Shri Guru Charitre - Chapter 31


ಶ್ರೀ ಗುರು ಚರಿತ್ರೆ


ಅಧ್ಯಾಯ ೩೧

||ಹರಿಃ ಓಂ ಶ್ರೀ ಗುರುಭ್ಯೋ ನಮಃ || 

ನಾಮಧಾರಕನೇ ಸತಿಯು ಹೀಗೆ ದುಃಖಿಸುತ್ತಿರಲು ಭಸ್ಮರುದ್ರಾಕ್ಷಿಗಳಿಂದ ಅಲಂಕೃತ ಯೋಗಿಯೊಬ್ಬರು ಬಂದು, ಮಗಳೇ ! ಯಾಕೆ ಸುಮ್ಮನೇ ಅಳುತ್ತಿರುವಿ ? ವಿಧಿ ಲಿಖಿತವು ಯಾರಿಗೂ ಬಿಟ್ಟಿದ್ದಲ್ಲ. ಪ್ರಪಂಚದಲ್ಲಿ ಹುಟ್ಟಿದವರೆಲ್ಲರೂ ಒಂದಿಲ್ಲೊಂದು ದಿನ ಸಾಯತಕ್ಕವರೇ ! ಈ ಸಂಸಾರದ ಸಂಬಂಧಗಳು ಸಹಿತ ಮಾಯೆಯಿಂದ ಕೂಡಿದಂತಿವೆ. ಸಮುದ್ರ ತೇಲುವ ಕಟ್ಟಿಗೆಗಳು, ಸ್ವಲ್ಪ ಸಮಯ ಒಂದಕ್ಕೊಂದು ಕೂಡಿಕೊಂಡಿದ್ದು, ಬಿರುಗಾಳಿ ಬಿಟ್ಟೋಡನೆಯೇ ದಿಕ್ಕಿಗೊಂದೊಂದು ಹೊರಟು ಹೋಗುವದಿಲ್ಲವೇ ? ಹಾಗಿದೆ ಈ ಗಂಡ, ಹೆ೦ಡತಿ, ತಂದೆ-ತಾಯಿ-ಬಂಧು-ಬಳಗ ಎಂಬ ಸಂಬಂಧ, ಪೂರ್ವಾರ್ಜಿತ ಕರ್ಮಫಲದಿಂದ ಎಲ್ಲೆಲ್ಲಿಯೋ ಹುಟ್ಟಿದ ದೇಹಗಳಿಗೆ ಸತಿ-ಪತಿಯರೆಂಬ ಸಂಬಂಧ ಬೆಳೆದು ಬಂದಿರುತ್ತದೆ ! ಆದರೆ ದೇಹಗಳಿಗೆ ಹುಟ್ಟಿ ನೊ೦ದಿಗೇ ಮರಣವೂ ಬೆಂಬತ್ತಿ ಬಂದಿರುತ್ತದೆ. ಅಜ್ಞಾನಿಗಳಾದವರು ಮಾತ್ರ ಇಂಥಾ ನಶ್ವರವಾದ ದೇಹವು ಪತನವಾದದ್ದಕ್ಕೆ ದುಃಖಪಡುತ್ತಾರೆ. ನೀನು ತಿಳಿದವಳಿರುವಿ ! ತಿರುಗಿ ಬರಲಾರದ ಪತಿಗಾಗಿ ದುಃಖಿಸದೇ ಈ ಸ೦ಸಾರ ಬಂಧನದಿಂದ ಜೀವನ್ಮುಕ್ತಿ ಪಡೆಯುವ ಮಾರ್ಗವನ್ನು ಮೊದಲು. ಹುಡುಕಿಕೋ !” ಎಂದು ಬುದ್ಧಿವಾದ ಹೇಳತೊಡಗಿದರು. ಸತಿಗೆ ಅವರ ಉಪದೇಶವು ಮನಕ್ಕೆ ನಾಟಿದ್ದರಿಂದ ಅವಳು ಚಟ್ಟನೆ ಎದ್ದು ಆ ಯೋಗಿಗಳಿಗೆ ನಮಸ್ಕರಿಸಿದಳು "ಸ್ವಾಮಿನ್ ! ನನಗಿನ್ನು ಯಾವ ಮಾರ್ಗ ??? ಎಂದು ಅಸಹಾಯಕಳಾಗಿ ಕೇಳಿದಳು. ಅದಕ್ಕೆ ಯೋಗಿಯು, 'ಸತಿಗೆ ಪತಿಯೇ ಪರದೈವ ! ಪತಿವೃತೆಯ ದರ್ಶನದಿಂದ ಪತಿತನೂ ಪಾವನನಾಗುವನು. ಪತಿ ಸಹಿತ ಪತಿಯು ಅಪವಿತ್ರಳೆಂದೇ ತಿಳಿಯಲ್ಪಡುವಳು'' ಎಂದು ನುಡಿಯಲು, ಅವಳು ಅಸಮಾಧಾನದಿಂದ ಪತಿಯನ್ನು ನುಂಗಿ ನೀರು ಕುಡಿದ ಅಭಾಗಿನಿಗೇಕೆ ಈ ಉಪದೇಶಾ ? ಇನ್ನು ಮುಂದೆ ನಾನು ನಡೆಯಬೇಕಾದ ಸೂಕ್ತ ದಾರಿ ಯಾವುದೆಂಬುದನ್ನು ಸೂಚಿಸಿ!” ಎಂದು ಕೇಳಿಕೊಂಡಳು. ಯೋಗಿಯು ಅದಕ್ಕುತ್ತರವಾಗಿ, “ಅಮ್ಮಾ ಇಲ್ಲಿ ಎರಡು ಮಾರ್ಗಗಳಿವೆ. 