Shri Guru Charitre - Chapter 35
ಅಧ್ಯಾಯ ೩೫
||ಹರಿಃ ಓಂ ಶ್ರೀ ಗುರುಭ್ಯೋ ನಮಃ ||
ನಾಮಧಾರಕನೇ ! ಆಮೇಲೆ ದತ್ತನ ಹೆಂಡತಿಯಾದ ಸತಿಯು, ಗುರುನಾಮಸ್ಮರಣೆಯಲ್ಲಿ ಮನಸ್ಸು ಸ್ಥಿರವಾಗುವದಕ್ಕೆ ಯಾವದಾದರೊಂದು ಮಂತ್ರವನ್ನು ತನಗೆ ಉಪದೇಶಿಸಬೇಕೆಂದು ಗುರುಗಳನ್ನು ಕೇಳಿದಳು. ಅದಕ್ಕೆ ಗುರುಗಳು 'ಸಂಜೀವಿನೀ ಮಂತ್ರವನ್ನು ಶುಕ್ರಾಚಾರರು ತಮ್ಮ ಮಗಳಾದ ದೇವಯಾನಿಗೆ ಉಪದೇಶಿಸಿದ ಕಾರಣದಿಂದಲೇ ಆ ಮಂತ್ರವು ತನ್ನ ಶಕ್ತಿಯನ್ನು ಕಳೆದುಕೊಂಡು ನಿರರ್ಥಕವಾಗಬೇಕಾಯಿತು. ಅದಕ್ಕಾಗಿ ಸ್ತ್ರೀಯರು ಮಂತ್ರೋಪದೇಶಕ್ಕೆ ಅನರ್ಹರು, ಬೇಕಿದ್ದರೆ, ನಿನ್ನ ಮನಸ್ಸು ನಮ್ಮಲ್ಲಿ ಸ್ಥಿರವಾಗಿ ನಿಲ್ಲುವದಕ್ಕೆ ಸೋಮವಾರ ಶಂಕರನನ್ನು ಪೂಜಿಸುವ ವ್ರತ' ಮಾಡಿರಿ ! ಆ ವ್ರತದ ಮಹಿಮೆಯು ಹೆಚ್ಚಿನದಾಗಿದೆ. ಹಿಂದೆ ಚಿತ್ರವರ್ಮ ರಾಜನ ಮಗಳಾದ ಶೀಮಂತನಿಗೆ ಜ್ಯೋತಿಷಿಗಳು ಇವಳು ಬಾಲ ವಿಧವೆಯಾಗುವಳೆ೦ದು' ಭವಿಷ್ಯ ನುಡಿದಿದ್ದರು, ಶ್ರೀಮಂತಿನಿಯು ಏಳೆಂಟು ವರ್ಷದವಳಾದಾಗ ಅವಳಿಗೆ ತಂದೆ ತಾಯಿಗಳಿಂದ ವಿಷಯ ತಿಳಿಯಿತು. ಅವಳು ದುಃಖಿತಳಾಗಿ ಯಾಜ್ಞವಲ್ಕರ ಪತ್ನಿಯಾದ ಮೈತ್ರಿಯನ್ನು ಕಂಡು ತನ್ನ ದುಃಖ ತೋಡಿಕೊಂಡಳು, ಮೈತ್ರಿಯು ಅವಳಿಗೆ ಸೋಮವಾರ ಶಂಕರವ್ರತ ಮಾಡಿದರೆ ವೈಧವ್ಯ ಬರಲಾರದೆಂದು ಧೈರ್ಯ ಹೇಳಿ ವ್ರತ ವಿಧಾನವನ್ನು ತಿಳಿಸಿ ಕಳಿಸಿದಳು. ಅದರಂತೆ ಶೀಮಂತಿನಿಯು 'ಸೋಮವಾರ ವ್ರತ' ಮಾಡತೊಡಗಿದಳು. ಅವಳು ಉಪವರಳಾಗಲು ಚ೦ದ್ರಾಂಗದನೆಂಬ ರಾಜಕುಮಾರನೊಂದಿಗೆ ಅವಳ ಮದುವೆ ಮಾಡಿದರು. ಚಂದ್ರಾಂಗದನು ನದಿಗೆ ವಿಹಾರಕ್ಕಾಗಿ ಹೋದಾಗ ದೋಣಿ ಮುಳುಗಿ ಹೋಯಿತು. ಶ್ರೀಮಂತಿನಿಯು ಪತಿಹೀನಯಾದಳು. ಆದರೂ ಅವಳು ಸೋಮವಾರ ವ್ರತವನ್ನು ಬಿಡದೇ ಆಚರಿಸುತ್ತಿದ್ದಳು. ನದಿಯಲ್ಲಿ ಮುಳುಗಿದ್ದ ಚಂದ್ರಾಂಗದವನ್ನು ನಾಗಕನ್ನೆಯರು ತಮ್ಮ ಲೋಕಕ್ಕೆ ಕರೆದೊಯ್ದಿದ್ದರು. ಶ್ರೀಮಂತಿನಿಯು ಆಚರಿಸುತ್ತಿದ್ದ ಸೋಮವಾರ ಶಂಕರ ವ್ರತದ ಪ್ರಭಾವದಿಂದಾಗಿ, ಅವರು ಕೆಲದಿನಗಳ ನ೦ತರ ಚ೦ದ್ರಾಂಗದನನ್ನು ನಾಗಕುಮಾರರ ಸಂಗಡ ತಿರುಗಿ ಕಳಿಸಿ ಕೊಟ್ಟರು. ಚ೦ದ್ರಾಂಗದನು ತಾನು ದೋಣಿ ಮುಳುಗಿದ್ದ ಸ್ಥಳದಿಂದ ಎದ್ದು ಈಜುತ್ತ ನದಿಯ ದಂಡೆಗೆ ಬಂದನು. ಅಂದು ಸೋಮವಾರವಿದ್ದದ್ದರಿಂದ, ಶೀಮಂತಿನಿಯು ನದಿಗೆ ಸ್ನಾನ ಮಾಡಲು ಬಂದಿದ್ದಳು. ಸತಿಪತಿಗಳು ಒಬ್ಬರನ್ನೊಬ್ಬರು ನೋಡಿ, ಗುರುತಿಸಿದರು. ಚಂದ್ರಾಂಗದನು ನೀರಿನಲ್ಲಿ ಮುಳುಗಿದ್ದರಿಂದ, ವೈರಿಗಳು ಆತನ ರಾಜ್ಯವನ್ನು ವಶಪಡಿಸಿಕೊಂಡು, ಅವನ ತ೦ದೆ-ತಾಯಿಗಳನ್ನು ಸೆರೆಮನೆಯಲ್ಲಿಟ್ಟಿದ್ದರು. ಚಂದ್ರಾಂಗದನು ಬಂದನೆಂಬ ಸುದ್ದಿ ತಿಳಿದೊಡನೆಯೇ ವೈರಿರಾಜರು ಅಂಜಿ ಆತನ ರಾಜ್ಯವನ್ನು ಅವನಿಗೇ ಬಿಟ್ಟು ಓಡಿ ಹೋದರು. ಮುಂದೆ ಶೀಮಂತಿನಿಯು ತನ್ನ ಪತಿ ಯೊಂದಿಗೆ ಬಹು ಕಾಲದವರೆಗೆ ಸೌಖ್ಯವಾಗಿ ಬಾಳಿ, 'ಸೋಮವಾರ ವ್ರತದ ಪ್ರಭಾವದಿಂದಾಗಿ, ಸದ್ಧತಿ ಹೊಂದಿದಳು. ಆದಕಾರಣ ನೀವು ಆ ವ್ರತವನ್ನು ಕೈಗೊಳ್ಳಿರಿ ! ಆ ಸೇವೆ ಸತ್ಯವಾಗಿ ನಮಗೇ ಸಲ್ಲುವದು'' ಎಂದು ಗುರುಗಳು ಅಪ್ಪಣೆ ಕೊಡಿಸಿದರು. ಗುರ್ವಾಜ್ಞೆಯಂತೆ ದಂಪತಿಗಳಿಬ್ಬರೂ 'ಸೋಮವಾರ ಶಂಕರ' ವ್ರತವನ್ನು ಹಿಡಿದರು.
ದತ್ತನ ತಂದೆ-ತಾಯಿಗಳು ಮಗ-ಸೊಸೆಯನ್ನು ಕಾಣಲು ಗಾಣಗಾಪುರಕ್ಕೆ ಬಂದರು, ನಿಜ ಸಂಗತಿಯನ್ನೆಲ್ಲ ಕೇಳಿ ತಿಳಿದು ಆನಂದ ಭರಿತರಾದರು. ಅವರು ಶ್ರೀ ಗುರುಗಳಿಗೆ ಬಹುಭಕ್ತಿಯಿಂದ ನಮಸ್ಕರಿಸಿದರು. ಅವರ ಆಶೀರ್ವಾದ ಪಡೆದುಕೊಂಡು, ಮಗ ಸೊಸೆಯರೊಂದಿಗೆ ಸಂಭ್ರಮದಿಂದ ತಮ್ಮ ಊರಿಗೆ ಮರಳಿದರು. ದತ್ತ ದಂಪತಿಗಳು ಪ್ರತಿವರ್ಷ ತಪ್ಪದೇ ಗಾಣಗಾಪುರಕ್ಕೆ ಬಂದು ಗುರುದರ್ಶನ ಮಾಡಿಕೊಂಡು, ಹೋಗುತ್ತಿದ್ದರೆಂದು ಸಿದ್ಧಮುನಿಯು ನಾಮಧಾರಕನಿಗೆ ತಿಳಿಸಿದನೆಂಬಲ್ಲಿಗೆ ಸಾರರೂಪ ಶ್ರೀ ಗುರು ಚರಿತ್ರೆಯ 35ನೆಯ ಅಧ್ಯಾಯ ಮುಗಿಯಿತು.
Comments
Post a Comment