Shri Guru Charitre - Chapter 30

 

ಶ್ರೀ ಗುರು ಚರಿತ್ರೆ


ಅಧ್ಯಾಯ ೨೩

||ಹರಿಃ ಓಂ ಶ್ರೀ ಗುರುಭ್ಯೋ ನಮಃ || 

ನಾಮಧಾರಕಾ ! ಗುರುಗಳ ಕೀರ್ತಿಯು ನಾಡಿನ ತುಂಬೆಲ್ಲ ಹಬ್ಬಿಹೋಗಿತ್ತು, ಗಾಣಗಾಪುರದ ಉತ್ತರ ದಿಕ್ಕಿನಲ್ಲಿ ಮಾಹುರ ಎಂಬ ಗ್ರಾಮದಲ್ಲಿ ಶ್ರೀಮಂತನಾದೆ ಒಬ್ಬ ಬ್ರಾಹ್ಮಣನಿದ್ದನು. ಆತನ ಹೆಸರು ಗೋಪಿನಾಥ ಆತನಿಗೆ ದತ್ತಾತ್ರಯನ ಆರಾಧನೆಯಿಂದ ಒಬ್ಬ ಮಗನು ಹುಟ್ಟಿದ್ದನು. ಆತನಿಗೆ ದತ್ತನೆಂದೇ ಹೆಸರಿಟ್ಟಿದ್ದರು. ದತ್ತನು ಪ್ರಾಪ್ತ ವಯಸ್ಕನಾದಾಗ, 'ಸತಿ' ಎಂಬ ಹೆಸರಿನ ಸುಶೀಲೆಯಾದ ಕನೈಯೊ೦ದಿಗೆ ಆತನ ಮದುವೆಯಾಯಿತು. ಅವರು ಕೆಲದಿನ ಸುಖ ಸಂಸಾರ ನಡಿಸುತ್ತಿದ್ದಂತೆಯೇ, ದತ್ತನಿಗೆ ದುರದೃಷ್ಟದಿಂದ ಕ್ಷಯರೋಗವು ಅ೦ಟಿಕೊ೦ಡಿತು. ತಂದೆ-ತಾಯಿಗಳು ನೀರಿನಂತೆ ಹಣ ಖರ್ಚುಮಾಡಿ, ಔಷಧೋಪಚಾರ ಮಾಡಿಸಿದರೂ ರೋಗಿಯು ಆರೋಗ್ಯವಂತನಾಗಲಿಲ್ಲ. ಕೊನೆಗೆ ದತ್ತನಿಗೆ ಗಂಟಲಲ್ಲಿ ಅನ್ನವೇ ಇಳಿಯದಂತಾಯಿತು. ದೇಹದಿಂದ ದುರ್ಗಂಧವು ಹೊರಡಲಾರಂಭಿಸಿತು, ಪತಿವೃತೆಯಾದ ಸತಿಯು ಸದಾ ಗಂಡನ ಆರೈಕೆಯಲ್ಲಿಯೇ ನಿರತಳಾಗಿರುತ್ತಿದ್ದಳು. ತನ್ನ ಪತಿಯು ಎಷ್ಟು ಆಹಾರ ಸೇವಿಸುತ್ತಿದ್ದನೋ, ಅಷ್ಟನ್ನೇ ಅವಳು ಸೇವಿಸತೊಡಗಿದಳು. ಹೀಗಾಗಿ ಅವಳ ದೇಹವು ಕೃಶವಾಯಿತು, ಅತ್ತೆಮಾವಂದಿರು ಅವಳಿಗೆ ದತ್ತನಿಂದ ಸ್ವಲ್ಪ ದೂರವಿರು' ಎಂದು ಸೂಚಿಸಿದರೂ ಅವಳು ಕೇಳುತ್ತಿರಲಿಲ್ಲ. ಶ್ರೀಮಂತರಾದ ತಂದೆ-ತಾಯಿಗಳು ದತ್ತನ ರೋಗ ನಿವಾರಣೆಗಾಗಿ ದೇವತಾಭಿಷೇಕ ಮಾಡಿಸಿದರು. ಬ್ರಾಹ್ಮಣರಿಗೆ ಭೋಜನಾದಿಗಳಿಂದ ಸಂತೃಪ್ತಿ ಮಾಡಿಸಿದರು, ಏನೂ ಪ್ರಯೋಜನವಾಗಲಿಲ್ಲ. ತಂದೆ-ತಾಯಿಗಳಿಗೆ ಬಹಳೇ ದುಃಖವಾಯಿತು. ಅವರು ಮಗನೆದುರು ಕುಳಿತು, ಅಪ್ಪಾ…! ನೀನು ದತ್ತನ ವರಪ್ರಸಾದದಿಂದ ನಮಗೆ ಜನಿಸಿದ ಮಗನು ಬಹಳ ಮಕ್ಕಳು ಸತ್ತ ಮೇಲೆ ನೀನೊಬ್ಬನು ನಮ್ಮ ಉತ್ತರಾಧಿಕಾರಿಯಾಗಿ ಬದುಕಿದ್ದಿ ನೀನೂ ಮರಣ ಹೊಂದಿದರೆ ನಾವು ಖಂಡಿತವಾಗಿ ಆತ್ಮಹತ್ಯೆ ಮಾಡಿ ಕೊಳ್ಳುತ್ತೇವೆ'' ಎಂದು ಅಳತೊಡಗಿದರು. 

