Shri Guru Charitre - Chapter 19
ಅಧ್ಯಾಯ ೧೯
||ಹರಿಃ ಓಂ ಶ್ರೀ ಗುರುಭ್ಯೋ ನಮಃ ||
ನಾಮಧಾರಕನೇ ! ಗುರುಗಳು ಸದಾ ಔದುಂಬರ ವೃಕ್ಷದ ಕೆಳಗೇ ಯಾಕೆ ಇರುತ್ತಿದ್ದರೆಂದರೆ, ಔದುಂಬರ ವೃಕ್ಷವು ಶ್ರೇಷ್ಠವಾದದ್ದೆಂದು ವೇದಗಳೂ ಸಹಿತ ವರ್ಣಿಸುತಿವೆ. ಹಿಂದೆ ಶ್ರೀಮನ್ ನಾರಾಯಣನು ಹಿರಣ್ಯ ಕಶ್ಯಪನ ವಧೆಗಾಗಿ ನರಸಿಂಹ ರೂಪವನ್ನು ತಾಳಿದನು. ಆ ರಾಕ್ಷಸನನ್ನು ಉಗುರುಗಳಿಂದ ಹೊಟ್ಟೆ ಹರಿದು ಕೊಂದನು. ಆಗ ಆ ರಾಕ್ಷಸನ ಹೊಟ್ಟೆಯಲ್ಲಿದ್ದ ವಿಷವು ನರಸಿಂಹನ ಉಗುರುಗಳಲ್ಲಿ ಸೇರಿಕೊಂಡು ತಾಪವಾಗತೊಡಗಿತು. ಆ ತಾಪ ನಿವಾರಿ ಸುವದಕ್ಕಾಗಿ ಲಕ್ಷ್ಮೀದೇವಿಯು ಔದುಂಬರ ಫಲಗಳನ್ನು ಆತನ ಉಗುರುಗಳಿಗೆ ಚುಚ್ಚಿದಳು. ಅದರಿಂದಾಗಿ ನರಸಿಂಹನ ತಾಪವು ಶಾಂತವಾಯಿತು. ನರಸಿಂಹನು ಪ್ರಸನ್ನಚಿತ್ತನಾಗಿ ಅಂಥ ಶ್ರೇಷ್ಠ ಫಲ ನೀಡಿದ ಔದುಂಬರದ ವೃಕ್ಷವನ್ನು “ನೀನು ಭೂಲೋಕದ ಕಲ್ಪವೃಕ್ಷವೆನಿಸು !'' ಎಂದು ಆಶೀರ್ವದಿಸಿದನು. ಅದಕ್ಕಾಗಿಯೇ ಗುರುಗಳು ಸದಾ ಔದುಂಬರ ವೃಕ್ಷದಡಿಯಲ್ಲಿ ವಾಸವಾಗಿರುತ್ತಿದ್ದರು.
