Shri Guru Charitre - Chapter 9

 




ಅಧ್ಯಾಯ ೯

||ಹರಿ: ಓ೦ ಶ್ರೀ ಗುರುಭೋ ನಮಃ || 

ಸಿದ್ಧಮುನಿಯು ಗುರು ಚರಿತ್ರೆಯನ್ನು ಮುಂದುವರಿಸುತ್ತಾ ನಾಮಧಾರಕ ಶಿಷ್ಯತ್ತಮನೇ ! ಗುರುಗಳು ಕುರುವಪುರದಲ್ಲಿರುವಾಗ ನಡೆದ ಇನ್ನೊಂದು ಲೀಲೆಯನ್ನು ಹೇಳುವೆನು. ಲಕ್ಷಗೊಟ್ಟು ಕೇಳು....! ಲೋಕರೂಢಿಯಂತೆ ಶ್ರೀಪಾದ ಗುರುಗಳು ನಿತ್ಯವೂ ಕೃಷ್ಣಾ ನದಿಯಲ್ಲಿ ಸ್ನಾನ ಮಾಡುತ್ತಿದ್ದರು. ಅವರು ನದಿಗೆ ಸ್ನಾನಾರ್ಥವಾಗಿ ಬಂದ ಕೂಡಲೇ, ಅಲ್ಲಿ ಬಟ್ಟೆ ಒಗೆಯುವದರಲ್ಲಿ ನಿರತನಾಗಿರುತ್ತಿದ್ದ ಅಗಸನೊಬ್ಬನು, ಧಾವಿಸಿ ಬಂದು, ಗುರುಗಳಿಗೆ ಬಹು ಭಕ್ತಿಯಿಂದ ಸಾಷ್ಟಾಂಗ ನಮಸ್ಕಾರ ಮಾಡುತ್ತಿದ್ದನು. ಹೀಗೆಯೇ ಎಷ್ಟೋ ದಿನಗಳೂ ಕಳೆದು ಹೋದವು, ಗುರುಗಳಿಗೆ ಆ ಅಗಸನ ಮೇಲೆ ಕರುಣೆಯುಂಟಾಯಿತು. ಒಂದು ದಿನ ನದಿಗೆ ಹೋದಾಗ, ಅಗಸನು ನಿತ್ಯದಂತೆ ನಮಸ್ಕರಿಸಲು ಧಾವಿಸಿ ಬಂದನು. ಸಾಷ್ಟಾಂಗ ನಮಸ್ಕಾರ ಹಾಕಿ, ಗುರುಗಳೆದುರು ಭಕ್ತಿಯಿಂದ ನಮಿಸಿ ನಿಂತುಕೊಂಡನು. ಗುರುಗಳೂ ಆತನನ್ನು ಕುರಿತು, ರಜಕಾ| ನೀನು ಇಷ್ಟು ದಿವಸಗಳವರೆಗೆ ಭಕ್ತಿಯಿಂದ ನಡೆದುಕೊಂಡದ್ದಕ್ಕಾಗಿ ನಾವು ನಿನ್ನ ಮೇಲೆ ಸಂಪ್ರೀತರಾಗಿದ್ದೇವೆ. ಇನ್ನು ಮೇಲೆ ನಿನ್ನ ಕಷ್ಟದ ದಿನಗಳು ತಪ್ಪಿ ಸುಖದಿಂದ ರಾಜ್ಯವಾಳುವಿ!'' ಎಂದು ಅವರು ಆಶೀರ್ವದಿಸಿದರು.

