Shri Guru Charitre - Chapter 28

 

ಶ್ರೀ ಗುರು ಚರಿತ್ರೆ


ಅಧ್ಯಾಯ ೨೮

||ಹರಿಃ ಓಂ ಶ್ರೀ ಗುರುಭ್ಯೋ ನಮಃ || 

ಸಿದ್ಧಮುನಿಯು ಗುರುಚರಿತ್ರೆಯನ್ನು ಮುಂದುವರಿಸುತ್ತ ನಾಮಧಾರಕಾ ! ಗುರು ಮಹಿಮೆಯಿಂದ ಹಿಂದಿನ ಏಳು ಜನ್ಮಗಳ ಜ್ಞಾನಹೊಂದಿದ್ದ ಆ ಪತಿತನು ಗುರುಗಳನ್ನು ಕುರಿತು. “ಭಗವಾನ್ ! ಮೊದಲು ನಾನು ಬ್ರಾಹ್ಮಣ ಜಾತಿಯಲ್ಲಿದ್ದವನು, ಈ ಹೀನವಾದ ಚಾಂಡಾಲ ಕುಲದಲ್ಲಿ ಜನಿಸಿದ್ದೇಕೆ ?'' ಎಂದು ಪ್ರಶ್ನೆ ಮಾಡಿದನು. ಅದಕ್ಕೆ ಗುರುಗಳು ಜೀವಿಗಳಿಗೆ ಕರ್ಮಾನುಸಾರವಾಗಿ ಉಚ್ಚ, ನೀಚ, ಜನ್ಮಗಳನ್ನು ನೀಡುವದು ವಿಧಿ ನಿಯಮವಾಗಿದೆ. ನೀನು ಬ್ರಾಹ್ಮಣನಾಗಿದ್ದಾಗ ತಂದೆ-ತಾಯಿ ಗುರುಹಿರಿಯರನ್ನು ಧಿಕ್ಕರಿಸಿ ನಡೆದದ್ದರಿಂದ, ಅಧಃಪತನ ಹೊಂದುತ್ತ ಕೊನೆಗೆ ಈ ಚಾಂಡಾಲ ಜನ್ಮದಲ್ಲಿ ಜನಿಸಬೇಕಾಯಿತು. ಆತ್ಮಸ್ತುತಿ ಮಾಡಿಕೊಳ್ಳುವವನು ಹೃದಯ ರೋಗದಿಂದ ಪೀಡಿತನಾಗುವನು, ತಂದೆ-ತಾಯಿಗಳನ್ನು ತ್ಯಜಿಸಿ, ಹೆಂಡತಿಯೊಂದಿಗೆ ಬೇರೆ ಸಂಸಾರ ಹೂಡಿ ಬಾಳುವ ಸ್ವಾರ್ಥಿಯು ಬೇಡರ ಕುಲದಲ್ಲಿ ಜನಿಸುವನು, ಬ್ರಹ್ಮಹತ್ಯಾ ಮಾಡಿದವನು, ಕ್ಷಯರೋಗದಿಂದ ಬಳಲಬೇಕಾಗುವದು. ಸರ್ಪ ಹಂತಕನು ಹಾವಾಗಿ ಹುಟ್ಟುವನು. ಪುಸ್ತಕ ಕದ್ದವನಿಗೆ ಕುರುಡುತನ ಬರುವದು. ವಸ್ತ್ರಾದಿಗಳನ್ನು ಕದ್ದವನಿಗೆ ಶ್ವೇತ ಕುಷ್ಠ ಆವರಿಸುವದು. ಹೀಗೆ ಪಾಪಕರ್ಮ ಮಾಡಿದವನಿಗೆ ನೀಚ ಜನ್ಮಗಳೂ, ಪುಣ್ಯ ಕರ್ಮ ಮಾಡಿದವನಿಗೆ ಉಚ್ಚ ಜನ್ಮಗಳೂ ದೊರೆಯುವದು ನಿಯಮವಾಗಿದೆ. ಈಗ ನಿನಗೆ ಪಾಪ ಪುಣ್ಯಾದಿ ಕರ್ಮಗಳಿಗೆ ಫಲವೇನಿರುತ್ತದೆ ? ಎಂಬುದರ ಸಂಪೂರ್ಣ ಜ್ಞಾನವಾಗಿದೆ. ಆದ್ದರಿಂದ ನೀನು ಒಂದು ತಿಂಗಳವರೆಗೆ ನಿತ್ಯ ಸಂಗಮದಲ್ಲಿ ಸ್ನಾನ ಮಾಡಿ, ಔದುಂಬರಕ್ಕೆ ನಮಸ್ಕರಿಸು ! ಅ೦ದರೆ ಆ ಪುಣ್ಯಫಲದಿಂದಾಗಿ ಮುಂದಿನ ಜನ್ಮದಲ್ಲಿ ನೀನು ಬ್ರಾಹ್ಮಣನಾಗಿ ಜನಿಸುವಿ !' ಎಂದು