Shri Guru Charitre - Chapter 25
ಅಧ್ಯಾಯ ೨೫
||ಹರಿಃ ಓಂ ಶ್ರೀ ಗುರುಭ್ಯೋ ನಮಃ ||
ನಾಮಧಾರಕನೇ ! ಹಿಂದೆ ಬೀದರ ಪಟ್ಟಣದಲ್ಲಿ ಒಬ್ಬ ಮುಸಲ್ಮಾನ ದೊರೆಯಿದ್ದನು. ಆತನು ಬ್ರಾಹ್ಮಣರಿಗೆ ದ್ರವ್ಯದ ಆಸೆ ತೋರಿಸಿ, ಅವರ ಬಾಯಿಂದ ವೇದಮಂತ್ರಗಳನ್ನು ಪಠಿಸಿ, ಅವುಗಳ ಅರ್ಥ ಕೇಳುತ್ತಿದ್ದನು. ತನ್ನ ರಾಜ್ಯದಲ್ಲಿರುವ ಬ್ರಾಹ್ಮಣೋತ್ತಮರ, ರಾಜ ಸಭೆಯಲ್ಲಿ ತಮಗಿರುವ ವೇದ ವಿದ್ಯಾ ಪ್ರಾವಿಣ್ಯತೆಯನ್ನು ಪ್ರದರ್ಶನ ಮಾಡಿದರೆ, ಅಂಥವರಿಗೆ ಹೇರಳವಾದ ಬಹುಮಾನ ಕೊಡಲಾಗುವದೆಂದು ಊರೂರುಗಳಿಗೆ ಕರಪತ್ರ ಹಂಚಿಸಿದನು, ಹೀಗಾಗಿ ಕೆಲವು ಆಸೆಬುರಕ ಬ್ರಾಹ್ಮಣರು, ಯವನರ ಮುಂದೆ ಮಂತ್ರ ಪಠಣವು ನಿಷಿದ್ಧವೆಂಬುದು ಗೊತ್ತಿದ್ದರೂ ಧನದಾಸೆಗಾಗಿ ತಮ್ಮತನವನ್ನು ಕಳೆದುಕೊಂಡು, ಆ ಯವನ ದೊರೆಯೆದುರೆ ವೇದ ವಿದ್ಯೆಯನ್ನು ಪ್ರದರ್ಶಿಸತೊಡಗಿದರು.
ಹೀಗಿರುತ್ತಿರಲೊಂದು ದಿನ, ಬಾದಶಹನ ಪ್ರಕಟಣೆಯ ವಾರ್ತೆಯನ್ನು ಕೇಳಿದ ಇಬ್ಬರು ಅನ್ಯ ರಾಜ್ಯದ ಬ್ರಾಹ್ಮಣ ಪಂಡಿತರು ಬಾದಶಹನ ದರ್ಬಾರಿಗೆ ಬಂದರು. ಅವರು ಬಾದಶಹನಿಗೆ ಮಜೂರೆ ಸಲ್ಲಿಸಿ, 'ಪ್ರಭೂ ! ನಾವು ವೇದ, ವೇದಾಂತ, ತರ್ಕ, ವ್ಯಾಕರಣ ಎಲ್ಲವನ್ನೂ ಬಲ್ಲ ಪಂಡಿತರು, ನಿಮ್ಮ ಆಸ್ಥಾನದಲ್ಲಿರುವ ಬ್ರಾಹ್ಮಣ ಪಂಡಿತರೊಂದಿಗೆ ನಾವು ವಾದ ಮಾಡಬೇಕೆಂಬ ಉದ್ದೇಶದಿಂದ ಬಂದಿದ್ದೇವೆ. ನಿಮ್ಮಲ್ಲಿ ಅಂಥ ಪಂಡಿತರಿದ್ದರೆ ನಮ್ಮೊಂದಿಗೆ ವಾದ ಪ್ರಸಂಗಕ್ಕೆ ಬಿಡಿರಿ ! ಅವರು ನಮ್ಮೊಂದಿಗೆ ವಾದಕ್ಕಿಳಿಯಲು