ಯಾರು ಸ್ತುತಿ ಮಾಡುವರೋ ಆ ಎಲ್ಲ ಭಕ್ತರ ಮನೆಗಳಲ್ಲಿಯೂ ನಾನು ತಪ್ಪದೇ ವಾಸ ಮಾಡುತ್ತೇನೆ. ನನ್ನ ಗುಣಗಾನ ಮಾಡುವವರಿಗೂ, ಸೇವೆ, ಆರಾಧನೆಗಳನ್ನು ಸಮರ್ಪಿಸುವವರಿಗೂ ಸ್ವಪ್ನ ಮುಖಾಂತರವಾಗಿ ದರ್ಶನ ಕೊಡುತ್ತೇನೆ. ಇದು ನಿರ್ಧಾರದ ಮಾತೆಂದು ತಿಳಿಯಿರಿ !” ಎನ್ನಲು, ಎಲ್ಲ ಭಕ್ತರೂ ಗುರುಚರಣಗಳಿಗೆ ತಮ್ಮ ತಮ್ಮ ಮಸ್ತಕಗಳನ್ನು ಸ್ಪರ್ಶಿಸಿದರು. ಗುರುಗಳೂ ಎಲ್ಲರನ್ನೂ ಕೃಪಾದೃಷ್ಟಿಯಿಂದ ನೋಡಿದರು. ನಾವು ನಿಜಸ್ಥಾನಕ್ಕೆ ತಲುಪಿದೊಡನೆಯೇ ನಿಮಗೆ ಹೂಗಳ ಪ್ರಸಾದ ಕಳಿಸಿಕೊಡುವೆವು. ಅಲ್ಲಿಯವರೆಗೆ ನೀವು ಕಾಯಿರಿ !” ಎಂದು ಹೇಳಿದರು. ಗುರುಗಳು ಕುಳಿತ ಪುಷ್ಪಾಸನವು ಸಾವಕಾಶವಾಗಿ ಪ್ರವಾಹದಗುಂಟ ಸಾಗತೊಡಗಿತು. ಅಂದು ಬಹುಧಾನ್ಯ ನಾಮ ಸಂವತ್ಸರದ ಉತ್ತರಾಯಣ, ಕುಂಭಸಂಕ್ರಾಂತಿ, ಶಶಿರಋತು. ಮಾಘ ಮಾಸ ಕೃಷ್ಣ ಪಕ್ಷದ ಪ್ರತಿಪದೆ, ಶುಕ್ರವಾರ ಇದ್ದಿತು, (ಇ.ಸ. 1459) ಇಂಥ ಪುಣ್ಯ ದಿನದಲ್ಲಿ ಗುರುಗಳು ನಿಜಾನಂದದಲ್ಲಿ ಲೀನರಾದರು. ಅಷ್ಟರಲ್ಲಿ ಪ್ರವಾಹದ ಎದುರು ಬದಿಯಿಂದ ನಾವಿಕನೊಬ್ಬನು ಬಂದನು. ಆತನು ದಂಡೆಯಲ್ಲಿ ನಿಂತಿರುವ ಶಿಷ್ಯಬಳಗದವರನ್ನು ಕುರಿತು, ಬ್ರಾಹ್ಮಣೋತ್ತಮರೇ ! ನಾವು ಗುರುಗಳನ್ನು ಕಂಡೆವು. ಅವರು ಕದಳಿ ಈ ವನಕ್ಕೆ ಹೋಗುವರಂತೆ | ಗಾಣಗಾಪುರದಲ್ಲಿ ನೆಲೆಗೊಂಡಿರುವಂತೆ ! ನೀವುಗಳೆಲ್ಲಾ ಸ್ವಸ್ಥಾನದಲ್ಲಿದ್ದುಕೊಂಡೇ ಅವರ ಧ್ಯಾನ ಮಾಡುತ್ತ ಸುಖವಾಗಿರಬೇಕಂತೆ ಹೀಗೆ ನಿಮಗೆ ತಿಳಿಸ ಬೇಕೆಂದು ಅವರು ನನ್ನೊಂದಿಗೆ ಸಂದೇಶ ಕಳಿಸಿದ್ದಾರೆ.'' ಎಂದನು. ಅಷ್ಟರಲ್ಲಿ ಗುರುಗಳು ಮೊದಲು ತಿಳಿಸಿದಂತೆ ಪ್ರವಾಹದೊಳಗಿಂದ ತೇಲುತ್ತ ನಾಲ್ಕು ಪುಷ್ಪಗಳು ಅವರ ಸಮೀಪಕ್ಕೆ ಬಂದವು. ನಾವಿಕನು ಧಾವಿಸಿ ಹೋಗಿ ಆ ಪುಷ್ಪಗಳನ್ನು ಹಿಡಿದುಕೊಂಡು ಬಂದು ಶಿಷ್ಯರ ಕೈಯ್ಯಲ್ಲಿ ಕೊಟ್ಟನು. ಮುಖ್ಯ ಶಿಷ್ಯರು ಅವುಗಳಲ್ಲಿ ಒಂದೊಂದು ಹೂವುಗಳನ್ನು (ಗುರುಪ್ರಸಾದ) ಬಹು ಭಕ್ತಿಯಿಂದ ಸ್ವೀಕರಿಸಿದರು. ಗುರುಗಳೊಂದಿಗೆ ಆಗ ಶ್ರೀಶೈಲಕ್ಕೆ ಬಂದಿದ್ದ ಮುಖ್ಯ ಶಿಷ್ಯರೆಂದರೆ (1) ಸಾಯಂದೇವ (2) ಕವೀಶ್ವರ ನಂದಿ (3) ನರಹರಿ (4) ಸಿದ್ಧನಾಮದ ನಾನು''.  ಬಳಿಕ ಸಿದ್ಧಮುನಿಯು ನಾಮ ಧಾರಕಾ ! ಗುರುಚರಿತ್ರೆಯು ಕಾಮಧೇನುವಾಗಿದೆ ! ಇದರ ಶ್ರವಣ ಪಠಣಗಳಿಂದ ದುಃಖ ದಾರಿದ್ರಗಳು ದೂರಾಗುವವು ! ಪುತ್ರ ಪೌತ್ರಾದಿ ಸಂತಾನ ವೃದ್ಧಿಯಾಗುವದು. ಚತುರ್ವಿಧ ಪುರುಷಾರ್ಥಗಳು ಲಭಿಸುವವು. ಎಂದು ಗುರುಚರಿತ್ರೆಯ ಮಹತ್ವವನ್ನು ತಿಳಿಸಿದನೆಂಬಲ್ಲಿಗೆ ಸಾರರೂಪ ಶ್ರೀಗುರು ಚರಿತ್ರೆಯ 51ನೆಯ ಅಧ್ಯಾಯ ಮುಕ್ತಾಯವಾಯಿತು.

Comments

Popular posts from this blog

Hanumane Tandeyu Hanumane Thayiyu lyrics

Sankshipta Guru Charitre in kannada

Sri Rama Chandirane