Shri Guru Charitre - Chapter 47
ಅಧ್ಯಾಯ ೪೭
||ಹರಿಃ ಓಂ ಶ್ರೀ ಗುರುಭ್ಯೋ ನಮಃ ||
ನಾಮಧಾರಕನೇ ! ಇನ್ನೊಂದು ಗುರುಲೀಲೆಯ ಪ್ರಸಂಗವನ್ನು ಹೇಳುವೆ ಆಲಿಸು ! ಗುರುಗಳು ಗಾಣಗಾಪುರದಲ್ಲಿದ್ದಾಗ, ಒಮ್ಮೆ ದೀಪಾವಳಿಯ ಹಬ್ಬ ಬಂದಿತ್ತು ಆಗ ಬೇರೆ ಬೇರೆ ಏಳು ಊರುಗಳಿಂದ ಏಳು ಜನಸದ್ಭಕ್ತರು ದೀಪಾವಳಿಗೆ ತಮ್ಮಲ್ಲಿಗೆ ಬರಲು ಗುರುಗಳಿಗೆ ಆಮಂತ್ರಣ ಕೊಡಲು ಬಂದರು. ಆಗ ಗುರುಗಳು ನೀವು ಏಳೂ ಜನರು ನಮ್ಮಲ್ಲಿಗೆ ಬರಬೇಕೆಂದು ಆಮಂತ್ರಣ ಕೊಟ್ಟರೆ, ಒಂದೇ ದೇಹ ಹೊಂದಿರುವ ನಾವು ಬರುವದಾದರೂ ಹೇಗೆ ? ನಾವು ನಿಮ್ಮಲ್ಲಿ ಯಾರಾದರೂ ಒಬ್ಬರ ಊರಿಗೆ ಮಾತ್ರ ಬರಲು ಸಾಧ್ಯವಾದೀತು!'' ಎಂದು ನುಡಿದರು. ಆಗ ಪ್ರತಿಯೊಬ್ಬ ಶಿಷ್ಯನೂ ನಮ್ಮಲ್ಲಿಗೆ ಬನ್ನಿ ! ನಮ್ಮಲ್ಲಿಗೇ ಬನ್ನಿ !' ಎಂದು ವಾದಿಸತೊಡಗಿದರು. ಆಗ ಗುರುಗಳು, “ನೀವಾರೂ
ಬಡಿದಾಡಬೇಡಿರಿ ! ನಾವು ನಿಮ್ಮೆಲ್ಲರ ಮನೆಗೂ ತಪ್ಪದೇ ಬರುವೆವು! ಎಂದು ನುಡಿದರು.ಶಿಷ್ಯರು ಅವರ ಇಂಥ ಹೇಳಿಕೆಯ ಬಗ್ಗೆ ಸಂಶಯ ತಾಳ ತೊಡಗಿದರು. ಆಗ ಗುರುಗಳು ಒಬ್ಬೊಬ್ಬರನ್ನಾಗಿ, ತಮ್ಮ ಪೂಜಾ ಗೃಹದೊಳಗೆ ಕರಿಸಿಕೊಂಡು ನಾನು ಈ ಸಲದ ದೀಪಾವಳಿಗೆ ನಿಮ್ಮ ಊರಿಗೇ ಬರುವೆ ಈ ಸಂಗತಿಯನ್ನು ಯಾರೆದುರೂ ತಿಳಿಸಕೂಡದು !” ಎಂದು ಹೇಳಿ ಹೇಳಿ ಎಲ್ಲ ಶಿಷ್ಯರನ್ನೂ ಅವರವರ ಊರಿಗೆ ಕಳಿಸಿಕೊಟ್ಟರು. ನಂತರ ಗಾಣಗಾಪುರದ ಭಕ್ತರು ಬಂದು ಗುರುಗಳೇ ! ತಾವು ದೀಪಾವಳಿಯ ಹಬ್ಬಕ್ಕೆ ಇಲ್ಲಿಯೇ ಉಳಿದು, ನಮ್ಮೆಲ್ಲರ ಸೇವೆ ಸ್ವೀಕರಿಸಬೇಕು ! ಪರಸ್ಥಳಗಳಿಗೆ ಹೋಗಲು ನಿಮ್ಮನ್ನು ನಾವು ಬಿಡಲಾರೆವು !” ಎಂದು ಹೇಳಿದರು. ಗುರುಗಳು ಅವರಿಗೆ “ಛೇ, ನಿಮ್ಮನ್ನೆಲ್ಲಾ ಬಿಟ್ಟು ನಾವೇಕೆ ಪರಸ್ಥಳಗಳಿಗೆ ಹೋಗೋಣ ? ಆ ಬಗ್ಗೆ ನೀವೇನೂ ಚಿಂತಿಸಬೇಡಿರಿ ! ಎಂದು ಅವರಿಗೂ ಆಶ್ವಾಸನೆ ಕೊಟ್ಟರು.