ಅಂಜಿದರೆ, ಅಂಥ ಪಂಡಿತರಿಂದ ನಮಗೆ ಜಯಪತ್ರಗಳನ್ನು ಬರಿಸಿ ಕೊಡಿರಿ,” ಎಂದು ವಿನಂತಿ ಮಾಡಿಕೊಂಡರು. ಬಾದಶಹನು ಅವರಿಗೆ ಉಚಿತಾಸನಗಳನ್ನು ಕೊಟ್ಟು ಕೂಡಿಸಿಕೊಂಡನು. ಬೀದರ ನಗರದಲ್ಲಿರುವ ಬ್ರಾಹ್ಮಣ ಪಂಡಿತರನ್ನೆಲ್ಲಾ ಡಂಗುರ ಸಾರಿಸಿ ರಾಜ ದರ್ಬಾರಿಗೆ ಕರೆಸಿಕೊಂಡು, ಆ ಪಂಡಿತದ್ವಯರೊಂದಿಗೆ ವೇದ ವಿಷಯಗಳನ್ನು ವಾದ ಮಾಡಿ ಗೆಲ್ಲುವವರು ನಿಮ್ಮಲ್ಲಿ ಯಾರಾದರೂ ಇದ್ದರೆ, ಅವರಿಗೆ ಸಹಸ್ರ ಮೊಹರುಗಳ ಸಂಭಾವನೆ ಕೊಡುತ್ತೇನೆ. ಯಾರಾದರೂ ವಾದ ಮಾಡಿರಿ!” ಎಂದನು. ಧನದಾಸೆಯಿಂದ ತಮ್ಮಲ್ಲಿದ್ದ ಅಲ್ಪ ವಿದ್ಯೆಯನ್ನು ಬಾದಶಹನೆದುರು ಪ್ರದರ್ಶಿಸಿ ದುಡ್ಡು ಪಡೆದ ನೀತಿ ಭ್ರಷ್ಟ, ಬ್ರಾಹ್ಮಣರು, ಆ ಇಬ್ಬರೂ ಪಂಡಿತರ ಆಡ್ಯತೆ, ಬಿರುದಾವಳಿ, ಮುಂತಾದವುಗಳನ್ನು ಕಂಡು ಅಂಜಿ ಹಿಂಜರಿದರು. ಮರು ಮಾತಾಡದೇ ಬಾದಶಹನ ಆಜ್ಞೆಯಂತೆ ಆ ಇಬ್ಬರೂ ಬ್ರಾಹ್ಮಣರಿಗೆ ಜಯಪತ್ರಗಳನ್ನು ಬರೆದು ಕೊಟ್ಟುಬಿಟ್ಟರು. ಇನ್ನು ರಾಜಸಭೆಗೆ ಬಂದಿದ್ದ ಕೆಲವು ನಿಜವಾದ ವೇದವಿದ್ಯಾ ಪ್ರವೀಣರಾದ ಬ್ರಾಹ್ಮಣರು, ಈ ಬಾದಶಹನ ಸಭೆಯಲ್ಲಿ ಪವಿತ್ರವಾದ ವೇದ ಮಂತ್ರಗಳನ್ನುಚ್ಚರಿಸಿ, ಪಾಪ ಸಂಗ್ರಹಿಸಿ ಕೊಳ್ಳುವದಕ್ಕಿಂತ ಬರೆದುಕೊಟ್ಟು ಪೀಡೆ ಕಳೆದುಕೊಳ್ಳುವದೇ ಒಳ್ಳೇದೆಂದು ಭಾವಿಸಿ ಜಯಪತ್ರ ಬರೆದುಕೊಟ್ಟುಬಿಟ್ಟರು. ಹೀಗಾಗಿ ಜಯಪತ್ರಗಳ ದೊಡ್ಡದೊಂದು ಹೊರೆಯೇ ಆ ಬ್ರಾಹ್ಮಣ ಪಂಡಿತರಿಬ್ಬರಿಗೂ ಲಭಿಸಿದಂತಾಯಿತು. ಬಾದಶಹನು ಆ ಇಬ್ಬರೂ ಬ್ರಾಹ್ಮಣ ಪಂಡಿತರಿಗೆ ಸಾಕಷ್ಟು ದ್ರವ್ಯವನ್ನು