Shri Guru Charitre - Chapter 2




ಅಧ್ಯಾಯ ೨

||ಹರಿಃ ಓಂ ಶ್ರೀ ಗುರುಭೋನಮಃ || 

ನಾಮಧಾರಕನು ಮಾರ್ಗಾಯಾಸದಿಂದ ಒಂದು ಮರದಡಿಯಲ್ಲಿ ಸ್ವಲ್ಪ ಹೊತ್ತು ಗುರುಧ್ಯಾನ ಮಾಡುತ್ತ ಮಲಗಿದನು. ಜಟಾಧಾರಿಯೂ, ಭಸ್ಮಲೇಪಿತನೂ, ವ್ಯಾಘ್ರಜಿನವನ್ನುಟ್ಟವನೂ ಆದ ಒಬ್ಬ ಯೋಗೀಶ್ವರನು ಆತನ ಸ್ವಪ್ನದಲ್ಲಿ ಕಾಣಿಸಿಕೊಂಡನು. ಆ ಯೋಗಿಯು ಅಮೃತ ಕಟಾಕ್ಷದಿಂದ ನಾಮಧಾರಕನನ್ನು ನೋಡುತ್ತ ಆತನ-ತಲೆಯ ಮೇಲೆ ತನ್ನ ವರದ ಹಸ್ತವನ್ನಿಟ್ಟನು. ತಕ್ಷಣವೇ ನಾಮಧಾರಕನಿಗೆ ಎಚ್ಚರವಾಯ್ತು ಸುತ್ತಲೂ ನೋಡಿದಾಗ ಯಾರೂ ಆತನಿಗೆ ಗೋಚರಿಸಲಿಲ್ಲ. ಸ್ವಪ್ನದಲ್ಲಿ ಕ೦ಡ ಗುರುಮೂರ್ತಿಯನ್ನೇ ಧ್ಯಾನಿಸುತ್ತ ಗಾಣಗಾಪುರದತ್ತ ನಡೆಯತೊಡಗಿದನು. ಸ್ವಲ್ಪ ದೂರ ಸಾಗುವಷ್ಟರಲ್ಲಿಯೇ ಆತನು ಸ್ವಪ್ನದಲ್ಲಿ ಕಂಡ ಯೋಗಿ (ಸಿದ್ಧಮುನಿ)ಯು ಪ್ರತ್ಯಕ್ಷ ಬರುತ್ತಿರುವದು ಗೋಚರಿಸಿತು. ನಾಮಧಾರಕನು ಆನಂದಾಶ್ಚರ್ಯಗಳಿಂದ ಸಿದ್ಧಮುನಿಗೆ ಸಾಷ್ಟಾಂಗ ನಮಸ್ಕಾರ ಮಾಡಿದನು, ಮತ್ತೂ ಆತನನ್ನು ಕುರಿತು, ಯೋಗೀಶ್ವರರೇ! ತಾವು ಯಾರು ? ತಮ್ಮ ವಾಸಸ್ಥಾನವಾವುದು ? ನನ್ನನ್ನು ಉದ್ಧರಿಸುವದಕ್ಕಾಗಿಯೇ ತಾವು ಆಗಮಿಸಿರುವಿರೆಂದು ನನಗೆನಿಸುತ್ತಿದೆ !?” ಎಂದು ಸ್ತುತಿ ಮಾಡಲು, ಸಿದ್ಧಯೋಗಿಯು ಅದಕ್ಕನುಸಾರವಾಗಿ, ಅಪ್ಪಾ! ನಾನು ಸಿದ್ಧಮುನಿಯು, ತೀರ್ಥಯಾತ್ರೆ ಮಾಡುತ್ತ ಸಂಚರಿಸುವದೇ ಯೋಗಿಗಳಾದ ನಮ್ಮ ಕರ್ತವ್ಯ. ತ್ರಿಮೂರ್ತಿಗಳ ಪೂರ್ಣಾವತಾರರೆನಿಸಿದ ನನ್ನ ಪೂಜ್ಯ ಗುರು ನರಸಿಂಹ ಸರಸ್ವತಿಯತಿಗಳು ಭಕ್ತೋದ್ದಾರಕ್ಕಾಗಿ ಇಲ್ಲಿಯೇ ಸಮೀಪದಲ್ಲಿರುವ ಭೀಮಾ, ಅಮರಜಾ ಸಂಗಮದಲ್ಲಿ ನೆಲೆಗೊಂಡಿದ್ದಾರೆ.

