Shri Guru Charitre - Chapter 12
ಅಧ್ಯಾಯ ೧೨
||ಹರಿಃ ಓಂ ಶ್ರೀ ಗುರುಭ್ಯೋನಮಃ ||
ನಾಮಧಾರಕನೇ ! ನರಹರಿಯು ತನ್ನ ತಾಯಿಯನ್ನು ಕುರಿತು “ಅಮ್ಮಾ! ಗ್ರಹಸ್ಥಾಶ್ರಮದ ನಂತರ ಸನ್ಯಾಸ ಸ್ವೀಕರಿಸಿದರಾಯಿತೆಂದು ಸಮಾಧಾನ ಮಾಡಿಕೊಳ್ಳುವದಕ್ಕೆ, ಈ ಮಾನವ ದೇಹವು ಚಿರಂಜೀವಿಯಾದದ್ದೆಂದು ಭಾವಿಸಿಕೊಂಡಿರುವಿಯಾ? ಈ ದೇಹವು ಹುಟ್ಟುವಾಗಲೇ ಮರಣವನ್ನು ಜೊತೆಯಲ್ಲಿ ಕಟ್ಟಿಕೊಂಡೇ ಬಂದಿರುತ್ತದೆ. ಯಮಧರ್ಮನು ಯಾವನಿಗೆ ಯಾವ ಸಮಯಕ್ಕೆ, ಮೃತ್ಯು ಪಾಶವನ್ನೆಸೆಯುತ್ತಾನೆಂಬುದನ್ನು ತರ್ಕಿಸಲಿಕ್ಕಾಗದು, ಜಗತ್ತಿನಲ್ಲಿರುವ ಜೀವ ರಾಶಿಗಳಲ್ಲಿ ಮಾನವ ಜನ್ಮವು ಬಹು ದುರ್ಲಭವಾದದ್ದು. ದೇವರು ಅನಾಯಾಸವಾಗಿ ಮುಕ್ತಿದಾಯಕವಾದ ನರಜನ್ಮವನ್ನು ನೀಡಿರುವಾಗ, ಕಾಲ ವಿಳಂಬ ಮಾಡದೇ ಅದನ್ನು ಸಾರ್ಥಕಪಡಿಸಿಕೊಳ್ಳುವದೇ ನಮ್ಮ ಗುರಿಯಾಗಬೇಕು ! ಯಾಕೆಂದರೆ ಮನುಷ್ಯನ ಆಯುಷ್ಯವು ತೂತು ಬಿದ್ದ ಕೊಡದಲ್ಲಿಯ ನೀರಿದ್ದಂತೆ. ಅದರಲ್ಲಿಯ ನೀರು ಕ್ಷಣ ಕ್ಷಣಕ್ಕೂ ಕಡಿಮೆಯಾಗುತಲೇ ಹೋಗುತ್ತದೆ. ಈ ಕೊಡವು ಇದೇ ವೇಳೆಗೆ ಬರಿದಾಗುತ್ತದೆಯೆಂಬುದು ಹೇಳಲಿಕ್ಕೆ ಬರುವದಿಲ್ಲ. ದೇಹಕ್ಕೆ ಆಯುಷ್ಯವಿರುವಾಗಲೇ ಬುದ್ಧಿವಂತರಾದವರು ಪುಣ್ಯಸಂಗ್ರಹ ಮಾಡಿಕೊಳ್ಳಬೇಕು. ನೀನು ದಯವಿಟ್ಟು ನನಗೆ ತೀರ್ಥಯಾತ್ರೆಗೆ ಹೊರಡಲು ಅನುಮತಿ ನೀಡು!'' ಎಂದು ವಿವರಿಸಿ ಹೇಳಿದನು.
ಮಗನ ಬಾಯಿಂದ ಹೊರಟ ಆಧ್ಯಾತ್ಮಿಕ ಪ್ರವಚನದಂತಿದ್ದ ಮಾತುಗಳನ್ನು ಕೇಳಿ, ತಾಯಿಯು ಆತನಿಗೆ ನಮಸ್ಕರಿಸಿ ಈ ರೀತಿಯಾಗಿ ಕೇಳಿಕೊಂಡಳು. ಅಪ್ಪಾ!.... ನೀನು ಸಾಮಾನ್ಯ ಮನುಷ್ಯನಲ್ಲಾ ನಮ್ಮ ಗುರುಗಳಾದ ಶ್ರೀಪಾದವಲ್ಲಭನೇ ನೀನಾಗಿರುವಿ! ಅಂದಾಗ ನಿನಗೆ ಹೆಚ್ಚಿಗೆ ಹೇಳುವದೇನಿದೆ ? ನನಗೆ ನಾಲ್ಕು ಜನ ಗಂಡು ಮಕ್ಕಳು ಹುಟ್ಟುವರೆಂದು, ಇದೇ ಈಗ ನೀನು ವರದ ವಾಣಿಯಿಂದ ನುಡಿದಿರುವಿ. ಕೊನೆಯ ಪಕ್ಷ ನನಗೆ ಒಬ್ಬ ಮಗನು ಜನಿಸುವವರೆಗಾದರೂ ನೀನು ನಮ್ಮೊಂದಿಗೆ ಉಳಿದು ನಮಗೆ ಆನಂದವನ್ನುಂಟು ಮಾಡು ! ನನಗೊಬ್ಬ ಮಗನು ಜನಿಸಿದೊಡನೆಯೇ ನಾನು ನಿನಗೆ ತಕರಾರನ್ನೂ ಮಾಡದೇ ತೀರ್ಥಯಾತ್ರೆಗೆ ಹೊರಡಲು ಅನುಮತಿ ನೀಡುವೆ. ನೀನು ಈಗಲೇ ಹೊರಡುವದಾದರೆ ಅನ್ನ ನೀರುಗಳನ್ನು ತ್ಯಜಿಸಿ ಪ್ರಾಣತ್ಯಾಗ ಮಾಡುವೆ'' ಎಂದು ನುಡಿದಳು.
ನರಹರಿಯು ಅವಳ ಮಾತಿಗೆ ಒಪ್ಪಿದನು. "ಅಮ್ಮಾ! ನಾನು ಇನ್ನೂ ಒಂದು ವರ್ಷ ನಿಮ್ಮೊಂದಿಗೆ ಉಳಿದುಕೊಳ್ಳುತ್ತೇನೆ. ಇದೇ ಅವಧಿಯಲ್ಲಿ ನಿನಗೆ ಇಬ್ಬರು ಗಂಡು ಮಕ್ಕಳು ಜನಿಸುವರು. ಅವರ ನಂತರ ನಿನಗೆ ಮತ್ತೆ ಎರಡು ಗಂಡು ಹಾಗೂ ಒಂದು ಹೆಣ್ಣು, ಹೀಗೆ ಒಟ್ಟು ಐದು ಜನ ಮಕ್ಕಳು ಜನಿಸುವರು. ಅವರೆಲ್ಲಾ ವಿದ್ಯಾವಂತರಾಗಿ ನಿಮ್ಮನ್ನು ಯೋಗ್ಯರೀತಿಯಿಂದ ಸಂರಕ್ಷಣೆ ಮಾಡುವರು. ಈ ಬಗ್ಗೆ ನೀನು ಎಳ್ಳಷ್ಟೂ ಚಿಂತಿಸಬೇಡಾ ! ಎ೦ದು ನುಡಿದು, ತ೦ದೆ-ತಾಯಿಗಳ ಜೊತೆಯಲ್ಲಿಯೇ ಉಳಿದನು. ಮುಂದೆ ಕೆಲವೇ ದಿನಗಳಲ್ಲಿ ಅಂಬಿಕೆಯು ಗರ್ಭಧರಿಸಿ ಅವಳಿ-ಜವಳಿ ಗಂಡು ಮಕ್ಕಳನ್ನು ಹೆತ್ತಳು, ನಾಮಕರಣ ಕಾರ್ಯಕ್ರಮವು ಮುಗಿದೊಡನೆಯೇ ನರಹರಿಯು ತಾಯಿ ತಂದೆಯರ ಅಪ್ಪಣೆ ಪಡೆದುಕೊಂಡು, ಕಾಶೀಕ್ಷೇತ್ರಕ್ಕೆ ಹೊರಟನು, ಊರ ಜನರೆಲ್ಲರೂ ನರಹರಿಗೆ ಬಹುಭಕ್ತಿಯಿಂದ ನಮಸ್ಕರಿಸಿ ಆತನನ್ನು ವೈಭವದಿಂದ ಬೀಳ್ಕೊಟ್ಟರು. ಶ್ರೀಕಾಶಿಗೆ ತಲುಪಿದ ನಂತರ ನರಹರಿಯು ಅಲ್ಲಿಯ ಗಂಗಾತೀರದ ದತ್ತ ಘಾಟಿನಲ್ಲಿರುವ ಮಠದಲ್ಲಿ ಅನುಷ್ಟಾನ ಪ್ರಾರಂಭಿಸಿದನು. ಶ್ರೀಕಾಶಿಯಲ್ಲಿ ಅಸಂಖ್ಯಾತರಾದ ಸಾಧು ಸನ್ಯಾಸಿಗಳೂ, ತಪಸ್ವಿಗಳು, ಅವಧೂತರು ವಾಸವಾಗಿದ್ದರು. ಅತೀ ಚಿಕ್ಕ ವಯಸ್ಸಿನಲ್ಲಿರುವ, ತೇಜೋಮೂರ್ತಿಯಾದ ಬ್ರಹ್ಮಚಾರಿಯ ಕಠಿಣ ತಪಸ್ಸನ್ನು ಕ೦ಡು, ಅವರೆಲ್ಲರೂ ಆಶ್ಚರ್ಯಪಟ್ಟರು. ಅವರೆಲ್ಲರೂ ಪ್ರತಿನಿತ್ಯ ನರಹರಿಯ ದರ್ಶನಕ್ಕೆ ಬಂದು, ಕೆಲವೊಂದು ಸಲ ಆತನೊಂದಿಗೆ ವೇದಾಂತ ಚರ್ಚೆ ನಡಿಸುತ್ತಿದ್ದರು, ಹಾಗೂ ಆತನ ಅಮೃತಮಯವಾದ ಅನುಭವೋಕ್ತಿಗಳಿ೦ದ ಸ೦ತುಷ್ಟರಾಗುತ್ತಿದ್ದರು. ಅವರಲ್ಲಿ 'ಕೃಷ್ಣ ಸರಸ್ವತಿ' ಎಂಬ ವೃದ್ಧ ಸನ್ಯಾಸಿಯೊಬ್ಬರಿದ್ದರು. ಅವರು ನರಹರಿಯ ಲಕ್ಷಣಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ, 'ಈ ಬ್ರಹ್ಮಚಾರಿಯು, ಲೋಕೋದ್ಧಾರಕ್ಕಾಗಿ ಅವತರಿಸಿ ಬಂದ ಶ್ರೀಮನ್ ನಾರಾಯಣನಾಗಿದ್ದಾನೆಯೇ ಹೊರತು, ಬೇರಾರೂ ಅಲ್ಲ'' ಎಂದು ಅಭಿಪ್ರಾಯಪಟ್ಟರು. ಕೂಡಲೇ ಎಲ್ಲ ತಪಸ್ವಿಗಳೂ ಕೃಷ್ಣ ಸರಸ್ವತಿಯತಿಗಳ ನೇತೃತ್ವದಲ್ಲಿ ನರಹರಿಯ ಬಳಿಗೆ ಬಂದು, ““ಅಯ್ಯಾ ಬಾಲ ತಪಸ್ವಿಯೇ ! ನೀನು ಹೀಗೆ ಕೇವಲ ಬ್ರಹ್ಮಚಾರಿಯಾಗಿ ತಪವನ್ನಾಚರಿಸುತ್ತ ಕುಳಿತರೆ, ಸನ್ಯಾಸಿಗಳಾದ ನಮಗೆ ಏನೂ ಪ್ರಯೋಜನವಾಗಲಾರದು. ನೀನು ಲೋಕೋದ್ಧಾರಕ್ಕಾಗಿ ಅವತರಿಸಿ ಬಂದಿರುವ ಗುರುವಾಗಿರುವಿ, ಅ೦ದ ಮೇಲೆ, ನೀನು ಸನ್ಯಾಸಾಶ್ರಮವನ್ನು ದೀಕ್ಷಾಬದ್ಧವಾಗಿ ಸ್ವೀಕರಿಸಿ, ನಮ್ಮಿಂದ ಪೂಜೆ ಪಡೆಯಬೇಕು!'' ಎಂದು ವಿನಂತಿಸಿಕೊಂಡರು, ಅದಕ್ಕೆ ನರಹರಿಯು ಸಂತೋಷದಿಂದ ಒಪ್ಪಿಕೊಂಡನು. ಶ್ರೀಕೃಷ್ಣ ಸರಸ್ವತೀ ಯತಿಗಳು