Shri Guru Charitre - Chapter 11
ಅಧ್ಯಾಯ ೧೧
||ಹರಿ: ಓ೦ ಶ್ರೀ ಗುರುಭ್ಯೋ ನಮಃ ||
ನಾಮಧಾರಕಾ!... ಶ್ರೀಪಾದ ಶ್ರೀವಲ್ಲಭ ಗುರುಗಳ ಆದೇಶದಂತೆ ಅಮರಣ ಪರ್ಯಂತ ಶನಿಪ್ರದೋಷ ಪೂಜೆಮಾಡಿದ ಅಂಬಿಕೆಯು, ಉತ್ತರ ಭಾಗದಲ್ಲಿರುವ ಕರಂಜ ನಗರದಲ್ಲಿ ಬ್ರಾಹ್ಮಣ ಪುತ್ರಿಯಾಗಿ ಜನಿಸಿದಳು ತಂದೆ ತಾಯಿಗಳು ಅವಳಿಗೆ 'ಅಂಬಾ ಭವಾನಿ' ಎಂದು ನಾಮಕರಣ ಮಾಡಿದರು. ಅವಳು ಪ್ರಾಯಕ್ಕೆ ಬಂದ ಕೂಡಲೇ, ಅದೇ ಊರಿನಲ್ಲಿದ್ದ "ಮಾಧವ''ನೆಂಬ ಹೆಸರಿನ ಶಿವಭಕ್ತನಾದ ಬ್ರಾಹ್ಮಣನೊಂದಿಗೆ ಅವಳ ಮದುವೆ ಮಾಡಿದರು. ಶಿವಭಕ್ತರಾದ ದಂಪತಿಗಳಿಬ್ಬರೂ ಸುಖ ಸಂಸಾರ ಮಾಡಿಕೊಂಡಿರಲು, ಕಾಲಾನುಕ್ರಮದಲ್ಲಿ ಶಿವ ಕರುಣಿಯಿಂದ ಅಂಬಾಭವಾನಿಯು ಗರ್ಭಿಣಿಯಾದಳು. ಅವಳಿಗೆ ಉತ್ತಮ ರೀತಿಯ ಬಯಕೆಗಳುಂಟಾಗತೊಡಗಿದವು. ಸದಾ ಬ್ರಹ್ಮ ಜ್ಞಾನದ ಮಾತುಗಳು ಅವಳ ಮುಖದಿಂದ ಹೊರಡತೊಡಗಿದವು.
ನವಮಾಸಗಳು ತುಂಬಲು ಅಂಬಾಭವಾನಿಯು ಪುಷ್ಯ ಶು|| ದ್ವಿತೀಯಾ (x. 1380) ದಿವಸ ಶುಭ ಮುಹೂರ್ತದಲ್ಲಿ ಗಂಡು ಮಗುವನ್ನು ಹೆತ್ತಳು. ಮಗುವು ಭೂಮಿಗೆ ಬಿದ್ದೊಡನೆಯೇ 'ಓಂ' ಎಂದು ಉಚ್ಚರಿಸಿದ್ದನ್ನು ಕೇಳಿ, ಅಲ್ಲಿದವರೆಲ್ಲರೂ ವಿಸ್ಮಯಪಟ್ಟರು. ಜ್ಯೋತಿಷಿಗಳು ಈ ಮಗುವು ಜಗತ್ತಿಗೆ ಗುರುವಾಗಿ ಪೂಜೆಗೊಳ್ಳುವನೆಂದೂ, ನವನಿಧಿ ಅಷ್ಟಸಿದ್ಧಿಗಳು ಇವನ ಸನ್ನಿಧಿಯಲ್ಲಿ ನಿಲ್ಲುವವೆಂದೂ ಭವಿಷ್ಯ ನುಡಿದರು, ಹಾಗೂ ಈತನು ಪ್ರಾಪಂಚಿಕ ಬಂಧನಕ್ಕೊಳಗಾಗದೇ ಭಕ್ತೋದ್ಧಾರಕ್ಕಾಗಿ ಶ್ರಮಿಸುವ ಅವತಾರ ಪುರುಷನೆಂದು ಹೇಳಿದರು. ಮತ್ತು ಆತನ ಚರಣಗಳಿಗೆ ನಮಸ್ಕರಿಸಿ ಹೊರಟು ಹೋದರು. ಹನ್ನೆರಡನೆಯ ದಿವಸದಂದು ಮಗುವಿಗೆ "ನರಹರಿ'' ಎಂದು ನಾಮಕರಣ ಮಾಡಿದರು. ನರಹರಿಯು ಅವತಾರಿಕ ಪುರುಷವೇ ಹೌದೆoಬುದು, ತಂದೆ ತಾಯಿಗಳಿಗೆ ಆತನ ಬಾಲ್ಯದಲ್ಲಿಯೇ ಎಷ್ಟೋ ನಿದರ್ಶನಕ್ಕೆ ಬಂದ ವಿಷಯವಾಗಿತ್ತು.