ತನಗಾಗಿ ಶೋಕಿಸುತ್ತಿರುವ ತಂದೆ-ತಾಯಿ-ಮಡದಿಯರನ್ನು ನೋಡಿ ದತ್ತನಿಗೂ ದುಃಖವಾಯಿತು. ಆತನು ಅಳುತ್ತ 'ಮಾತಾ ಪಿತೃಗಳೇ! ನಾನು ನಿಮ್ಮ ಋಣ ತೀರಿಸುವ ಮಗನಾಗಿ ಹುಟ್ಟಲಿಲ್ಲ. ನಿಮಗೆ ದುಃಖ ಕೊಡುವದಕ್ಕಾಗಿ ಹುಟ್ಟಿದ ಪಾಪಿ ನಾನು, ನನಗಾಗಿ ಸತಿಯೂ ಬಹಳ ಕಷ್ಟ ಪಟ್ಟಳು. ಇನ್ನಂತೂ ನಾನು ಬಹಳ ದಿವಸ ಜೀವಿಸಲಾರೆ ! ನನ್ನ ಮರಣಾ ನಂತರ ಇವಳ ಸುಖ-ದುಃಖಗಳೆಲ್ಲ ನಿಮಗೆ ಸೇರಿರುತ್ತವೆ. ದೈವೇಚ್ಚೆಯನ್ನು ಯಾರಿಂದಲೂ ಮೀರಲು ಸಾಧ್ಯವಾಗುವದಿಲ್ಲ'' ಎಂದು ನಿರಾಶೆಯಿಂದ ಉಸಿರ್ಗರೆದನು. ಸತಿಗೆ ಆಕಾಶವೇ ಕಳಚಿ ಮೈಮೇಲೆ ಬಿದ್ದಂತಾಯಿತು. ಅವಳು ಏನೋ ಒಂದು ನಿರ್ಧಾರಕ್ಕೆ ಬಂದವಳಂತೆ ಚಟ್ಟನೇ ಮೇಲೆದ್ದಳು, ಅತ್ತೆ ಮಾವಂದಿರೇ ! ನೀವಿನ್ನು ವಿನಾಕಾರಣ ದುಃಖಿಸಬೇಡಿರಿ ! ಇವರು (ದತ್ತನು) ದತ್ತಾತ್ರಯನ ವರಪ್ರಸಾದದಿಂದ ಜನಿಸಿದವರೆಂದ ಮೇಲೆ, ಆ ದತ್ತ ಸದ್ಗುರುವೇ ಇವರನ್ನು ಬದುಕಿಸಲು ಸಮರ್ಥನು, ಗಾಣಗಾಪುರದಲ್ಲಿ ಆ ಸದ್ಗುರುನಾಥನು ನರಸಿಂಹ ಸರಸ್ವತಿಗಳೆಂಬ ಹೆಸರಿನಿಂದ ಅವತರಿಸಿ, ವಾಸ್ತವ್ಯ ಮಾಡಿರುವನಂತೆ ! ಆದಕಾರಣ ನಾನು ನನ್ನ ಪತಿಯನ್ನು ಆ ದತ್ತ ಸನ್ನಿಧಿಗೆ ಕರೆದೊಯ್ದು, ನನ್ನ ಕುಂಕುಮವನ್ನು ಸ್ಥಿರಗೊಳಿಸಿಕೊಂಡು ಬರುತ್ತೇನೆ. ದಯವಿಟ್ಟು ನನಗೆ ಅಪ್ಪಣೆಕೊಡಿರಿ !” ಎಂದು ಪ್ರಾರ್ಥಿಸಿದಳು.
 
