Shri Guru Charitre - Chapter 29
ಅಧ್ಯಾಯ ೨೯
||ಹರಿಃ ಓಂ ಶ್ರೀ ಗುರುಭ್ಯೋ ನಮಃ ||
ನಾಮಧಾರಕನೇ ! ಈ ಎಲ್ಲ ಚಮತ್ಕಾರಗಳನ್ನು ಕಣ್ಣಾರೆ ನೋಡುತ್ತ ಕುಳಿತಿದ್ದ ತ್ರಿವಿಕ್ರಮ ಯತಿಯು, ಗುರುದೇವಾ! ಆ ಪತಿತನಿಗೆ ಮೊದಲು ಜ್ಞಾನೋದಯವಾದದ್ದು ಹೇಗೆ ? ನಂತರ ಜ್ಞಾನಹೀನನಾಗಿ ಪತಿತನಾದದ್ದು ಹೇಗೆ ವಿವರಿಸಿ ಹೇಳಬೇಕೆಂದು ವಿನಂತಿಸಲು, ಗುರುಗಳು ಭಸ್ಮದ ಮಹಿಮೆಯನ್ನು ಈ ರೀತಿಯಾಗಿ ಹೇಳ ತೊಡಗಿದರು. ತ್ರಿವಿಕ್ರಮಾ ! ಮೊದಲು ನಾವು ಆ ಪತಿತನಿಗೆ ಪಂಚಾಕ್ಷರ ಮಂತ್ರದಿಂದ ಅಭಿಮಂತ್ರಿತ ಭಸ್ಮವನ್ನು ಪ್ರೋಕ್ಷಿಸಿದ್ದರಿಂದ, ಆತನಲ್ಲಿ ಜ್ಞಾನೋದಯವಾಗಿತ್ತು ಸ್ನಾನದಿಂದ ಆ ಭಸ್ಮವೆಲ್ಲ ಕ್ಷಾಲನವಾದಾಗ್ಗೆ ಮತ್ತೆ ಆತನು ಜ್ಞಾನ ಹೀನನಾದ ಪತೀತನಾಗಿ ಮಾರ್ಪಟ್ಟನು. ಭಸ್ಮಧಾರಣ ಮಾಡುವವನು ಪುನೀತನಾಗುವನು, ಬ್ರಹ್ಮಜ್ಞಾನಿಯಾಗುವನು, ಕೃತಯುಗದಲ್ಲಿ ವಾಮದೇವನೆಂಬ ಯೋಗಿಯು ಮೈ ತುಂಬಾ ಭಸ್ಮಲೇಪಿಸಿಕೊಂಡು, ಅರಣ್ಯದಲ್ಲಿ ಕಾಮಕ್ರೋಧ ರಹಿತನಾಗಿ ಸಂಚರಿಸುತ್ತಿದ್ದನು. ಆಗ ಒಂದು ರಾಕ್ಷಸವು ಆತನನ್ನು ತಿನ್ನಲೆಂದು ಮೈಮೇಲೆ ಎರಗಿತು ವಾಮದೇವನು ಧರಿಸಿದ್ದ ಭಸ್ಮದ ಕಣಗಳು ರಾಕ್ಷಸನ ಮೈಗೆ ಅಂಟಿದ ಕೂಡಲೇ ಅದಕ್ಕೆ ಜ್ಞಾನೋದಯವಾಯಿತು. ರಾಕ್ಷಸನು ವಾಮದೇವನಿಗೆ ನಮಸ್ಕರಿಸಿ, “ಮಹಾತ್ಮ! ನನ್ನನ್ನು ಉದ್ಧರಿಸು !” ನಿನ್ನ ಮೈಗಂಟಿದ ಭಸ್ಮವು ನನ್ನ ಮೈಗೆ ಅಂಟಿದೊಡನೆಯೇ, ನನಗೆ ಹಿಂದಿನ ಇಪ್ಪತ್ತೈದು ಜನ್ಮಗಳ ಅರಿವು ಉಂಟಾಗಿವೆ. 