Shri Guru Charitre - Chapter 44
ಅಧ್ಯಾಯ ೪೪
||ಹರಿಃ ಓಂ ಶ್ರೀ ಗುರುಭ್ಯೋ ನಮಃ ||
ನಾಮಧಾರಕಾ ! ಗಾಣಗಾಪುರದಲ್ಲಿ ಗುರುಗಳಲ್ಲಿ ಅತ್ಯಂತ ಭಕ್ತಿಯನ್ನಿಟ್ಟ ಒಬ್ಬ ನೇಕಾರನಿದ್ದನು. ಅವನು ದಿನಾಲೂ ಮಠದ ಅಂಗಳ ಉಡುಗಿ, ನೀರಿನಿಂದ ಛಳಿ ಹೊಡೆದು, ಗುರುಗಳಿಗೆ ನಮಸ್ಕರಿಸಿ ಹೋಗುತ್ತಿದ್ದನು. ಈ ಸೇವೆಗೆ ಬಹು ದಿವಸಗಳಿಂದಲೂ ಆತನು ಚ್ಯುತಿ ತಂದುಕೊಂಡಿರಲಿಲ್ಲ. ಆಗ ಮಹಾಶಿವರಾತ್ರಿಯು ಸಮೀಪಿಸಿತ್ತು. ಆ ನೇಕಾರನ ಮನೆಯವರೆಲ್ಲರೂ ಆ ವರ್ಷ ಶ್ರೀಶೈಲ ಯಾತ್ರೆಗೆ ಹೊರಡುವದೆಂದು ನಿರ್ಣಯಿಸಿದ್ದರು. ಈತನನ್ನೂ ಕರೆದರು, ಆದರೆ ತನಗಿರುವ ನಿತ್ಯ ಗುರುಸೇವೆಯನ್ನು ಬಿಟ್ಟು, ಶ್ರೀಶೈಲಕ್ಕೆ ಹೊರಡಲು ಆತನ ಮನಸ್ಸಾಗಲಿಲ್ಲ. ಆದ್ದರಿಂದ, ಆ ಬಂಧುಬಳಗದವರಿಗೆ ನನ್ನ ಶ್ರೀಶೈಲ ಇಲ್ಲಿಯೇ ಇದೆ ! ಗುರುಗಳೇ ನನ್ನ ಪಾಲಿನ ಮಲ್ಲಿಕಾರ್ಜುನ ! ಗುರುಮಠವೇ ಶ್ರೀಶೈಲ!! ಸಂಗಮ ಕ್ಷೇತ್ರವೇ ಪಾತಾಳಗಂಗೆ !” ಎಂದು ಹೇಳಿ ನಿರಾಕರಿಸಿಬಿಟ್ಟನು. ಬಂಧುಗಳು ಆತನನ್ನು ಮೂರ್ಖನೆಂದು ಹಳಿದು, ಯಾತ್ರೆಗೆ ಹೊರಟು ಹೋದರು. ಮುಂದೆ 8-10 ದಿನಗಳು ಕಳೆದವು. ಶಿವರಾತ್ರಿ ಬಂತು, ಅಂದು ಪ್ರಾತಃಕಾಲ ಗುರುಗಳೂ ಆ ತಂತುಕನನ್ನು ಕುರಿತು, ನಿನ್ನ ಬಂಧುಗಳೆಲ್ಲ ಶ್ರೀಶೈಲಯಾತ್ರೆಗೆ ಹೋದರು. ನೀನೇಕೆ ಹೋಗಲಿಲ್ಲ?'' ಎಂದು ಪ್ರಶ್ನೆ ಮಾಡಿದರು. ಅದಕ್ಕೆ ತಂತುಕನು, ಗುರುನಾಥಾ ! ನಿಮ್ಮ ಚರಣ ಸನ್ನಿಧಿ ಯಲ್ಲಿಯೇ ಎಲ್ಲ ತೀರ್ಥ ಕ್ಷೇತ್ರಗಳೂ ವಾಸವಾಗಿರುವಾಗ, ನಿಮ್ಮ ಮಹಿಮೆಯನ್ನರಿಯದ ಮೂರ್ಖರಂತೆ ನಾನೇಕೆ ವ್ಯರ್ಥವಾಗಿ ಶ್ರಮವಹಿಸಲಿ ?” ಎಂದು ಪ್ರಶ್ನೆ ಮಾಡಿದನು. ಗುರುಗಳು ಆತನ ನಿಷ್ಠೆಗೆ ತಲೆದೂಗಿ “ನೀನು ಎ೦ದಾದರೂ ಶ್ರೀಶೈಲ ಕ್ಷೇತ್ರವನ್ನು ನೋಡಿರುವಿಯಾ ?'' ಎಂದು ಕೇಳಿದರು. ಇಲ್ಲ ಗುರುಗಳೇ ! ಅದರ ಆಸೆಯೇ ನನಗಿಲ್ಲ'' ಎಂದು ಉತ್ತರಿಸಿದನು. ಆದರೂ ಇಂದು ನಾವು ನಿನಗೆ ಶ್ರೀಶೈಲ ಯಾತ್ರೆಯನ್ನು ಮಾಡಿಸುವೆವು ! ಗಟ್ಟಿಯಾಗಿ ಕಣ್ಣುಗಳನ್ನು ಮುಚ್ಚಿಕೊಂಡು, ನನ್ನ ಪಾದುಕೆಗಳನ್ನು ಹಿಡಿದುಕೊಂಡು ಕೂಡು !” ಎಂದು ಆಜ್ಞೆ ಮಾಡಿದರು. ನೇಕಾರನು ಹಾಗೆಯೇ ಮಾಡಿದನು. ಹತ್ತೆಂಟು ಕ್ಷಣಗಳ ನಂತರ ಗುರುಗಳು ಆತನಿಗೆ ಕಣ್ಣೆರೆಯುವದಕ್ಕೆ ಸೂಚಿಸಿದರು. ತಂತುಕನು ಕಣ್ಣಿಟ್ಟು ನೋಡಿದಾಗ, ಅವರಿಬ್ಬರೂ ಪಾತಾಳ ಗಂಗೆಯ ದಡದಲ್ಲಿ ಕುಳಿತಿದ್ದರು. ಎದುರಿನಲ್ಲಿ ಭವ್ಯವಾದ ಶ್ರೀಶೈಲವು ಮುಗಿಲೆತ್ತರಕ್ಕೆ ತಲೆಯೆತ್ತಿ ನಿಂತಿರುವದು ಗೋಚರಿಸಿತು. ತಂತುಕನು ಆಶ್ಚರ್ಯಚಕಿತನಾಗಿ ಗುರುಪಾದಗಳಿಗೆ ಹಣೆ ಹಚ್ಚಿದನು. ಗುರುಗಳು ಆತನಿಗೆ, “ನಾವು ಇಲ್ಲಿಯೇ ಕುಳಿತು ನೀನು ತಿರುಗಿ ಬರುವದನ್ನು ನಿರೀಕ್ಷಿಸುತ್ತೇವೆ. ನೀನು ಬೇಗನೆ ಯಾತ್ರಾವಿಧಿಗಳನ್ನೆಲ್ಲ ಮುಗಿಸಿ, ಮಲ್ಲಿಕಾರ್ಜುನಿಗೆ ಪೂಜೆ ಸಲ್ಲಿಸಿ ಬಂದುಬಿಡು !” ಎಂದು ಆಜ್ಞೆ ಮಾಡಿ ಕಳಿಸಿದರು.
ತಂತುಕನು ಕ್ಷೌರ ಕರ್ಮಾದಿಗಳನ್ನು ಮಾಡಿಸಿಕೊಂಡು ಸ್ನಾನಕ್ಕೆ ಹೋದಾಗ, ಅವನ ಬಂಧುಗಳೆಲ್ಲರೂ ಅವನನ್ನು ಕಂಡು ವಿಸ್ಮಯ
ಗೊಂಡರು. ಮತ್ತು ನೀನು ನಮ್ಮ ಜೊತೆಯಲ್ಲಿ ಯಾಕೆ ಬರಲಿಲ್ಲ. ಈಗ ಯಾರಾರು ಬ೦ದಿರುವಿರಿ ? ಎಂದು ಹೊರಟಿದ್ದೀರಿ ?” ಎಂದು ಮುಂತಾಗಿ ಅನೇಕ ಪ್ರಶ್ನೆಗಳನ್ನು ಕೇಳಿದರು. ಅದಕ್ಕೆ ತಂತುಕನು ನಾನು ಇಂದೇ ಬೆಳಿಗ್ಗೆ ಸಂಗಮದಿಂದ ಹೊರಟು, ಗುರುಗಳೊಂದಿಗೆ ಐದೇ ಕ್ಷಣಗಳಲ್ಲಿ ಇಲ್ಲಿಗೆ ಬಂದು ತಲುಪಿದೆ !” ಎಂದು ಉತ್ತರಿಸಿದನು. ಅವರಾರೂ ಆತನ ಮಾತಿಗೆ ಒಡಂಬಡಲಿಲ್ಲ. ನಿಮ್ಮೊಂದಿಗೆ ಹೆಚ್ಚು ಮಾತು ಬೆಳಿಸಲು ಸಮಯವಿಲ್ಲ. ಗುರುಗಳು ನನಗಾಗಿ ಕಾಯುತ್ತಿರುತ್ತಾರೆ, ನಾನು ಬೇಗ ದೇವರ ದರ್ಶನಾರ್ಚನೆಗಳನ್ನು ಮುಗಿಸಿಕೊಂಡು ಅವರ ಬಳಿಗೆ ಹೋಗಬೇಕು !” ಎಂದು ನುಡಿಯುತ್ತ ಅವಸರದಿಂದ ದೇವಸ್ಥಾನದತ್ತ ಹೊರಟೇಬಿಟ್ಟನು. ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಆತನಿಗೆ ಈಶ್ವರಲಿಂಗ ಕಾಣಿಸಲೇ ಇಲ್ಲ! ಪಾನಬಟ್ಟಲದ ಮೇಲೆ ಗುರುಗಳು ಕುಳಿತಿರುವಂತೆ ಕಾಣಿಸಿತು. ಭಕ್ತರೆಲ್ಲರೂ ಗುರುಗಳಿಗೆ ಪೂಜೆ, ಅಭಿಷೇಕ, ಬಿಲ್ವಾರ್ಚನೆ ಮುಂತಾದವುಗಳನ್ನು ಸಲ್ಲಿಸುತ್ತಿರುವಂತೆ ಗೋಚರಿಸಿತು. ಆಗ ತಂತುಕನು ಶ್ರೀ ಗುರುವೇ ಮಲ್ಲಿ ಕಾರ್ಜುನನಾಗಿದ್ದಾನೆಂಬುದನ್ನು ಮನದಲ್ಲಿ ಧೃಡಪಡಿಸಿಕೊಂಡು, ಪ್ರಸಾದ ಸ್ವೀಕರಿಸಿ, ಅವಸರದಿಂದ ಗುರುಗಳ ಬಳಿಗೆ ಬಂದನು. ಗುರುಗಳು ಆತನನ್ನು ನೋಡಿ, “ನೀನು ನಾಲ್ಕು ದಿವಸ ಬಂಧುಗಳೊಂದಿಗೆ ಇಲ್ಲಿಯೇ ಉಳಿಯುವಿಯೋ ? ಅಥವಾ ನಮ್ಮೊಂದಿಗೆ ಬರುವಿಯೋ ?” ಎಂದು ಕೇಳಿದರು. ಆತನು ಅಲ್ಲಿ ಉಳಿಯಲು ನಿರಾಕರಿಸಿದ್ದರಿಂದ, ಮತ್ತೆ ಮೊದಲಿನಂತೆ, ಪಾದುಕೆ ಹಿಡಿಸಿ, ಆತನನ್ನು ಸಂಗಮ ಕ್ಷೇತ್ರಕ್ಕೆ ಕರೆತಂದರು. ವಿಸ್ಮಯಗೊಂಡ ತಂತುಕನು ಗುರುಗಳಿಗೆ, ದೇವಾ ! ನೀವೇ ಪ್ರತ್ಯಕ್ಷ ಮಲ್ಲಿಕಾರ್ಜುನರಾಗಿರುವಿರಿ ! ಇದನ್ನು ನಾನು ಕಣ್ಮುಟ್ಟ ನೋಡಿದ್ದೇನೆ. ಹೀಗಿದ್ದೂ ಈ ಭಕ್ತರು ಅಷ್ಟು ದೂರದಿಂದ ನಡೆದುಕೊಂಡು, ಈ ಶ್ರೀಶೈಲ ಕ್ಷೇತ್ರಕ್ಕೆ ಯಾಕೆ ಬರುತಾರೆ?' ಎಂದು ಪ್ರಶ್ನೆ ಮಾಡಿದನು. ಅದಕ್ಕೆ ಗುರುಗಳು, ನೇಕಾರನೇ ಪರಮೇಶ್ವರನು ಸರ್ವವ್ಯಾಪಿಯಾಗಿರುವನು. ಆದರೂ ಸ್ಥಾನ ಮಹಿಮೆಯು ವಿಶೇಷವಾಗಿರುವದು. ಪವಿತ್ರ ಸ್ಥಳಗಳಿಗೆ ಹೋಗಿ ಅರ್ಚಿಸಿದರೆ, ದೇವರು ಬೇಗ ಪ್ರಸನ್ನನಾಗುವನು ! ಈ ಬಗ್ಗೆ ನಿನಗೊಂದು ಕಥೆಯನ್ನು ಹೇಳುತ್ತೇವೆ ಕೇಳು ! 