ಸತಿಯ ಧೃಡ ನಿರ್ಧಾರ, ಹಾಗೂ ಪತಿ ಭಕ್ತಿಗಳಿಗೆ ತಲೆದೂಗಿ ದತ್ತನ ತಂದೆ-ತಾಯಿಗಳು ಅವರ ಪ್ರಯಾಣಕ್ಕೆ ಅಂದೇ ಸಕಲ ಸಿದ್ಧತೆ ಮಾಡಿಕೊಟ್ಟರು. ದತ್ತನನ್ನು ಮೇಣೆಯಲ್ಲಿ ಮಲಗಿಸಿಕೊಂಡು, ಅವಳು ಗಾಣಗಾಪುರದತ್ತ ಪ್ರಯಾಣ ಬೆಳೆಸಿದಳು. ದಾರಿಯುದ್ದಕ್ಕೂ ದತ್ತನ ವ್ಯಾಧಿ ಹೆಚ್ಚುತಲೇ ನಡೆಯಿತು. ಅವರು ಗಾಣಗಾಪುರದ ಅಗಸೆಯ ಬಾಗಿಲಿಗೆ ಬಂದು ತಲುಪಿದರು. ದತ್ತನು ಬಹಳಷ್ಟು ಸಂಕಟಪಡುತ್ತ ನೀರು ! ನೀರು'' ಎಂದು ಹಲುಬತೊಡಗಿದನು. ಸತಿಯು ಅನಿವಾರ್ಯವಾಗಿ ಡೋಲಿಯನ್ನು ಕೆಳಗಿಳಿಸಲು ಬೋಯಿಗಳಿಗೆ ಆಜ್ಞೆ ಮಾಡಿದಳು. “ದಾರಿಯಲ್ಲಿ ನಿಂತಿದ್ದ ವ್ಯಕ್ತಿಯೊಬ್ಬನನ್ನು ಗುರುಗಳು ಎಲ್ಲಿದ್ದಾರೆ ?'' ಎಂದು ವಿಚಾರಿಸಿದಳು. ಅವರು ಸಂಗಮದಲ್ಲಿದ್ದಾರೆಂದು ತಿಳಿದು ಬಂತು. ಡೋಲಿಯನ್ನು ಅಲ್ಲಿಗೇ ಸಾಗಿಸ ತಕ್ಕದ್ದೆಂದು ಬೋಯಿಗಳಿಗೆ ಸೂಚಿಸಿ, ಪತಿಗೆ ಒಂದೆರಡು ಗುಟುಕು ನೀರು ಕುಡಿಸಿದಳು. ದತ್ತನ ಪ್ರಾಣಪಕ್ಷಿ ಹಾರಿಹೋಯಿತು. ಸತಿಯು ಶೋಕತಾಪಗಳಿಂದ ದಿಗ್ಬ್ರಾಂತಳದಳು. ಗುರುಗಳನ್ನು ನೆನೆಯುತ್ತ ಭೂಮಿಯ ಮೇಲೆ ಬಿದ್ದು ಹೊರಳಾಡುತ್ತ ಅಳತೊಡಗಿದಳು. “ಅಯ್ಯೋ ಸದ್ಗುರುವೇ ! ನಿನ್ನನ್ನು ನಂಬಿ ಇಲ್ಲಿಯವರೆಗೆ ಬಂದ ನನ್ನನ್ನು ನಿರಾಸೆಗೊಳಿಸಿದಿಯಾ ? ನಿನಗೆ ಶರಣಾಗತ ರಕ್ಷಕನೆಂದು ಕರೆಯುವರು. ನಿನಗೆ ಶರಣು ಹೊಕ್ಕ ನನಗೆ ನೀನಾವ ಸೌಭಾಗ್ಯ ಕೊಟ್ಟೆ ? ನಿನ್ನಿಂದ ಪತಿಯ ವ್ಯಾಧಿಯನ್ನು ನಿವಾರಣೆ ಮಾಡಿಸಿಕೊಂಡು ಬರುವೆನೆಂದು ಅತ್ತೆ ಮಾವಂದಿರೆದುರು ಜಂಭ ಕೊಚ್ಚಿ ಕೊಂಡು, ನಿನ್ನ ಮೇಲೆ ವಿಶ್ವಾಸವಿಟ್ಟು ನಾನು ಕೆಟ್ಟು ಹೋದೆ. ಅಂತ್ಯಕಾಲದಲ್ಲಿ ಅತ್ತೆ ಮಾವಂದಿರಿಗೆ ಮಗನ ಮುಖ ನೋಡುವದಕ್ಕೂ ಅವಕಾಶ ಮಾಡಿಕೊಡಲಾರದ ಪಾಪಿ ನಾನಾದೆ !?” ಎಂದು ಹೃದಯ ಕರಗುವಂತೆ ರೋದಿಸತೊಡಗಿದಳು. ಅವಳ ದುರ್ದೈವಕ್ಕಾಗಿ ಕೂಡಿದ ಜನರೂ ಸಹಿತ ಕಣ್ಣೀರು ಹಾಕತೊಡಗಿದರೆಂಬಲ್ಲಿಗೆ ಸಾರರೂಪ ಶ್ರೀಗುರು ಚರಿತ್ರೆಯ ಮೂವತ್ತನೆಯ ಅಧ್ಯಾಯ ಮುಗಿಯಿತು.

Comments

Popular posts from this blog

Hanumane Tandeyu Hanumane Thayiyu lyrics

Sankshipta Guru Charitre in kannada

Sri Rama Chandirane