ನರಹರಿಗೆ ಸನ್ಯಾಸ ದೀಕ್ಷೆಯನ್ನು ಅನುಗ್ರಹಿಸಿ, ಆತನಿಗೆ 'ನರಸಿಂಹ ಸರಸ್ವತಿ' ಎಂಬ ಅಭಿದಾನವನ್ನಿಟ್ಟರು. ನೆರೆದ ಸಾಧು ಸಂತರೆಲ್ಲರೂ ನರಸಿಂಹ ಸರಸ್ವತೀ'' ಯತಿಗಳಿಗೆ ಜಯಜಯಕಾರ ಮಾಡಿ, ಆನಂದದಿಂದ ಅವರ ಪಾದಪೂಜೆ ಮಾಡಿ ಕೃತಾರ್ಥರಾದರು. ದೇವರು ಮನುಷ್ಯ ರೂಪದಿಂದ ಅವತರಿಸಿದಾಗ, ಲೋಕಾರೂಢಿಯಂತೆಯೇ ಆಚರಿಸಬೇಕಾಗುತ್ತದೆ, ಅದಕ್ಕಾಗಿಯೇ ಶ್ರೀರಾಮನು, ವಸಿಷ್ಠ ವಿಶ್ವಾಮಿತ್ರರನ್ನು ಗುರುಗಳೆಂದು ಮಾಡಿಕೊಂಡಂತೆ, ಶ್ರೀ ನರಸಿಂಹ ಸರಸ್ವತಿಯವರು, ಕೃಷ್ಣ ಸರಸ್ವತಿಯವರನ್ನು ಗುರುಗಳನ್ನಾಗಿ ಮಾಡಿಕೊಂಡರು.
ನರಸಿಂಹ ಸರಸ್ವತಿ ಯತಿಗಳು ಚತುರ್ವೇದಗಳ ಅರ್ಥವನ್ನು ಜನರಿಗೆ ಸಮಂಜಸವಾಗಿ ಅರ್ಥವಾಗುವಂತೆ ಬಿಡಿಬಿಡಿಸಿ ಉದಾಹರಣೆಕೊಟ್ಟು ಹೇಳುತ್ತಿದ್ದರು. ಹೀಗಾಗಿ ಸ್ವಲ್ಪ ದಿನಗಳಲ್ಲಿ ಅವರ ಕೀರ್ತಿಯು ಬಹುದೂರದವರೆಗೆ ಹಬ್ಬಿತು, ಕೆಲವು ಜನರು ಅವರನ್ನು ತಮ್ಮ ಗುರುಗಳನ್ನಾಗಿ ಮಾಡಿಕೊಂಡು ಸೇವೆಯಲ್ಲಿ ನಿರತರಾದರು. ನಂತರ ನರಸಿಂಹ ಸರಸ್ವತಿ ಗುರುಗಳು ತಮ್ಮ ಶಿಷ್ಯರನ್ನು ಸ೦ಗಡ ಕರೆದುಕೊಂಡು ತೀರ್ಥಗಳನ್ನು ಪಾವನಗೊಳಿಸುತ್ತ ಗಂಗಾಸಾಗರಕ್ಕೆ ಬಂದರು. ಅಲ್ಲಿಂದ ಪ್ರಯಾಗಕ್ಕೆ ಬಂದರು, ಪ್ರಯಾಗದಲ್ಲಿ ಮಾಧವನೆಂಬ ಹೆಸರಿನ ಬ್ರಾಹ್ಮಣನಿಗೆ ಸನ್ಯಾಸ ದೀಕ್ಷೆಯನಿತ್ತು ಆತನಿಗೆ “ಮಾಧವ ಸರಸ್ವತಿ' ಎಂದು ನಾಮಕರಣ ಮಾಡಿ ಬ್ರಹ್ಮಪದೇಶವನ್ನಿತ್ತರು. ಶ್ರೀ ಗುರುಗಳಿಂದ ಅನೇಕ ಜನ ಸದ್ಭಕ್ತರು ಸದ್ದತಿಯನ್ನು ಹೊಂದಿದರು. ಸದ್ಗುರುವಿನ ಚರಿತ್ರೆಯು ನಿಜಕ್ಕೂ ಕಾಮಧೇನುವಿನ೦ತಿದೆ ಎಂದು ಸಿದ್ಧಮುನಿಗಳು ನಾಮಧಾರಕನಿಗೆ ಹೇಳಿದರೆಂಬಲ್ಲಿಗೆ ಸಾರರೂಪ ಶ್ರೀಗುರು ಚರಿತ್ರೆಯ ಹನ್ನೆರಡನೆಯ ಅಧ್ಯಾಯ ಮುಕ್ತಾಯವಾಯಿತು.
Comments
Post a Comment