ಒಂದು ದಿನ ತಾಯಿ ಅಂಬಾಭವಾನಿಯು ಮಗು ನರಹರಿಗೆ ನನ್ನ ಎದೆ ಹಾಲು ಸಾಲದು, ಒಂದು ಹಸುಕೊಳ್ಳಿರಿ!"ಎಂದು ಗಂಡನಿಗೆ ಹೇಳುತ್ತಿದ್ದುದನ್ನು ಬಾಲ ನರಹರಿಯು ಕೇಳಿಸಿಕೊಂಡನು. ತಟ್ಟನೇ ತನ್ನ ತಾಯಿಯ ಎದೆಯ ಮೇಲೆ ಕೈಸೋಂಕಿಸಲು, ಅವಳ ಮೊಲೆಗಳಿಂದ ಧಾರಾಕಾರವಾಗಿ ಹಾಲು ಹರಿಯತೊಡಗಿತು. ತನಗೆ ತಾಯಿಯ ಹಾಲೇ ಸಾಕ೦ಬುದು ಆತನ ಸೂಚನೆಯಾಗಿತ್ತು ಅದನ್ನು ಕ೦ಡ ತಂದೆ-ತಾಯಿ ಗಳು ಆತನ ಪುಟ್ಟಪಾದಗಳನ್ನು ಕಣ್ಣಿಗೊತ್ತಿಕೊಂಡು ಭಕ್ತಿಯಿಂದ ನಮಸ್ಕರಿಸಿದರು. ಬಾಲಕನು ಎರಡು ವರ್ಷದವನಾದರೂ ಆತನ ಬಾಯಿಯಿಂದ ಮಾತುಗಳೇ ಹೊರಡಲಿಲ್ಲ, ಯಾರಾದರೂ ಮಾತಾಡಿಸಿದರೆ 'ಓಂ' ಎಂದು ಪ್ರಣವವನ್ನಷ್ಟೇ ಉಚ್ಚರಿಸುತ್ತಿದ್ದನು. ಹೀಗೆ ಐದಾರು ವರ್ಷ ಕಳೆ ದವು, ಈ ಮಗನು ಮೂಕನಾಗಿ ಹುಟ್ಟಿದನೆಂದು ತಂದೆ-ತಾಯಿಗಳು ಚಿಂತೆಗೀಡಾದರು, ಈ ಮಗುವಿಗೆ ಮಾತು ಬರಲು ಏನು ಮಾಡಬೇಕೆಂದು ಜ್ಯೋತಿಷಿಗಳಲ್ಲಿ ವಿಚಾರಿಸಿದರು. ಅವರು ರವಿವಾರ ದಿವಸ ಅರಳೆಯ ಎಲೆಯಲ್ಲಿ ಅನ್ನ ಉಣಿಸಿರಿ ಎಂದು ಸಲಹೆ ನೀಡಿದರು. ಇನ್ನೊಬ್ಬರು ಕುಲದೇವರ ಆರಾಧನೆ ಮಾಡಿರೆಂದು ಹೇಳಿದರು. ಆದರೆ ಅವರು ಹೇಳಿದನ್ನೆಲ್ಲ ಮಾಡಿದರೂ ನರಹರಿಯು ಮಾತನ್ನಾಡಲಿಲ್ಲ. ಅದಕ್ಕೆ ಪ್ರತಿಯಾಗಿ ತ೦ದೆಯ ಕೊರಳಲ್ಲಿದ್ದ ಜನಿವಾರ ತೋರಿಸಿ, ತನ್ನ ಉಪನಯನ ಮಾಡಿದಾಗ ತಾನೂ ಮಾತಾಡುತ್ತೇನೆಂಬ ಅರ್ಥ ಬರುವಂತೆ ಸನ್ನೆ ಮಾಡಿ ತೋರಿಸಿ, ತಾಯಿಯ ಕಣ್ಣೀರೊರಿಸಿದನು. ಅದನ್ನು ನೋಡಿ ತಂದೆ-ತಾಯಿಗಳಿಗೆ ಅತ್ಯಾನಂದವಾಯಿತು. ಆದರೂ ಮೂಕನಾದ ಈತನಿಗೆ ಮುಂಜಿವೆ ಮಾಡುವದು ಹೇಗೆ ? ಇವನಿಗೆ ಗಾಯತ್ರೀ ಮಂತ್ರೋಪದೇಶ ಮಾಡುವದಾದರೂ ಹೇಗೆ ?'' ಇವನು ನಮ್ಮ ಮುಪ್ಪಿನ ಕಾಲದಲ್ಲಿ ನಮ್ಮನ್ನು ಸಂರಕ್ಷಿಸುವನಾದರೂ ಹೇಗೆ ?'' ಎಂದು ತಂದೆ-ತಾಯಿಗಳು ತಮ್ಮ ತಮ್ಮಲ್ಲಿ ಮಾತಾಡಿಕೊಳ್ಳುತ್ತಿರುವದನ್ನು ನರಹರಿಯು ಆಸಕ್ತಿಯಿಂದ ಆಲಿಸಿದನು.
ಅಲ್ಲಿಯೇ ಸಮೀಪದಲ್ಲಿದ್ದ ಕಬ್ಬಿಣದ ಹಾರಿಯೊಂದನ್ನು ಕೈಗೆತ್ತಿಕೊಂಡನು. ತಕ್ಷಣವೇ ಅದು ಬಂಗಾರವಾಯಿತು, ಅದನ್ನು ತಾಯಿಯ ಕೈಗೆ ಕೊಟ್ಟನು. ತಂದೆ ತಾಯಿಗಳಿಗೆ ಅದನ್ನು ನೋಡಿ ಆಶ್ಚರ್ಯಾನಂದಗಳು ಏಕಕಾಲಕ್ಕೆ ಉದ್ಭವವಾದವು, ಕುತೂಹಲದಿಂದ ಇನ್ನೊಂದು ಕಬ್ಬಿಣದ ತುಂಡನ್ನು ಆತನ ಕೈಗಿತ್ತರು, ಅದೂ ಬಂಗಾರವಾಯಿತು. ಇವನು ಅವತಾರಿಕ ಪುರುಷನೇ ಹೊರತು, ಮನುಷ್ಯ ಮಾತ್ರನಲ್ಲವೆ೦ಬುದು ತಂದೆ ತಾಯಿಗಳಿಗೆ ಖಚಿತವಾಯಿತು. ಇನ್ನು ತಡ ಮಾಡುವದು ಬೇಡವೆಂದು ಯೋಚಿಸಿ, ವೇದ ವಿದ್ಯಾ ನಿಪುಣರಾದ ಬ್ರಾಹ್ಮಣೋತ್ರಮರಿಂದ ಕುಮಾರನ ಉಪನಯನಕ್ಕಾಗಿ ಒಂದು ಶುಭ ಮುಹೂರ್ತವನ್ನು ತೆಗಿಸಿದರು. ತಂದೆಯು ಅದ್ಧೂರಿಯಾಗಿ ಮಗನ ಮುಂಜಿವೆ ಮಾಡುವ ಸಿದ್ಧತೆ ನಡಿಸಿದನು. ಅದನ್ನು ನೋಡಿ, ''ಮೂಕ ಹುಡುಗನ ಮುಂಜಿವೆಗಾಗಿ ಇಷ್ಟೊಂದು ಸಂಭ್ರಮವೇಕೆ ? ಎಂದು ಕೆಲವು ಕುಶಿತ ಬುದ್ಧಿಯ ಜನರು ಹಿಂದುಮುಂದು ಆಡಿಕೊಂಡು
