Shri Guru Charitre - Chapter 32

 

ಶ್ರೀ ಗುರು ಚರಿತ್ರೆ

ಅಧ್ಯಾಯ ೩೨

||ಹರಿಃ ಓಂ ಶ್ರೀ ಗುರುಭ್ಯೋ ನಮಃ || 

ಯೋಗಿಯ ಉಪದೇಶದಿಂದ ಸತಿಯ ಮನಸ್ಸು ಸಮಾಧಾನ ಹೊಂದಿತು. ಅವಳು ನಾಲ್ಕೆಂಟು ಆಳುಗಳನ್ನು ಹಿಡಿದು, ನದಿಯ ದಂಡೆಯ ಹತ್ತಿರದ ಸ್ಮಶಾನದಲ್ಲಿ ಚಿತಾ ವ್ಯವಸ್ಥೆ ಮಾಡಿಸಿದಳು. ತಾನು ಸ್ನಾನ ಮಾಡಿ ಪೀತಾಂಬರ ಉಟ್ಟು ಕೊ೦ಡಳು. ಅರಿಷಿಣ ಕುಂಕುಮ ಮಂಗಳಾಭರಣಗಳಿಂದ ಅಲಂಕಾರ ಮಾಡಿಕೊಂಡಳು. ಸಿದಿಗೆ ಕಟ್ಟಿಸಿದಳು. ನಾಲ್ಕೆಂಟು ಜನ ಬ್ರಾಹ್ಮಣರು ಮುಂದೆ ಬಂದು, ಶವವನ್ನು ಸಿದಿಗೆಯ ಮೇಲೇರಿಸಿದರು. ಸತಿಯು ಶವದ ಮುಂಭಾಗದಲ್ಲಿ ತಾನೇ ಅಗ್ನಿಯನ್ನು ಹಿಡಿದುಕೊಂಡು, ನದೀ ತೀರದತ್ತ ಹೊರಟಳು. ಸತಿಯು ಸಹಗಮನ ಹೋಗುವದನ್ನು ನೋಡಲು ಜನರು ತಂಡತಂಡವಾಗಿ ಬೆಂಬತ್ತಿದರು. ಅವಳಿಗೊದಗಿದ ಸ್ಥಿತಿ ಕಂಡು ಮುತ್ತೈದೆಯರು ಮರುಗಿ ಕಣ್ಣೀರಿಟ್ಟರು. ಬ್ರಾಹ್ಮಣರು ಸ್ಮಶಾನದಂಚಿನಲ್ಲಿ ಸಿದಿಗೆಯನ್ನಿಳಿಸಿದರು. ಚಿತೆಗೆ ಸಕಲ ಸಿದ್ಧತೆಗಳೂ ಆಗಿದ್ದವು. ಸತಿಯು ಯೋಗಿಯ ಸಂದೇಶದಂತೆ, ಪತಿಯ ಶವಕ್ಕೆ ಮೈ ತುಂಬಾ ಭಸ್ಮ ಲೇಪಿಸಿದಳು. ಯೋಗಿ ಕೊಟ್ಟ ರುದ್ರಾಕ್ಷಿಗಳಲ್ಲಿ ಎರಡನ್ನು ಶವದ ಕಿವಿಗೆ ಹಾಕಿ, ಎರಡನ್ನು ಕೊರಳಲ್ಲಿ ಕಟ್ಟಿದಳು. ಬ್ರಾಹ್ಮಣರಿಗೆ ದಾನ ದಕ್ಷಿಣೆಗಳನ್ನು ಕೊಟ್ಟಳು. ಮುತ್ತೈದೆಯರಿಗೆ ಉಡಿ ತುಂಬಿ ಅರಿಷಿಣ ಕುಂಕುಮ ದಕ್ಷಿಣೆಗಳನ್ನಿತ್ತು ಅವರಿಂದ ಆಶೀರ್ವಾದ ಪಡೆದುಕೊಂಡಳು. ನಂತರ ನರಸಿಂಹ ಸರಸ್ವತಿಯತಿಗಳ ಆಶೀರ್ವಾದ ಪಡೆದುಕೊಂಡು ಬರುವೆನೆಂದು ತಿಳಿಸಿ, ಸಂಗಮದತ್ತ ನಡೆದಳು ಸಿದಿಗೆ ಹೊತ್ತ ಬ್ರಾಹ್ಮಣರನ್ನುಳಿದು, ಮಿಕ್ಕವರೆಲ್ಲರೂ ಅವಳ ಹಿಂದೆ ಹೊರಟರು ನರಸಿಂಹ ಸರಸ್ವತಿ ಯತಿಗಳು ಔದುಂಬರದಡಿಯಲ್ಲಿ ಆಸೀನರಾಗಿದ್ದರು.

'ದತ್ತಾತ್ರಯಾ ನಮೋ ನಮೋ । ದತ್ತ ದಿಗಂಬರ ನಮೋ ನಮೋ ನಮೋ । ಭಕ್ತವತ್ಸಲಾ ನಮೋ ನಮೋ । ಭಕ್ತೋದ್ಧಾರಕ ನಮೋ ನಮೋ

ಎಂದು ಉಚ್ಚ ಕಂಠದಿಂದ ಸ್ತೋತ್ರ ಮಾಡುತ್ತ ತಮ್ಮ ಕಡೆಗೆ ಬರುತ್ತಿರುವ ಸತಿಯ ಭಕ್ತಿಭಾವವನ್ನು, ಗುರುಗಳು ದೂರದಿಂದಲೇ ನೋಡಿ ಆನಂದಿತರಾದರು. ಅವರ ಮುಖದಲ್ಲಿ ಮಂದಹಾಸ ಮಿನುಗತೊಡಗಿತು. ಸತಿಯು ಗುರುಗಳ ಹತ್ತಿರ ಬಂದು ಧೀರ್ಘದಂಡ ನಮಸ್ಕಾರ ಮಾಡಿದಳು ಗುರುಗಳು ಅವಳು ಮೇಲೇಳುವದಕ್ಕೆ ಮುನ್ನವೇ ಅಷ್ಟ ಪುತ್ರ ಸೌಭಾಗ್ಯವತೀ ಭವ !” ಎಂದು ಆಶೀರ್ವದಿಸಿಬಿಟ್ಟರು. ಅಲ್ಲಿ ನೆರೆದಿದ್ದ ಜನರೆಲ್ಲರೂ ಗೊಳ್ಳನೆ ನಕ್ಕು ಬಿಟ್ಟರು. ನಗೆ ಕಾರಣವೇನೆಂದು ಗುರುಗಳು ವಿಚಾರಿಸಿದಾಗ ಒಬ್ಬ ವ್ಯಕ್ತಿ ಮುಂದೆ ಬಂದು, “ಸ್ವಾಮಿನ್ ! ಇವಳ ಪತಿಯು ಸತ್ತಿದ್ದಾನೆ ಸಹಗಮನಕ್ಕೆ ಸಿದ್ಧತೆ ಮಾಡಿಕೊಂಡ ಇವಳಿಗೆ ನೀವು ಆ ರೀತಿ ಆಶೀರ್ವಾದ ಮಾಡಿದ್ದನ್ನು ಕೇಳಿ ಜನರು ನಕ್ಕರು !” ಎಂದು ತಿಳಿಸಿದನು. ಗುರುಗಳು ಆ ಸಾದ್ವಿಯ ಮೇಲೆ ಕೃಪಾದೃಷ್ಟಿ ಬೀರುತ್ತ ಛೇ ಛೇ ! ಅದು ಹೇಗೆ ಸಾಧ್ಯ ? ಈ ಸಾದ್ವಿಯ ಸೌಭಾಗ್ಯ ಅಸ್ಥಿರವಲ್ಲಾ! ಪತಿವ್ರತೆಯಾದ ಇವಳನ್ನು ಸ್ಪರ್ಶಿಸಲು, ಅಗ್ನಿ ನಾರಾಯಣನು ಅಂಜುತ್ತಾನೆ. ಎಲ್ಲಿ? ಇವಳ ಪತಿಯ ಕಳೇಬರವನ್ನು ತರಿಸಿ ನೋಡೋಣ !'' ಎಂದು ಆಜ್ಞೆ ಮಾಡಿದರು. ಕೂಡಲೇ ನಾಲ್ಕು ಜನ ಬ್ರಾಹ್ಮಣರು ಓಡುತ್ತ ಹೋಗಿ ದತ್ತನ ಶವವಿದ್ದ ಸಿದಿಗೆಯನ್ನು ಹೊತ್ತು ತಂದು ಗುರುಗಳೆದುರು ಇಳಿಸಿದರು. ಗುರುಗಳ ಸೂಚನೆಯಂತೆ ಶವಕ್ಕೆ ಕಟ್ಟಿದ್ದ ಬಂಧನಗಳನ್ನೆಲ್ಲ ಹರಿದರು. ಗುರುಗಳು ಚರಣ ತೀರ್ಥವನ್ನು ಶವಕ್ಕೆ ಪ್ರೋಕ್ಷಿಸಿದರು. ಶ್ರೀ ಗುರುಗಳು ತಮ್ಮ ಅಮೃತ ದೃಷ್ಟಿಯಿಂದ ಶವವನ್ನು ಅವಲೋಕಿಸಿದರು. ತಕ್ಷಣವೇ ಜೀವಸಂಚಾರವಾಗಿ, ದತ್ತನು, ನಿದ್ದೆಯಿಂದೆಚ್ಚತ್ತವರಂತೆ ಎದ್ದು ಕುಳಿತನು. ಕೂಡಿದ ಜನರು ಆನಂದಾಶ್ಚರ್ಯಗಳಿಂದ ಗುರುಗಳಿಗೆ ಜೈ ಜೈ ಕಾರ ಮಾಡಿದರು ! ಸತಿಯು