1ನೆಯದು ಸಹಗಮನ ಹೋಗಿ ಸತಿ ಸಾವಿತ್ರಿ' ಎನಿಸಿಕೊಳ್ಳುವದು; 2ನೆಯದು ವಿಧವಾ ಧರ್ಮದಂತೆ ನಡೆದು ಅತ್ಮೊದ್ಧಾರ ಮಾಡಿಕೊಳ್ಳುವದು !” ಎಂದು ಹೇಳಲು, ಸತಿಯು ಸ್ವಲ್ಪ ಹೊತ್ತು ಯೋಚಿಸಿ, ಸ್ವಾಮಿ ! ವಿಧವಾ ಧರ್ಮದಂತೆ ನಡೆಯುವದು ಕಷ್ಟಕರವಾಗಿದೆ; ಆದ್ದರಿಂದ ನಾನು ಸಹಗಮನ ಹೋಗುವದನ್ನೇ ಆರಿಸಿಕೊಳ್ಳುತ್ತೇನೆ. ಮಹಾತ್ಮರಾದ ತಾವು ನನಗೆ ಸದ್ಧತಿಯಾಗುವಂತೆ ಆಶೀರ್ವದಿಸಿರಿ !” ಎಂದು ನಮಸಿ ಪ್ರಾರ್ಥಿಸಿಕೊಂಡಳು. ಆಗ ಯೋಗಿಯು ಅವಳ ಪತಿಭಕ್ತಿಗೆ ಮೆಚ್ಚಿದವರಂತೆ ನಸು ನಕ್ಕರು ! ಮತ್ತೂ ಆ ಸಾಧಿಯನ್ನು ಕುರಿತು, “ಅಮ್ಮಾ! ನೀನಿನ್ನೂ 16 ವರ್ಷದ ಚಿಕ್ಕ ಮುತ್ತೈದೆಯಾಗಿರುವಿ. ಗುರುದರ್ಶನ ಮಾಡಿಕೊಂಡು,ಅವರ ಕೃಪೆಯಿಂದ ಪತಿಯನ್ನುಳಿಸಿಕೊಳ್ಳಬೇಕೆಂಬ ಆಸೆ ಹೊತ್ತು ದೂರ lದಿಂದ ನಡೆದು ಬಂದಿರುವಿ ! ಅಂದ ಮೇಲೆ ಒಮ್ಮೆಲೇ ನಿರಾಶಳಾಗಬೇಡಾ! ನಾನೀಗ ನಿನಗೆ ಗುರು ಪ್ರಸಾದದಿಂದ ಬಂದ ಭಸ್ಮ ಹಾಗೂ ನಾಲ್ಕು ರುದ್ರಾಕ್ಷಿಗಳನ್ನು ಕೊಡುತ್ತೇನೆ. ಭಸ್ಮವನ್ನು ನಿನ್ನ ಪತಿಯ ಸರ್ವಾಂಗಗಳಿಗೆ ಲೇಪಿಸು! ರುದ್ರಾಕ್ಷಿಗಳನ್ನು ಆತನ ಕಿವಿಗೆ ಕಟ್ಟು ! ಸಹಗಮನ ಹೋಗುವ ಮೊದಲು, ಆ ಸದ್ಗುರುನಾಥನ ದರ್ಶನಾಶೀರ್ವಾದಗಳನ್ನು ಪಡೆದು, ನಂತರ ಕಾರ್ಯೋನ್ಮುಖಳಾಗು.” ಎಂದು ಹೇಳಿ ಯೋಗೀಶ್ವರರು ಅಲ್ಲಿಂದ ಹೊರಟು ಹೋದರೆಂಬಲ್ಲಿಗೆ ಸಾರರೂಪ ಶ್ರೀ ಗುರುಚರಿತ್ರೆಯ ಮುವತ್ತೊಂದನೆಯ ಅಧ್ಯಾಯ ಮುಕ್ತಾಯವಾಯಿತು.

Comments

Popular posts from this blog

Hanumane Tandeyu Hanumane Thayiyu lyrics

Sankshipta Guru Charitre in kannada

Sri Rama Chandirane