Shri Guru Charitre - Chapter 10
ಅಧ್ಯಾಯ ೧೦
||ಹರಿ: ಓಂ ಶ್ರೀ ಗುರುಭೋನಮಃ ||
ಸಿದ್ಧಮುನೀಶ್ವರನೇ | ಗುರುಗಳು ಕುರುವಪುರದಿಂದ ಹೊರಟು ಹೋದರೂ ಸಹಿತ, ಅಲ್ಲಿಯ ಸ್ಥಾನ ಮಹಿಮೆಯು ಹೇಗೆ ಬೆಳೆಯುತ್ತ ಹೋಯಿತು ? ದಯವಿಟ್ಟು ನನಗೆ ಹೇಳುವ ಕೃಪೆಮಾಡಬೇಕೆಂದು ಕೇಳಿಕೊಳ್ಳಲು, ಸಿದ್ಧಮುನಿಯು ಈ ರೀತಿಯಾಗಿ ಹೇಳತೊಡಗಿದನು. ನಾಮಧಾರಕಾ ! ಈ ವಿಷಯದಲ್ಲಿ ನಿನಗೆ ಸಂಶಯವು ಬರುವದು ಸ್ವಾಭಾವಿಕವಾಗಿದೆ. ಆದರೆ ಶ್ರೀ ಗುರುವು ಮಹಾಮಹಿಮನು, ವಿಶ್ವವ್ಯಾಪಿಯಾದ ಪೂರ್ಣಬ್ರಹ್ಮಸ್ವರೂಪನು. ಶ್ರೀ ವಿಷ್ಣುವು ಪರಶುರಾಮಾವತಾರದಲ್ಲಿ ಚಿರಂಜೀವಿಯಾಗಿ ಉಳಿದಿದ್ದರೂ ಸಹಿತ, ಆತನ ಮುಂದಿನ ಅವತಾರ ಪುರುಷನೆನಿಸಿದ ಶ್ರೀರಾಮನು ಅಯೋಧ್ಯೆಯಲ್ಲಿ ಜನಿಸಿದನೆಂಬುದನ್ನು ನೀನು ಕೇಳಿಲ್ಲವೇ ? ಇದು ಕೂಡಾ ಹಾಗೇ ! ಶ್ರೀ ಗುರು ಶ್ರೀಪಾದವಲ್ಲಭರು ಪುನರಾವತಾರಕ್ಕಾಗಿ ಅಲ್ಲಿಂದ (ಕುರುಗಡ್ಡೆ) ಅದೃಶ್ಯರಾದರೂ ಸಹಿತ, ತಮ್ಮ ಅಂಶವನ್ನು, ಅಲ್ಲಿ ಶಾಶ್ವತವಾಗಿ ನೆಲೆಗೊಳಿಸಿದ್ದಾರೆ. ಈ ಬಗ್ಗೆ ನಿನಗೆ ಮುಂದೆ ನಡೆದ ಒಂದು ನಿಜ ಘಟನೆಯನ್ನು ಹೇಳುವೆ ಲಕ್ಷ ಗೊಟ್ಟು ಕೇಳು ! ಕಾಶ್ಯಪ ಗೋತ್ರದ ವಲ್ಲಭೇಶನೆಂಬ ಹೆಸರಿನ ಬ್ರಾಹ್ಮ ಣನು ವ್ಯಾಪಾರವನ್ನು ತನ್ನ ಜೀವನೋಪಾಯದ ಸಾಧನವನ್ನಾಗಿ ಮಾಡಕೊಂಡಿದ್ದನು. ಆತನು ಕುರುಗಡ್ಡೆಯ ಶ್ರೀಪಾದ ಶ್ರೀವಲ್ಲಭರ ಯಾತ್ರೆಗೆ ಪ್ರತಿ ವರ್ಷವೂ ತಪ್ಪದೇ ಹೋಗಿ ಸೇವೆ ಮಾಡಿ ಬರುವ ಪದ್ಧತಿಯನ್ನಿಟ್ಟುಕೊಂಡಿದ್ದನು. ಒಂದು ಸಲ ಆತನು ತನ್ನ ಮನಸ್ಸಿನಲ್ಲಿ ಈ ಸಲದ ವ್ಯಾಪಾರದಲ್ಲಿ ಲಾಭವಾದರೆ, ಕುರುಗಡ್ಡೆಯಲ್ಲಿ ಸಹಸ್ರ ಬ್ರಾಹ್ಮಣರಿಗೆ ಇಚ್ಛಾಭೋಜನ ಮಾಡಿಸುವೆ'' ಎಂದು ಸಂಕಲ್ಪ ಮಾಡಿಕೊಂಡಿದ್ದನು.
ಗುರು ಅನುಗ್ರಹದಿಂದ ಆತನಿಗೆ ಅಪೇಕ್ಷೆ ಪಟ್ಟದ್ದಕ್ಕಿಂತ ಹತ್ತು ಪಟ್ಟು ಹೆಚ್ಚಿನ ಲಾಭವು ಆ ವ್ಯಾಪಾರದಲ್ಲಿ ದೊರೆಯಿತು. ಅದರಿಂದ ಹರ್ಷಿತನಾದ ವಲ್ಲಭೇಶನು, ಆ ದುಡ್ಡನ್ನೆಲ್ಲ ಒಂದು ಗಂಟು ಕಟ್ಟಿಕೊಂಡು, ಕುರುಗಡ್ಡೆಗೆ ಕಾಲು ನಡಿಗೆಯಿಂದಲೇ ಹೊರಟನು. (ಆಗಿನ ಕಾಲದಲ್ಲಿ ವಾಹನ ಸೌಕರಗಳಿರಲಿಲ್ಲ) ಈತನು ಸಾಕಷ್ಟು ದುಡ್ಡು ಕಟ್ಟಿಕೊಂಡು ಹೊರಟಿರುವನೆಂಬ ವಿಷಯವು ಕೆಲವು ಜನ ದುಷ್ಕರಿಗೆ ಗೊತ್ತಾಯಿತು. ಅವರು ತಾವೂ ಕುರುಗಡ್ಡೆಗೆ ಹೊರಟವರಂತೆ ಸೋಗು ಹಾಕಿಕೊಂಡು, ವಲ್ಲಭೇಶನೊಂದಿಗೆ ಪ್ರಯಾಣ ಮಾಡತೊಡಗಿದರು. ದಾರಿಯಲ್ಲಿ ಏನಾದರೂ ಉಪಾಯ ಹೂಡಿ, ಆತನಲ್ಲಿದ್ದ ದುಡ್ಡನ್ನು ಅಪಹರಿಸ ಬೇಕೆಂಬುದೇ ಅವರ ಉದ್ದೇಶವಾಗಿತ್ತು, ಸರಳ ಮನಸ್ಸಿನ ವಲ್ಲಭೇಶನಿಗೆ ಇದಾವದೂ ಗೊತ್ತಾಗಿರಲಿಲ್ಲ. ಇವರೂ ನನ್ನಂತೆಯೇ ಶ್ರೀಪಾದವಲ್ಲಭ ಗುರುಗಳ ಭಕ್ತರಾಗಿದ್ದು, ಯಾತ್ರೆಗೆ ಹೊರಟಿದ್ದಾರೆಂದೇ ಆತನು ಭಾವಿಸಿಕೊ೦ಡಿದ್ದನು. ಹೀಗಾಗಿ ಅವರೊಂದಿಗೆ ಸ್ನೇಹದಿಂದ ಪ್ರಯಾಣ ಮಾಡುತಿದ್ದನು. ಒಂದು ರಾತ್ರಿ ಅವರು ಅರಣ್ಯ ಮಧ್ಯದಲ್ಲಿ ವಸತಿ ಮಾಡುವ ಪ್ರಸಂಗ ಬಂದಿತು. ಆ ಪ್ರದೇಶವು ನಿರ್ಜನವಾದದ್ದರಿಂದ ಆ ದುಷ್ಟರ ಯೋಜನೆಗೆ ಅನುಕೂಲವಾಯಿತು, ವಲ್ಲಭೇಶನು ನಿದ್ರಿಸುತ್ತಿರುವಾಗ್ಗೆ ಆ ದುಷ್ಟರು ಆತನ ರುಂಡವನ್ನು ಆಯುಧದಿಂದ ತುಂಡರಿಸಿಬಿಟ್ಟರು. ಹಾಗೂ ಆತನ ಬಳಿಯಲ್ಲಿದ್ದ ಹಣವನ್ನು ತೆಗೆದುಕೊಂಡು ಹೊರಡುವ ಪ್ರಯತ್ನದಲ್ಲಿದ್ದರು. ಆದರೆ ಅಷ್ಟರಲ್ಲಿಯೇ ಭಕ್ತವತ್ಸಲನಾದ ಶ್ರೀಪಾದ ಶ್ರೀವಲ್ಲಭ ಸ್ವಾಮಿಯು, ಜಟಾ ಭಸ್ಮಗಳಿಂದ ಶೋಭಿಸುತ್ತ ತ್ರಿಶೂಲ ಪಾಣಿಯಾಗಿ ಅಲ್ಲಿ ಪ್ರಕಟನಾದನು. ಹಾಗೂ ರುದ್ರ ಶಕ್ತಿಯಿಂದ ಆ ಕಳ್ಳರನ್ನೆಲ್ಲ ತ್ರಿಶೂಲ ದಿ೦ದ ತಿವಿತಿವಿದು ಕೊಲ್ಲತೊಡಗಿದನು. ಇನ್ನು ನಮಗೆ ಉಳಿಗಾಲವಿಲ್ಲವೆಂಬುದನ್ನು ತಿಳಿದುಕೊಂಡ ಒಬ್ಬನು ಮಾತ್ರ ಧಾವಿಸಿ ಬಂದು