Shri Guru Charitre - Chapter 46
ಅಧ್ಯಾಯ ೪೬
||ಹರಿಃ ಓಂ ಶ್ರೀ ಗುರುಭ್ಯೋ ನಮಃ ||
ನಾಮಧಾರಕಾ ! ಹಿಪ್ಪರಿಗೆಯಲ್ಲಿದ್ದ ಗುರು ಭಕ್ತರು ಒಂದು ಸಲ ಗುರುಗಳಿಗೆ ವಿನಂತಿಸಿಕೊಂಡು, ಅವರನ್ನು ತಮ್ಮ ಊರಿಗೆ ಪಾದಪೂಜೆಗಾಗಿ ಕರೆದೊಯ್ದರು. ಅಲ್ಲಿ ಗುರು ಪೂಜೆಯು ಒಳ್ಳೇ ವಿಜೃಂಭಣೆಯಿಂದ ನಡೆಯುವದಿತ್ತು ಆ ಊರಲ್ಲಿ ನರಕೇಸರಿ ಎಂಬ ಹೆಸರಿನ ಪ್ರಸಿದ್ಧ ಕವಿಯಿದ್ದನು. ಆತನು ಆ ಗ್ರಾಮದ ಕಲ್ಲೇಶ್ವರನ ಪರಮ ಭಕ್ತನಾಗಿದ್ದನು, ಕಲ್ಲೇಶ್ವರನ ಮೇಲೆ ಬಹಳಷ್ಟು ಪದ್ಯಗಳನ್ನು ರಚಿಸಿ ಆತನು ಕೀರ್ತಿ ಪಡೆದಿದ್ದನು. ಹೀಗಿರಲು ಆ ಗ್ರಾಮದ ಭಕ್ತರು
ನರಕೇಸರಿಯ ಬಳಿಗೆ ಹೋಗಿ, “ಇಂದು ನಮ್ಮ ಗುರುಗಳ ಪೂಜೆ ಇಟ್ಟು ಕೊಂಡಿದ್ದೇವೆ. ಅವರಿಗೆ ಸಂಗೀತದ ಮೇಲೆ ಬಹಳ ಪ್ರೀತಿ ! ಅದಕ್ಕಾಗಿ ನೀವು ಕೆಲವೊಂದು ಸ್ತುತಿಪರವಾದ ಪದ್ಯಗಳನ್ನು ಬರೆದು ಕೊಡಬೇಕು!” ಎಂದು ವಿನಂತಿಸಿಕೊಂಡರು. ಆದರೆ ನರಕೇಸರಿಯು ನಾನು ಕಲ್ಲಿನಾಥನಿಗೆ ನನ್ನ ನಾಲಿಗೆಯನ್ನು ಅರ್ಪಣ ಮಾಡಿಬಿಟ್ಟಿದ್ದೇನೆ. ಅಂದಮೇಲೆ, ಬೇರೇ ದೇವತೆಗಳನ್ನಾಗಲಿ, ನರರನ್ನಾಗಲೀ ಸ್ತುತಿಸಿ ಬರೆಯುವದು ನನ್ನಿಂದಾಗದು!' ಎಂದು ನಿಷ್ಠುರವಾಗಿ ಹೇಳಿಸಿಬಿಟ್ಟನು. ಈ ಸಮಾಚಾರವು ಗುರುಗಳಿಗೆ ಗೊತ್ತಾಯಿತು. ಅಂದು ಪೂಜೆಗೆಂದು ಕಲ್ಲೇಶ್ವರನ ಗುಡಿಗೆ ಹೋದಾಗ ನರಕೇಸರಿಗೆ ಒಮ್ಮಿಂದೊಮ್ಮೆಲೇ ನಿದ್ರೆ ಆವರಿಸಿತು. ನಿದ್ರೆಯಲ್ಲಿ ಆತನಿಗೆ ಗುರುಗಳು ಕಲ್ಲೇಶ್ವರನ ಮೇಲೆ ಕುಳಿತಿರುವಂತೆಯೂ ತಾನು ಅವರ ಪೂಜೆ ಮಾಡುತ್ತಿರುವಂತೆಯೂ ಸ್ವಪ್ನ ಕಂಡನು. ಸ್ವಪ್ನದಲ್ಲಿ ಗುರುಗಳು ಆತನಿಗೆ “ನಾವು ಮನುಷ್ಯರು ಅಂದಮೇಲೆ ವಿನಾಕಾರಣ ನಮ್ಮನ್ನೇಕೆ ಪೂಜೆಸುವಿ ?'' ಎಂದು ಕೇಳಿದಂತಾಯಿತು. ನರಕೇಸರಿಗೆ ತಟ್ಟನೇ ಎಚ್ಚರವಾಯಿತು. ತನ್ನ ತಪ್ಪಿನ ಅರಿವಾಯಿತು. ಧಾವಿಸಿ ಬಂದು ಗುರುಗಳ ಅಡಿದಾವರೆಗಳ ಮೇಲೆ ಹೊರಳಾಡುತ್ತ ನನ್ನಿಂದ ತಪ್ಪಾಯ್ತು ಗುರುವೇ ! ನೀವೇ ಕಲ್ಲೇಶ್ವರರೆಂಬುದನ್ನು ಅರಿಯದೇ ಅಪರಾಧ ಮಾಡಿದೆ. ದಯವಿಟ್ಟು ನನ್ನನ್ನು ಕ್ಷಮಿಸಿ, ನಿಮ್ಮ ಶಿಷ್ಯ ವರ್ಗದಲ್ಲಿ ಸೇರಿಸಿಕೊಳ್ಳುವ ಕೃಪೆಮಾಡಬೇಕು,” ಎಂದು ಪ್ರಾರ್ಥಿಸಿಕೊಳ್ಳತೊಡಗಿದನು. ಶ್ರೀಗುರುವು ನೀನು ನಮ್ಮನ್ನು ನಿಂದಿಸಿದಿ ! ಈಗ ನೀನಾಗಿಯೇ ಧಾವಿಸಿ ಬಂದು ಚರಣಗಳ ಮೇಲೆ ಹೊರಳಾಡುತ್ತಿರುವಿ ! ಇದಕ್ಕೆ ಕಾರಣವೇನು ?'' ಎಂದು ಪ್ರಶ್ನೆ ಮಾಡಿದರು. ಆಗ ಆತನು ಗುರುವೇ ! ಈ ದಿವಸ ಪೂಜೆಗೆಂದು ಕಲ್ಲೇಶ್ವರನ ಗುಡಿಗೆ ಹೋದಾಗ, ಲಿಂಗಸ್ಥಾನದಲ್ಲಿಯೇ ನಿಮ್ಮನ್ನು ನೋಡಿದೆನು. ನೀವೇ ಪ್ರತ್ಯಕ್ಷ ಕಲ್ಲೇಶ್ವರರೆಂದು ನನಗೀಗ ಜ್ಞಾನೋದಯವಾಗಿದೆ. ಗುರುನಾಥಾ! ಇಂದಿಗೆ ನನ್ನ ಜನ್ಮ ಸಾರ್ಥಕವಾಯಿತು. ನನ್ನ ಕಲ್ಲೇಶ್ವರನು ನಾನಿದ್ದಲ್ಲಿಗೇ ಹುಡುಕಿಕೊಂಡು ಬಂದಿರುವಾಗ, ನಿಮ್ಮ ಚರಣ ಸೇವೆಯಿಂದ ನಾನಿನ್ನು ದೂರಾಗಲಾರೆ !'' ಎಂದು ಕಳಕಳಿಯಿಂದ ನುಡಿದನು. ಅದಕ್ಕೆ ಗುರುಗಳು “ನಿನ್ನ ಕಲ್ಲೇಶ್ವರನು ನಮಗೂ ಶ್ರೇಷ್ಠನೇ ಆಗಿದ್ದಾನೆ. ನೀನು ದಿನಾಲೂ ಆತನನ್ನು ಪೂಜೆಮಾಡು ! ನಾನು ಆತನಲ್ಲಿಯೇ ಇದ್ದೇನೆ !'' ಎಂದು ನುಡಿದರು. ಅದಕ್ಕೆ ನರಕೇಸರಿಯು ಪ್ರತ್ಯಕ್ಷ ಪರಮಾತ್ಮನಾಗಿರುವ ನಿಮ್ಮನ್ನು ಬಿಟ್ಟು ಇನ್ನು ಮೇಲೆ ನಾನೇಕೆ ಆ ಕಲ್ಲೇಶ್ವರನನ್ನು ಪೂಜಿಸಲಿ ? ನೀವೇ ಕಲ್ಲೇಶ್ವರರು! ನಾನು ನಿಮ್ಮ ಚರಣಗಳನ್ನು ಬಿಟ್ಟಿರಲಾರೆ ! ಎಂದು ಹಟ ಮಾಡಿ ಗುರುಗಳ ಸೇವೆ ಮಾಡುತ್ತ ಅವರ ಹತ್ತಿರವೇ ಇರತೊಡಗಿದನು. ಅಲ್ಲದೇ, ಗುರುಗಳ ಲೀಲೆಗಳ ಬಗ್ಗೆ ಅಸಂಖ್ಯಾತ ಪದ್ಯಗಳನ್ನು ರಚಿಸಿದನು. ಆತನ ಕೀರ್ತನೆಗಳು ಗುರುಗಳ ಕೀರ್ತಿಯನ್ನು ನಾಡಿಗೆಲ್ಲ ಬಿತ್ತರಿಸಿದವೆಂದು ನಾಮಧಾರಕನಿಗೆ ಸಿದ್ಧಮುನಿಯು ಹೇಳಿದನೆಂಬಲ್ಲಿಗೆ ಸಾರರೂಪ ಶ್ರೀ ಗುರು ಚರಿತ್ರೆಯ 46ನೆಯ ಅಧ್ಯಾಯ ಮುಗಿಯಿತು.
Comments
Post a Comment