ಅವರನ್ನು ನಂಬಿ ಆರಾಧಿಸುವ ಭಕ್ತರು, ಇಹ-ಪರಗಳೆರಡರಲ್ಲಿಯೂ ಸೌಖ್ಯ ಹೊಂದುತ್ತಾರೆ.” ಎಂದು ನುಡಿಯಲು, ನಾಮಧಾರಕನು ಸ್ವಾಮೀ! ನಾನಾದರೂ ವಂಶ ಪಾರಂಪರದಿಂದ ನೃಸಿಂಹ ಸರಸ್ವತಿ ಗುರುಗಳನ್ನೇ ಆರಾಧಿಸುತ್ತ ಬಂದಿದ್ದೇನೆ; ಆದರೂ ನನ್ನ ಕಷ್ಟ-ಕಾರ್ಪಣ್ಯಗಳು ದೂರಾಗದಾಗಿವೆಯಲ್ಲಾ ? ಇದಕ್ಕೆ ಕಾರಣವೇನೆಂದು ಪ್ರಶ್ನೆ ಮಾಡಿದನು.

ಆಗ ಸಿದ್ಧಮುನಿಯು ನಾಮಧಾರಕನನ್ನು ಕುರಿತು, “ನಿನ್ನ ಮನಸ್ಸು ಇನ್ನೂ ನಿಶ್ಚಲವಾಗಿಲ್ಲ. ಯಾಕೆಂದರೆ ನಿಶ್ಚಲ ಮನಸ್ಸಿನಿಂದ ಗುರುಗಳನ್ನು ನಂಬಿದವನಿಗೆ ಗುರು ಕೃಪೆಯಾಗಿಯೇ ತೀರುತ್ತದೆ. ಗುರು ಕೃಪೆ ಹೊಂದಿದವನನ್ನು ಕಷ್ಟ-ಕಾರ್ಪಣ್ಯಗಳಷ್ಟೇ ಏಕೆ? ಯಮನೂ ಸಹಿತ ಬಾಧಿಸಲಾರನು. ಗುರು ದೇವನು ಹರಿ-ಹರ, ಬ್ರಹ್ಮಾದಿಗಳಿಗಿಂತ ಹೆಚ್ಚಿನವನೆನಿಸುತ್ತಾನೆ.” ಎಂದು ನುಡಿಯುತ್ತ ನಾಮಧಾರಕನನ್ನು ಪಕ್ಕದಲ್ಲಿದ್ದ ಒಂದು ಅಶ್ವತ್ಥ ವೃಕ್ಷದಡಿಯಲ್ಲಿ ಕುಳ್ಳಿರಿಸಿಕೊಂಡು ಶ್ರೀ ಗುರು ಚರಿತ್ರೆಯನ್ನು ಹೇಳಲು ಪ್ರಾರಂಭಿಸಿದನು.

