Shri Guru Charitre - Chapter 23
ಅಧ್ಯಾಯ ೨೩
||ಹರಿಃ ಓಂ ಶ್ರೀ ಗುರುಭ್ಯೋ ನಮಃ ||
ನಾಮಧಾರಕನೇ ಕೇಳು ! ಮರುದಿವಸ ಮುಂಜಾನೆ ತೋಟಿಗನೊಬ್ಬನು, ಬ್ರಾಹ್ಮಣನ ಎಮ್ಮೆಯನ್ನು ಭಾಡಿಗೆಗೆ ಕೇಳುವದಕ್ಕಾಗಿ ಅವನ ಮನೆಗೆ ಬಂದನು, ಬ್ರಾಹ್ಮಣನಿಂದ ಆ ಎಮ್ಮೆಯು ಈಗ ಒಂದೊಂದು ಹೊತ್ತಿಗೆ ಎರಡು ತಂಬಿಗೆ ಹಾಲು ಕರೆಯುತಿರುವ ವಿಷಯವು ತಿಳಿದು ಬಂತು. ಹಾಲು ಕರೆಯುತ್ತಿರುವ ಎಮ್ಮೆಯನ್ನು ಭಾಡಿಗೆಗೆ ದುಡಿಸಲಾರೆನೆಂದು ಬ್ರಾಹ್ಮಣನು ಸ್ಪಷ್ಟವಾಗಿ ತಿಳಿಸಿದನು, ತೋಟಿಗನು ಬ್ರಾಹ್ಮಣನ ಬರಡೆಮ್ಮೆಯು ಶ್ರೀ ಗುರುಗಳ ಕೃಪೆಯಿಂದ ಎರಡೆರಡು ತಂಬಿಗೆ ಹಾಲು ಹಿಂಡುತ್ತಿರುವ ವಿಷಯವನ್ನು ಇಡೀ ಗಾಣಗಾಪುರದ ತುಂಬಾ ಪ್ರಚಾರ ಮಾಡಿಬಿಟ್ಟನು. ಆ ಊರಿನ ಪಾಳೆಯಗಾರನಿಗೂ ಈ ಸುದ್ದಿ ಹತ್ತಿತು. ಆತನು ಸ್ವತಃ ಬ್ರಾಹ್ಮಣನ ಮನೆಗೆ ಬಂದು ಅದರ ಸತ್ಯತೆಯನ್ನು ನಿದರ್ಶನ ಮಾಡಿಕೊಂಡನು. ಗುರುಗಳು ದೈವೀ ಪುರುಷರೆಂಬ ಭಕ್ತಿಯು ಆತನಲ್ಲಿ ಉತ್ಪನ್ನವಾಯಿತು. ತಕ್ಷಣವೇ ತನ್ನ ಮನೆಯ ಪರಿವಾರದವರನ್ನೆಲ್ಲ ಕರೆದುಕೊಂಡು ಸಂಗಮ ಕ್ಷೇತ್ರಕ್ಕೆ ಬಂದನು. ಗುರುದರ್ಶನ ಪಡೆದು ಸಾಷ್ಟಾಂಗ ನಮಸ್ಕಾರ ಮಾಡಿ, “ಗುರುದೇವಾ! ನೀವು ಅಗಾಧ ಮಹಿಮರೆಂದು ಅರ್ಥಮಾಡಿಕೊಳ್ಳಲಾರದ ಪಾಮರರು ನಾವು ! ಭಕ್ತ ವತ್ಸಲರೆಂದು ಬಿರುದು ಪಡೆದ ಪರಮಾತ್ಮ ಸ್ವರೂಪರು ನೀವು !! ತಾವು ದಯವಿಟ್ಟು ನನ್ನದೊಂದು ವಿನಂತಿಯನ್ನು ಮಾನ್ಯ ಮಾಡಬೇಕು ! ತಮ್ಮ ಚರಣ ಧೂಳಿಯಿಂದ ಇಡೀ ಗಾಣಗಾಪುರವನ್ನು ಪವಿತ್ರಗೊಳಿಸಿ ನೀವು ಅಲ್ಲಿಯೇ ನೆಲೆಸಬೇಕು !” ಎಂದು ಪ್ರಾರ್ಥಿಸಿಕೊಂಡನು. ಆಗ ಗುರುಗಳು ಆ ದೊರೆಯನ್ನು ಕುರಿತು, ಅಯ್ಯಾ ! ನಾವು ಅರಣ್ಯದಲ್ಲಿರಬೇಕಾದ ಸನ್ಯಾಸಿಗಳು, ಗ್ರಾಮದಲ್ಲಿ ವಾಸ ಮಾಡುವ ಹವ್ಯಾಸ ನಮಗೇಕೆ ?'' ಎಂದು ಪ್ರಶ್ನೆ ಮಾಡಿದರು. ಅದಕ್ಕೆ ಗ್ರಾಮಾಧಿಪತಿಯು ವಿನಯದಿಂದ, ಸ್ವಾಮಿ ದಯವಿಟ್ಟು ನನ್ನ ವಿನಂತಿಯನ್ನು ಉಪೇಕ್ಷಿಸಬೇಡಿ! ಭಕ್ತೋದ್ಧಾರಕ್ಕಾಗಿ ನೀವು ಗಾಣಗಾಪುರದಲ್ಲಿ ವಾಸ್ತವ್ಯ ಮಾಡುವದು ಸಮಂಜಸವಾಗಿದೆ. ಅಲ್ಲಿ ನಾವು ನಿಮಗಾಗಿ ಒಂದು ಮಠ ಕಟ್ಟಿಸುತ್ತೇವೆ. ತಾವು ಅಲ್ಲಿ ವಾಸ ಮಾಡಿಕೊಂಡು, ಜಪ-ತಪ-ಭಿಕ್ಷೆ ಅನುಷ್ಠಾನಾದಿಗಳನ್ನು ಆಚರಿಸುವ ಕೃಪೆ ಮಾಡಬೇಕು!” ಎಂದು ಆತ್ಮೀಯತೆಯ ಭಕ್ತಿಯಿಂದ ಹೇಳಿಕೊಳ್ಳತೊಡಗಿದನು. ಗುರುಗಳು ಇನ್ನು ತಮ್ಮ ಅವತಾರದ ಉದ್ದೇಶಗಳನ್ನು ಈಡೇರಿಸಿಕೊಂಡು, ಭಕ್ತೋದ್ಧಾರದ ಕಾರ್ಯದಲ್ಲಿ ನಿರತರಾಗುವ ಉದ್ದೇಶದಿಂದ ಆ ಗ್ರಾಮದ ಅಧಿಪತಿಗೆ 'ತಥಾಸ್ತು' ಎಂದು ಅಭಯ ನೀಡಿದರು. ಕೂಡಲೇ ರಾಜನು ಮೇಣೆಯೊಂದನ್ನು ತರಿಸಿ, ಅದರಲ್ಲಿ ಗುರುಗಳನ್ನು ಕುಳ್ಳಿರಿಸಿಕೊಂಡು, ವಾದ್ಯ ಮೇಳದೊಂದಿಗೆ ಮೆರವಣಿಗೆ ಮಾಡಿಸುತ್ತ ವೈಭವದಿಂದ ಗಾಣಗಾಪುರಕ್ಕೆ ಕರೆ ತ೦ದನು. ಮೆರವಣಿಗೆಯು ಊರಿನ ಪಶ್ಚಿಮ ದ್ವಾರದ ಹತ್ತಿರ ಬಂದ ಕೂಡಲೇ, ಅಲ್ಲಿ ಅಶ್ವತ್ಥ ಮರದಲ್ಲಿ ವಾಸವಾಗಿದ್ದ ಬ್ರಹ್ಮ ರಾಕ್ಷಸವೊಂದು ಧಾವಿಸಿ ಬಂದು