Shri Guru Charitre - Chapter 6
ಅಧ್ಯಾಯ ೬
||ಹರಿಃ ಓಂ ಶ್ರೀ ಗುರುಭೋನಮಃ ||
ನಾಮಧಾರಕನೇ ಕೇಳು ! ತೀರ್ಥಯಾತ್ರೆಯ ನೆಪದಿಂದ ಭಕ್ತೋದ್ದಾರಕ್ಕೆ ಹೊರಟ ಶ್ರೀಪಾದ ಸ್ವಾಮಿಯು ಗೋಕರ್ಣ ಕ್ಷೇತ್ರದಲ್ಲಿ ಮೂರು ವರ್ಷಗಳ ದೀರ್ಘಕಾಲ ನಿಲ್ಲಲು ಕಾರಣವೇನೆಂದರೆ, ಅಲ್ಲಿರುವ ಮಹಾಬಲೇಶ್ವರನು ಶುದ್ಧ ನಿರ್ಗುಣ ಸ್ವರೂಪನಾಗಿರುವನು. ಮಹಾಶಿವಭಕ್ತನಾದ ರಾವಣನು ತನ್ನ ತಾಯಿ ಕೈಕಸೆಯ ಪೂಜೆಗಾಗಿ ಆತ್ಮಲಿಂಗ ಪಡೆಯುವದಕ್ಕಾಗಿ ಕಠಿಣ ತಪಸ್ಸು ಮಾಡಿದನು. ಆತನು ಶಿವನನ್ನು ಮೆಚ್ಚಿಸಿ ಆತನ ಆತ್ಮಲಿಂಗ ಪಡೆದುಕೊಂಡು ಹೊರಟಿರುವಾಗ, ಶ್ರೀ ಹರಿಯ ಸಂಜ್ಞೆಯಂತೆ, ಗಣಪತಿಯು ವಿಘ್ನವನ್ನೆಸಗಲು ವಟು ವೇಷದಲ್ಲಿ ಆತನಿಗೆ ಕಾಣಿಸಿಕೊಂಡನು, ಆಗ ಸಂಧ್ಯಾ ಸಮಯವಾದ್ದರಿಂದ ಸೂರ್ಯನಿಗೆ ಅರ್ಘ್ಯ ಕೊಡುವದಕ್ಕಾಗಿ ರಾವಣನು ಲಿಂಗವನ್ನು ಅ ಬಾಲಕನ ಕೈಗಿತ್ತನು.
ರಾವಣನು ಅರ್ಘ್ಯ ಕೊಡುವ ಕಾರ್ಯದಲ್ಲಿ ನಿರತನಾದಾಗ, ಗಣಪತಿಯು''ಅಯ್ಯಾ! ಈ ಲಿಂಗ ತುಂಬಾ ಭಾರವಾಗಿದೆ ಬೇಗ ಬಾ!'' ಎಂದು ಮೂರು ಸಲ ಕೂಗಿ ಪ್ರಾಣಲಿಂಗವನ್ನು ನೆಲಕ್ಕಿಟ್ಟು ಬಿಟ್ಟನು. ಕೂಡಲೇ ಲಿಂಗವು ಬೃಹದಾಕಾರ ತಾಳಿ ಭೂಮಿಯಲ್ಲಿ ಸ್ಥಾಪಿತವಾಯಿತು. ರಾವಣನು ಅವಸರದಿಂದ ಓಡಿ ಬಂದು ಆ ಲಿಂಗವನ್ನು ಎತ್ತಿಕೊಳ್ಳಲು ಪ್ರಯಾಸಪಟ್ಟನು. ಆದರೆ ಸಾಧ್ಯವಾಗಲಿಲ್ಲ, ಆತ್ಮಲಿಂಗವು ಮಹಾಬಲಶಾಲಿಯಾದದ್ದರಿಂದ, ಆ ಲಿಂಗಕ್ಕೆ ಮಹಾಬಲೇಶ್ವರನೆಂದು ಹೆಸರಾಯಿತು. ರಾವಣನು ಪ್ರಾಣಲಿಂಗವನ್ನೆತ್ತಲೆಂದು ಜಗ್ಗಾಡಿದಾಗ ಅದು ಆಕಳ ಕಿವಿಯಂತೆ ರೂಪ ತಾಳಿತು, ಅದಕ್ಕಾಗಿಯೇ ಈ ಪ್ರದೇಶಕ್ಕೆ ಗೋಕರ್ಣ ಕ್ಷೇತ್ರವೆಂದು ಹೆಸರಾಯಿತೆಂದು ಸಿದ್ಧಮುನಿಯು ನಾಮಧಾರಕನಿಗೆ ತಿಳಿಸಿದನೆಂಬಲ್ಲಿಗೆ ಸಾರರೂಪ ಶ್ರೀ ಗುರು ಚರಿತ್ರೆಯ 6ನೇ ಅಧ್ಯಾಯ ಮುಗಿಯಿತು.
Comments
Post a Comment