Shri Guru Charitre - Chapter 33
ಅಧ್ಯಾಯ ೩೩
||ಹರಿಃ ಓಂ ಶ್ರೀ ಗುರುಭ್ಯೋ ನಮಃ ||
ನಾಮಧಾರಕನೇ ! ಮರು ದಿವಸ ಆ ದಂಪತಿಗಳಿಬ್ಬರೂ ಗುರುಮಠಕ್ಕೆ ಬಂದು, ಗುರುಗಳಿಗೆ ನಮಸ್ಕರಿಸಿ, ಮಾತಾಡುತ್ತ ಕುಳಿತಾಗ, ಸತಿಯು ದೇವಾ ! ನಾನು ಅತೀ ದುಃಖದಲ್ಲಿದ್ದಾಗ ನಿನ್ನೆ ಒಬ್ಬ ಯತಿಗಳು ಬಂದು, ನನಗೆ ಹಿತೋಪದೇಶ ಮಾಡಿ, ಭಸ್ಮರುದ್ರಾಕ್ಷಿಗಳನ್ನು ಕೊಟ್ಟಿದ್ದರು ಎಂದು ಹೇಳಿದಳು. ಆಗ ಗುರುಗಳು ನಸುನಗುತ್ತ “ಹೌದೌದು ! ನಿನಗೆ ಭಸ್ಮ ರುದ್ರಾಕ್ಷಿಗಳನ್ನು ಕೊಟ್ಟ ಯೋಗಿಯೂ ನಾನೇ ಆಗಿದ್ದೇನೆ. ರುದ್ರಾಕ್ಷಿ ಧರಿಸಿದವರು ರುದ್ರ ಸಮಾನರಾಗುತ್ತಾರೆ. ಈ ಬಗ್ಗೆ ನಿಮಗೊಂದು ಕಥೆ ಹೇಳುತ್ತೇನೆ ಕೇಳಿರಿ ! ಕಾಶ್ಮೀರದ ಭದ್ರಸೇನ ರಾಜನಿಗೆ ಸುಧರ್ಮನೆಂಬ ಮಗನಿದ್ದನು, ಮಂತ್ರಿಯ ಮಗನೂ, ಸುಧರ್ಮನೂ, ಜೀವದ ಗೆಳೆಯರಾಗಿದ್ದರು, ಅವರು ಯಾವಾಗಲೂ ರುದ್ರಾಕ್ಷಿಗಳನ್ನು ಧರಿಸುತ್ತಿದ್ದರು. ಇದಕ್ಕೆ ಕಾರಣವೇನೆಂದು ರಾಜನು ಒಮ್ಮೆ ಪರಾಶರ ಋಷಿಗಳನ್ನು ವಿಚಾರಿಸಿದನು. ಪರಾಶರರು ಜ್ಞಾನದೃಷ್ಟಿಯಿಂದ ನೋಡಿ ಹೀಗೆ ಹೇಳಿದರು. ರಾಜಾ ! ಒಬ್ಬ ವೇಶೈಯು ವಿನೋದಕ್ಕಾಗಿ ಒಂದು ಕಪಿ ಹಾಗೂ ಒಂದು ಹುಂಜವನ್ನು ಸಾಕಿದ್ದಳು, ಅವಳು ಅವುಗಳ ಕೊರಳಲ್ಲಿ ರುದ್ರಾಕ್ಷಿಗಳನ್ನು ಕಟ್ಟಿದ್ದಳು, ಒಂದು ದಿವಸ ಶಿವಪುತ್ರನೆಂಬ ಒಬ್ಬ ವೈಶ್ಯನು ಆ ವೇಶೈಯ ಗಿರಾಕಿಯಾಗಿ ಬಂದನು, ಆತನ ಬಳಿಯಲ್ಲಿ ರತ್ನ ಖಚಿತವಾದ ಚಿಕ್ಕದೊಂದು ಶಿವಲಿಂಗವಿತ್ತು ಅದನ್ನು ನೋಡಿದ ಆ ವೇಶ್ಯಯು, ವೈಶ್ಯನಿಗೆ ಈ ರತ್ನಖಚಿತ ಲಿಂಗವನ್ನು ನೀವು ನನಗೆ ಕೊಟ್ಟರೆ, ಮೂರು ದಿನಗಳವರೆಗೆ ನಿಮ್ಮ ಧರ್ಮಪತ್ನಿಯಾಗಿ ಬಾಳುತ್ತೇನೆ.” ಎಂದು ಹೇಳಿದಳು. ವೈಶ್ಯನು ಅವಳ ತೃಪ್ತಿಗಾಗಿ ಲಿಂಗವನ್ನು ಕೊಟ್ಟನು, ವೇಶೈಯು ಆ ಲಿಂಗವನ್ನು, ಕೋತಿ, ಕೋಳಿಗಳಿದ್ದ ತನ್ನ ನಾಟ್ಯ ಮಂದಿರದಲ್ಲಿಟ್ಟು ವೈಶ್ಯನ ಬಳಿಗೆ ಬಂದಳು. ಅವನೊಂದಿಗೆ ಸಹಧರ್ಮಿಣಿಯಂತೆ ನಡೆಯತೊಡಗಿದಳು. ದುರ್ದೈವದಿಂದ ಅದೇ ರಾತ್ರಿ ನಾಟ್ಯಮಂದಿರಕ್ಕೆ ಬೆಂಕಿ ಹತ್ತಿತು. ಕೋಳಿ, ಕೋತಿ, ರತ್ನಲಿಂಗಗಳು ಬೆಂಕಿಯಲ್ಲಿ ಭಸ್ಮವಾದವು. ತನ್ನ ಪ್ರಾಣ ಲಿಂಗವನ್ನು ಕಳೆದುಕೊಂಡದ್ದಕ್ಕಾಗಿ ವೈಶ್ಯನು ಅಗ್ನಿಪ್ರವೇಶ ಮಾಡಿದನು. ಸತಿಯಂತೆ ಬಾಳುವೆನೆಂದು ವಚನ ಕೊಟ್ಟ ವೇಶೈಯು, ಕುಲಸ್ತ್ರೀಯಂತೆ ಆತನೊಂದಿಗೆ ಸಹಗಮನ ಮಾಡಿದಳು. ವೇಶೈಯ ನಿಷ್ಠೆಗೆ ಮೆಚ್ಚಿದ ಶಿವನು ಅವಳಿಗೆ ಪುನರ್ಜನ್ಮ ಕೊಟ್ಟು ಬದುಕಿಸಿದನು. ವೈಶ್ಯನ ವೇಷದಲ್ಲಿ ತಾನೇ ಬಂದು ಅವಳ ನಿಷ್ಠೆ ಪರೀಕ್ಷಿಸಿದ್ದಾಗಿ ಹೇಳಿ, ಅವಳಿಗೆ ಇಚ್ಛಿತ ವರಗಳನ್ನು ಕೊಟ್ಟು ಅದೃಶ್ಯನಾದನು, ಆ ನಾಟ್ಯಮಂದಿರದಲ್ಲಿ ರುದ್ರಾಕ್ಷಿ ಕಟ್ಟಿಸಿಕೊಂಡ ಕೋತಿ ಮತ್ತೂ ಹುಂಜಗಳು ಸತ್ತಿರಲಿಲ್ಲವೇ ? ಆ ಕೋತಿಯೇ ಈಗ ನಿನ್ನ ಮಗ ಸುಧರ್ಮನಾಗಿದ್ದಾನೆ. ಆ ಹುಂಜವೇ ಮಂತ್ರಿಯ ಮಗನು. ಹೀಗಿದೆ ರುದ್ರಾಕ್ಷಿಯನ್ನು ಧರಿಸುವದರ ಮಹತ್ವ !” ಎಂದು ಪರಾಶರರು ರಾಜನಿಗೆ ವಿವರಿಸಿದರೆಂದು, ಸಿದ್ಧಮುನಿಯು ಹೇಳಿದನೆಂಬಲ್ಲಿಗೆ ಸಾರರೂಪ ಶ್ರೀ ಗುರು ಚರಿತ್ರೆಯ 33ನೆಯ ಅಧ್ಯಾಯ ಮುಗಿಯಿತು.
Comments
Post a Comment