Shri Guru Charitre - Chapter 50

 

ಶ್ರೀ ಗುರು ಚರಿತ್ರೆ


ಅಧ್ಯಾಯ ೫೦

||ಹರಿಃ ಓಂ ಶ್ರೀ ಗುರುಭ್ಯೋ ನಮಃ || 

ನಾಮಧಾರಕಾ ! ಹಿಂದೆ ಶ್ರೀಪಾದ ಶ್ರೀವಲ್ಲಭಯತಿಗಳು ರಜಕನಿಗೆ ರಾಜನಾಗುವಂತೆ ವರವನ್ನು ದಯಪಾಲಿಸಿದ್ದರಲ್ಲವೇ ? ಆತನು ವೈದುರಾ (ಬೀದರ) ನಗರದಲ್ಲಿ ಮೇಂಛ ರಾಜಕುಲದಲ್ಲಿ ಜನಿಸಿ ಆನಂದದಿಂದ ರಾಜ್ಯವಾಳಿಕೊಂಡಿದ್ದನು. ಪೂರ್ವ ಜನ್ಮದ ಸಂಸ್ಕಾರ ಫಲದಿಂದಾಗಿ, ಆತನು ಬ್ರಾಹ್ಮಣರಲ್ಲಿ ಭಕ್ತಿಯುಳ್ಳವನಾಗಿದ್ದನು. ಅದನ್ನು ಕಂಡ ಕೆಲವು ಜನ ಮುಸಲ್ಮಾನ ಖಾಜೀಗಳು, ಆತನನ್ನು ಕಂಡು, ಬಾದಶಹರೇ ! ನೀವು ಮೂರ್ತಿಪೂಜಕರಾದ ಹಿಂದೂ ಬ್ರಾಹ್ಮಣರನ್ನು ಗೌರವಿಸುತ್ತೀರಿ ಇದು ನಮ್ಮ ಧರ್ಮಕ್ಕೆ ಅಪಚಾರಮಾಡಿದ೦ತಾಗುವದಿಲ್ಲವೇ ?'' ಎಂದು ಕೇಳುತ್ತಿದ್ದರು. ಅದಕ್ಕೆ ರಾಜನು, ಅಲಾಹನು ವಿಶ್ವವ್ಯಾಪಿಯಾಗಿದ್ದಾನೆ, ಇದನ್ನು ನಮ್ಮ ಮುಸಲ್ಮಾನ ಧರ್ಮವೂ ಒಪ್ಪಿಕೊಳ್ಳುತ್ತದೆ. ಅದರಂತೆ ಹಿಂದೂಗಳ ಸಹಿತ ಭಗವ೦ತನು ವಿಶ್ವವ್ಯಾಪಿಯಾಗಿರುವನೆಂದು ಸ್ತುತಿಸುತ್ತಾರೆ. ವಿಶ್ವವ್ಯಾಪಿಯಾದ ಪರಮಾತ್ಮನನ್ನು ಅವರು ಮೂರ್ತಿರೂಪದಲ್ಲಿ ಕಲ್ಪಿಸಿಕೊಂಡು ಆರಾಧಿಸಿದರೆ ತಪ್ಪೇನಿದೆ ? ಅದು ಅಂತಃಕರಣ ಶುದ್ಧಿಗಾಗಿ ಅವರು ಮಾಡಿಕೊಂಡ ಒಂದು ಸಾಧನವಾಗಿದೆ ಮಾನವರು ಯಾವ ಧರ್ಮದಲ್ಲಿ ಜನಿಸಿದ್ದರೂ ಅವರು ಸಾಧಿಸಬೇಕಾದ ಒಂದೇ ಒಂದು ಗುರಿಯೆಂದರೆ, ಆತ್ಮ ಸಾಕ್ಷಾತ್ಕಾರ ! ಅದನ್ನು ಮರೆತು ಮತಾಂಧತೆಯಿಂದ ಆ ಜಾತಿ, ಈ ಜಾತಿ, ಎಂದು ವಾದಮಾಡುವ ಮೊಂಡ ಪಂಡಿತರ ಮಾತುಗಳಿಗೆ ನಾನು ಕಿವಿಗೊಡಲಾರೆ !'' ಎಂದು ನಿಷ್ಟುರನಾಗಿ ನುಡಿದು ಅವರ ಬಾಯಿ ಮುಚ್ಚಿಸಿ ಬಿಡುತ್ತಿದ್ದನು. ಹೀಗಿರುತ್ತಿರಲು ಒಂದು ಸಲ ಆ ರಾಜನ ತೊಡೆಯ ಮೇಲೆ ಒಂದು ಹುಣ್ಣು ಹುಟ್ಟಿಕೊಂಡಿತು. ವೈದ್ಯರು ಎಷ್ಟೇ ರೀತಿಯಿಂದ ಔಷಧೋಪಚಾರ ಮಾಡಿದರೂ ಅದು ನಿವಾರಣೆಯಾಗದಂತಾಯಿತು. ಬಾದಶಹನು ಅದರ ವೇದನೆಯನ್ನು ತಡೆಯಲಾರದೇ ಬಹು ಸಂಕಟಪಡುತ್ತಿದ್ದನು. ಒಂದು ದಿನ ಆತನು ಏಕಾಂತದಲ್ಲಿ ಒಬ್ಬ ಬ್ರಾಹ್ಮಣ ಪಂಡಿತನನ್ನು ಕರಿಸಿಕೊಂಡು, ಈ ಹುಣ್ಣಿನ ನಿವಾರಣೆಗೆ ಯಾವ ಉಪಾಯ ಮಾಡಬೇಕು ?” ಎಂದು ಕೇಳಿದನು. ಆಗ ಬ್ರಾಹ್ಮಣನು ಸ್ವಲ್ಪ ಯೋಚಿಸಿ, “ಬಾದಶಹನೇ ! ಈ ನಿನ್ನ ವ್ಯಾಧಿಯು, ತೀರ್ಥಯಾತ್ರೆ, ಸತ್ಪುರುಷರ ಕೃಪಾದೃಷ್ಟಿಯಿಂದ ವಾಸಿಯಾಗಬೇಕಾಗಿದೆಯೇ ಹೊರತು, ಔಷಧೋಪಚಾರಗಳಿಂದ ಯಾವ ಪ್ರಯೋಜನವೂ ಆಗಲಾರದು.” ಎಂದು ಹೇಳಿ, ಆತನಿಗೆ 'ಪಾಪವಿನಾಶಿ' ತೀರ್ಥ ಯಾತ್ರೆಗೆ ಹೋಗಿ, ಸ್ನಾನ ಮಾಡಿಬರಲು ಸೂಚಿಸಿದರು.

ಬ್ರಾಹ್ಮಣ ಸಂದೇಶದಂತೆ ಬಾದಶಹನು 'ಪಾಪ ವಿನಾಶಿ' ತೀರ್ಥಕ್ಕೆ ಒಬ್ಬನೇ ಹೋಗಿ ಸ್ನಾನ ಮಾಡಿದನು. ಆತನಿಗೆ ಅಲ್ಲಿ ಒಬ್ಬ ಸನ್ಯಾಸಿಯು ಭೆಟ್ಟಿಯಾದನು. ರಾಜನು ಆ ಸನ್ಯಾಸಿಯೆದುರು ತನ್ನ ಗೋಳನ್ನು ತೋಡಿ ಕೊ೦ಡು, ಇದಕ್ಕೆ ನಿವಾರಣೋಪಾಯವೇನೆಂದು ಅವನಲ್ಲಿ ಭಕ್ತಿಯಿಂದ ವಿಚಾರಿಸಿದನು. ಸನ್ಯಾಸಿಯು ರಾಜಾ ! ನಿನ್ನ ವ್ಯಾಧಿ ನಿವಾರಣೆಗೆ ನೀನು ಸತ್ಪುರುಷರ ದರ್ಶನ ಪಡೆಯಬೇಕಾಗುವದು. ಈಗ ಗಾಣಗಾಪುರದಲ್ಲಿ ಮಹಾನ್ ಸತ್ಪುರುಷರಾದ ನೃಸಿಂಹ ಸರಸ್ವತಿ ಯತಿಗಳು ಅವತರಿಸಿ ಬಂದಿದ್ದಾರೆ. ಅವರ ದರ್ಶನ ಪಡೆದರೆ, ನೀನು ಖಂಡಿತವಾಗಿ ಈ ನೋವಿನಿಂದ ವಿಮುಕ್ತಿ ಹೊಂದುವಿ !” ಎಂದು ಹೇಳಿದನು. ಬಾದಶಹನು ತಡಮಾಡದೇ ಗಾಣಗಾಪುರಕ್ಕೆ ಬಂದನು. ಅಲ್ಲಿಯ ಜನರನ್ನು ಸನ್ಯಾಸಿಯಾಗಿರುವ ತಪಸ್ವಿ ಎಲ್ಲಿದ್ದಾನೆ ?'' ಎಂದು ದರ್ಪದಿಂದ ಕೇಳಿದನು. ಜನರು ಭಯ ಭೀತರಾದರು. ಬಾದಶಹನು ಮುಸಲ್ಮಾನನು ! ಮುಂದೆ ಏನು ಅನಾಹುತ ಮಾಡುವನೋ ಎಂದು ಕಳವಳಗೊಳ್ಳುತ್ತ ಪ್ರಭು ! ಅವರು ಸಂಗಮಕ್ಕೆ ಅನುಷ್ಠಾನಕ್ಕೆ ಹೋಗಿದ್ದಾರೆ. ಮಧ್ಯಾಹ್ನದ ವೇಳೆಗೆ ಇಲ್ಲಿಯ ಮಠಕ್ಕೆ ಬರುವರು.” ಎಂದು ಅಂಜುತ್ತ ಉತ್ತರ ಕೊಟ್ಟರು ಬಾದಶಹನು ತನ್ನ ಕಾವಲಿಗಿದ್ದ ಸೈನಿಕರನ್ನೆಲ್ಲ ಗಾಣಗಾಪುರದಲ್ಲಿಯೇ ಬಿಟ್ಟು, ತಾನೊಬ್ಬನೇ ಮೇಣೆಯಲ್ಲಿ ಕುಳಿತು ಸಂಗಮದತ್ತ ಸಾಗಿದನು. ಅರ್ಧದಾರಿ ಹೋಗುವಷ್ಟರಲ್ಲಿಯೇ ಗುರುಗಳು ಎದುರಿನಿಂದ ಅನುಷ್ಠಾನ ಮುಗಿಸಿಕೊಂಡು ಬರುತ್ತಿರುವದನ್ನು ಗಮನಿಸಿ, ಮೇಣೆಯಿಂದ ಕೆಳಗಿಳಿದು ಕಾಲುನಡಿಗೆಯಿಂದ ಹೊರಟನು. ಗುರುಗಳು ಸಮೀಪಕ್ಕೆ ಬಂದೊಡನೆಯೇ ಭಕ್ತಿಯಿಂದ ಅವರ ಚರಣಗಳಿಗೆ ನಮಸ್ಕರಿಸಿದನು. ಆಗ ಗುರುಗಳು ಬಾದಶಹನನ್ನು ನೋಡುತ್ತ ಏನೋ ರಜಕಾಽ! ಈಗ ಎಲ್ಲಿರುವಿ ? ಬಹಳ ದಿನಗಳ ನಂತರ ನಿನ್ನ ಭೆಟ್ಟಿಯಾದಂತಾಯ್ತಲ್ಲಾ?” ಎಂದು ಕೇಳಿದರು. ತಕ್ಷಣವೇ ಬಾದಶಹನಿಗೆ ವಿದ್ಯುತ್‌ ಸಂಚಾರವಾದಂತೆನಿಸಿ, ಪೂರ್ವಜನ್ಮದ ಸ್ಮರಣೆಯುಂಟಾಯಿತು. ಆತನು ಗುರುಗಳನ್ನು ಆಪಾದಮಸ್ತಕ ನೋಡಿ, “ಅಯ್ಯೋ ಗುರುವೇ ! ನೀವೇ ನನ್ನ ಉದ್ಧಾರಕರು ನೀವೇ ನನಗೆ ಇಷ್ಟೆಲ್ಲ ರಾಜ್ಯ ಸಿರಿ-ಸಂಪತ್ತುಗಳನ್ನು ಕರುಣಿಸಿದ ಉದಾರಿಗಳು ! ನಿಮ್ಮನ್ನೇ ನಾನು ಗುರುತಿಸದೇ ಹೋದೆ! ಗುರುನಾಥಾ ನನ್ನಿಂದ ಸರ್ವಾಪರಾಧವಾಯಿತು. ದಯವಿಟ್ಟು ನನ್ನನ್ನು ಕ್ಷಮಿಸಿ ಉದ್ಧರಿಸು ತಂದೇ !' ಎಂದು ಹಲಬುತ್ತ ಗುರುಚರಣಗಳ ಮೇಲೆ ಗಡಗಡನೇ ಉರುಳಾಡಿಬಿಟ್ಟನು. ಮತ್ತೆ ಮೇಲೆದ್ದು ಕೈ ಜೋಡಿಸಿಕೊಂಡು ನಿಂತು, ಗದ್ಗದ ಕಂಠದಿಂದ “ಗುರುಗಳೇ ನನಗೆ ರಾಜ್ಯ, ಹೆಂಡತಿ, ಮಕ್ಕಳು, ಅಷ್ಟೆಶ್ವರಗಳನ್ನೆಲ್ಲ ಕೊಟ್ಟು, ಮದೋನ್ಮತ್ತನನ್ನಾಗಿ ಮಾಡಿ ನಿಮ್ಮ ಚರಣ ಸೇವೆಯಿಂದ ದೂರ ಮಾಡಿ ಬಿಟ್ಟಿರಿ ! ನನ್ನನ್ನು ಅಜ್ಞಾನದ ಅಂಧಃಕಾರದಲ್ಲಿ ದೂಡಿ ಬಿಟ್ಟಿದ್ದಿರಿ ! ನನಗಿನ್ನು ಈ ರಾಜ್ಯ ಬೇಡಾ, ಸಿರಿ ಸಂಪತ್ತುಗಳು ಬೇಡಾ! ಹೆಚ್ಚೇನು ? ಮಕ್ಕಳು ಹೆಂಡತಿ ಯಾರೂ ನನಗೆ ಬೇಡಾ ! ಸದಾ ನಿನ್ನ ಚರಣ ಸೇವೆಯ ಭಾಗ್ಯವೊಂದನ್ನೇ ನೀಡಿಬಿಡು ತಂದೇ; ನಾನಿನ್ನು ಅತ್ಮೋದ್ದಾರ ಮಾಡಿಕೊಂಡು ಧನ್ಯನಾಗುತ್ತೇನೆ !'' ಎಂದು ಅವರ ಚರಣಗಳನ್ನು ಆನಂದಾತೃಗಳಿಂದ ತೊಳೆದುಬಿಟ್ಟನು. ಗುರುಗಳು ನಸುನಗುತ್ತ ಬಾದಶಹನನ್ನು ಮೇಲೆಬ್ಬಿಸಿ ಅದೆಲ್ಲಾ ಸರಿಯಾಯ್ತಪ್ಪಾ ರಜಕಾ! ಈಗ ನಿನಗೆ ನಮ್ಮ ದರ್ಶನದ ಅವಶ್ಯಕತೆಯೇನಿತ್ತು?' ಎಂದು ಪ್ರಶ್ನೆ ಮಾಡಿದರು. ಗುರುಗಳೇ ! ನನಗೊಂದು ಹುಣ್ಣು ಹುಟ್ಟಿಕೊಂಡು ತುಂಬಾ ತೊಂದರೆ ಕೊಡಹತ್ತಿದೆ. ಅದರ ನಿವಾರಣೆಗಾಗಿ ನಾನು ಯೋಗಾಯೋಗ ದಿಂದ ಬಂದು ನಿಮ್ಮನ್ನು ಕಂಡೆ !'' ಎಂದು ರಜಕನು (ಬಾದಶಹನು) ನುಡಿದನು. ಗುರುಗಳು ಹಾಗೋ ವಿಷಯಾ? ಸರಿ; ಎಲ್ಲಿದೆ ನಿನ್ನ ಹುಣ್ಣು? ತೋರಿಸು ನೋಡೋಣ!” ಎಂದರು. ರಜಕನು ತನ್ನ ತೊಡೆಯನ್ನು ನೋಡಿ ಕೊಂಡಾಗ ಅಲ್ಲಿ ಹುಣ್ಣಿನ ಬಾಧೆಯೊತ್ತಟ್ಟಿಗಿರಲಿ; ಅದು ಹುಟ್ಟಿದ್ದರ ಕಲೆ ಸಹಿತ ಕಂಡು ಬರಲಿಲ್ಲ. ರಜಕನಿಗೆ ತುಂಬಾ ವಿಸ್ಮಯವೆನಿಸಿತು. ಆತನು ಗುರುಲೀಲೆಯನ್ನು ಮನಸಾರ ಕೊಂಡಾಡಿದನು. ಗುರುಗಳನ್ನು ಕುರಿತು, ಸದ್ಗುರುನಾಥಾ ನಿನ್ನ ಕೃಪೆಯಿಂದಾಗಿ ಮೊದಲು ಅಗಸನಾಗಿ ದಾರಿದ್ರದಲ್ಲಿ ಕಾಲ ಕಳೆಯುತ್ತಿದ್ದ ನಾನು, ರಾಜ್ಯ, ಸಿರಿಸಂಪತ್ತು ಹೆಂಡಿರು, ಮಕ್ಕಳು ಎಲ್ಲದರ ಸುಖವನ್ನು ಅನುಭವಿಸಿ ತೃಪ್ತನಾಗಿರುವೆ, ನೀವು ನನಗೆ ಕರುಣಿಸಿರುವ ಐಶ್ವರವನ್ನೆಲ್ಲ ಒಂದು ಸಲ ತಮಗೆ ತೋರಿಸಬೇಕೆಂದು ನನಗೆ ಆಸೆಯಾಗಿದೆ. ಆದಕಾರಣ ತಾವು ದಯವಿಟ್ಟು ನನ್ನ ಅರಮನೆಗೆ ಬಂದು, ನನ್ನ ಆತಿಥ್ಯ ಸ್ವೀಕರಿಸುವ ಕೃಪೆ ಮಾಡಬೇಕು !” ಎಂದು ಅನನ್ಯ ಭಕ್ತಿಯಿಂದ ಪ್ರಾರ್ಥಿಸಿಕೊಂಡನು. ಅದಕ್ಕೆ ಗುರುಗಳು ರಾಜಾ ! ನಾವು ಸನ್ಯಾಸಿಗಳು ! ತಪಸ್ವಿಗಳು !! ನಿನ್ನ ರಾಜ್ಯದಲ್ಲಿ ಗೋಹತ್ಯೆಯು ಅವ್ಯಾಹತವಾಗಿ ನಡೆಯುವದಂತೆ! ಅಂಥದ್ದೆಲ್ಲಾ ನಮ್ಮ ಕಣ್ಣಿಗೆ ಸಹ ಬೀಳಬಾರದು. ಒಂದು ವೇಳೆ ನೀನು ಗೋಹತ್ಯೆಗೆ ಪ್ರತಿಬಂಧಕಾಜ್ಞೆಯನ್ನು ಹೊರಡಿಸುವದಾದರೆ, ನಾವು ನಿಮ್ಮಲ್ಲಿಗೆ ಬರಲು ಅನುಕೂಲವಾದೀತು !” ಎಂದರು. ರಜಕನು ಅದಕ್ಕೆ ಒಪ್ಪಿಕೊಂಡನು. ಆತನು ಗುರುಗಳನ್ನು ತನ್ನ ಮೇಣೆಯಲ್ಲಿ ಕೂಡಿಸಿಕೊಂಡು, ತಾನು ಗುರುಗಳ ಪಾದುಕೆಗಳನ್ನು ತಲೆಯಮೇಲಿಟ್ಟುಕೊಂಡು, ಮೇಣೆಯ ಬದಿಯಲ್ಲಿ ಕಾಲುನಡಿಗೆಯಿಂದ ಸಾಗತೊಡಗಿದನು. ಗಾಣಗಾಪುರಕ್ಕೆ ಬಂದ ಕೂಡಲೇ ಅರಸನು ತನ್ನ ಸೈನ್ಯವನ್ನೆಲ್ಲ ಗುರುಗಳಿಗೆ ತೋರಿಸಿದನು. ತಾವು ಇಂದೇ ಶಿಷ್ಯ ಪರಿವಾರದೊಂದಿಗೆ ನನ್ನ ಅರಮನೆಗೆ ಬರಬೇಕೆಂದು ಗುರುಗಳಿಗೆ ಮತ್ತೊಮ್ಮೆ ವಿನಂತಿಸಿಕೊಂಡನು. ಗುರುಗಳು ಅದಕ್ಕೆ ಒಪ್ಪಿಕೊಂಡರು,ಅರಸನು ಗುರುಗಳನ್ನು ಮೇಣೆಯಲ್ಲಿ ಕೂಡ್ರಿಸಿದನು. ಎಲ್ಲ ಶಿಷ್ಯರಿಗೂ ಒಂದೊಂದು ಕುದುರೆಗಳನ್ನೇರಲು ವಿನಂತಿಸಿದನು. ವಾದ್ಯ ಮೇಳದೊಂದಿಗೆ ವೈಭವದಿಂದ ತನ್ನ ರಾಜಧಾನಿಯತ್ತ ಸಾಗತೊಡಗಿದನು. ಬಾದಶಹನು ಮೇಣೆಯ ಮಗ್ಗುಲಲ್ಲಿ ಕಾಲುನಡಿಗೆಯಿಂದಲೇ ಬರುತ್ತಿರುವದನ್ನು ಗಮನಿಸಿದ ಗುರುಗಳು, ಅರಸನೇ ! ನೀನು ಒಂದು ಕುದುರೆಯನ್ನೇರಿ ಪ್ರಯಾಣ ಮಾಡು ! ನೀನು ದೊಡ್ಡ ಬಾದಶಹನಾಗಿರುವಿ ! ಹೀಗೆ ಬ್ರಾಹ್ಮಣರನ್ನು ವಾಹನಗಳಲ್ಲೇರಿಸಿ ನೀನು ಬರಿಗಾಲಿನಿಂದ ನಡೆಯುತ್ತ ಬಂದರೆ, ನಿಮ್ಮ ಜನಾಂಗದವರು ನಗುತ್ತಾರೆ' ಎಂದರು. ಅದಕ್ಕೆ ಆತನು ನಿಗರ್ವದಿಂದ, “ಪ್ರಭೂ ! ನಾನೆಲ್ಲಿಯ ರಾಜನು ? ನಾನು ರಜಕನು ! ಇದೆಲ್ಲಾ ನಿಮ್ಮ ಕರುಣೆಯ ಫಲ ! ಆದರೆ ನಾನು ಮೇಂಛ ಕುಲದಲ್ಲಿ ಹುಟ್ಟಿದೆನಲ್ಲಾ? ಎಂಬುದೊಂದೇ ನನಗೀಗ ಅಳುಕಾಗಿದೆ. ದಯವಿಟ್ಟು ಈ ಕಾರಣದಿಂದಾಗಿ ನನ್ನನ್ನು ಉಪೇಕ್ಷೆ ಮಾಡಬೇಡಿರಿ !'' ಎಂದು ವಿನಂತಿಸಿಕೊಂಡನು. ಪ್ರಯಾ ಣವು ಸ್ವಲ್ಪ ದೂರ ಸಾಗಿದ ನಂತರ, ಗುರುಗಳು ರಾಜನನ್ನು ಕುರಿತು, ರಜಕಾ ! ನಿನ್ನ ಸೈನ್ಯದೊಂದಿಗೆ ಹೊರಟರೆ ನಮಗೆ ತಡವಾಗುತ್ತದೆ. ಅದಕ್ಕಾಗಿ ನಾವು ನಮ್ಮ ಶಿಷ್ಯ ಬಳಗದೊಂದಿಗೆ ನಿನ್ನ ರಾಜಧಾನಿಗೆ ಸಮೀಪದ ಲ್ಲಿರುವ 'ಪಾಪ ವಿನಾಶಿ' ತೀರ್ಥದಲ್ಲಿ ನಿನಗೆ ಭೆಟ್ಟಿಯಾಗುತ್ತೇವೆ. ನೀನು ಯಾವ ಸಂಶಯವನ್ನು ತಳೆಯದೇ ಬೇಗ ಅಲ್ಲಿಗೆ ಬಂದು ನಮ್ಮನ್ನು ಭೆಟ್ಟಿಯಾಗು ! ಅಲ್ಲಿಂದ ನಿಮ್ಮ ಅರಮನೆಗೆ ಹೋಗಲು ತಡವಾಗುವದಿಲ್ಲ'' ಎಂದು ನುಡಿದು ಮೇಣೆಯಿಂದ ಕೆಳಗಿಳಿದರು. ಶಿಷ್ಯರೂ ಕುದುರೆಗಳನ್ನಿಳಿದು ಗುರುಗಳು ಬಂದರು, ನಿತ್ಯ ಕರ್ಮದ ನೆಪದಿಂದ ಅವರೆಲ್ಲಾ ಜಲಾಶಯವೊಂದರತ್ತ ಸಾಗಿದರು. ರಾಜ್ಯ ಪರಿವಾರವು ಮುಂದೆ ಸಾಗಿತು. ಸೂರ್ಯನಿಗೆ ಅರ್ಘ್ಯ ಕೊಟ್ಟು ನಂತರ ಗುರುಗಳು ತಮ್ಮ ಶಿಷ್ಯರೊಂದಿಗೆ ಮನೋವೇಗದಿಂದ ಸಾಗಿ, “ಪಾಪ ವಿನಾಶಿ' ಕ್ಷೇತ್ರದಲ್ಲಿಳಿದರು. ಅಲ್ಲಿ ಸಾಯಂದೇವನ ಮಗನಾದ ನಾಗನಾಥನು ಭೆಟ್ಟಿಯಾಗಿ, ಶ್ರೀ ಗುರುಗಳನ್ನು ಶಿಷ್ಯಪರಿವಾರ ಸಮೇತವಾಗಿ ತನ್ನ ಮನೆಗೆ ಕರೆದೊಯ್ದು ವೈಭವದಿಂದ ಪಾದ ಪೂಜೆ ಮಾಡಿದನು, ಸಹಸ್ರ ಜನ ಬ್ರಾಹ್ಮಣರಿಗೆ ಅನ್ನ ಸಂತರ್ಪಣೆಯಾಯಿತು. ಸಾಯಂಕಾಲವಾಗಲು ಗುರುಗಳು ನಾಗನಾಥನಿಗೆ ಆಶೀರ್ವದಿಸಿ, ಮತ್ತೆ ಪಾಪ ವಿನಾಶಿ ತೀರ್ಥಕ್ಕೆ ಬಂದು ಕುಳಿತರು. ಬಾದಶಹನು ಅಷ್ಟರಲ್ಲಿ ತನ್ನ ದಂಡಿನೊಂದಿಗೆ ಪಾಪವಿನಾಶಿ ತೀರ್ಥಕ್ಕೆ ಬಂದು ತಲುಪಿದನು. ಗುರುಗಳು ತನಗಿಂತ ಮೊದಲೇ ಅಲ್ಲಿಗೆ ಬಂದಿರುವದನ್ನು ಆನಂದಾಶ್ಚರಗಳಿಂದ ನೋಡಿದನು, ಪರಿವಾರದವರಿಗೆ ಹೇಳಿ ಕಳಿಸಿ ತನ್ನ ಅರಮನೆ ಹಾಗೂ ನಗರಗಳು ಶೃಂಗಾರ ಮಾಡಿಸಲು ತಿಳಿಸಿದನು. ನಂತರ ಗುರುಗಳನ್ನು ಮೇಣೆಯಲ್ಲಿ ಕೂಡಿಸಿಕೊಂಡು ವಾದ್ಯ ವೈಭವದೊಂದಿಗೆ ಮೆರವ ಣಿಗೆ ಮಾಡುತ್ತ ತಾನು ಪಾದಚಾರಿಯಾಗಿಹೊರಟನು. ವೈದುರಾ ನಗರದ ಜನರು ಗುರುಗಳಿಗೆ ಆರತಿ ಬೆಳಗಿ ನಗರದಲ್ಲಿ ಸ್ವಾಗತಿಸಿಕೊಂಡರು. ಮುಸಲ್ಮಾನ ದೊರೆಯು ವಿಪ್ರ ಪೂಜೆ ಮಾಡುವದನ್ನು ಕೇಳಿ ಅವರೆಲ್ಲ ಆಶ್ಚರ್ಯಪಟ್ಟರು. ಮುಸಲ್ಮಾನ ಜನಾಂಗದವರು ಮಾತ್ರ, ಹಿಂದೂ ಗುರುಗಳನ್ನು ಪೂಜಿಸಿ, ನಮ್ಮ ಬಾದಶಹನು ಅನಾಚಾರಿಯಾಗಿ ಕೆಟ್ಟು ಹೋದನೆಂದು ಮನದಲ್ಲಿಹಳಹಳಿಸತೊಡಗಿದರು. ಮೆರವಣಿಗೆಯು ಅರಮನೆಯನ್ನು ತಲುಪಿ ರಾಜನು ಬಹುಭಕ್ತಿಯಿಂದ ಗುರುಗಳನ್ನು ಕೈಹಿಡಿದು ಮೇಣೆಯಿಂದ ಕೆಳಗಿಳಿಸಿಕೊಂಡನು. ರಾಜಸಿಂಹಾಸನದ ಮೇಲೆ ಗುರುಗಳನ್ನು ಕುಳ್ಳಿರಿಸಿ ತನ್ನ ಹೆಂಡಿರು ಮಕ್ಕಳನ್ನೆಲ್ಲ ಕರೆತಂದು, ಗುರುಗಳ ಚರಣ ಕಮಲಗಳಿಗೆ ನಮಸ್ಕಾರ ಮಾಡಿಸಿದನು. ಗುರುಗಳು ಆತನನ್ನು ಕುರಿತು, ಈಗಲಾದರೂ ನಿನ್ನ ಮನಸ್ಸಿಗೆ ತೃಪ್ತಿಯಾಯಿತೇ ?” ಎಂದು ಕೇಳಿದರು. ರಾಜನು ಕೃತಜ್ಞತೆಯಿಂದ ಕೈಮುಗಿದು. 'ದೇವಾ ! ನಿಮ್ಮ ಅನುಗ್ರಹದಿಂದ ನಾನು ಬಹುದಿವಸ ರಾಜ್ಯವಾಳಿದೆನು. ನನ್ನ ಭೋಗಲಾಲಸೆಯೆಲ್ಲ ಈಗ ತೃಪ್ತಿಹೊಂದಿದೆ. ನನಗಿನ್ನು ತಮ್ಮ ಚರಣ ಸೇವೆಯ ಭಾಗ್ಯ ದೊರೆಯಬೇಕು!'' ಎಂದು ವಿನಂತಿಸಿಕೊಂಡನು. ಗುರುಗಳು ಆತನಿಗೆ, “ನೀನು ನಿನ್ನ ಮಗನಿಗೆ ರಾಜ್ಯ ಪಟ್ಟ ಕಟ್ಟಿ, ನಮ್ಮ ದರ್ಶನಕ್ಕಾಗಿ ಶ್ರೀಶೈಲಕ್ಕೆ ಬಾ !' ಎಂದು ಆಜ್ಞೆ ಮಾಡಿ, ಅವರನ್ನೆಲ್ಲ ಆಶೀರ್ವದಿಸಿ ಗೌತಮೀ ಯಾತ್ರೆಯನ್ನು ಮುಗಿಸಿಕೊಂಡು ಗಾಣಗಾಪುರಕ್ಕೆ ಬಂದು ತಲುಪಿದರೆಂದು ನಾಮಧಾರಕನಿಗೆ ಸಿದ್ಧಮುನಿಯ ತಿಳಿಸಿದನೆ೦ಬಲ್ಲಿಗೆ, ಸಾರರೂಪ ಶ್ರೀಗುರು ಚರಿತ್ರೆಯ 50ನೆಯ ಅಧ್ಯಾಯ ಮುಗಿಯಿತು.

Comments

Popular posts from this blog

Hanumane Tandeyu Hanumane Thayiyu lyrics

Sankshipta Guru Charitre in kannada

Sri Rama Chandirane