ಅಂದಿನಿಂದ ಆ ಮಡಿವಾಳನು ಪ್ರಾಪಂಚಿಕ ವ್ಯಾಪಾರವನ್ನು ಕಡಿಮೆ ಮಾಡಿಕೊಂಡು, ಹೆಚ್ಚಿನ ಸಮಯವನ್ನೆಲ್ಲ ಗುರುಸೇವೆಯಲ್ಲಿಯೇ ಕಳೆಯತೊಡಗಿದನು. ನಿತ್ಯ ನಸುಕಿನಲ್ಲಿ ಗುರುಮಠದ ಅಂಗಳ ಕಸಗೂಡಿಸುವದು, ಕೃಷ್ಣಾಜಲದಿಂದ ಛಳಿ ಹೊಡೆಯುವದು, ಗುರು ವಚನಗಳನ್ನಾಲಿಸುತ್ತ ಕೂಡುವದು. ಇವೇ ಆತನ ನಿತ್ಯ ಕರ್ತವ್ಯಗಳಾದವು. ಆಗ ವಸಂತ ಋತುವಿನ ಕಾಲವಾಗಿತ್ತು ಬಿಸಿಲಿನ ತಾಪವು ಹೆಚ್ಚಾಗಿತ್ತು ಅಂಥ ಒಂದು ಮಧ್ಯಾಹ್ನದ ಸಮಯದಲ್ಲಿ ಒಬ್ಬ ಯವನ ರಾಜನು, ತನ್ನ ರಾಣೀ ಪರಿವಾರ ಸಮೇತನಾಗಿ ಕುರುಗಡ್ಡೆಯ ಸಮೀಪದಲ್ಲಿರುವ ಕೃಷ್ಣಾನದಿಗೆ ಜಲಕ್ರೀಡೆಯಾಡುವದಕ್ಕೆಂದು ಬಂದಿದ್ದನು. ಆ ರಾಜನ, ಸಂತೋಷ, ವೈಭವಗಳನ್ನು ಕಂಡು ರಜಕನಿಗೆ ಮನೋ ಚಾಂಚಲ್ಯ ಉಂಟಾ ಯಿತು, ಆತನು ತನ್ನ ಮನಸ್ಸಿನಲ್ಲಿ ಅಹಹಾ! ಜಗತ್ತಿನಲ್ಲಿ ಹುಟ್ಟುವದಾದರೆ, ಇಂಥ ರಾಜ ವಂಶದಲ್ಲಿ ಹುಟ್ಟಿ ಸುಖಪಡಬೇಕು ! ನನ್ನಂತೆ ಅಗಸನಾಗಿ ಹುಟ್ಟಿದವನ ಜೀವನವು ವ್ಯರ್ಥವಾದದ್ದೇ ಸರಿ!” ಎಂದು ಯೋಚಿಸಿ ಹಳಹಳಿಸುತ್ತ ನಿಂತಿದ್ದನು. ಸರ್ವಜ್ಞರಾದ ಗುರುಗಳಿಗೆ ರಜಕನ ಮನೋಗತವು ತಿಳಿದುಹೋಯಿತು. ಅವರು ಆ ಅಗಸನನ್ನು ಕೂಗಿ ಕರೆದರು, ರಜಕನು ಧಾವಿಸಿ ಬಂದು ಕೈ ಮುಗಿದು ನಿಂತುಕೊಳ್ಳಲು, ಗುರುಗಳು ನೀನೇನು ಯೋಚಿಸುತ್ತಿದ್ದೆ ? ಎಂದು ಪ್ರಶ್ನೆ ಮಾಡಿದರು. ರಜಕನು ಗುರುಗಳೂ ಸರ್ವಾಂತರಾಮಿಗಳೆ೦ಬುದನ್ನರಿತವನಾದದ್ದರಿಂದ, ಇದ್ದ ವಿಷಯ ವನ್ನು ಇದ್ದಂತೆ ತಿಳಿಸಿ ಬಿಟ್ಟನು. ಅಗಸನಿಗೆ ರಾಜಭೋಗದ ಆಸೆಯಿದೆ ಎಂಬುವನ್ನು ಅರ್ಥ ಮಾಡಿಕೊಂಡು ಗುರುಗಳೂ ಆತನಿಗೆ “ನೀನು  ಮ್ಲೇoಛ ಕುಲದಲ್ಲಿ ಹುಟ್ಟಿ ರಾಜಭೋಗವನ್ನು ಅನುಭವಿಸು !' ಎಂದು ನುಡಿದರು, ರಜಕನು ತಾನು ರಾಜನಾದಾಗ ಸ್ವಾಮಿಗಳು ತನಗೆ ಪುನಃ ದರ್ಶನವನ್ನೀಯಬೇಕೆಂದು ವಿನಂತಿಸಿಕೊಂಡನು. ಗುರುಗಳು “ಸರಿ, ನಿನ್ನ ಅಂತ್ಯಕಾಲಕ್ಕೆ ನಾವು ನಿನಗೆ ದರ್ಶನ ಕೊಡುತ್ತೇವೆ. ಆಗ ನಿನಗೆ ಜ್ಞಾನೋದಯವೂ ಆಗುವದೆ೦ದು ಅಭಯವನ್ನಿತ್ತರು. ರಜಕನು ಧನ್ಯನಾದನೆಂದು ನಮಸ್ಕರಿಸಿ ಹೊರ ಟರುವಾಗ, ಗುರುಗಳು ಮತ್ತೆ ಅವನನ್ನು ಕರೆದರು. “ನಿನಗೆ ಇದೇ ಜನ್ಮ ದಲ್ಲಿ ರಾಜನಾಗಬೇಕೆಂಬ ಆಸೆಯಿದೆಯೇ ?'' ಎಂದು ಪ್ರಶ್ನೆ ಮಾಡಿದರು.