ಗುರುಗಳ ಕಾಲಿಗೆ ಬಿದ್ದನು. ಹಾಗೂ “ಗುರುವೇ ! ನಾನು ನಿರಪರಾಧಿ ! ಇವರು ಹೀಗೆಮಾಡುವರೆಂದು ನನಗೆ ನಿಜಕ್ಕೂ ಗೊತ್ತಿರಲಿಲ್ಲ, ದಯವಿಟ್ಟು ನನ್ನನ್ನು ಕ್ಷಮಿಸಿರಿ !'' ಎಂದು ಅಂಗಲಾಚಿ ಬೇಡಿಕೊಂಡನು. ಗುರುಗಳು ಆತನು ಸಂಗ ದೋಷದಿಂದ ಕೆಟ್ಟವನೆಂಬುದನ್ನು ಅರಿತುಕೊಂಡರು ಹಾಗೂ ಆತನ ಕೈಯ್ಯಲ್ಲಿ ಭಸ್ಮಕೊಟ್ಟು, ವಲ್ಲಭೇಶನ ರುಂಡ-ಮುಂಡಗಳನ್ನು ಕೂಡಿಸಿ, ಸರ್ವಾಂಗಗಳಿಗೆ ಭಸ್ಮ ಲೇಪಿಸಲು ಆಜ್ಞೆ ಮಾಡಿದರು. ಆತನು ರುಂಡ ಮುಂಡಗಳನ್ನು ಒಂದುಗೂಡಿಸಿದನು. ಗುರ್ವಾಜ್ಞೆಯಂತೆ ವಲ್ಲಭೇಶನ ಮೈಗೆಲ್ಲಾ ಭಸ್ಮ ಲೇಪಿಸುತ್ತ ಹತ್ತಿರದಲ್ಲಿಯೇ ಕುಳಿತುಕೊಂಡನು. ಗುರುಗಳು ತಕ್ಷಣವೇ ಅದೃಶ್ಯರಾದರು. ವಲ್ಲಭೇಶನ ನಿದ್ರೆಯಿಂದೆಚ್ಚತ್ತವನಂತೆ ಎದ್ದು ಕುಳಿತನು. ಕಳ್ಳರೆಲ್ಲ ಹತರಾಗಿ ಬಿದ್ದಿರುವದನ್ನು ಕ೦ಡು ಗಾಬರಿಯಿಂದ ಇದೇನು ಭೀಕರತೆ ?'' ಎಂದು ಜೀವದಿಂದ ಉಳಿದಿದ್ದ ವ್ಯಕ್ತಿಯನ್ನು ಕೇಳಿದನು. ಆ ವ್ಯಕ್ತಿಯು ನಡೆದ ಘಟನೆಯನ್ನೆಲ್ಲ ವಿವರವಾಗಿ ತಿಳಿಸಿದೊಡನೆಯೇ, ಇದು 'ಶ್ರೀಪಾದ ಶ್ರೀವಲ್ಲಭ ಗುರುಗಳದೇ ಚಮತ್ಕಾರ' ಎಂದು ಅರಿತುಕೊಂಡನು. ಗುರುಗಳಲ್ಲಿದ್ದ ಆತನ ಭಕ್ತಿ ವಿಶ್ವಾಸಗಳು ನೂರುಪಟ್ಟು ಹೆಚ್ಚಾದವು. ಸತ್ತು ಬಿದ್ದಿರುವ ಕಳ್ಳರ ಬಳಿಯಲ್ಲಿದ್ದ ತನ್ನ ಹಣವನ್ನು ತೆಗೆದುಕೊಂಡು, ತಡಮಾಡದೇ ಕುರುವಪುರಕ್ಕೆ ಬಂದು ತಲುಪಿದನು, ಅಲ್ಲಿ ವಲ್ಲಭೇಶನು ಆ ಹಣದಿಂದ ನಾಲ್ಕು ಸಾವಿರ ಬ್ರಾಹ್ಮಣರಿಗೆ ಇಚ್ಛಾಭೋಜನ ಮಾಡಿಸಿದನು. ಅಂದ ಮೇಲೆ, ನಾಮಧಾರಕಾ ! ಶ್ರೀಪಾದ ಶ್ರೀವಲ್ಲಭ ಗುರುಗಳು ಇಂದಿಗೂ ಕುರುಗಡ್ಡೆಯಲ್ಲಿ ಗುಪ್ತವಾಗಿ ನೆಲಿಸಿರುವರೆಂಬ ವಿಷಯದಲ್ಲಿ ನೀನು ಸ೦ಶಯವನ್ನೇ ತಳೆಯಬೇಡ'' ಎಂದು ನಾಮಧಾರಕನಿಗೆ ಸಿದ್ಧ ಮುನಿಗಳು ತಿಳಿಸಿದರೆಂಬಲ್ಲಿಗೆ ಸಾರರೂಪ ಶ್ರೀ ಗುರು ಚರಿತ್ರೆಯ ಹತ್ತನೆಯ ಅಧ್ಯಾಯ ಮುಕ್ತಾಯವಾಯಿತು.
Comments
Post a Comment