Shri Guru Charitre - Chapter 15
ಅಧ್ಯಾಯ ೧೫
||ಹರಿಃ ಓಂ ಶ್ರೀ ಗುರುಭ್ಯೋ ನಮಃ ||
ಶ್ರೀ ನರಸಿಂಹ ಸರಸ್ವತಿ ಗುರುಗಳು ವೈಜನಾಥ ಕ್ಷೇತ್ರದಲ್ಲಿ ಅದೇಕೆ ಗುಪ್ತವಾಗಿ ಉಳಿದರು ? ಹಾಗೂ ಅವರ ಜೊತೆಯಲ್ಲಿದ್ದ ಅವರ ಶಿಷ್ಯಂದಿರೆಲ್ಲ ಆಗ ಎಲ್ಲಿಗೆ ಹೋದರು ? ದಯವಿಟ್ಟು ವಿವರವಾಗಿ ತಿಳಿಸುವ ಕೃಪೆ ಮಾಡಬೇಕೆಂದು, ನಾಮಧಾರಕನು ಭಕ್ತಿ ಕುತೂಹಲಗಳಿಂದ ಪ್ರಶ್ನೆ ಮಾಡಲು, ಸಿದ್ಧಮುನಿಯು ಈ ರೀತಿಯಾಗಿ ಹೇಳತೊಡಗಿದನು. “ನಾಮಧಾರಕನೇ ! ದಿನೇ ದಿನೇ ಗುರುಗಳಿಗೆ ಭಕ್ತರ ಸಂಖ್ಯೆ ಬೆಳೆಯುತ್ತ ಹೊರಟಿತು. ಅವರು ಅವತಾರಿಕ ಪುರುಷರೆಂಬ ವಾರ್ತೆಯು ಎಲ್ಲೆಡೆಗೂ ಹಬ್ಬಿ ಹೋಗಿತ್ತು; ಹೀಗಾಗಿ ಜನರು ಅನೇಕ ಕಾಮನೆಗಳನ್ನು ಹೊತ್ತುಕೊಂಡು, ಗುರುಗಳಿಂದ ಅವುಗಳಿಗೆ ಅನಾಯಾಸವಾಗಿ ಫಲ ದೊರಕಿಸಿಕೊಳ್ಳಬೇಕೆಂಬ ಉದ್ದೇಶದಿಂದ, ಗುರುಗಳಿದ್ದಲ್ಲಿಗೆ ಹುಡುಕಿಕೊಂಡು ಬರತೊಡಗಿದರು. ಅಂಥವರಲ್ಲಿ ಸಾಧುಗಳೂ ಇರುತ್ತಿದ್ದರು; ಸ್ವಾರ್ಥಿಗಳೂ ಇರುತ್ತಿದ್ದರು. ಧೂರ್ತರಾದ ಕೆಲವರು ಸ್ವಾರ್ಥ ಸಾಧನೆಗಾಗಿ ಗುರುಗಳ ಸೇವಕರಾಗ ಹತ್ತಿದರು. ಇಂಥವರು ದೊರೆಯಲಾರದ ಫಲಗಳನ್ನು ಬಯಸಿ, ಸುಮ್ಮ ಸುಮ್ಮನೆ ಗುರುಗಳಿಗೆ ಪೀಡಿಸುತ್ತಿದ್ದರು. ಅದಕ್ಕಾಗಿಯೇ ಗುರುಗಳು ಕೆಲವು ದಿನ ಗುಪ್ತವಾಗಿ ಉಳಿಯಲು ಮನಸ್ಸು ಮಾಡಿದರು. ಯಾಕೆ೦ದರೆ ಆಸೆಯೆಂಬುದು ಬಲು ಕೆಟ್ಟದ್ದು....! ಅದಕ್ಕೆ ಮಿತಿ ಎಂಬುವದೇ ಇರುವದಿಲ್ಲ. ಪರಶುರಾಮನು ಕ್ಷತ್ರಿಯರಿಂದ ಭೂಮಂಡಲವನ್ನೆಲ್ಲ ಗೆದ್ದು ಬ್ರಾಹ್ಮಣರಿಗೆ ದಾನ ಮಾಡಿದರೂ ಸಹಿತ ಅವರ ಆಸೆ ಹಿ೦ಗಲಿಲ್ಲ. ಆತನು ಪಶ್ಚಿಮ ಸಮುದ್ರ ತೀರಕ್ಕೆ ಹೋಗಿ ಕುಳಿತನು. ಆಸೆ ಬುರುಕರಾದ ಕೆಲವು ವಿಪ್ರರು ಅಲ್ಲಿಗೆ ಹೋಗಿ ಇನ್ನಷ್ಟು ಭೂಮಿಯನ್ನು ನಮಗೆ ದಾನವಾಗಿ ನೀಡು !?” ಎಂದು ಕೇಳತೊಡಗಿದರು. ಅವರ ಆಸೆಯಿಂದ ಬೇಸತ್ತ ಪರಶುರಾಮನು, ತಾನು ಕುಳಿತ (ಕೊಂಕಣ ಪ್ರದೇಶ) ಸ್ಥಳವನ್ನೂ ಅವರಿಗೆ ಕೊಟ್ಟು, ತಾನು ಸಮುದ್ರ ಮಧ್ಯಕ್ಕೆ ಹೋಗಿ ಗೌಪ್ಯವಾಗಿ ಕುಳಿತುಬಿಟ್ಟನು. ಅದರಂತೆಯೇ ನಮ್ಮ ಗುರುಗಳು ಇಂಥ ಆಸೆ ಬುರುಕ ಭಕ್ತರ ಸಲುವಾಗಿ ಬೇಸತ್ತು, ಗುಪ್ತವಾಗಿ ಉಳಿಯಲಿಚ್ಚಿಸಿದರು.
ಒಂದು ದಿನ ಅವರು ಎಲ್ಲ ಶಿಷ್ಯರನ್ನೂ ಹತ್ತಿರ ಕರೆದು, 'ಶಿಷ್ಯತ್ತಮರೇ! ನೀವೆಲ್ಲರೂ ಈಗ ತೀರ್ಥಯಾತ್ರೆಗಳಿಗೆ ಹೊರಟು ಹೋಗಿರಿ ! ಭರತ ವರ್ಷದ ವಿವಿಧ ಕ್ಷೇತ್ರಗಳನ್ನು ಸಂದರ್ಶಿಸಿ, ಅಲ್ಲಿಯ ಮಹಿಮೆ ತಿಳಿದುಕೊಳ್ಳಿರಿ ! ನಾವು ಕೆಲವು ಕಾಲ ಗುಪ್ತವಾಗಿ ಉಳಿಯುತ್ತೇವೆ. ಮುಂದೆ ಬರುವ ಬಹುಧಾನ್ಯ ಸಂವತ್ಸರದಲ್ಲಿ ನಾವು ಶ್ರೀ ಶೈಲಕ್ಕೆ ಬರುತ್ತೇವೆ. ಆಗ ನೀವೆಲ್ಲಾ ಬಂದು ನಮಗೆ ಭೆಟ್ಟಿಯಾಗಿರಿ!” ಎಂದು ಆಜ್ಞಾಪಿಸಿದರು. ಆಗ ಎಲ್ಲ ಶಿಷ್ಯರೂ ಅವರ ಆಜ್ಞೆಯಂತೆ ಗುರುಗಳಿಗೆ ನಮಸ್ಕರಿಸಿ ಒಬ್ಬೊಬ್ಬರಾಗಿ ಹೊರಟು ಹೋದರು. ಗುರುಗಳು ಸಿದ್ಧನಾಮಕನಾದ ಒಬ್ಬನನ್ನು ಮಾತ್ರ ಸೇವೆಗಾಗಿ ಹತ್ತಿರ ಉಳಿಸಿಕೊಂಡು, ವೈಜನಾಥ ಕ್ಷೇತ್ರದಲ್ಲಿ ಒಂದು ವರ್ಷದ ಪರ್ಯಂತ ಗುಪ್ತವಾಗಿ ಉಳಿದಿದ್ದರೆಂದು ಸಿದ್ಧ ಮುನಿಯು ತಿಳಿಸಿದನೆಂಬಲ್ಲಿಗೆ ಸಾರರೂಪ ಶ್ರೀ ಗುರು ಚರಿತ್ರೆಯ 15ನೆಯ ಅಧ್ಯಾಯ ಮುಕ್ತಾಯವಾಯಿತು.
Comments
Post a Comment