Shri Guru Charitre - Chapter 8
ಅಧ್ಯಾಯ ೮
||ಹರಿ: ಓಂ ಶ್ರೀ ಗುರುಭೋನಮಃ ||
ನಾಮಧಾರಕನೇ ! ಮೂರು ವರ್ಷಗಳ ನಂತರ ಗೋಕರ್ಣದಿಂದ ಹೊರಟ ಶ್ರೀಪಾದ ಶ್ರೀವಲ್ಲಭ ಗುರುಗಳು ಶ್ರೀಶೈಲ, ನಿವೃತ್ತಿ ಸ೦ಗಮಗಳ ಯಾತ್ರೆ ಮುಗಿಸಿಕೊಂಡು ಕುರುವಪುರಕ್ಕೆ (ಈಗಿನ ಕುರುಗಡ್ಡೆಗೆ) ಬಂದರು, ಕುರುವಪುರದಲ್ಲಿ ವೇದ ಶಾಸ್ತ್ರ ಬಲ್ಲ ಪಂಡಿತ ಬ್ರಾಹ್ಮಣನೊಬ್ಬನಿದ್ದನು. ಆತನಿಗೆ ಅಂಬಿಕೆಯೆಂಬ ಹೆಸರಿನ ಸುಶೀಲೆಯಾದ ಹೆ೦ಡತಿಯಿದ್ದಳು. ವ್ರತೋಪವಾಸಗಳನ್ನು ಮಾಡಿದ ಮೇಲೆ ಅವರಿಗೆ ಒಂದು ಗಂಡು ಮಗುವು ಬದುಕಿ ಉಳಿಯಿತು. ಆದರೇನು? ಆ ಮಗನು ವಯಸ್ಸಿಗೆ ಬಂದರೂ ಆತನಿಗೆ ಬುದ್ದಿ ಬೆಳವಣಿಗೆಯಾಗಲೇ ಇಲ್ಲಾ, ತಂದೆಯು ಆತನಿಗೆ ಉಪನಯನ ಮಾಡಿ ವೇದಾಭ್ಯಾಸ ಮಾಡಿಸಲೆತ್ನಿಸಿದನು. ಆದರೆ ಮ೦ದಬುದ್ಧಿಯ ಹುಡುಗನಿಗೆ ಮಂತ್ರಗಳು ಹತ್ತಲಿಲ್ಲ. ತ೦ದೆ, ಹೊಡೆದು ಬಡಿದು ಕಲಿಸುವ ಪ್ರಯತ್ನ ಮಾಡತೊಡಗಿದನು. ಮಗನನ್ನು ಅತಿಯಾಗಿ ದಂಡಿಸುವದನ್ನು ಕಂಡ ಅಂಬಿಕೆಯ ತಾಯ್ಕಾರಳು ವಿಲವಿಲನೇ ಒದ್ದಾಡಿತು. ಅವಳೂ ಪತಿಗೆ ಕೈ ಮುಗಿದು, “ಸ್ವಾಮಿ ! ನೀವು ಹೀಗೆ ಹುಡುಗನನ್ನು ಅತಿಯಾಗಿ ದಂಡಿಸಬೇಡಿ ! ನಮಗೆ ಇರುವವನು ಇವನೊಬ್ಬನೇ ಮಗ. ಒ೦ದು ವೇಳೆ ನೀವು ಈತನಿಗೆ ಹಿಂಸೆ ನೀಡುವ್ದಾದರೆ ನಾನು ನದಿಗೆ ಹಾರಿ ಪ್ರಾಣ ಬಿಡುತ್ತೇನೆ” ಎಂದು ಅಳುತ್ತ ಹೇಳಿದಳು. ಅಂದಿನಿಂದ ತಂದೆಯು ಮಗನಿಗೆ ವಿದ್ಯೆ ಕಲಿಸುವ ಹವ್ಯಾಸವನ್ನೇ ಬಿಟ್ಟುಬಿಟ್ಟನು. ಮುಂದೆ ಸ್ವಲ್ಪ ದಿನಗಳಲ್ಲಿ ಆ ಬ್ರಾಹ್ಮಣನು ಮೃತ ಹೊಂದಿದನು. ವಿದ್ಯಾಹೀನನಾದ ಮಗ, ವಿಧವೆಯಾದ ತಾಯಿ, ಇಬ್ಬರೂ ಬೇರೆ ದಾರಿಗಾಣದೇ ಭಿಕ್ಷಾವೃತ್ತಿಯಿಂದ ಜೀವಿಸತೊಡಗಿದರು. ಒಂದೊಂದು ಸಲ ಭಿಕ್ಷೆಗೆ ಹೋದಾಗ ಹುಡುಗನಿಗೆ ಜನರು ಹೀನಾಯ ಮಾನವಾಗಿ ಕಂಡು ಬೈಯ್ಯುತ್ತಿದ್ದರು. ಹೀಗಾಗಿ ಹುಡುಗನು ಬೇಸತ್ತು ಕೃಷ್ಣಾ ನದಿಯಲ್ಲಿ ಮುಳುಗಿ ಪ್ರಾಣಬಿಡುವ ನಿರ್ಧಾರಕ್ಕೆ ಬಂದನು. ಈ ವಿಷಯ ತಿಳಿದ ತಾಯಿ ಆಂಬಿಕೆಯೂ ಮಗನೊಂದಿಗೆ ತಾನೂ ಕೃಷ್ಣಗೆ ಧುಮುಕಿ ಈ ಜಗತ್ತಿನ ಜಂಜಾಟದಿಂದ ಪಾರಾಗುವ ನಿರ್ಧಾರಕ್ಕೆ ಬಂದಳು. ತಾಯಿ ಮಗ ಇಬ್ಬರೂ ನಡ ಮಟ್ಟದ ನೀರಿನವರೆಗೆ ಕೃಷ್ಣಾ ನದಿಯಲ್ಲಿ ಪ್ರವೇಶ ಮಾಡಿದರು.