'ವಿಮರ್ಷಣ' ಎಂಬ ಹೆಸರಿನ ರಾಜನು, ಅನಾಚಾರಿಯಾಗಿದ್ದರೂ ಸಹಿತ, ತಪ್ಪದೇ ಶಿವಪೂಜೆಯನ್ನು ಮಾಡುತ್ತಿದ್ದನು. ಆತನಿಗೆ ಪೂರ್ವಜನ್ಮಗಳ ಸ್ಮರಣೆ ಇದ್ದದ್ದರಿಂದ, ತನ್ನ ಪತ್ನಿಯಾದ ಕುಮದ್ವತಿಗೆ ಒಂದು ಸಲ ಹೀಗೆ ಹೇಳಿದನು. 'ಪ್ರಿಯೇ ! ಹಿಂದಿನ ಜನ್ಮದಲ್ಲಿ ಪಂಪಾ ನಗರದಲ್ಲಿ ನಾನೊಂದು ನಾಯಿಯಾಗಿ ಹುಟ್ಟಿದ್ದೆ. ಶಿವರಾತ್ರಿಯಂದು ಅಲ್ಲಿ ಒಳ್ಳೇ ಸಡಗರದಿಂದ ಪಂಪಾಪತಿಗೆ ರುದ್ರಾಭಿಷೇಕ ನಡೆದಿತ್ತು ತಿನ್ನಲು ಏನಾದರೂ ಸಿಗಬಹುದೆಂಬ ಆಸೆಯಿಂದ ನಾನು ಗುಡಿಯೊಳಗೆ ಹೊಕ್ಕೆ; ಆಗ ಅಲ್ಲಿದ್ದ ಜನರು ನನ್ನನ್ನು ಹೊಡೆಯಬಂದರು. ಪ್ರಾಣಭಯದಿಂದ ಗರ್ಭ ಗುಡಿಯಲ್ಲಿ ಹೊಕ್ಕು ಶಿವಲಿಂಗದ ಸುತ್ತು ಮೂರು ಪ್ರದಕ್ಷಿಣೆ, ಹಾಕಿ ತಪ್ಪಿಸಿ ಕೊಳ್ಳಲೆತ್ನಿಸಿದೆ ! ಆಗ ಪೂಜೆ ಮಾಡಿದ್ದ ಶಿವಲಿಂಗವು ನನ್ನ ದೃಷ್ಟಿಗೆ ಬಿತ್ತು, ಅಷ್ಟರಲ್ಲಿಯೇ ಕೂಡಿದ ಜನರು ನನ್ನನ್ನು ಹೊಡೆದು ಕೊಂದುಬಿಟ್ಟರು. ಆ ಪುಣ್ಯ ವಿಶೇಷದಿಂದ ನಾನೀಗ ರಾಜನಾಗಿ ಹುಟ್ಟಿದ್ದೇನೆ. ಆದರೆ ಪೂರ್ವ ಜನ್ಮದಲ್ಲಿ ನಾಯಿಯಾಗಿದ್ದರೆ ಸಂಸ್ಕಾರ ಫಲವಾಗಿ, ಈ ರೀತಿ ನಾನು ಈ ಜನ್ಮದಲ್ಲಿ ಮಾಂಸ-ಸುರೆ-ಮುಂತಾದವುಗಳನ್ನು ಸೇವಿಸುತ್ತೇನೆ. ನೀನು ಹಿಂದಿನ ಜನ್ಮದಲ್ಲಿ ಪಾರಿವಾಳವಾಗಿದ್ದಿ ಒಂದು ದಿವಸ ನೀನು ಬಾಯಲ್ಲಿ ಆಹಾರವನ್ನು ಹಿಡಿದುಕೊಂಡು ಹಾರಿ ಹೊರಟಿರುವಾಗ, ಒಂದು ಗಿಡಗವು ನಿನ್ನನ್ನು ಬೆನ್ನಹತ್ತಿತು. ಅದರಿಂದ ತಪ್ಪಿಸಿಕೊಳ್ಳುವದಕ್ಕಾಗಿ ನೀನು ಶ್ರೀಶೈಲ ಮಲ್ಲಿಕಾರ್ಜುನನ ಗುಡಿಯ ಶಿಖರಕ್ಕೆ ಮೂರು ಪ್ರದಕ್ಷಿಣೆ ಹಾಕಿದಿ; ಅಷ್ಟರಲ್ಲಿ ಗಿಡಗವು ನಿನ್ನನ್ನು ಕೊಂದಿತು. ಗಿರಿಶಿಖರಕ್ಕೆ ಪ್ರದಕ್ಷಿಣೆ ಹಾಕಿದ ಫಲದಿಂದಲೇ ನೀನು ನನ್ನ ರಾಣಿಯಾಗಿರುವಿ! ಇನ್ನು ಮುಂದಿನ ಆರು ಜನ್ಮಗಳ ಪರ್ಯಂತ ನಾವಿಬ್ಬರೂ ರಾಜದಂಪತಿಗಳಾಗಿಯೇ ಜನಿಸುವೆವು. ಏಳನೇ ಜನ್ಮದಲ್ಲಿ ಬ್ರಹ್ಮಜ್ಞಾನ ಪಡೆದು, ಜೀವನ್ಮುಕ್ತರಾಗುವೆವು'' ಎಂದು ಹೇಳಿದನು.
ಅಂದ ಮೇಲೆ ತಂತುಕನೇ ! ಪವಿತ್ರ ಸ್ಥಳಗಳಿಗೆ ಎಷ್ಟೊಂದು ಮಹತ್ವವಿದೆಯೆಂಬುದನ್ನು ನೀನೇ ಯೋಚಿಸು !” ಎಂದು ಗುರುಗಳು ವಿವರಣೆ ನೀಡಿದರು.
ಅತ್ತ ಗುರುಗಳಲ್ಲಿ ಎಲ್ಲಿ ಹೋಗಿರಬಹುದೆಂದು ಶಿಷ್ಯರೆಲ್ಲರೂ ಕಳವಳಗೊಂಡು ಹುಡುಕತೊಡಗಿದ್ದರು. ಒಮ್ಮಿಂದೊಮ್ಮೆಲೇ ಸಂಗಮದ ತಟಾಕದಲ್ಲಿ ತಂತುಕನೊಂದಿಗೆ ಕುಳಿತ ಗುರುಗಳನ್ನು ಕಂಡು ಅವರಿಗೆ ಆನ೦ದವಾಯಿತು. ನಂತರ ಅವರು ಗಾಣಗಾಪುರದತ್ತ ಸಾಗಿದಾಗ, ಜನರು ಆ ತಂತುಕನನ್ನು ನೀನು ಕ್ಷೌರವನ್ನೆಲ್ಲಿ ಮಾಡಿಸಿಕೊಂಡಿ ??' ಎಂದು ಕೇಳಿದರು. “ನಾನು ಗುರುಗಳೊಂದಿಗೆ ಶ್ರೀಶೈಲ ಯಾತ್ರೆಗೆ ಹೋಗಿ ಬಂದೆ!” ಎಂದು ತಂತುಕನು ಅವರಿಗೆ ಉತ್ತರಿಸಿದನು. ಆ ಜನಗಳಿಗೆ ಶ್ರೀಶೈಲದಿಂದ ತ೦ದ ಪ್ರಸಾದವನ್ನೂ ಕೊಟ್ಟನು. ಜನರಿಗೆ ವಿಸ್ಮಯವೆನಿಸಿತು. ಮುಂದೆ ಎಂಟತ್ತು ದಿನಗಳ ಮೇಲೆ ತಂತುಕನ ಬಂಧುಗಳು ಗಾಣಗಾಪುರಕ್ಕೆ ಬಂದ ಮೇಲೆ ಆತನು ಶ್ರೀಶೈಲಕ್ಕೆ ಹೋಗಿ ಬಂದದ್ದು ನಿಜವೆಂದು ಮನಗಂಡ ಜನರು, ಗುರುಲೀಲೆಯನ್ನು ಕೊಂಡಾಡತೊಡಗಿದರೆಂಬಲ್ಲಿಗೆ ಸಾರರೂಪ ಶ್ರೀಗುರು ಚರಿತ್ರೆಯ 44ನೆಯ ಅಧ್ಯಾಯ ಮುಕ್ತಾಯವಾಯಿತು.
Comments
Post a Comment