Shri Guru Charitre - Chapter 14

 



ಅಧ್ಯಾಯ ೧೪

||ಹರಿಃ ಓಂ ಶ್ರೀ ಗುರುಭ್ಯೋ ನಮಃ || 

ನಾಮಧಾರಕನು ಬಹುಭಕ್ತಿ ಕುತೂಹಲಗಳಿಂದ, ಸಿದ್ಧಮುನಿಗೆ ನಮಸ್ಕರಿಸಿ, “ಗುರುದೇವಾ ! ನರಸಿಂಹ ಸರಸ್ವತಿ ಸ್ವಾಮಿಗಳು, ಸಾಯಂದೇವನ ಮನೆಯಲ್ಲಿ ಮತ್ತೇನು ಮಾಡಿದರು. ನಾನು ಅವರ ಪುಣ್ಯ ಚರಿತ್ರೆಯನ್ನು ಸಂಪೂರ್ಣವಾಗಿ ಕೇಳುವದಕ್ಕೆ ಉತ್ಸುಕನಾಗಿದ್ದೇನೆ'' ಎಂದು ವಿನಂತಿಸಿಕೊಳ್ಳಲು ಸಿದ್ಧಮುನಿಯು “ನಾಮಧಾರಕನೇ ಕೇಳು ! ಅ೦ದು ಸಾಯಂದೇವನು ತನ್ನ ಮನೆಯಲ್ಲಿ ವಿಚಿತ್ರ ವೈಭವ, ಭಕ್ತಿಗಳೊಂದಿಗೆ ಗುರುಪೂಜೆ ಮಾಡಿದನು, ಅದರಿಂದ ಗುರುಗಳು ಆತನ ಮೇಲೆ ಸಂಪ್ರೀತರಾಗಿದ್ದರು. ಅವರು ಸಾಯಂದೇವನನ್ನು ಹತ್ತಿರ ಕರೆದು, “ನೀನು ವಂಶಪರಂಪರೆಯಾಗಿ ನಮ್ಮ ಭಕ್ತನಾಗಬೇಕು !'' ಎಂದು ಆಜ್ಞೆ ಮಾಡಿದರು. ಸಾಯಂದೇವನು ಗುರುವಾಣಿಯನ್ನು ಕೇಳಿ ಬಹಳ ಸಂತುಷ್ಟನಾದನು, ಗುರುಗಳನ್ನು ಪರಿ ಪರಿಯಿಂದ ಸ್ತುತಿಸಿ ಜಯಜಯಕಾರ ಮಾಡಿದನು. ''ಗುರುವೇ ! ನೀನು ನನ್ನ ವಂಶವನ್ನು ಉದ್ಧರಿಸುವದಕ್ಕಾಗಿ ಅವತರಿಸಿ ಬಂದ ನಾರಾಯಣನಾಗಿರುವಿ, ದಯವಿಟ್ಟು ನನ್ನ ವಂಶದ ಮುಂದಿನ ಪೀಳಿಗೆಯವರಿಗೂ ನಿನ್ನ ಮೇಲೆ ಅಪಾರ ಭಕ್ತಿ ಹುಟ್ಟುವಂತೆ ನೀನೇ ಅನುಗ್ರಹಿಸು ! ನೀನು ನರರೂಪದಲ್ಲಿದ್ದರೂ ವಿಶ್ವವ್ಯಾಪಿಯಾಗಿರುವಿ ! ವೇದಗಳು ಸಹಿತ ನಿನ್ನ ಮಹಿಮೆಯು ತಿಳಿಯದಾಗಿವೆ. ನಾನಂತೂ ಪಾಮರನು. ಹೊಟ್ಟೆಯ ಪಾಡಿಗಾಗಿ ಯವನ ದೊರೆಗೆ ಸೇವಕನಾದವನು.

ಆ ಯವನನಾದರೋ ಬಹು ದುಷ್ಟನಾಗಿದ್ದಾನೆ. ಆತನು ಪ್ರತಿವರ್ಷ ಒಬ್ಬ ಬ್ರಾಹ್ಮಣನನ್ನು ಯಾವದಾದರೊಂದು ಕುಂಟು ನೆಪ ಮುಂದೆ ಮಾಡಿ ಕೊಲ್ಲಿಸಿ ಬಿಡುತ್ತಾನೆ. ಇದು ಅವನಿಗೊಂದು ಚಟವಾಗಿದೆ. ಈಗ ಆ ದುಷ್ಟನು ನನ್ನನ್ನು ಕರೆತರಬೇಕೆಂದು ತನ್ನ ಸೇವಕರ ಸಂಗಡ ಪತ್ರ ಕೊಟ್ಟು ಕಳಿಸಿದ್ದಾನೆ. ಬಹುಶಃ ಆತನು ಈ ಸಲ ನನ್ನನ್ನು ಕೊಲ್ಲಿಸಬಹುದೆಂಬ ಸಂಶಯ ನನಗಿದೆ. ಏನಾದರಾಗಲಿ; ಅಂತ್ಯಕಾಲದಲ್ಲಿ ನಾರಾಯಣ ಸ್ವರೂಪಿಯಾದ ನಿನ್ನ ದರ್ಶನವಾಯಿತೆಂದ ಮೇಲೆ ಇನ್ನು ನಾನು ಸಾಯುವದಕ್ಕೂ ಅಂಜುವದಿಲ್ಲ. ಒಟ್ಟಾರೆ ನನ್ನ ವಂಶದವರ ಮೇಲೆ ಸದಾ ನಿನ್ನ ಕೃಪಾ ದೃಷ್ಟಿಯಿರಲಿ!" ಎಂದು ನುಡಿಯುತ್ತ ಸಾಷ್ಟಾಂಗ ನಮಸ್ಕಾರ ಮಾಡಿದನು.

ಗುರುಗಳು ಆತನನ್ನು ಪ್ರೀತಿಯಿಂದ ಮೈದಡವಿ ಮೇಲೆಬ್ಬಿಸಿದರು. ಮತ್ತೂ ಆತನ ತಲೆಯ ಮೇಲೆ ವರದ ಹಸ್ತವನ್ನಿಟ್ಟು, ಸಾಯಂದೇವಾ! " ನೀನೇನೂ ಚಿಂತಿಸಬೇಡಾ ! ನೀನು ಧೈರವಾಗಿ ಹೋಗಿ ಆ ಯವನನ್ನು ಭೆಟ್ಟಿಯಾಗು ! ನಿನ್ನ ರಕ್ಷಣೆ ಭಾರ ನಮಗಿರಲಿ ! ಆ ಯವನನು ನಿನ್ನನ್ನು ತಾನಾಗಿಯೇ ನಮ್ಮ ಕಡೆಗೆ ಕಳಿಸಿಕೊಡುತ್ತಾನೆ. ಧೈರ್ಯವಾಗಿ ಹೋಗು! ನೀನು ತಿರುಗಿ ಬರುವವರೆಗೂ ನಾವು ನಿಮ್ಮ ಮನೆಯಲ್ಲಿಯೇ ಇರುತ್ತೇವೆ.'' ಎಂದು ಆಶೀರ್ವದಿಸಿ ಕಳಿಸಿದರು.