ಗುರುಗಳ ಪಾದಗಳ ಮೇಲೆ ಬಿದ್ದು ಹೊರಳಾಡುತ್ತ ಗುರುವೇ ನನ್ನನ್ನುದ್ಧಾರ ಮಾಡು ! ಎಂದು ಅಂಗಲಾಚತೊಡಗಿತು. ಗುರುಗಳು ಅದಕ್ಕೆ ನೀನು ಸಂಗಮದಲ್ಲಿ ಸ್ನಾನ ಮಾಡಿದರೆ ನಿನ್ನ ಶಾಪ ಪರಿಹಾರವಾಗಿ ಜೀವನ್ಮುಕ್ತಿ ಪಡೆಯುವಿ ಎಂದು ಅಭಯ ನೀಡಲು ಅದು ಗುರುಗಳನ್ನು ಕೊಂಡಾಡುತ್ತ ಸಂಗಮದತ್ತ ಹೊರಟು ಹೋಯಿತು. ಇದೆಲ್ಲವನ್ನೂ ಕಣ್ಣಾರೆ ಕಂಡ ಭಕ್ತರು ಗುರುಗಳು ತ್ರಿಮೂರ್ತಿಗಳ ಅವತಾರವೆಂಬುದನ್ನು ಮನಗಂಡು, ಹರ್ಷದಿಂದ ''ಶ್ರೀ ಗುರುದೇವದತ್ತ!'' ಎಂದು ಏಕ ಕಂಠದಿ೦ದ ಜಯ ಘೋಷ ಮಾಡಿದರು. ಗ್ರಾಮಾಧಿಪತಿಯು ಗುರುವಾಜ್ಞೆಯಂತೆ, ಆ ಅಶ್ವತ್ಥ ವೃಕ್ಷದ ಸನ್ನಿಧಿಯಲ್ಲಿಯೇ ಒಂದು ಮಠವನ್ನು ಗುರುಗಳಿಗಾಗಿ ಕಟ್ಟಿಸಿಕೊಟ್ಟನು. ಗುರುಗಳು ಅಲ್ಲಿಂದ ಪ್ರತಿನಿತ್ಯ ಸಂಗಮಕ್ಕೆ ಹೋಗಿ ಅನುಷ್ಠಾನ ಮುಗಿಸಿಕೊಂಡು ಬರುತ್ತಿದ್ದರು. ರಾಜನು ಸಂಗಮದವರೆಗೆ ಗುರುಗಳನ್ನು ಮೇಣೆಯಲ್ಲಿ ಕರೆದೊಯ್ದು ಬಿಟ್ಟು ಬರುತ್ತಿದ್ದನು, ಅವರು ಅನುಷ್ಠಾನ ಮುಗಿಸಿಕೊಂಡು ಬರುವ ವೇಳೆಗೆ ಮಹಾ ದ್ವಾರದಲ್ಲಿ ಕಾಯುತ್ತಿದ್ದು, ಅವರನ್ನು ಭಕ್ತಿಯಿಂದ ಸ್ವಾಗತಿಸುತ್ತಿದ್ದನು. ನಾಮಧಾರಕಾ! ಶ್ರೀ ಗುರುಗಳು ಭಕ್ತಾಧೀನರಾದದ್ದರಿಂದಲೇ ಆ ರಾಜನ ವಿನಂತಿಯನ್ನು ಮಾನ್ಯ ಮಾಡಿ ಗಾಣಗಾಪುರದಲ್ಲಿ ನೆಲೆಗೊಂಡರೆಂದು ಸಿದ್ಧಮುನಿಯು ಹೇಳಿದನೆಂಬಲ್ಲಿಗೆ ಸಾರರೂಪ ಶ್ರೀ ಗುರು ಚರಿತ್ರೆಯ 23ನೆಯ ಅಧ್ಯಾಯ ಮುಗಿಯಿತು.
Comments
Post a Comment