ನಗುತ್ತಿದ್ದರು. ಆದರೆ ಮಾಧವನು ಅಂಥವರ ಮಾತುಗಳಿಗೆ ಲಕ್ಷವೀಯದೇ ಸಿದ್ಧತೆ ನಡಿಸಿದನು ಉಪನಯನದ ದಿನದಂದು ಎಲ್ಲಾ ವಿಧಿಗಳೂ ಯಥಾಸಾಂಗವಾದವು. ವಟುವಿಗೆ ಮಂತ್ರಪೂರ್ವಕವಾಗಿ ಯಜ್ಯೋಪವೀತವನ್ನು ಧಾರಣ ಮಾಡಿಸಿದರು. ತಂದೆ ಉಪದೇಶಿಸಿದ ಗಾಯತ್ರೀ ಮಂತ್ರವನ್ನು ನರಹರಿಯು ಮನಸ್ಸಿನಲ್ಲಿಯೇ ಸ್ಮರಿಸಿದನು. ನಂತರ ಅಂಬಾಭವಾನಿಯು ಮಾತೃಭಿಕ್ಷೆ ಹಾಕಿ, ಭಿಕ್ಷಾವೃತ್ತಿಯಿಂದ ವೇದಗಳನ್ನು ಅಭ್ಯಾಸ ಮಾಡುತ್ತ ಧರ್ಮದಂತೆ ನಡೆ!'' ಎಂದು ಪದ್ಧತಿಯಂತೆ ಹೇಳಿದಾಗ ನರಹರಿಯು ಆಶ್ಚರ್ಯಕರವೆನಿಸುವಂತೆ, ಋಗ್ವೇದವನ್ನು ಉಚ್ಚಾರ ಮಾಡತೊಡಗಿದನು, ಅವಳು ಎರಡನೆಯ ಸಲ ಭಿಕ್ಷೆ ಹಾಕಿದಾಗ ಯಜುರ್ವೇದವನ್ನೂ, ಮೂರನೇ ಸಲದ ಭಿಕ್ಷೆಗೆ ಸಾಮವೇದವನ್ನೂ ಪಠಿಸಿದನು. ಕೂಡಿದ ಜನರು ಆತನು ಅಸ್ಖಲಿತವಾಗಿ ವೇದ ಪಠಿಸುವದನ್ನು ಕ೦ಡು ಮೂಕ ವಿಸ್ಮಿತರಾಗಿ ನಿಂತುಬಿಟ್ಟರು.
ನಂತರ ನರಹರಿಯು ತಾಯಿಯನ್ನು ಕುರಿತು ಅಮ್ಮಾ ನೀನು ನನಗೆ ಭಿಕ್ಷಾಟನೆಯಿಂದ ವೇದಾಭ್ಯಾಸ ಮಾಡುತ್ತ ಧರ್ಮದಂತೆ ಸಾಗು'' ಎಂದು ಆಜ್ಞೆ ಮಾಡಿರುವಿ ನಿನ್ನ ಮಾತನ್ನು ನಾನು ಎಂದಿಗೂ ಮೀರಿ ನಡೆಯಲಾರೆ. ನನಗೆ ತೀರ್ಥಯಾತ್ರೆ ಹೋಗಲು ಅನುಮತಿ ನೀಡು " ಎಂದು ಕೇಳಿಕೊಂಡನು.
