Shri Guru Charitre - Chapter 45
ಅಧ್ಯಾಯ ೪೫
||ಹರಿಃ ಓಂ ಶ್ರೀ ಗುರುಭ್ಯೋ ನಮಃ ||
ನಾಮಧಾರಕಾ ! 'ನಂದಿ' ಎಂಬ ಹೆಸರಿನ ಒಬ್ಬ ಬ್ರಾಹ್ಮಣನಿಗೆ ಮೈ ತುಂಬಾ ಬಿಳುಪು ರೋಗ ಆವರಿಸಿತ್ತು. ಆತನು ತುಳಜಾಪುರದ ಅಂಬಾಭವಾನಿಯನ್ನು ಮೂರು ವರ್ಷಗಳ ಕಾಲ ಆರಾಧಿಸಿದನು. ಆತನಿಗೆ ಜಗದಂಬೆಯು ಸ್ವಪ್ನ ಮುಖಾಂತರವಾಗಿ, “ಚಂದ್ರಲಾ ಪರಮೇಶ್ವರಿಯ ಬಳಿಗೆ ಹೋಗು !'' ಎಂದು ಆಜ್ಞೆ ಮಾಡಿ ಕಳಿಸಿದಳು, ನಂತರ ಅವನು ಆರು ತಿಂಗಳವರೆಗೆ ಚಂದ್ರಲಾ ಪರಮೇಶ್ವರಿಯ ಬಳಿಯಲ್ಲಿ ತಪಸ್ಸು ಮಾಡಿದನು. “ನೀನು ಗಾಣಗಾಪರಕ್ಕೆ ಹೋಗು ! ಅಲ್ಲಿ ಜಗದ್ಗುರುವಿನ ಅವತಾರವಾಗಿದೆ. ಅಲ್ಲಿ ನಿನ್ನ ವ್ಯಾಧಿ ನಿವಾರಣೆಯಾಗುವದು !” ಎಂದು ಸ್ವಪ್ನವಾಯಿತು. ಆತನು ಎಚ್ಚತ್ತು ಕುಳಿತನು. ಮತ್ತೂ ನಿಷ್ಟುರತೆಯಿಂದ ದೇವಿಯೆದುರು ನಿಂತು, “ನಿನ್ನಿಂದ ನನ್ನ ರೋಗ ವಾಸಿ ಮಾಡುವದಾಗದಿದ್ದರೆ, ಆರು ತಿಂಗಳವರೆಗೆ ನನ್ನನ್ನು ಸುಮ್ಮನೇ ಯಾಕೆ ಕಷ್ಟಪಡಿಸಿದಿ ? ಜಗನ್ಮಾತೆಯಾದ ನಿನಗೇ ನನ್ನ ವ್ಯಾಧಿ ನಿವಾರಣೆ ಮಾಡುವದಾಗದಿದ್ದರೆ, ಮಾನವ ದೇಹ ಹೊತ್ತು ಬಂದವನು, ಅದೆಂತು ಅದನ್ನು ಪರಿಹಾರ ಮಾಡಲು ಸಾಧ್ಯ ? ನಾನು ಗಾಣಗಾಪುರಕ್ಕೆ ಹೋಗಲಾರೆ ! ನೀನೇ ನನ್ನ ವ್ಯಾಧಿ ನಿವಾರಿಸಬೇಕು; ಇಲ್ಲವೇ ಇಲ್ಲಿಯೇ ನನ್ನ ದೇಹ ಪತನವಾಗಬೇಕು !” ಎಂದು ಹಟತೊಟ್ಟವನಂತೆ ನುಡಿದು, ಮತ್ತು ಅಲ್ಲಿಯೇ ತಪಸ್ಸಿಗೆ ಕುಳಿತನು. ಆ ರಾತ್ರಿ ಪೂಜಾರಿಗಳಿಗೂ ಆ ಬ್ರಾಹ್ಮಣನನ್ನು ಗಾಣಗಾಪುರಕ್ಕೆ ಹೊತ್ತುಹಾಕಿರಿ !'' ಎಂದು ಪರಮೇಶ್ವರಿಯು ಸ್ವಪ್ನ ಮುಖಾಂತರ ಸೂಚಿಸಿದಳು.ಮರು ದಿವಸ ಪೂಜಾರಿಗಳು ಆ ಬ್ರಾಹ್ಮಣನಿಗೆ “ನೀನಿನ್ನು ಗುಡಿಯೊಳಗೆ ಪ್ರವೇಶಿಸಕೂಡದು ! ಹಾಗೆ ನಮಗೆ ದೇವಿಯಿ೦ದ ಅಜ್ಞೆಯಾಗಿದೆ !'' ಎಂದು ನಿಷ್ಟುರವಾಗಿ ಹೇಳಿದರು.