ಕೃಷ್ಣಾ ಪಂಚಗಂಗಾ ಸಂಗಮದಲ್ಲಿಯ ಔದುಂಬರ ವೃಕ್ಷದಡಿಯಲ್ಲಿ ಗುರುಗಳು ವಾಸ ಮಾಡುತ್ತಿರುವಾಗ್ಗೆ ನಿತ್ಯ ಮಧ್ಯಾಹ್ನ ಅಲ್ಲಿ ಒಂದು ದೊಡ್ಡ ಸಮಾರಂಭವೇ ನಡೆಯುತ್ತಿತ್ತು, ಅರವತ್ನಾಲ್ಕು ಜನ ಯೋಗಿನಿಯರು ಗುರುಗಳಿದ್ದಲ್ಲಿಗೆ ಬಂದು, ನಾನಾತರದ ಪರಿಮಳ ಪುಷ್ಪ ಧೂಪ-ದೀಪಗಳೊಂದಿಗೆ ಅವರನ್ನು ಪೂಜಿಸಿ, ನಂತರ ಗುರುಗಳನ್ನು ಭಿಕ್ಷೆ ಗಾಗಿ ತಮ್ಮ ಸ್ಥಳಕ್ಕೆ ಕರೆದೊಯ್ಯುತ್ತಿದ್ದರು. ನಾನಾತರದ ಪಕ್ವಾನ್ನಗಳಿಂದ ಗುರುಗಳನ್ನು ಸಂತೃಪ್ತಿಪಡಿಸಿ, ಮತ್ತೆ ಕರೆತಂದು ಔದುಂಬರ ವೃಕ್ಷದಡಿಯಲ್ಲಿ ಬಿಟ್ಟು ಹೋಗುತ್ತಿದ್ದರು. ಈ ಕ್ರಮವು ಬಹಳ ದಿನಗಳವರೆಗೆ ನಡೆಯಿತು, ಹೀಗಾಗಿ ಗುರುಗಳು ಅವರವಾಡ ಗ್ರಾಮಕ್ಕೆ ಭಿಕ್ಷೆಗೆ ಹೋಗುವದನ್ನು ನಿಲ್ಲಿಸಿ ಬಿಟ್ಟರು, ಆ ಗ್ರಾಮದ ಜನರಿಗೆ ಈ ಯತಿಗಳು ಒಂದು ಸಮಸ್ಯೆಯಂತಾದರು, “ಈ ಸನ್ಯಾಸಿಯು ಒಂದು ದಿನವಾದರೂ ಊರಲ್ಲಿ ಭಿಕ್ಷೆಗೆ ಬರುವದಿಲ್ಲ. ಊಟವಿಲ್ಲದೇ ಇವರು ಜೀವಿಸುವದಾದರೂ ಹೇಗೆ ?” ಎಂಬುದನ್ನು ಪತ್ತೆ ಹಚ್ಚಬೇಕೆಂದು ಕೆಲವು ಜನರು ಮಧ್ಯಾಹ್ನದ ವೇಳೆಗೆ ಔದಂಬರ ವೃಕ್ಷದತ್ತ ನಡೆದರು, ಆದರೆ ಅಲ್ಲಿ ನಡೆದಿರುವ ಚಮತ್ಕಾರಕ ಪೂಜೆ, ವಾದ್ಯ, ವೈಭವಗಳು ಅವರಿಗೆ ಭೀತಿಯನ್ನುಂಟು ಮಾಡಿದ್ದರಿಂದ ಓಡಿಹೋದರು.
ಔದುಂಬರ ವೃಕ್ಷದ ಸಮೀಪದಲ್ಲಿರುವ ಹೊಲವನ್ನು ಒಬ್ಬ ಅಂಬಿಗರವನು ಕಾಯುತ್ತಿದ್ದನು. ಆತನು ತನ್ನ ಹೊಲದಲ್ಲಿ ಕುಳಿತುಕೊಂಡು, ಒಂದು ಮಧ್ಯಾಹ್ನ 64 ಜನ ಯೋಗಿನಿಯರು ಗುರುಪೂಜೆ ಮಾಡುತ್ತಿರುವದನ್ನು ಕುತೂಹಲದಿಂದ ನೋಡಿದನು. ಪೂಜೆ ಮುಗಿಸಿದ ನಂತರ ಯೋಗಿನಿಯರು ಗುರುಗಳನ್ನು ತಮ್ಮ ಸಂಗಡ ಕರೆದುಕೊಂಡು ಹೊರಟರು. ಹೊಲ ಕಾಯುತಿದ್ದ ಅಂಬಿಗನು ಮೆಲ್ಲನೆ ಎದ್ದು ಕುತೂಹಲದಿಂದ ಅವರನ್ನು ಹಿಂಬಾಲಿಸಿದನು. ಯೋಗಿನಿಯರು ನದಿಯ ಕಡೆಗೆ ಗುರುಗಳನ್ನು ಕರೆದೊಯ್ದರು. ಗುರುಗಳು ನದಿಯಲ್ಲಿ ಕಾಲಿಡುತ್ತಿದ್ದಂತೆಯೇ ನದಿಯು ಇಬ್ಬಾಗವಾಗಿ ಸರಿದು ನಡುವೆ ಮಾರ್ಗ ಉಂಟಾಯಿತು. ಯೋಗಿನಿಯರು ಆ ಮಾರ್ಗದಿಂದ ಗುರುಗಳನ್ನು ಸ್ವಾಗತಿಸುತ್ತ ಕರೆದುಕೊಂಡು ಹೊರಟರು. ಅಂಬಿಗನಿಗೆ ಗುರುಗಳ ಬಗ್ಗೆ ಭಕ್ತಿಯುಂಟಾಯಿತು. ಕುತೂಹಲದಿಂದ ಮುಂದೇನು ನಡೆಯುವದೋ ನೋಡಬೇಕೆಂದು ತಾನೂ ಗುರುಗಳನ್ನನುಸರಿಸಿ ಆ ದಾರಿಯಲ್ಲಿಯೇ ಸಾಗಿದನು, ಎದುರಿಗೆ ಪ್ರಕಾಶಮಾನವಾದ ಅಮರಾವತಿಯನ್ನು ಹೋಲುವ ನಗರವೊಂದು ಅಲ್ಲಿ ಗೋಚರಿಸಿತು. ಯೋಗಿನಿಯರು ಗುರುಗಳನ್ನು ರತ್ನಖಚಿತವಾದ ಸುಖಾಸನದಲ್ಲಿ ಕುಳ್ಳಿರಿಸಿ, ನಾನಾವಿಧ ಪಕ್ವಾನ್ನಗಳಿಂದ ಭೋಜನ ಮಾಡಿಸಿದರು. ಅದನ್ನೆಲ್ಲಾ ಕಣ್ಣಾರೆ ಕಂಡು ಗಂಗಾನುಜನು ಬೆಕ್ಕಸ ಬೆರಗಾಗಿ ಚಿತ್ರದ ಗೊಂಬೆಯಂತೆ ನಿಂತುಬಿಟ್ಟನು. ಗುರುಗಳು ತಿರುಗಿ ಹೊರಟಾಗ ತಟ್ಟನೇ ಗಂಗಾನುಜನ ಮೇಲೆ ಅವರ ದೃಷ್ಟಿ ಬಿದ್ದಿತು. ಅವರು ಚಕಿತರಾಗಿ “ಎಲೋ ! ನೀನೇಕೆ ಇಲ್ಲಿಗೆ ಬಂದೆ ?” ಎಂದು ಪ್ರಶ್ನೆ ಮಾಡಿದರು. ಅಂಬಿಗನು ತಟ್ಟನೆ ಕೈ ಮುಗಿದು, “ಯಾಕೂ ಇಲ್ಲ ಗುರುವೇ ನಿಮ್ಮ ದರ್ಶನಕ್ಕಾಗಿ ಬಂದಿದ್ದೆ'' ಎನ್ನುತ್ತ ಸಾಷ್ಟಾಂಗ ನಮಸ್ಕಾರ ಹಾಕಿದನು. ಹಾಗೂ ಭಕ್ತಿಪುಲಕಿತನಾಗಿ ತಂದೇ ನೀವು