ಮಗನ ಮಾತನ್ನು ಕೇಳಿ ತಂದೆ-ತಾಯಿಗಳು ಕಕ್ಕಾವಿಕ್ಕಿಯಾದರು. ಅವರ ಕಣ್ಣುಗಳಿಂದ ಜಲಧಾರ ಸುರಿಯತೊಡಗಿತು. ತಾಯಿ ಅಂಬಿಕೆಯು ಮಗನನ್ನಪ್ಪಿ, ರೋದಿಸುತ್ತ 'ಕಂದಾ! ನೀನೀಗ ಹೊರಟು ಹೋದರೆ ನಮ್ಮ ಗತಿಯೇನು ? ಇದುವರೆಗೂ ನೀನು ಮೂಕನಾಗಿಯೇ ಉಳಿದದ್ದರಿಂದ ನಿನ್ನ ಮುದ್ದು ಮಾತುಗಳನ್ನು ಕೇಳಬೇಕೆಂಬ ನಮ್ಮ ಬಯಕೆ ಕೂಡಾ ಸಂತೃಪ್ತಿ ಹೊಂದಿಲ್ಲ, ನಿನ್ನ ಹೊರತಾಗಿ ನಮಗೆ ಬೇರೆ ಮಕ್ಕಳಿಲ್ಲ ಅಂದಮೇಲೆ ನಮಗೆ ಮುಪ್ಪಿನ ಕಾಲದಲ್ಲಿ ಗತಿಯಾರು?' ಎಂದು ಕೇಳಿದಳು. ನರಹರಿಯೂ ತಾಯಿಯನ್ನು ಕುರಿತು "ಅಮ್ಮ ನೀನು ಆ ಬಗ್ಗೆ ಅಷ್ಟು ಚಿಂತೆಬೇಡ,
ಯಾಕೆಂದರೆ ನೀನು ಪೂರ್ವಜನ್ಮದಲ್ಲಿ ಶನಿ ಪ್ರದೋಷ ಪೂಜೆಯಿಂದ ಶಂಕರನನ್ನು ಅರಾಧಿಸಿರುವ ಆ ಫಲದಿಂದಾಗಿ ನಿನಗೆ ನನ್ನ ಹೊರತಾಗಿ ನಾಲ್ಕು ಜನ ಗಂಡು ಮಕ್ಕಳು ಹುಟ್ಟುತ್ತಾರೆ, ಅವರು ವಿಚಾರವಂತರೂ ಧರ್ಮವಂತರೂ ಆಗಿ ನಿಮ್ಮ ಮುಪ್ಪಿನಲ್ಲಿ ಯಾವ ಕುಂದೂ ಬರದಂತೆ ರಕ್ಷಿಸುತಾರೆ, ನಿನ್ನ ಪೂರ್ವತಿಹಾಸವನ್ನು ಸ್ವಲ್ಪ ಸ್ಮರಣೆಗೆ ತಂದುಕೋ !'' ಎಂದು ನುಡಿಯುತ್ತ ತನ್ನ ಹಸ್ತವನ್ನು ಅವಳ ಹಣೆಯ ಮೇಲಿಟ್ಟನು. ಕೂಡಲೇ ಅಂಬಾಭವಾನಿಗೆ ತನ್ನ ಗತ ಜನ್ಮದ ಸ್ಮರಣೆಯುಂಟಾಯಿತು. ಈಗ ತನ್ನ ಹೊಟ್ಟೆಯಿಂದ ಹುಟ್ಟಿದ ನರಹರಿಯು ಸಾಕ್ಷಾತ್ ಶ್ರೀಪಾದ ಗುರುವೇ ಆಗಿದ್ದಾನೆಂಬುದು ಅವಳಿಗೆ ಖಚಿತವಾಯಿತು. ಆದರೂ ತಾಯಿಕರುಳು ತಡೆಯಲಾರದೇ, ''ಅಪ್ಪಾ ನರಹರಿಯ ನೀನು ಗ್ರಹಸ್ಥಾಶ್ರಮವನ್ನು ಮೊದಲು ಸ್ವೀಕರಿಸಿ, ನಂತರ ಸನ್ಯಾಸಾಶ್ರಮ ತೆಗೆದುಕೊಂಡರೆ ಆಗುವದಿಲ್ಲವೇ ?'' ಎಂದು ಪ್ರಶ್ನೆ ಮಾಡಿದಳು, ಅದಕ್ಕೆ ನರಹರಿಯು ತಾಯಿಗೆ ಏನೆಂದು ಉಪದೇಶ ಮಾಡಿದನೆ೦ಬುದನ್ನು ಮುಂದಿನ ಅಧ್ಯಾಯದಲ್ಲಿ ಹೇಳಲಾಗುವದೆಂದು ಸಿದ್ಧಮುನಿಯು ತಿಳಿಸಿದನೆಂಬಲ್ಲಿಗೆ, ಸಾರರೂಪ ಶ್ರೀ ಗುರುಚರಿತ್ರೆಯ ಹನ್ನೊಂದನೆಯ ಅಧ್ಯಾಯ ಮುಕ್ತಾಯವಾಯಿತು.
Comments
Post a Comment