ಬ್ರಾಹ್ಮಣನು ಉಪಾಯಗಾಣದೇ ಗಾಣಗಾಪುರಕ್ಕೆ ಹೊರಟು ಬಂದನು. ಅಂದು ಶಿವರಾತ್ರಿಯ ಪಾರಣಿಯ ದಿನವಾಗಿತ್ತು. ನಂದಿಯು ಗುರುಗಳನ್ನು ಕಂಡೊಡನೆಯೇ ದೂರದಿಂದ ಸಾಷ್ಟಾಂಗ ನಮಸ್ಕಾರ ಮಾಡಿದನು. ಗುರುಗಳು ಆತನನ್ನು ನೋಡಿ, “ನೀನು ದೇವತೆಗಳ ಸನ್ನಿಧಿಯನ್ನು ಬಿಟ್ಟು ಮಾನವ ಮಾತ್ರನಾದ ನನ್ನ ಬಳಿಗೇಕೆ ಬಂದಿ ?'' ಎಂದು ಪ್ರಶ್ನೆ ಮಾಡಿದರು. “ಸಂಶಯದಿಂದ ಎಂದಾದರೂ ಕಾರ್ಯ ಸಿದ್ಧಿಯಾಗಬಹುದೇ?'' ಎಂದು ಮತ್ತೆ ಕೇಳಿದರು. ಆಗ ನಂದಿಗೆ ಗುರುನಾಥನು ಪ್ರತ್ಯಕ್ಷ ಪರಮಾತ್ಮನೆಂಬ ಅರಿವಾಯಿತು. ತಾನು ಸಂಶಯ ಪಟ್ಟದ್ದಕ್ಕಾಗಿ ಪಶ್ಚಾತ್ತಪಪಡುತ್ತ “ಗುರುನಾಥಾ ! ಕ್ಷಮಿಸಬೇಕು ! ಪಾಪಿಷ್ಟನಾದ ನಾನು ಅಜ್ಞಾನದಿಂದ ಕೂಡಿದವನಾಗಿ, ನಿಮ್ಮನ್ನು ಅರಿಯದೇ ಹೋದೆ !
ಶ್ರೀರಾಮನು ಅಹಲೈಯನ್ನು ಉದ್ದರಿಸಿದಂತೆ, ಪಾಪಿಷ್ಟನಾದ ನನ್ನನ್ನು ನೀವಲ್ಲದೇ ಇನ್ನಾರು ಉದ್ಧರಿಸಬೇಕು ತ೦ದೇ !'' ಎಂದು ಕಣ್ಣುಂಬ ನೀರು ತಂದು ಕೊಂಡು ಮತ್ತೊಮ್ಮೆ ದೀರ್ಘದಂಡ ನಮಸ್ಕಾರ ಹಾಕಿದನು. ಗುರುಗಳ ಮನಸ್ಸು ಕರಗಿತು. ಅವರು ಸೋಮನಾಥನೆಂಬ ಬ್ರಾಹ್ಮಣನನ್ನು ಕರೆದು, ಈತನನ್ನು ಸ೦ಗಮಕ್ಕೆ ಕರೆದೊಯ್ದು ಸಂಕಲ್ಪ ಪೂರ್ವಕವಾಗಿ ಸ್ನಾನ ಮಾಡಿಸು !'' ಎಂದು ಆಜ್ಞೆ ಮಾಡಿದರು. ಸಂಗಮದಲ್ಲಿ ಸ್ನಾನ ಮಾಡಿದೊಡ ನಯೇ ನಂದಿಯ ದೇಹದ ವರ್ಣವು ಪಲ್ಲಟವಾಯಿತು. ಅಶ್ವತ್ಥ ಪ್ರದಕ್ಷಿಣೆ ಹಾಕಿದಾಗ, ಆತನ ಕಾಯವು ಸುವರ್ಣಕಾಂತಿಯಿಂದ ಕಂಗೊಳಿಸತೊಡಗಿತು. ನಂತರ ನಂದಿಯು ಹೊಸಬಟ್ಟೆಗಳನ್ನು ಧರಿಸಿದನು. ಆತನ ಹಳೆಯ ಬಟ್ಟೆಗಳನ್ನು ಕಳಚಿದ ಭೂಮಿಯು ಸೌಳುಭೂಮಿಯಾಯಿತು. ಬಳಿಕ ನಂದಿಯು ಮಠಕ್ಕೆ ಬಂದು ಗುರುಗಳಿಗೆ ನಮಸ್ಕರಿಸಿದನು. ಗುರುಗಳು ಆತನನ್ನು ನೋಡಿ “ನಿನ್ನ ಮನೋರಥ ಪೂರ್ತಿಯಾಯಿತೇ ? ಈಗ ನಿನ್ನ ಮೈಯ್ಯನ್ನೆಲ್ಲಾನೋಡಿಕೋ !” ಎಂದು ಹೇಳಿದರು. ನಂದಿಯು ಮೈಯ್ಯನ್ನೆಲ್ಲ ನೋಡಿಕೊಂಡಾಗ, ಮೊಳಕಾಲಿನ ಹತ್ತಿರ ಅವರೆಯ ಬೇಳೆಯಷ್ಟಗಲದ ಬಿಳಿಕಲೆ ಮಾತ್ರ ಉಳಿದಿತ್ತು ನಂದಿಯು ಅದನ್ನು ನೋಡಿಕೊಂಡು ಗಾಬರಿಯಿಂದ, “ಗುರುನಾಥಾ ! ನಿಮ್ಮ ಕೃಪಾದೃಷ್ಟಿ ನನ್ನ ಮೇಲೆ ಬಿದ್ದಾಗಲೂ ಇದೇಕೆ ಉಳಿಯಿತು ? ನಾನು ಸಂಪೂರ್ಣ ಸ್ವಚ್ಛನಾಗಬೇಕು!' ಎಂದು ಬೇಡಿಕೊಂಡನು, ಅದಕ್ಕೆ ಗುರುಗಳು, ನಂದಿ ಬ್ರಾಹ್ಮಣನೇ ! ನೀನು ನಮ್ಮಲ್ಲಿಗೆ ಸಂಶಯಚಿತ್ತನಾಗಿ ಬಂದಪ್ರಯುಕ್ತ ಇದಿಷ್ಟು ಶೇಷ ಉಳಿಯಿತು!?? ಎಂದು ವಿವರಣೆ ನೀಡಿದರು. ಬ್ರಾಹ್ಮಣನು ದೈನ್ಯದಿಂದ, “ಗುರುವೇ! ದಯವಿಟ್ಟು ನಾನು ಅಜ್ಞಾನದಿಂದ ಮಾಡಿದ ತಪ್ಪಿಗಾಗಿ ನನ್ನನ್ನು ಉಪೇಕ್ಷಿಸಬೇಡಿರಿ ! ನಿಮ್ಮ ಚರಣದಾಸನ ಸುಖಾಸುಖಗಳು ಈಗ ನಿಮಗೇ ಸೇರಿವೆ !?” ಎಂದು ಅನನ್ಯ ಭಾವನೆಯಿಂದ ಪ್ರಾರ್ಥಿಸಿದನು. ಗುರುಗಳು ಆತನಿಗೆ ನೀನು ಕವಿತ್ವ ರೂಪದಿಂದ ನಮ್ಮ ಸ್ತುತಿ ಮಾಡಿದರೆ, ಈ ಶೇಷ ಕಲಂಕವು ಮಾಯವಾಗುವದು'' ಎಂದು ಹೇಳಿದರು. ಗುರುಗಳ ಮಾತನ್ನು ಕೇಳಿ ನಂದಿಯು 'ಪ್ರಭ ! ನಾನು ಅಜ್ಞಾನು ಅಂದಮೇಲೆ ಕವಿತ್ವದ ಪ್ರತಿಭೆಯನ್ನು ಹೇಗೆ ಪಡೆಯಲಿ ?'' ಎಂದು ಗುರುಚರಣಗಳ ಮೇಲೆ ಹೊರಳಾಡತೊಡಗಿದನು. ಆಗ ಗುರುಗಳು ಆತನ ನಾಲಿಗೆ ಹಿರಿಸಿ, ಭಸ್ಮವನ್ನು ಪ್ರೋಕ್ಷಿಸಿದರು. ಕೂಡಲೇ ಆತನ ಬಾಯಿಂದ ಕಾವ್ಯರೂಪದಲ್ಲಿ ನಿರರ್ಗಳವಾಗಿ ಗುರುಸ್ತವನ ಹೊರಡತೊಡಗಿತು. ಅದರೊಂದಿಗೆ ಅವನಲ್ಲಿ ಪಾರಮಾರ್ಥಿಕ ಜ್ಞಾನವೂ ಉದಯವಾಯಿತು ಶ್ರೀಗುರುಗಳ ಮಹಿಮೆಯನ್ನು ಸಾರುವ ಅನೇಕಾನೇಕ ಕವಿತೆಗಳು, ಆತನ ಲೆಕ್ಕಣಿಕೆಯಿಂದ ಹೊರಹೊಮ್ಮಿದವು. ಗುರುಗಳು ಆತನ ಕೀರ್ತನ ಸೇವೆಯಿಂದ ಸಂಪ್ರೀತರಾಗಿ, ತಮ್ಮ ಶಿಷ್ಯರಿಂದ ನಂದಿಗೆ 'ಕವೀಶ್ವರ'ನೆಂಬ ಬಿರುದನ್ನು ನೀಡಿ, ಸನ್ಮಾನ ಮಾಡಿಸಿದರು. ನಂದಿ ಬ್ರಾಹ್ಮಣನು ಗುರುಸೇವೆ ಮಾಡುತ್ತ ಮಠದಲ್ಲಿಯೇ ಉಳಿದನೆಂದು ಸಿದ್ಧಮುನಿಯು ನಾಮಧಾರಕನಿಗೆ ತಿಳಿಸಿದನೆಂಬಲ್ಲಿಗೆ ಸಾರರೂಪ ಶ್ರೀಗುರು ಚರಿತ್ರೆಯ 45ನೆಯ ಅಧ್ಯಾಯ ಮುಕ್ತಾಯವಾಯಿತು.
Comments
Post a Comment