ಆದರೆ ಅಲ್ಲಿಗೆ ಸ್ನಾನಾರ್ಥವಾಗಿ ಬಂದಿದ್ದ ಶ್ರೀಪಾದ ಗುರುಗಳು ಅವರನ್ನು ತಡೆದು ನಿಲ್ಲಿಸಿ, ಕಾರಣ ಕೇಳಿದರು. ಅಂಬಿಕೆಯು ಗುರು ಪಾದಗಳಿಗೆರಗಿ, ತನ್ನೆಲ್ಲ ಗೋಳನ್ನು ತೋಡಿಕೊಂಡಳು, ಮತ್ತೂ ಮುಂದಿನ ಜನ್ಮದಲ್ಲಾದರೂ ತನಗೆ ಶ್ರೀಪಾದ ಶ್ರೀವಲ್ಲಭ ಸ್ವಾಮಿಗಳಂಥ, ವೇದವಿದ್ಯಾಪಾರಂಗತ, ಸುಶೀಲ ಮಗನು ಜನಿಸುವಂತೆ ಆಶೀರ್ವದಿಸಬೇಕೆಂದು ಕೇಳಿಕೊಂಡಳು, ಭಕ್ತ ವತ್ಸಲನಾದ ಗುರುನಾಥನಿಗೆ ಅಂಬಿಕೆಯ ಮೇಲೆ ಕನಿಕರ ಉಂಟಾಯಿತು ಅವಳಿಗೆ ಶನಿವಾರ ಪ್ರದೋಷ ಕಾಲದಲ್ಲಿ ಶಿವನನ್ನು ಪೂಜಿಸಿದರೆ ಮುಂದಿನ ಜನ್ಮದಲ್ಲಿ ನಿನಗೆ ನನ್ನಂಥ ಮಗನೆ ಜನಿಸುತ್ತಾನೆ. ' ಎಂದು ಆಶೀರ್ವದಿಸಿದರು. ಮತ್ತೂ ಆ ಮಂದ ಬುದ್ದಿಯ ಹುಡುಗನ ತಲೆಯ ಮೇಲೆ ತಮ್ಮ ಅಮೃತ ಹಸ್ತವನ್ನಿಟ್ಟರು. ಬಾಲಕನಿಗೆ ಮಿಂಚುತಾಗಿದ೦ತಾಗಿ ಆತನ ಅಜ್ಞಾನನಾಶವಾಗಿ ಹೋಯಿತು. ಕ್ಷಣಮಾತ್ರದಲ್ಲಿ ಅವನು ಮೂರು ವೇದಗಳಲ್ಲಿ ಪಾಂಡಿತ್ಯ ಪಡೆದನು. ಮುಂದೆ ಆತನ ಮದುವೆಯೂ ಆಯಿತು. ಆತನ ಸಂಸಾರವು ಸುಖರೂಪವಾಗಿ ಸಾಗಿತು ಎಂದು ಸಿದ್ಧಮುನಿಯು ನಾಮಧಾರಕನಿಗೆ ತಿಳಿಸಿದನೆಂಬಲ್ಲಿಗೆ ಸಾರರೂಪ ಶ್ರೀ ಗುರು ಚರಿತ್ರೆಯ ೮ನೇ ಅಧ್ಯಾಯ ಮುಗಿಯಿತು.
Comments
Post a Comment