Shri Guru Charitre - Chapter 24
ಅಧ್ಯಾಯ ೨೪
||ಹರಿಃ ಓಂ ಶ್ರೀ ಗುರುಭ್ಯೋ ನಮಃ ||
ನಾಮಧಾರಕನೇ ಕೇಳು !ಗಾಣಗಾಪುರದ ಸಮೀಪದಲ್ಲಿಯೇ 'ಕುಮಸಿ' ಎಂಬ ಗ್ರಾಮವಿದೆ. ಅಲ್ಲಿ ತ್ರಿವಿಕ್ರಮ ಭಾರತಿ ಎಂಬ ಹೆಸರಿನ ಯತಿಯು ವಾಸವಾಗಿದ್ದನು, ಆತನು ತ್ರಿವೇದಗಳಲ್ಲಿ ಪಾಂಡಿತ್ಯ ಪಡೆದಿದ್ದನು, ಶ್ರೀ ಗುರುಗಳ ಕೀರ್ತಿಯು ಆ ನಾಡಿನಲ್ಲೆಲ್ಲ ಹರಡಿದಾಗ, ಆ ಯತಿಯು ಪಾಂಡಿತ್ಯ ಮದದಿಂದ ಇದೆಲ್ಲಾ ಡೋಂಗಿತನವೇ ಸರಿ !' ಎಂದು ಗುರುಗಳನ್ನು ಜರಿದು ಮಾತಾಡುತ್ತಿದ್ದನು. ಕರ್ಣಕರ್ಣಾಂತರವಾಗಿ ನೃಸಿಂಹ ಸರಸ್ವತಿ ಗುರುಗಳಿಗೆ ಆ ವಿಷಯ ತಿಳಿಯಿತು. ಅವರು ಆ ತ್ರಿವಿಕ್ರಮ ಯತಿಯನ್ನು ಕಾಣಲು ತಾವೇ ಕುಮಸಿಗೆ ಹೊರಟರು. ಗ್ರಾಮಾಧಿಪತಿಯು ಗುರುಗಳ ಈ ಪ್ರಯಾಣಕ್ಕೆ ವೈಭವದ ಸಿದ್ಧತೆ ಮಾಡಿದನು. ಗುರುಗಳನ್ನು ಸಿಂಗರಿಸಿದ ಮೇಣೆಯಲ್ಲಿ ಕುಳ್ಳಿರಿಸಿ ಕೊಂಡು, ಸೈನ್ಯ ಸಮೇತನಾಗಿ ತಾನೂ ಗುರುಗಳೊಂದಿಗೆ ಕುಮಸಿಗೆ ಹೊರಟನು, ತ್ರಿವಿಕ್ರಮ ಭಾರತಿಯು ಪ್ರತಿನಿತ್ಯ ನರಸಿಂಹ ದೇವರ ಮಾನಸ ಪೂಜೆ ಮಾಡುತ್ತಿದ್ದನು. ಆದರೆ ಆ ದಿವಸ ಆತನ ಮನಸ್ಸು ಚಂಚಲವಾಯಿತು, ಎಷ್ಟೇ ಪ್ರಯತ್ನ ಮಾಡಿದರೂ ಚಿತ್ತದಲ್ಲಿ ನರಸಿಂಹ ದೇವರ ಮೂರ್ತಿ ನೆಲೆಗೊಳ್ಳದಾಯಿತು. ಹೀಗೇಕಾಗುತ್ತಿದೆಯೆಂದು ಆತನು ವಿಷಾದದಿ೦ದ ಕಳವಳಗೊಳ್ಳುತ್ತಿದ್ದಂತೆಯೇ ಗುರುಗಳು ಕುಮಸಿ ಗ್ರಾಮದಲ್ಲಿ ಪ್ರವೇಶ ಮಾಡಿದರು. ತ್ರಿವಿಕ್ರಮ ಭಾರತಿಗೆ ಗುರುಗಳು ತಾನು ನಿತ್ಯ ಆರಾಧಿಸುತಿದ್ದ ನರಸಿಂಹ ಮೂರ್ತಿಯಂತೆಯೇ ಗೋಚರಿಸಿದರು. ಆತನು ಭಕ್ತಿಪುಲಕಿತನಾಗಿ ಓಡಿ ಬಂದು ಗುರುಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಿದನು. ನಮಸ್ಕಾರ ಮಾಡಿ ಮೇಲೆದ್ದು ನಿಂತಾಗ ಇಡೀ ಸೈನ್ಯದಲ್ಲಿಯ ಪ್ರತಿಯೊಬ್ಬ ಕಾಲಾಳುಗಳೂ (ಸೈನಿಕರು) ಆತನಿಗೆ ನರಸಿಂಹ ರೂಪದಲ್ಲಿಯೇ ಕಾಣಿಸತೊಡಗಿದರು. ತ್ರಿವಿಕ್ರಮ ಭಾರತಿಗೆ, ಯಾರಿಗೆ ನಮಸ್ಕರಿಸಬೇಕು ? ಏನು ಮಾಡಬೇಕು ? ಎಂಬುದೊಂದೂ ತಿಳಿಯದಂತಾಯಿತು. ಆತನು ಕಕ್ಕಾ ಬಿಕ್ಕಿಯಾಗಿ ಮೇಣೆಯಲ್ಲಿ ಕುಳಿತಿದ್ದ ಗುರುನಾಥನ ಪಾದಗಳನ್ನು ಗಟ್ಟಿಯಾಗಿ ಹಿಡಿದುಕೊಂಡನು. ಗುರುಗಳನ್ನು ಕುರಿತು, “ಹೇ ಜಗದ್ಗುರುವೇ! ನೀನು ತ್ರಿಮೂರ್ತಿಗಳ ಅವತಾರನಿರುವಿ, ಸರ್ವವ್ಯಾಪಿಯಾದ ನಿನ್ನ ವಿಶ್ವರೂಪವನ್ನು ಪಾಮರನಾದ ನಾನು ಈ ಚರ್ಮ ಚಕ್ಷುಗಳಿಂದ ನೋಡಲು ಅಸಮರ್ಥನಾಗಿರುವೆ. ನೀನೇ ನನ್ನ ಮಾನಸಾಂತರ್ಗತ ನರಸಿಂಹ ಮೂರ್ತಿಯೆಂಬುದನ್ನರಿಯದೇ ನಾನು ಅಪರಾಧ ಮಾಡಿದೆ ! ದೇವಾ ! ದಯವಿಟ್ಟು ನನ್ನನ್ನು ಕ್ಷಮಿಸು ! ನಿನ್ನ ಶಾಂತ ಸ್ವರೂಪ ತೋರಿಸು !” ಎನ್ನುತ್ತ ಪಾದಗಳಿಗೆ ಪದೇ ಪದೇ ತನ್ನ ಹಣೆಯನ್ನು ಹಚ್ಚತೊಡಗಿದನು. ಆಗ ಗುರುಗಳೂ ಹಸನ್ಮುಖದಿಂದ, ನೀನು ನಿತ್ಯದಲ್ಲೂ ನಮಗೆ 'ಡೋಂಗೀಯತಿ' ಎಂದು ನುಡಿಯುತ್ತ; ವಿರೋಧ ಭಕ್ತಿಯನ್ನು ಪ್ರಕಟಗೊಳಿಸಿದ್ದರಿಂದಲೇ ನಾವು ನೀನಿದ್ದಲ್ಲಿಗೆ ಬರಬೇಕಾಯಿತು.” ಎಂದು ನುಡಿಯುತ್ತ ಅಭಯ ಹಸ್ತ ತೋರಿದರು. ತಕ್ಷಣವೇ ತ್ರಿವಿಕ್ರಮನಿಗೆ ಆ ಸೈನಿಕರೆಲ್ಲ ತಮ್ಮ ನಿಜರೂಪದಲ್ಲಿ ಕಾಣಿಸತೊಡಗಿದರು. ತ್ರಿವಿಕ್ರಮ ಭಾರತೀಯು ಗುರುಗಳನ್ನು ಕೊಂಡಾಡುತ್ತ ದೇವಾ ಇಂದಿಗೆ ನಿನ್ನ ದರ್ಶನದಿಂದ ನನ್ನ ಜೀವನ ಪಾವನವಾಯಿತು. ಯತಿಯಾದ ನಾನು ವಿದ್ಯಾ ಮದದಿಂದ ನಿನ್ನನ್ನು ನಿಂದಿಸಿದೆ. ಆದರೂ ಭಕ್ತವತ್ಸಲನಾದ ನೀನು ಅದನ್ನು ಗಣನೆಗೆ ತಾರದೇ ನನಗೆ ಜ್ಯೋತಿ ಸ್ವರೂಪನಾಗಿ ದರ್ಶನಕೊಟ್ಟು, ಸಂಕುಚಿತ ಭಾವನೆಯೆಂಬ ನನ್ನ ಅಜ್ಞಾನದ ಕತ್ತಲು ಕಳೆದು ಉದ್ಧಾರ ಮಾಡಿದಿ ! ಶ್ರೀ ಕೃಷ್ಣನು ಅರ್ಜುನನಿಗೆ ವಿಶ್ವರೂಪ ತೋರಿದಂತೆ, ಇಂದು ನೀನೆನಗೆ ನಿನ್ನ ವಿಶ್ವ ರೂಪ ತೋರಿಸಿದಿ ! ನಾನಿಂದು ಪುನೀತನಾದೆ !' ಎಂದು ಪರಿ ಪರಿಯಾಗಿ ಸ್ತುತಿಸಿದನು. ಗುರುಗಳು ಆತನ ಸ್ತೋತ್ರದಿಂದ ಸಂಪ್ರೀತರಾಗಿ, ''ತ್ರಿವಿಕ್ರಮಾ ! ನಿನಗಿನ್ನು ಶಾಶ್ವತವಾದ ಸದ್ಧತಿಯು ದೊರೆಯುವದು, ಯಾವದಕ್ಕೂ ಚಿಂತಿಸಬೇಡ'' ಎಂದು ಅಭಯವಚನ ನೀಡಿದರೆಂಬಲ್ಲಿಗೆ ಸಾರರೂಪ ಶ್ರೀ ಗುರುಚರಿತ್ರೆಯ 24ನೇಯ ಅಧ್ಯಾಯ ಮುಗಿಯಿತು.
Comments
Post a Comment