ಆನ೦ದಪರವಶಳಾಗಿ ಗುರು ಚರಣಗಳ ಮೇಲೆ ಹೊರಳಾಡಿ ಬಿಟ್ಟಳು, ಸಜೀವಗೊಂಡ ದತ್ತನು ಅತ್ತಿತ್ತ ನೋಡಿ, ಸತಿಯನ್ನು ಕುರಿತು, ನಾನೀಗ ಎಲ್ಲಿದ್ದೇನೆ ? ಈ ಯತಿಗಳು ಯಾರು ?” ಎಂದು ಪ್ರಶ್ನೆ ಮಾಡಿದನು. ಸತಿಯು ನಡೆದ ಸಂಗತಿಯನ್ನೆಲ್ಲ ದತ್ತನಿಗೆ ವಿವರವಾಗಿ ತಿಳಿಸಿದಳು, ದಂಪತಿಗಳಿಬ್ಬರೂ ಗುರುಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಿ, “ನೀವೇ ನಮ್ಮ ಪಾಲಿನ ಪರಮೇಶ್ವರರು !'' ಎಂದು ಸ್ತುತಿ ಮಾಡಿದರು. ಗುರುಗಳು ಆ ದಂಪತಿಗಳಿಗೆ “ನೀವು ನಿಜವಾಗಿಯೂ ಎಂಟು ಮಕ್ಕಳಿಗೆ ತಂದೆ ತಾಯಿಗಳಾಗಿರಿ!” ಎಂದು ಆಶೀರ್ವದಿಸಿದರು. ಆಗ ಒಬ್ಬ ಕುಚೋದ್ಯ ಬುದ್ಧಿಯ ಬ್ರಾಹ್ಮಣನು, ಗುರುಗಳನ್ನು ಕುರಿತು, 'ಸ್ವಾಮೀ ! ಈ ವ್ಯಕ್ತಿಗೆ ದೈವವಶಾತ್ ಮರಣವೊದಗಿತ್ತು. ಈಗ ಈತನು ಸಜೀವಗೊಂಡನು ! ಅಂದ ಬಳಿಕ, ವಿಧಿಲಿಖಿತವೆಂಬುದು ಸುಳ್ಳೆಂದಂತಾಯಿತಲ್ಲಾ?'' ಎಂದು ಪ್ರಶ್ನೆ ಮಾಡಿದನು. ಗುರುಗಳು ಆ ದುಷ್ಟ ಬುದ್ದಿಯ ಬ್ರಾಹ್ಮಣನತ್ತ ನೋಡಿ “ವಿಧಿ ಲಿಖಿತ ಸುಳ್ಳಲ್ಲಾ; ಆದರೆ ಭಕ್ತ ರಕ್ಷಣೆಗಾಗಿ ನಾವು ಬ್ರಹ್ಮನಿಂದ ಈ ವ್ಯಕ್ತಿಯ ಮುಂದಿನ ಜನ್ಮದ ಮೂವತ್ತು ವರ್ಷಗಳ ಆಯುಷ್ಯವನ್ನು ಕಡವಾಗಿ ಪಡೆದವು !” ಎಂದು ವಿವರಣೆ ನೀಡಿದರು. ಕೂಡಿದ ಜನರು ಗುರುಗಳಿಗೆ ಮತ್ತೊಮ್ಮೆ ಜಯಜೈಕಾರ ಮಾಡಿದರು. ಆ ದಂಪತಿಗಳು ಸಂಗಮದಲ್ಲಿ ಸ್ನಾನ ಮಾಡಿ, ಗುರುಗಳನ್ನು ಬಹು ಭಕ್ತಿಯಿಂದ ಪೂಜಿಸಿದರು. ಬ್ರಾಹ್ಮಣೋತ್ತಮರಿಗೆ ಬಹಳಷ್ಟು ದುಡ್ಡನ್ನು ದಕ್ಷಿಣೆಯಾಗಿ ಕೊಟ್ಟರು. ಸೂರ್ಯಾಸ್ತವಾಗಲು ಗುರುಗಳಿಗೆ ಆರತಿ ಮಾಡಿದರೆಂಬಲ್ಲಿಗೆ ಸಾರರೂಪ ಶ್ರೀ ಗುರುಚರಿತ್ರೆಯ ಮೂವತ್ತೆರಡನೆಯ ಅಧ್ಯಾಯ ಮುಗಿಯಿತು.

Comments

Popular posts from this blog

Hanumane Tandeyu Hanumane Thayiyu lyrics

Sankshipta Guru Charitre in kannada

Sri Rama Chandirane