ಸಾಯ೦ದೇವನು ಗುರ್ವಾಜ್ಞೆಯಂತೆ ಹೋಗಿ ಯವನ ದೊರೆ ಯನ್ನು ಭೆಟ್ಟಿಯಾದನು. ಯವನ ರಾಜನು ಸಾಯಂದೇವನನ್ನು ನೋಡಿದೊಡನೆಯೇ ಕಿಡಿಕಿಡಿಯಾದನು. ಹಲ್ಲು ಕಡಿಯುತ್ತ ಎದ್ದು ತನ್ನ ಮನೆಯ ಒಳಗಡೆಗೆ ಹೋದನು. ಮುಂದೇನಾಗುವದೋ ಎಂಬ ಭಯದಿ೦ದ ಸಾಯಂದೇವನು ಮನಸ್ಸಿನಲ್ಲಿಯೇ ಗುರುನಾಮಸ್ಮರಣೆ ಮಾಡತೊಡಗಿದನು. ಮನೆಯೊಳಗೆ ಪ್ರವೇಶಿಸಿದ ಯವನ ದೊರೆಗೆ ತಕ್ಷಣವೇ ಗಾಢವಾದ ನಿದ್ರೆ ಆವರಿಸಿತು, ನಿದ್ರೆಯಲ್ಲಿ ಅವನು ಸ್ವಪ್ನ ಕಂಡನು. ಸ್ವಪ್ನದಲ್ಲಿ ತ್ರಿಶೂಲಧಾರಿಗಳಾದ ಗುರುಗಳು ಆತನ ಎದೆಯ ಮೇಲೆ ಕುಳಿತು, ದುಷ್ಟದೊರೆಯೇ ನೀನು ನನ್ನ ಪರಮ ಶಿಷ್ಯನಾದ ಸಾಯಂದೇವನಿಗೆ ಹಿಂಸೆ ನೀಡುವೆಯಾ? ““ನೀನು ಅವನನ್ನು ಮರ್ಯಾದೆಯಿಂದ ಗೌರವಿಸಿ ನನ್ನ ಹತ್ತಿರ ಕಳಿಸಿ ಕೊಡದಿದ್ದರೆ ನಿನ್ನ ಪ್ರಾಣವನ್ನೇ ತೆಗೆದುಬಿಡುವೆ” ಎಂದು ನುಡಿಯುತ್ತ ತ್ರಿಶೂಲದಿ೦ದ ಮೈಗೆಲ್ಲ ತಿವಿಯತೊಡಗಿದರು. ಯವನ ದೊರೆಯು ಆ ಬಾಧೆ ತಾಳಿಕೊಳ್ಳಲಾರದೇ “ಅಯ್ಯೋ ಸಾಯುತ್ತೇನೆ. ಈ ಬ್ರಾಹ್ಮಣನು ನನ್ನನ್ನು ಇರಿದುಕೊಲ್ಲುತ್ತಾನೆ !'' ಎಂದು ಚೀರಿಕೊಳ್ಳುತ್ತ ಎಚ್ಚೆತ್ತು ಹೊರಗೋಡಿ ಬಂದನು. ಹಾಗೂ ಸಾಯಂದೇವನ ಕಾಲುಗಳ ಮೇಲೆ ಬಿದ್ದು ಹೊರಳಾಡುತ್ತ ಪುಣ್ಯಾತ್ಮ! ನೀನು ಬೇಗ ಇಲ್ಲಿಂದ ಹೊರಟು ನಿನ್ನ ಗುರುಗಳಿದ್ದಲ್ಲಿಗೆ ಹೋಗು... ! ನಾನು ಆ ಹೊಡೆತಗಳನ್ನು ತಾಳಿಕೊಳ್ಳಲಾರೆ ! ಇದೋ ಈ ಉಡುಗೊರೆಗಳನ್ನು ತೆಗೆದುಕೋ ! ಬೇಗ ಇಲ್ಲಿಂದ ಹೊರಟು ಹೋಗು !'' ಎಂದು ನುಡಿದು ಆತನಿಗೆ ವಸ್ತ್ರಾಭರಣಗಳನ್ನು ನೀಡಿ ಕಳಿಸಿದನು. ವಿಸ್ಮಯಗೊಂಡ ಸಾಯಂದೇವನು ಯವನ ದೊರೆಯು ಕೊಟ್ಟ ಉಡುಗೊರೆಯೊಂದಿಗೆ ಮನೆಗೆ ಬಂದನು. ಗುರುಗಳು ಅದುವರೆಗೂ ಅಲ್ಲಿಯೇ ಕುಳಿತಿದ್ದರು. ಸಾಯಂದೇವನು ಗುರುಗಳೆದುರು, ಅಲ್ಲಿ ನಡೆದ ಘಟನೆಯನ್ನು ವಿವರವಾಗಿ ಹೇಳಲು, ಗುರುಗಳು ಹಸನ್ಮುಖಿಗಳಾಗಿ ಇನ್ನು ಮೇಲೆ ನೀನು ಯಾವುದಕ್ಕೂ ಚಿಂತಿಸಬೇಡ ನಿನ್ನ ಮೇಲೆ ನಮ್ಮ ಸಂಪೂರ್ಣ ಅನುಗ್ರಹವಿದೆ !'' ಎಂದು ಆತನ ತಲೆಯ ಮೇಲೆ ಮತ್ತೊಮ್ಮೆ ವರದ ಹಸ್ತವನ್ನಿಟ್ಟರು, ಮತ್ತೂ'ನಾವಿನ್ನು ದಕ್ಷಿಣ ದೇಶದ ಯಾತ್ರೆಗೆ ಹೊರಡುತೇವೆ.'' ಎನ್ನುತ್ತ ಮೇಲೆದ್ದರು. ಸಾಯಂದೇವನು ತಾನೂ ಗುರುಗಳೊಂದಿಗೆ ತೀರ್ಥಾಟನೆಗೆ ಹೊರಡುವೆನೆಂದನು. ಆದರೆ ಗುರುಗಳು ಅದಕ್ಕೆ ಸಮ್ಮತಿಸಲಿಲ್ಲ. ಸಾಯಂದೇವಾ ! ನಿನಗಿನ್ನು ಯವನ ದೊರೆಯಿಂದ ಯಾವ ತೊಂದರೆಯೂ ಬರಲಾರದು. ನೀನಿಲ್ಲಿ ನಿಶ್ಚಿಂತೆಯಿಂದ ಕಾಲಕಳೆ ! ಇನ್ನು ಹದಿನೈದು ವರ್ಷಗಳ ಮೇಲೆ ನಾವು ನಿನಗೆ ಪುನದರ್ಶನ ನೀಡುತ್ತೇನೆ, ನಾವು ನಿಮ್ಮ ಕಡಗಂಚೀ ಗ್ರಾಮಕ್ಕೆ ಸಮೀಪದಲ್ಲಿಯೇ ವಾಸವಾಗುತ್ತೇವೆ. ಆಗ ನೀನು ನಿನ್ನ ಮನೆ ಮಂದಿಯನ್ನೆಲ್ಲ ಕರೆದುಕೊಂಡು ನಮ್ಮ ಬಳಿಗೆ ಬ೦ದು ನಮ್ಮ ಸೇವೆ ಮಾಡುವಿಯಂತೆ !' ಎಂದು ಸಮಾಧಾನ ಹೇಳಿ ವಾಸರ ಬ್ರಹ್ಮಕೇತ್ರದಿಂದ ಹೊರಟು, ವೈಜನಾಥ ಕ್ಷೇತ್ರಕ್ಕೆ ಬಂದರು. ಮತ್ತೂ ಅಲ್ಲಿ ಕೆಲವು ಕಾಲ ಗುಪ್ತರಾಗಿಯೇ ಉಳಿದುಬಿಟ್ಟರೆಂದು ಸಿದ್ದಮುನಿಯು ಹೇಳಿದನೆ೦ಬಲ್ಲಿಗೆ ಸಾರರೂಪ ಶ್ರೀ ಗುರುಚರಿತ್ರೆಯ 14ನೇ ಅಧ್ಯಾಯ ಮುಕ್ತಾಯವಾಯಿತು.




Comments

Popular posts from this blog

Hanumane Tandeyu Hanumane Thayiyu lyrics

Sankshipta Guru Charitre in kannada

Sri Rama Chandirane