ಸಂಭಾವನೆಯಾಗಿ ಕೊಟ್ಟು ಗೌರವಿಸಿದನು. ಆ ಪಂಡಿತರು ಬಾದಶಹನ ಔದಾರ್ಯ ಬುದ್ಧಿಯನ್ನು ಹಾಡಿ ಹೊಗಳಿದರು. ಹಾಗೂ ಬಾದಶಹ ನನ್ನುದ್ದೇಶಿಸಿ, ''ಮಹಾರಾಜಾ ! ನಾವು ನಿಮ್ಮ ರಾಜ್ಯದ ತುಂಬಾ ಸಂಚರಿಸಿ ಗ್ರಾಮಾಂತರಗಳಲ್ಲಿರುವ ಪಂಡಿತರೊಂದಿಗೆ ವಾದ ಮಾಡಲಿಚ್ಛಿಸುತ್ತೇವೆ. ಅದಕ್ಕಾಗಿ ದಯವಿಟ್ಟು ನಮ್ಮ ಪ್ರಯಾಣಕ್ಕೆ ವ್ಯವಸ್ಥೆ ಮಾಡಿಕೊಡುವ ಕೃಪೆ ಮಾಡಬೇಕು !'' ಎಂದು ವಿನಯದಿಂದ ಬೇಡಿಕೊಂಡರು. ಯವನ ರಾಜನು ಅವರಿಗೆ ಎರಡು ಮೇಣೆಗಳನ್ನು ಬೋಯಿಗಳ ಸಮೇತ ವ್ಯವಸ್ಥೆ ಮಾಡಿಕೊಟ್ಟನು. ಅನಾಯಾಸವಾಗಿ ದೊರೆತ ಪ್ರಚಂಡ ವಿಜಯದಿಂದ ಬ್ರಾಹ್ಮಣ ಪಂಡಿತರ ಗರ್ವವು ನೆತ್ತಿಗೇರಿತು.
'ಕುಮಸೀ' ಗ್ರಾಮದಲ್ಲಿ ತ್ರಿವಿಕ್ರಮ ಭಾರತಿ ಎಂಬ ಹೆಸರಿನ ತ್ರಿವೇದಿ ಪಂಡಿತನಿದ್ದಾನೆ. ಎಂಬ ಸುದ್ದಿ ತಿಳಿದ ಆ ಮದಾಂಧ ಪ೦ಡಿತರು. ಕುಮಸಿಗೆ ಬಂದರು. ತ್ರಿವಿಕ್ರಮ ಯತಿಯನ್ನು ಭೆಟ್ಟಿಯಾಗಿ, ತಮ್ಮ ಬಿರುದಾವಳಿಗಳನ್ನು ಹೇಳಿಕೊಂಡು, ಆತನನ್ನು ವಾದಕ್ಕೆ ಆಹ್ವಾನಿಸಿದರು. ತ್ರಿವಿಕ್ರಮ ಯತಿಯು, ಆ ಬ್ರಾಹ್ಮಣರಿಗೆ ವಿನಯದಿಂದ, “ಅಪ್ಪಾ ಪಂಡಿತರೇ ! ಸನ್ಯಾಸಿಯಾದ ನನ್ನೊಂದಿಗೆ ವಾದ ಮಾಡುವದರಿಂದ ನಿಮಗೆ ಯಾವ ಪ್ರಯೋಜನವೂ ದೊರೆಯಲಾರದು ! ಬೇರೆ ಶ್ರೀಮಂತರುಗಳನ್ನು ಹುಡುಕಿಕೊಂಡು ಹೋಗಿರಿ'' ಎಂದು ಸೂಚಿಸಿದರು. ಆದರೆ ಆ ಸೊಕ್ಕಿನ ಪಂಡಿತರು ಅದಕೊಪ್ಪಲಿಲ್ಲ. ಎಲೋ ಯತಿಯೇ ! ನೀನು ನಮ್ಮೊಂದಿಗೆ ವಾದಕ್ಕಿಳಿಯಲು ಅಂಜಿದರೆ, ಜಯಪತ್ರ ಬರೆದು ಕೊಡಬೇಕಾಗುವದು !'' ಎಂದು ಜಂಭದಿಂದ ನುಡಿದರು. ತ್ರಿವಿಕ್ರಮನು ಈ ಪಂಡಿತರನ್ನು ಗುರುಗಳಲ್ಲಿಗೆ ಕರೆದೊಯ್ದು ಸರಿಯಾದ ಶಾಸ್ತಿ ಮಾಡಿಸಬೇಕೆಂಬ ವಿಚಾರದಿಂದ, “ಅಯ್ಯಾ ಪಂಡಿತೋತ್ತಮರೇ ! ಸಮೀಪದಲ್ಲಿರುವ ಗಾಣಗಾಪುರದಲ್ಲಿ ನನ್ನ ಗುರುಗಳಿದ್ದಾರೆ. ಅವರ ಸಮ್ಮುಖದಲ್ಲಿಯೇ ನಾನು ನಿಮಗೆ ಜಯ ಪತ್ರ ಬರೆದುಕೊಡುತ್ತೇನೆ, ಒಂದು ವೇಳೆ ನೀವು ವಾದದಲ್ಲಿ ಗುರುಗಳನ್ನು ಸೋಲಿಸಿದರೆ, ಅವರಿ೦ದಲೂ ಜಯ ಪತ್ರ ದೊರೆಯಬಹುದು. ಕಾರಣ ಅಲ್ಲಿಗೆ ಹೋಗೋಣ ಬನ್ನಿರಿ !” ಎಂದನು. ಪಂಡಿತರು ಅದಕ್ಕೊಪ್ಪಿ ಆಧ್ಯತೆಯಿಂದ ಮೇಣೆ ಏರಿ ಕುಳಿತುಕೊಂಡರು, ಕಾಲು ನಡಿಗೆಯಿಂದ ಹೊರಟ ತ್ರಿವಿಕ್ರಮನಿಗೆ “ಎಲೋ ಯತಿಯೇ ! ನೀನು ಮುಂದೆ ನಡೆಯುತ್ತಾ ಮಾರ್ಗ ದರ್ಶನ ಮಾಡು!” ಎಂದು ಗರ್ವದಿಂದ ಹೇಳಿದರು. ತ್ರಿವಿಕ್ರಮ ಯತಿಯು ಕಾಲು ನಡಿಗೆಯಿಂದ ಮುಂದೆ, ಪಂಡಿತರಿಬ್ಬರೂ ಮೇಣೆಯಲ್ಲಿ ಆತನ ಹಿಂದೆ !” ಹೀಗೆ ಅವರೆಲ್ಲರೂ ಗಾಣಗಾಪುರಕ್ಕೆ ಬಂದು ತಲುಪಿದರು. ತ್ರಿವಿಕ್ರಮನು ಮೇಣೆಗಳನ್ನು ಹೊರಗೆ ನಿಲ್ಲಿಸಿ, ತಾನೊಬ್ಬನೇ ಮಠದೊಳಗೆ ಹೋಗಿ, ಗುರುಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಿ, ಆ ಪಂಡಿತರ ವಿಚಾರ ವನ್ನು ತಿಳಿಸಿದನು. ಗುರುಗಳು ತಮ್ಮ ಶಿಷ್ಯನೊಬ್ಬನನ್ನು ಕಳಿಸಿ, ಹೊರಗಿದ್ದ ಇಬ್ಬರೂ ಪಂಡಿತರನ್ನು ಮಠದ ಆವರಣದಲ್ಲಿ ಕರಿಸಿಕೊಂಡರೆಂಬಲ್ಲಿಗೆ, ಸಾರರೂಪ ಶ್ರೀ ರೂಪ ಗುರು ಚರಿತ್ರೆಯ 25ನೆಯ ಅಧ್ಯಾಯ ಮುಕ್ತಾಯವಾಯಿತು.
Comments
Post a Comment