ಅದಕ್ಕೆ ರಜಕನು ಸ್ವಲ್ಪ ಯೋಚಿಸಿ, “ಸ್ವಾಮೀ ! ಈಗ ನಾನು ಇಳಿವಯಸ್ಸಿನವನಾಗಿದ್ದೇನೆ. ಅದಕ್ಕಾಗಿ ಅನುಭವಿಸಲಿಚ್ಛಿಸುತ್ತೇನೆ.'' ಎಂದು ನುಡಿದನು. ತಕ್ಷಣವೇ ಆತನಿಗೆ ಮರಣವುಂಟಾಯಿತು. ಆತನು ಬೀದರಿನ ನವಾಬನ ಮಗನಾಗಿ ಪುನರ್ಜನ್ಮ ಪಡೆದನು. ಶ್ರೀಪಾದ ಶ್ರೀವಲ್ಲಭ ಗುರುಗಳ ಖ್ಯಾತಿಯು ಸುತ್ತೆಲ್ಲಾ ಪಸರಿಸಿಬಿಟ್ಟಿತು. ದೂರ ದೂರದಿಂದ ಭಕ್ತರು ಅವರ ದರ್ಶನ ಲಾಭವನ್ನು ಪಡೆಯಲು ಹಾತೊರೆದು ಬರುತ್ತಿದ್ದರು. ಕುರುಗಡ್ಡೆಯ ಪವಿತ್ರ ಕ್ಷೇತ್ರವೆನಿಸಿತು, ಶ್ರೀಪಾದಗುರುಗಳು ಮತ್ತೊಂದು ಅವತಾರ ಎತ್ತುವ ಉದ್ದೇಶದಿಂದ, ಆಶ್ವಿನ ಬಹುಳ ದ್ವಾದಶಿಯ ದಿವಸ (ಕ್ರಿ.ಶ. 1350) ಕೃಷ್ಣಾ ನದಿಯಲ್ಲಿ ಅದೃಶ್ಯರಾದರು. ಅವರು ಅದೃಶ್ಯರಾದರೂ ಸಹಿತ ಕುರುವಪುರದಲ್ಲಿ ಅವರು ಸದಾ ಜಾಗೃತರಾಗಿದ್ದುಕೊಂಡು, ಅವಶ್ಯವೆನಿಸಿದಾಗ ದರ್ಶನಾಶೀರ್ವಾದಗಳನ್ನು ಇಂದಿನವರೆಗೂ ನೀಡುತ್ತಲೇ ಇದ್ದಾರೆ.” ಎಂದು ಸಿದ್ಧಮುನಿಯು ನಾಮಧಾರಕನಿಗೆ ಹೇಳಿದನೆಂಬಲ್ಲಿಗೆ ಸಾರರೂಪ ಶ್ರೀ ಗುರು ಚರಿತ್ರೆಯ ಒಂಭತ್ತನೆಯ ಅಧ್ಯಾಯ ಮುಕ್ತಾಯವಾಯಿತು.

Comments

Popular posts from this blog

Hanumane Tandeyu Hanumane Thayiyu lyrics

Sankshipta Guru Charitre in kannada

Sri Rama Chandirane