Shri Guru Charitre - Chapter 17
ಅಧ್ಯಾಯ ೧೭
||ಹರಿಃ ಓಂ ಶ್ರೀ ಗುರುಭ್ಯೋ ನಮಃ ||
ನಾಮಧಾರಕಾ ! ವೈಜನಾಥ ದಿಂದ ಹೊರಟ ಗುರುಗಳು ಕೃಷ್ಣಾತೀರದ ಭಿಲ್ಲವಡಿ ಗ್ರಾಮಕ್ಕೆ ಬಂದರು. ಅಲ್ಲಿ ಪಶ್ಚಿಮ ತೀರದಲ್ಲಿರುವ ಔದುಂಬರ ವೃಕ್ಷದ ಕೆಳಗೆ ಕುಳಿತು, ಗುಪ್ತವಾಗಿ ಚಾತುರ್ಮಾಸವನ್ನು ಕಳೆದರು, ಕರವೀರ ಕ್ಷೇತ್ರದಲ್ಲಿ ವೇದ ಪಂಡಿತನಾದ ಒಬ್ಬ ಬ್ರಾಹ್ಮಣನಿಗೆ ಬುದ್ಧಿಮಂದನಾದ ಮಗನು ಹುಟ್ಟಿದ್ದನು. ಆ ತರುಣನು ಎಷ್ಟೇ ಪ್ರಯತ್ನ ಪಟ್ಟರೂ ಆತನಿಗೆ ವಿದ್ಯೆ ಹತ್ತಲಿಲ್ಲ. ಊರ ಜನರೆಲ್ಲ ಆತನಿಗೆ 'ಧಡ್ಡನೆಂದು ನಿಂದಿಸತೊಡಗಿದರು. ತಂದೆ ತಾಯಿಯರೂ ಮರಣವಪ್ಪಿದರು. ಹೀಗಾಗಿ ಆ ವಿದ್ಯಾಹೀನ ತರುಣನು ಜನನಿಂದೆಯಿಂದ ಬೇಸತ್ತು, ಭಿಲ್ಲವಡೀ ಗ್ರಾಮಕ್ಕೆ ಬಂದನು. ಗ್ರಾಮದ ಅಧಿದೇವತೆಯಾದ ಭುವನೇಶ್ವರಿಯ ಮುಂದೆ, ಮೂರು ದಿವಸಗಳವರೆಗೆ ಉಪವಾಸ ಕುಳಿತನು. ಭುವನೇಶ್ವರಿಗೂ ತನ್ನ ಮೇಲೆ ಕೃಪೆ ಹುಟ್ಟಲಿಲ್ಲವೆಂದುಕೊಂಡು, ತನ್ನ ನಾಲಿಗೆಯನ್ನು ಕತ್ತರಿಸಿ ದೇವಿಯ ಪಾದಗಳಿಗರ್ಪಿಸಿದನು ಹಾಗೂ ದೇವಿಯ ಸಾಕ್ಷಾತ್ಕಾರವಾಗದಿದ್ದರೆ, ತನ್ನ ಶಿರಸ್ಸನ್ನೇ ದೇವಿಗರ್ಪಿಸುವ ಸಂಕಲ್ಪ ತೊಟ್ಟು, ನಿಶ್ಚಲವಾಗಿ ಕುಳಿತನು.
ಆತನಿಗೆ ತೂಕಡಿಕೆ ಬಂದಂತಾಗಿ, ದೇವಿಯು ಆತನ ಸ್ವಪ್ನದಲ್ಲಿ ಕಾಣಿಸಿಕೊಂಡಳು ಹಾಗೂ ಆ ಬ್ರಾಹ್ಮಣನನ್ನು ಕುರಿತು, ಬ್ರಹ್ಮಚಾರಿಯೇ! ವಿನಾಕಾರಣ ನನಗೇಕೆ ತೊಂದರೆ ಕೊಡುವಿ? ಕೃಷ್ಣಾನದಿಯ ಆಚೆಯ ದಂಡೆಗಿರುವ ಔದುಂಬರ ವೃಕ್ಷದ ಕೆಳಗೆ ಒಬ್ಬ ಅವತಾರಿ ಪುರುಷ ಕುಳಿತಿದ್ದಾನೆ, ಆತನಿಂದ ನಿನ್ನ ಇಚ್ಛೆ ಪೂರ್ಣಗೊಳ್ಳುವದು. ಅಲ್ಲಿಗೆ ಹೋಗು !' ಎಂದು ಹೇಳಿದಳು. ತಕ್ಷಣವೇ ಆತನು ಎಚ್ಚತ್ತು ಓಡುತ್ತ ಕೃಷ್ಣಾ ನದಿಯನ್ನು ದಾಟಿ ಗುರುಗಳ ಹತ್ತಿರ ಬಂದನು. ಗುರುಗಳ ಪಾದಗಳ ಮೇಲೆ ಬಿದ್ದು ಹೊರಳಾಡಿದನು. ಶ್ರೀ ಗುರುವು ಕರುಣೆಯಿಂದ ಆತನ ತಲೆಯ ಮೇಲೆ ವರದ ಹಸ್ತವನ್ನಿಟ್ಟನು. ತಕ್ಷಣವೇ ಅವನಿಗೆ ದಿವ್ಯಜ್ಞಾನ ಉಂಟಾಯಿತು. ಕತ್ತರಿಸಿದ ಅವನ ನಾಲಿಗೆಯು ಗುರು ಕೃಪೆಯಿಂದ ಮೊದಲಿದ್ದಂತಾಯಿತೆಂಬಲ್ಲಿಗೆ ಸಾರರೂಪ ಶ್ರೀ ಗುರುಚರಿತ್ರೆಯ 17ನೆಯ ಅಧ್ಯಾಯ ಮುಕ್ತಾಯವಾಯಿತು.
Comments
Post a Comment