Shri Guru Charitre - Chapter 3
ಅಧ್ಯಾಯ ೩
||ಹರಿಃ ಓಂ; ಶ್ರೀ ಗುರುಭೋ ನಮಃ ||
ಸಿದ್ಧಮುನಿಯ ವಿವರಣೆ ಯಿಂದ ನಾಮಧಾರಕನಲ್ಲಿ ಗುರುಗಳ ಬಗ್ಗೆ ಅಪಾರವಾದ ಶ್ರದ್ಧೆ-ಭಕ್ತಿಗಳುಂಟಾದವು. ಆತನು ಸಿದ್ಧಮುನಿಗೆ ದಂಡವತ್ ನಮಸ್ಕಾರ ಮಾಡಿ, ಸ್ವಾಮೀ ! ಈಗ ನನ್ನ ಮನಸ್ಸು ಆನಂದ ಹೊಂದಿದೆ. ನಾನೀಗ ನಿಮ್ಮ ಚರಣ ಸೇವಕನು. ದಯವಿಟ್ಟು ನನಗೆ ಶ್ರೀ ಗುರುಗಳ ಚರಿತ್ರೆಯನ್ನು ಸಂಪೂರ್ಣವಾಗಿ ಹೇಳುವ ಕೃಪೆ ಮಾಡಬೇಕೆಂದು ಭಿನ್ನಿಸಿಕೊಂಡನು. ಅದಕ್ಕೆ ಪ್ರತಿಯಾಗಿ ಸಿದ್ಧ ಮುನಿಯು 'ಎಲೈ ಶಿಷ್ಯನೇ ಕೇಳು!.... ಗುರುಗಳು ಯಾವ ಯಾವ ಸ್ಥಳಗಳಲ್ಲಿ ಇರುತ್ತಾರೋ ಆ ಸ್ಥಳಗಳಲ್ಲೆಲ್ಲ ನಾನು ಇದ್ದೇ ಇರುತ್ತೇನೆ. ಗುರು ನಾಮಸ್ಮರಣೆಯೇ ನನ್ನ ಆಹಾರವಾಗಿದೆ. ಇಂಥ ಸದ್ಗುರುವಿನ ಚರಿತ್ರೆಯನ್ನು ಸಂಪೂರ್ಣವಾಗಿ ಕೇಳುವವರು ತತ್ಕಾಲದಲ್ಲಿ ಇಚ್ಛ ಫಲ ಪಡೆದು, ನಂತರ ಸದ್ಗತಿ ಹೊಂದುತ್ತಾರೆ. ಅಪುತ್ರರು ಪುತ್ರವಂತರಾಗುತ್ತಾರೆ. ರೋಗಿಗಳು ನಿರೋಗಿಗಳೂ, ದರಿದ್ರರು ಐಶ್ವರವಂತರೂ ಆಗುತ್ತಾರೆ. ಒಟ್ಟಾರೆ ಈ ಕಲಿಯುಗದಲ್ಲಿಯಂತೂ ಗುರು ಚರಿತ್ರೆಯು ಕಾಮಧೇನುವಿನಂತೆ ಫಲದಾಯಕವಾಗಿದೆಯಂಬುದರಲ್ಲಿ ಯಾವ ಸಂದೇಹವು ಇಲ್ಲಾ!