'ಗುರು' ಎಂಬ ಶಬ್ದದಲ್ಲಿರುವ 'ಗ' ಕಾರವು ಸಿದ್ಧಿ ಪ್ರದಾಯಕವೂ; 'ರ' ಕಾರವು ಪಾಪ ಸಂಹಾರಕವೂ ಆಗಿರುತ್ತವೆ. ಇನ್ನು 'ಉ' ಕಾರವು ವಿಷ್ಣು ಸ್ವರೂಪದ್ದಾಗಿರುತ್ತದೆ. ಬಹು ಕಾಲದ ಹಿಂದೆ ಜಗತ್ಪಳಯ ಕಾಲದಲ್ಲಿ ಶ್ರೀ ವಿಷ್ಣುವು ಕಲ್ಪ ಸಮುದ್ರದಲ್ಲಿ ಒಂದು ಆಲದೆಲೆಯ ಮೇಲೆ ಮಲಗಿದ್ದನು, ಆತನಿಗೆ ಸೃಷ್ಟಿ ಮಾಡಬೇಕೆಂಬ ಇಚ್ಛೆಯುಂಟಾಯಿತು. ಆ ಕೂಡಲೇ ಆತನ ನಾಭಿಕಮಲದಿಂದ ಬ್ರಹ್ಮನು ಮೈದೋರಿದನು. ಬ್ರಹ್ಮನು ನಾಲ್ಕೂ ದಿಕ್ಕುಗಳತ್ತ ನೋಡಿದನು. ಆತನಿಗೆ ನಾಲ್ಕು ಮುಖಗಳುಂಟಾದವು. ಶ್ರೀ ವಿಷ್ಣುವು ತನಗಿಂತಲೂ ಬಲಶಾಲಿಯಾಗಿರುವನೆಂಬುದನ್ನರಿತ ಬ್ರಹ್ಮನು ವಿಷ್ಣುವಿಗೆ ವಿನಯದಿಂದ ನಮಸ್ಕರಿಸಿದನು. ಮತ್ತೂ ಆತನಿಂದ ಚತುರ್ವೆದಗಳನ್ನು ಪಡೆದುಕೊಂಡು, ಅವನ ಆಜ್ಞೆಯಂತೆ ಸೃಷ್ಟಿ ರಚನೆಯ ಕಾರ್ಯದಲ್ಲಿ ತೊಡಗಿದನು. ಆತನು ಮೊದಲು ಮನು-ಮುನಿಗಳನ್ನೂ, ಸ್ಥಾವರ ಜಂಗಮ ಸೃಷ್ಟಿಯನ್ನು ರಚಿಸಿದನು. ಅಂಡಜ, ಪಿಂಡಜ, ಸ್ವರಜ, ಉದ್ದಿಜಗಳೆಂಬ ನಾಲ್ಕು ತರದ ಜೀವರಾಶಿಗಳನ್ನು ಸೃಷ್ಟಿಸಿದನು. ಕೃತ, ತ್ರೇತಾ, ದ್ವಾಪರ, ಕಲಿ, ಎಂಬ ಹೆಸರುಗಳುಳ್ಳ ನಾಲ್ಕು ಯುಗಗಳನ್ನು ನಿರ್ಮಿಸಿ, ಅವುಗಳನ್ನು ಒಂದಾದ ಮೇಲೊಂದರಂತೆ, ಭೂಮಿಯ ಮೇಲೆ ಕಳಿಸಿದನು. ಕಲಿಯುಗದ ಲಕ್ಷಣವು, ವಿಚಾರ ಶೂನ್ಯ, ಕಲಹಪ್ರಿಯ, ಕ್ರೂರ, ವಿಷಯ ಲೋಲುಪವಾಗಿರುವದರಿಂದ, ಈಗ ಜನರಲ್ಲಿ ಇದೇ ಪ್ರವೃತ್ತಿಗಳು ಕಂಡು ಬರುತ್ತವೆ. ಶ್ರೇಷ್ಠರಾದ ಗುರುಭಕ್ತರಿಗೆ ಮಾತ್ರ ಕಲಿಯ ಬಾಧೆ ತಟ್ಟಲಾರದು. ಹರಿಹರ ಬ್ರಹ್ಮಾದಿಗಳಿಗಿಂತ ಗುರುವು ಮಿಗಿಲಾಗಿರುವನೆಂಬುದಕ್ಕೆ ಇನ್ನೊಂದು ಉದಾಹರಣೆ ಕೊಡುತ್ತೇನೆ; ಕೇಳು !

ಗೋದಾವರೀ ತೀರದಲ್ಲಿ 'ಅಂಗೀರಸ ಋಷಿಯ ಆಶ್ರಮವಿತ್ತು ಅಲ್ಲಿಯೇ ಸಮೀಪ ಇನ್ನೊಂದು ಪರ್ಣಕುಟಿಯಲ್ಲಿ ವೇದ ಧರ್ಮನು ತಪಸ್ಸನ್ನಾಚರಿಸುತ್ತಿದ್ದನು. ವೇದ ಧರ್ಮನಿಗೆ ಅನೇಕ ಜನ ಶಿಷ್ಯಂದಿರಿದ್ದರು. ಅವರಲ್ಲಿ ದೀಪಕನೆಂಬವನು ಶ್ರೇಷ್ಠನಾಗಿದ್ದನು. ವೇದ ಧರ್ಮನು ಶಿಷ್ಯನ ಪರೀಕ್ಷಾರ್ಥವಾಗಿ ಕುಷ್ಟರೋಗಧಾರಣೆ ಮಾಡಿಕೊಂಡು ಕಾಶೀ ಕ್ಷೇತ್ರವನ್ನು ಸೇರಿದನು. ದೀಪಕನು ಗುರುವನ್ನು ನೆರಳಿನಂತೆ ಹಿಂಬಾಲಿಸಿದ ನಿಷ್ಠೆಯಿಂದ ಅವರ ಸೇವೆ ಮಾಡತೊಡಗಿದನು. ದೀಪಕನ ಗುರುಭಕ್ತಿಗೆ ಮೆಚ್ಚಿ ಹರಿ-ಹರರು ವರ ನೀಡಲೆಂದು ಪ್ರಸನ್ನರಾದರು. ಆದರೆ ದೀಪಕನು ತನ್ನಲ್ಲಿ ಗುರುಭಕ್ತಿ ವೃದ್ಧಿಯಾಗಲೆಂದು ಆಶೀರ್ವದಿಸಲು ಕೇಳಿಕೊಂಡನು. ಆತನು ಹರಿ-ಹರರ ಯಾವ ವರಗಳಿಗೂ ಆಸೆ ಮಾಡಲಿಲ್ಲ. ಕಾರಣ, ಗುರು ದೇವನು ಆ ಶಿಷ್ಯನ ಮೇಲೆ ಸಂಪ್ರೀತನಾದನು. ತಾನು ದಿವ್ಯ ದೇಹಧಾರಣೆ ಮಾಡಿಕೊಂಡು, ದೀಪಕನೆಂಬ ಆ ಶಿಷ್ಯ ಶ್ರೇಷ್ಠನಿಗೆ ದಿವ್ಯ ಜ್ಞಾನವನ್ನೂ, ಅಷ್ಟಸಿದ್ಧಿ, ನವನಿಧಿಗಳನ್ನು, ಕೊಟ್ಟು ಹೃತೂರ್ವಕವಾಗಿ ಆಶೀರ್ವದಿಸಿದನು. ಅಂದ ಮೇಲೆ ಹರಿ-ಹರ- ಬ್ರಹ್ಮಾದಿಗಳ ಕೃಪೆಗಿಂತಲೂ ಗುರು ಕೃಪೆಯ ಹೆಚ್ಚಿನದೆಂಬುದರಲ್ಲಿ ಯಾವ ಸಂದೇಹವೂ ಇಲ್ಲ' ಎಂದು ಸಿದ್ಧ ಮುನಿಯು ನಾಮಧಾರಕನಿಗೆ ತಿಳಿಸಿದನೆಂಬಲ್ಲಿಗೆ ಸಾರರೂಪ ಶ್ರೀ ಗುರು ಚರಿತ್ರೆಯ ಎರಡನೆಯ ಅಧ್ಯಾಯವು ಮುಕ್ತಾಯವಾಯಿತು.

Comments

Popular posts from this blog

Hanumane Tandeyu Hanumane Thayiyu lyrics

Sankshipta Guru Charitre in kannada

Sri Rama Chandirane