ಧನ ತ್ರಯೋದಶಿಯ ದಿವಸ ಗುರುಗಳು ಯಾರಿಗೂ ಗೊತ್ತಾದಂತೆ ಅಷ್ಟ ದೇಹಗಳನ್ನು ಧಾರಣ ಮಾಡಿದರು . ೭ ಭಕ್ತರ ಊರುಗಳಿಗೆ ಹೋದರು ಹಾಗೂ ಗಾಣಗಾಪುರದ ಮಠದಲ್ಲಿ ಉಳಿದರು. ಹೀಗೆ ಎಲ್ಲ ಕಡೆಯಲ್ಲಿಯೂ ದೀಪಾವಳಿಯ ಸಡಗರದ ಪೂಜೆ, ಆತಿಥ್ಯಗಳನ್ನು ಸ್ವೀಕಾರ ಮಾಡಿದರು. ಹಬ್ಬ ಮುಗಿದ ನಂತರ ಪುನಃ ಗಾಣಗಾಪುರಕ್ಕೆ ಬಂದು ಒಂದೇ ರೂಪದಿಂದ ಇರತೊಡಗಿದರು. ಮುಂದೆ ಅದೇ ವರ್ಷ ಗೌರೀ ಹುಣ್ಣಿವೆಗೆ ಆರಾಧನೆಗಾಗಿ, ಮೊದಲು ಬಂದಿದ್ದ ಭಕ್ತರೆಲ್ಲರೂ ಮತ್ತೊಮ್ಮೆ ಬಂದರು. ಆಗ ಅವರು ಗುರುಗಳು ಈ ಸಲ ನಮ್ಮ ಮನೆಗೆ ದೀಪಾವಳಿಯ ಹಬ್ಬಕ್ಕೆ ಬಂದಿದ್ದರೆಂದು ವಾದಿಸತೊಡಗಿದರು. ಗಾಣಗಾಪುರದ ಭಕ್ತರು, "ಈ ಸಲ ಗುರುಗಳು ಮಠದಲ್ಲಿದ್ದುಕೊಂಡೇ ದೀಪಾವಳಿಯನ್ನು ಶೋಭೆಗೊಳಿಸಿದರು.” ಎಂದು ಹೇಳಿಕೊಳ್ಳತೊಡಗಿದರು. ಎಲ್ಲ ಊರಿನವರೂ ಗುರುಗಳು ಹತ್ತಿರವಿದ್ದ ಉಡುಗೊರೆಗಳನ್ನು ತೋರಿಸಿ “ಅಂದು ದೀಪಾವಳಿಗೆ ಗುರುಗಳು ನಮ್ಮಲ್ಲಿಗೆ ಬಂದಾಗ ನಾವೇ ಕೊಡಿಸಿದ ಕಾಣಿಕೆ !'' ಎಂದು ಒಂದೊಂದು ವಸ್ತುಗಳನ್ನು ತೋರಿಸುತ್ತಿದ್ದರು. ಆಗ ಅವರೆಲ್ಲರಿಗೂ ಗುರುಗಳು ಅನಂತ ರೂಪಿಗಳು ಎಂಬ ವಿಷಯವು ತಂತಾನೇ ಮನವರಿಕೆಯಾಯಿತೆಂಬಲ್ಲಿಗೆ ಸಾರರೂಪ ಶ್ರೀ ಗುರು ಚರಿತ್ರೆಯ 47ನೆಯ ಅಧ್ಯಾಯ ಮುಕ್ತಾಯವಾಯಿತು.
Comments
Post a Comment