ಶಿಷ್ಯತ್ತಮನೇ ಕೇಳು !.... ನಿರ್ಗುಣ ಪರಬ್ರಹ್ಮ ವಸ್ತುವು, ಈ ಜಗತ್ತಿನ ಮೂಲವೆನಿಸುವದು. ಅದು ತನ್ನಲ್ಲಿರುವ ಮಾಯೆಯಿಂದ ಸಕಲ ಸೃಷ್ಟಿಗೆ ಕಾರಣೀಭೂತವಾಗಿದೆ, ಅದರ ಸಂಜ್ಞೆಯಿಂದಲೇ ಬ್ರಹ್ಮನು ಸೃಷ್ಟಿ ಮಾಡುವನು; ವಿಷ್ಣುವು ರಕ್ಷಣೆ ಮಾಡುವನು, ರುದ್ರನು ಲಯಗೊಳಿಸುವನು. ರಜ-ಸತ್ವ-ತಮೋ ಗುಣಗಳಿಗೆ ಅಧಿಪತಿಗಳಾಗಿದ್ದ ಬ್ರಹ್ಮ-ವಿಷ್ಣು ಮಹೇಶ್ವರರು ತೋರಿಕೆಯಲ್ಲಿ ಬೇರೆ ಬೇರೆಯಾಗಿ ಗೋಚರಿಸಿದರೂ, ವಸ್ತು ಸ್ಥಿತಿಯಲ್ಲಿ ಒಂದೇ ಸತ್ಯ ವಸ್ತುವಿನ ವಿಭಿನ್ನರೂಪರಾಗಿದ್ದಾರೆ, ಇವರು ಕಾಲ ಕಾಲಕ್ಕೆ ಧರೆಯಲ್ಲಿ ಅವತರಿಸಿ ಭೂ ಭಾರವನ್ನು ಕಡಿಮೆ ಮಾಡುತ್ತಾರೆ. ಹಿಂದೆ ಅಂಬರೀಷನೆಂಬ ಹರಿಭಕ್ತ ರಾಜನಿದ್ದನು. ಆತನು ನಿಷ್ಠೆಯಿಂದ ಏಕಾದಶಿ ವ್ರತವನ್ನು ಆಚರಿಸುತ್ತಿದ್ದನು. ಒಂದು ದಿವಸ ದ್ವಾದಶಿಯ ನಸುಕಿನಲ್ಲಿ ದುರ್ವಾಸ ಮುನಿಗಳು ಆತನ ಮನೆಗೆ ಬಂದರು. ರಾಜನು ಅವರನ್ನು ಆದರದಿಂದ ಸತ್ಕರಿಸಿ, ಅ೦ದು ಸಾಧನ ದ್ವಾದಶಿ ಇರುವದರಿ೦ದ, ತೀವ್ರ ನದಿಗೆ ಹೋಗಿ ಸ್ನಾನಾನುಷ್ಠಾನಗಳನ್ನು ತೀರಿಸಿಕೊಂಡು ಬಂದು ಉಪೋಷಣೆಯ ಪಾರಣಿ ಮಾಡುವದಕ್ಕೆ ಅನುಕೂಲ ಮಾಡಿಕೊಡಬೇಕೆಂದು ಪ್ರಾರ್ಥಿಸಿಕೊಂಡನು. ಆದರೆ ನದಿಗೆ ಹೋದ ದುರ್ವಾಸ ಮುನಿಗಳು ಬೇಗ ಬಾರದ್ದರಿಂದ, ತನ್ನ ವ್ರತಕ್ಕೆ ಭಂಗ ಬರಬಾರದೆಂಬ ಉದ್ದೇಶದಿಂದ ಶ್ರೀ ಹರಿಯ ತೀರ್ಥ ಸ್ವೀಕರಿಸಿ ಪಾರಣೆ ಮುಗಿಸಿ ಬಿಟ್ಟನು. ಈ ವಿಷಯವು ದುರ್ವಾಸರಿಗೆ ಗೊತ್ತಾಗಿ ಅವರು ಅಂಬರೀಷನಿಗೆ ವಿವಿಧ ಯೋನಿಗಳಲ್ಲಿ ಜನ್ಮ ತಾಳು'' ಎಂದು ಶಾಪವಿತ್ತರು. ತಕ್ಷಣವೇ ಶ್ರೀ ಹರಿಯು ಅಲ್ಲಿ ಪ್ರಕಟನಾಗಿ ತನ್ನ ಭಕ್ತನಿಗಿತ್ತ ಶಾಪವನ್ನು ತಾನೇ ಅನುಭವಿಸುವದಕ್ಕೆ ಸಿದ್ಧನಾದನು. ದುರ್ವಾಸರು ಜ್ಞಾನಿಗಳು, ಶ್ರೀ ಹರಿಗೆ ವಿವಿಧ ಯೋನಿಗಳಲ್ಲಿ ದಶಾವತಾರ ಮಾಡೆಂದು ಶಾಪವನ್ನಿತ್ತರು, ನಾರಾಯಣನು ಅಂತಯೇ ದಶಾವತಾರ ತಾಳಬೇಕಾಯಿತು. ದತ್ತಾತ್ರೆಯನ ಅವತಾರ ಕೂಡಾ ಅಂಥದ್ದರಲ್ಲಿಯೇ ಒಂದಾಗಿದೆಯೆಂದು, ನಾಮಧಾರಕನಿಗೆ ಸಿದ್ಧ ಮುನಿಯು ತಿಳಿಸಿದನೆ೦ಬಲ್ಲಿಗೆ ಸಾರರೂಪ ಗುರುಚರಿತ್ರೆಯ 3ನೇ ಅಧ್ಯಾಯ ಮುಕ್ತಾಯವಾಯಿತು.
Comments
Post a Comment