25ನೆಯ ಹಿಂದಿನ ಜನ್ಮದಲ್ಲಿ ನಾನು 'ದುರ್ಜಯ'ನೆಂಬ ಹೆಸರಿನ ಅರಸನಾಗಿದ್ದೆ. ಆಗ ನಾನು ಪ್ರಜಾಪೀಡನೆ, ಪರಸ್ತ್ರೀಯರ ಮೇಲೆ ಬಲಾತ್ಕಾರ, ಮದಿರಾಪಾನ, ಮುಂತಾದ ಅನೇಕ ಪಾಪ ಕೃತಿಗಳನ್ನೆಸಗಿದೆ. ಅದರ ಫಲವಾಗಿ ನೂರು ವರ್ಷ ನರಕ ಬಾಧೆಯನ್ನನುಭವಿಸಿದೆ, ಬಳಿಕ ನಾಯಿ ನರಿ ಮುಂತಾದ ಕ್ಷುದ್ರ ಯೋನಿಗಳಲ್ಲಿ ಜನಿಸುತ್ತಾ ಬಳಲಿ, ಈಗ ರಾಕ್ಷಸನಾಗಿರುವೆ, ಯಾವ ಪ್ರಾಣಿಗಳನ್ನು ಕೊಂದು ತಿಂದರೂ ನನ್ನ ಹಸಿವೆ ಹಿಂಗದಾಗಿತ್ತು, ಅದಕ್ಕಾಗಿಯೇ ಇಂದು ನಿಮ್ಮನ್ನು ಮುರಿದು ತಿನ್ನುವ ಉದ್ದೇಶದಿಂದ ನಿಮ್ಮ ಮೇಲೆರಗಿದೆ. ಆದರೆ ನಿಮ್ಮ ಅಂಗಸ್ಪರ್ಶದಿಂದ ನನ್ನ ಪಾಪ ದಾಹಗಳೆಲ್ಲ ಶಾಂತವಾದವು. ನನಗೀಗ ಜ್ಞಾನ ಉಂಟಾಗಿದೆ. ಇದಕ್ಕೆ ಕಾರಣವೇನು??” ಎಂದು ಪ್ರಶ್ನೆ ಮಾಡಲು, ವಾಮದೇವರು ಎಲೈ ರಾಕ್ಷಸನೇ! ಇದೆಲ್ಲವೂ ಭಸ್ಮದ ಮಹಿಮೆಯಾಗಿದೆ. ನಾನು ಧರಿಸಿದ ಭಸ್ಮವು ನಿನ್ನ ಮೈಗೆ ಸೋಂಕಿದ್ದರಿಂದಲೇ ನಿನಗೆ ದಿವ್ಯಜ್ಞಾನ ಉಂಟಾಯಿತು. ಈ ಭಸ್ಮದ ಮಹಿಮೆ ಹೆಚ್ಚಿನದಾಗಿರುವದರಿಂದಲೇ, ಸದಾ ಶಿವನು ಇದನ್ನು ತನ್ನ ಅಂಗ ಭೂಷಣವನ್ನಾಗಿ ಮಾಡಿಕೊಂಡಿದ್ದಾನೆ. ಪಂಚಾಕ್ಷರೀ ಮಂತ್ರದಿಂದ ಅಭಿಮಂತ್ರಿತ ವಾದ ಈ ಭಸ್ಮವನ್ನು ನಿನ್ನ ಮೈಗೆ ಲೇಪಿಸಿಕೋ ! ಅಂದರೆ ನೀನು ಇನ್ನಷ್ಟು ಪುನೀತನಾಗುವಿ.” ಎಂದು ತಮ್ಮ ಬಳಿಯಿದ್ದ ಭಸ್ಮವನ್ನು ಆ ರಾಕ್ಷಸನಿಗೆ ಕೊಟ್ಟರು, ಆಗ ರಾಕ್ಷಸನು ಕೃತಜ್ಞತೆಯಿಂದ “ಮಹಾ ಗುರುವೇ ! ನಾನು
ರಾಜನಾಗಿದ್ದ ಜನ್ಮದಲ್ಲಿ ಜಲಾಶಯವೊಂದನ್ನು ಕಟ್ಟಿಸಿದ್ದೆ. ಆ ಪುಣ್ಯಫಲದಿಂದಲೇ ನನಗೆ ನಿಮ್ಮ ದರ್ಶನವಾಗಿ, ಪವಿತ್ರವಾದ ಭಸ್ಮವು ದೊರೆಯಿತು, ಎಂದು ನುಡಿದು ಭಸ್ಮಧಾರಣ ಮಾಡಲು, ರಾಕ್ಷಸ ಜನ್ಮದಿಂದ ವಿಮುಕ್ತಿ ದೊರೆಯಿತು. ಹೀಗಿದೆ ಈ ಭಸ್ಮದ ಮಹಿಮೆ'' ಎಂದು ತ್ರಿವಿಕ್ರಮಯತಿಗೆ ಗುರುಗಳು ಹೇಳಿದರೆಂಬಲ್ಲಿಗೆ ಸಾರರೂಪ ಶ್ರೀ ಗುರು ಚರಿತ್ರೆಯ 29ನೆಯ ಅಧ್ಯಾಯ ಮುಕ್ತಾಯವಾಯಿತು.
Comments
Post a Comment