ಮನುಷ್ಯರಲ್ಲಾ, ಮನುಷ್ಯರೂಪದಿಂದ ನಮ್ಮಂಥಾ ಪಾಮರರನ್ನು ಉದ್ಧರಿಸುವದಕ್ಕಾಗಿ ಭೂಮಿಗೆ ಬಂದ ಭಗವಂತರಾಗಿದ್ದೀರಿ ! ನನ್ನನ್ನುದ್ಧರಿಸು ತಂದೆ !” ಎಂದು ಸ್ತುತಿಮಾಡುತ್ತ ಮತ್ತೆ ಮತ್ತೆ ನಮಸ್ಕಾರ ಮಾಡತೊಡಗಿದನು. ಗುರುದೇವನು ಸಂಪ್ರೀತನಾಗಿ 'ಗಂಗಾನುಜಾ....! ಇನ್ನು ಮೇಲೆ ನೀನು ಸಿರಿವಂತನಾಗಿ ಸುಖದಿಂದ ಬಾಳುವಿ ! ಆದರೆ ಇಲ್ಲಿ ನೀನು ನೋಡಿದ್ದನ್ನು ಯಾರೆದುರೂ ಹೇಳಬೇಡಾ! ನೀನು ಎಂದು ಈ ವಿಷಯವನ್ನು ಅನ್ಯರೆದುರು ಬಾಯ್ದಿಚ್ಚುವೆಯೋ, ಅಂದೇ ನಿನಗೆ ಮರಣ ಉಂಟಾಗುತ್ತದೆ !'' ಎಂದು ಹೇಳುತ್ತ ಅವನೊಂದಿಗೆ ಔದುಂಬರ ವೃಕ್ಷದಡಿಗೆ ಬಂದರು,
ಶ್ರೀ ಗುರುವಿನ ಅಪ್ಪಣೆ ಪಡೆದು ಹೊರಟ ಆ ಅಂಬಿಗನಿಗೆ ಅಂದೆ ತನ್ನ ಹೊಲದಲ್ಲಿ ಬಂಗಾರದ ನಾಣ್ಯಗಳಿಂದ ತುಂಬಿದ ಪಾತ್ರೆಯೊಂದು ಸಿಕ್ಕಿತು. ಅಂದಿನಿಂದ ಗಂಗಾನುಜನು ಗುರುಗಳ ಪರಮ ಭಕ್ತನಾಗಿ ಅವರ ಸೇವೆ ಮಾಡುತ್ತ ಜ್ಞಾನವಂತನಾದನು, ಒಂದು ದಿನ ಗಂಗಾನುಜನು ಗುರುಗಳ ಪಾದಸೇವೆ ಮಾಡುತ್ತ ಕುಳಿತಿರುವಾಗ್ಗೆ ಗುರುಗಳೇ ಮಾಘಮಾಸದಲ್ಲಿ ಕಾಶೀಯಾತ್ರೆ ಹಾಗೂ ಪ್ರಯಾಗ ಸ್ನಾನಗಳು ಶ್ರೇಯಸ್ಕರಗಳೆದು ಹೇಳುತ್ತಾರೆ, ಆದರೆ ಜಾತಿಹೀನನಾದ ನನಗೆ, ಅಂಥಾ ಭಾಗ್ಯವು ದೊರೆಯುವದಾದರೂ ಹೇಗೆ ?'' ಎಂದು ನಿರಾಸೆಯ ಉಸಿರುಬಿಟ್ಟನು. ಆಗ ಗುರುಗಳು, ಗಂಗಾನುಜನೇ ! ಪಂಚಗಂಗಾ ಕೃಷ್ಣಾ ಸಂಗಮವು ಪ್ರಯಾಗಕ್ಕೆ ಸಮಾನವಾಗಿದೆ. ಅಲ್ಲದೇ ಕೊಲ್ಲಾಪುರವು ದಕ್ಷಿಣ ಕಾಶಿಯೆಂದು ತಿಳಿಯಲ್ಪಡುತ್ತದೆ. ನಿನಗೆ ಕಾಶೀಯಾತ್ರೆ ಮಾಡುವ ಆಸೆಯಿದ್ದರೆ, ಕಣ್ಣು ಮುಚ್ಚಿಕೊಂಡು, ನಾವು ಕುಳಿತಿದ್ದ ಈ ವ್ಯಾಘ್ರಾಜಿನವನ್ನು ಗಟ್ಟಿಯಾಗಿ ಹಿಡಿದುಕೋ !” ಎಂದು ಆಜ್ಞೆ ಮಾಡಿದರು. ಅಂಬಿಗನು ಹಾಗೆ ಮಾಡಿದ ಒಂದು ನಿಮಿಷದಲ್ಲಿಯೇ ಗುರುಗಳು ಅವನಿಗೆ ಕಣ್ಣೆರೆದು ನೋಡಲು ಆಜ್ಞೆ ಮಾಡಿದರು. ಗಂಗಾನುಜನು ಕಣ್ಣಿಟ್ಟು ನೋಡಿದಾಗ, ಅವರು ಪ್ರಯಾಗ ಕ್ಷೇತ್ರದಲ್ಲಿ ಕುಳಿತಿದ್ದರು, ಅಲ್ಲಿ ಸ್ನಾನ ಮುಗಿಸಿಕೊಂಡು, ನಂತರ ಕಾಶೀ ವಿಶ್ವೇಶ್ವರನ ದರ್ಶನ ಪಡೆದುಕೊಂಡು, ಸಾಯಂಕಾಲವಾಗುವಷ್ಟರಲ್ಲಿ ಮತ್ತೆ ಮೊದಲು ತಾವಿದ್ದ ಸ್ಥಳಕ್ಕೆ ಬಂದು ಕುಳಿತಿದ್ದರು. ಗುರುಗಳ ಈ ಅದ್ಭುತ ಲೀಲೆಯನ್ನು ಕಂಡು ಗಂಗಾನುಜನು ಬೆರಗಾಗಿ ಅವರಿಗೆ ದೀರ್ಘದಂಡ ನಮಸ್ಕಾರ ಮಾಡಿದನು.
ನರಸೋಬ ವಾಡಿಯಲ್ಲಿ ಗುರುಗಳ ಲೀಲೆಗಳು ಪ್ರಚಾರವಾಗಿ ಭಕ್ತರ ಕಾಟ ಹೆಚ್ಚಾದದ್ದರಿಂದ ಅಲ್ಲಿಂದ ಭೀಮಾ ತೀರದತ್ತ ಹೊರಡಲುದ್ಯುಕ್ತರಾದರು. ಅರವತ್ನಾಲ್ಕು ಜನ ಯೋಗಿನಿಯರು ಬಂದು, ಗುರುದೇವಾ ! ನಮ್ಮನ್ನಗಲಿ ಹೋಗಬೇಡಿರಿ!” ಎಂದು ಗೋಗರೆಯತೊಡಗಿದರು. ಗುರುಗಳು ಯೋಗಿನಿಯರೇ ! ನಾವು ಇಲ್ಲಿಂದ ಹೊರಟು ಹೋದರೂ, ಈ ಔದುಂಬರ ದಡಿಯಲ್ಲಿ ಸದಾ ನಮ್ಮ ವಾಸ್ತವ್ಯವಿರುತ್ತದೆ. ಇಲ್ಲಿಯ ಪಾದುಕೆಗಳನ್ನು ಪೂಜಿಸುವ ಭಕ್ತರಿಗೆ ಸಹಾಯ ಮಾಡುತ್ತ ನೀವೂ ಇಲ್ಲಿಯೇ ನೆಲೆಗೊಳ್ಳಿರಿ !” ಎಂದು ಆಶೀರ್ವದಿಸಿ ಅವರ ಅನುಮತಿ ಪಡೆದು ಗಾಣಗಾಪುರಕ್ಕೆ ಹೊರಟರೆಂಬಲ್ಲಿಗೆ ಸಾರರೂಪ ಶ್ರೀ ಗುರುಚರಿತ್ರೆಯ ಹತ್ತೊಂಭತ್ತನೆಯ ಅಧ್ಯಾಯ ಮುಕ್ತಾಯವಾಯಿತು.
Comments
Post a Comment