ವಿವರಿಸಿ ಹೇಳಿದರು. ಆದರೆ ಆ ವ್ಯಕ್ತಿಯು ಈಗ ನಿಮ್ಮ ಕೃಪೆಯಿಂದ ಬ್ರಾಹ್ಮಣನಾಗಿರುವ ನಾನು, ಮತ್ತೆ ಚಾಂಡಾಲ ಕುಲದಲ್ಲಿ ಸೇರಲಾರೆ; ದಯವಿಟ್ಟು ನನ್ನನ್ನು ಬ್ರಾಹ್ಮಣ ಕುಲದಲ್ಲಿಯೇ ಸೇರಿಸಿಕೊಳ್ಳುವ ಕೃಪೆ ಮಾಡಿರಿ !'' ಎಂದು ಮೊಂಡತನ ಮಾಡತೊಡಗಿದನು. ಅಷ್ಟರಲ್ಲಿ ಪತಿತನು ವೇದ ಉಚ್ಚರಿಸುತ್ತಿರುವನೆಂಬ ವಾರ್ತೆಯು ಆತನ ಮನೆಯವ ರೆಗೂ ತಲುಪಿತ್ತು, ಪತಿತನ ಹೆಂಡತಿಯು ತನ್ನ ನಾಲ್ಕು ಮಕ್ಕಳೊಂದಿಗೆ ಕುತೂಹಲದಿಂದ ಮಠದ ಆವರಣಕ್ಕೆ ಬಂದಳು. ಗುರುಗಳಿಗೆ ದೂರದಿಂದ ನಮಸ್ಕರಿಸಿ ತನ್ನ ಗಂಡನನ್ನು ಸಮೀಪಿಸಲು ಹೋದಳು. ಆದರೆ ಪತಿತನು, “ಹೇ ಹೇ ! ನನ್ನನ್ನು ಮುಟ್ಟಬೇಡಾ ! ನಾನು ಬ್ರಾಹ್ಮಣನಿದ್ದೇನೆ !” ಎಂದ ಅವಳನ್ನು ದೂರ ಸರಿಸಿದನು. ಪತಿತನ ಹೆಂಡತಿಯು ಅಳುತ್ತ ಸ್ವಾಮೀ ! ಈತನು ಹೀಗೆ ನಮ್ಮನ್ನು ನಡುನೀರಿನಲ್ಲಿ ಬಿಟ್ಟರೆ ನಮ್ಮ ಗತಿಯೇನು ? ದಯವಿಟ್ಟು ಈತನಿಗೆ ಬುದ್ದಿ ಹೇಳಿ ನನ್ನೊಂದಿಗೆ ಕಳಿಸಿಕೊಡಿರಿ!”. ಎಂದು ಗುರುಗಳಲ್ಲಿ ಪ್ರಾರ್ಥಿಸಿಕೊಂಡಳು, ಆಗ ಗುರುಗಳು ಒಬ್ಬ  ಬ್ರಾಹ್ಮಣನಿಂದ ಒಂದು ಕೊಡ ನೀರು ತರಿಸಿ, ಆ ಪತಿತನಿಗೆ ಸ್ನಾನ ಮಾಡಿಸಲು ತಿಳಿಸಿದರು, ಬ್ರಾಹ್ಮಣನು ಅದರಂತೆ ಮಾಡಿದಾಗ ಪತಿತನ ಮೈಗೆ ಅಂಟಿಕೊಂಡಿದ್ದ ಅಭಿಮಂತ್ರಿತ ಭಸ್ಮವೆಲ್ಲಾ ತೊಳೆದು ಹೋಯಿತು. ಅದರೊಂದಿಗೆ ಆತನಿಗೆ ಉಂಟಾಗಿದ್ದ ಜ್ಞಾನವೂ ಹೊರಟುಹೋಯಿತು. ಆಗ ಪತಿತನು ಯಾವ ತಕರಾರನ್ನೂ ಮಾಡದೇ, ತನ್ನ ಹೆಂಡತಿ ಮಕ್ಕಳನ್ನು ಕರೆದುಕೊಂಡು, ಆನಂದದಿಂದ ಮನೆಗೆ ಹೋದನೆಂಬಲ್ಲಿಗೆ ಸಾರರೂಪ ಶ್ರೀ ಗುರು ಚರಿತ್ರೆಯ ಇಪ್ಪತ್ತೆಂಟನೆಯ ಅಧ್ಯಾಯ ಮುಕ್ತಾಯವಾಯಿತು.

Comments

Popular posts from this blog

Hanumane Tandeyu Hanumane Thayiyu lyrics

Sankshipta Guru Charitre in kannada

Sri Rama Chandirane