Shri Guru Charitre - Chapter 1

 



ಅಧ್ಯಾಯ – ೧

ಹರಿ ಓಂ ಶ್ರೀಮನ್ ಮಹಾಗಣಾಧಿಪತಯೇ ನಮಃ | 
ಸರಸ್ವತೆಯೆ ನಮಃ||ಗುರುಭ್ಯೋ ನಮಃ॥

ವಿಘ್ನ ವಿನಾಶಕನಾದ ಗಣಪತಿಯೇ ನಿನಗೆ ನಮಸ್ಕರಿಸುವೆನು. ಮತಿಪ್ರದಾಯಕಳಾದ ಸರಸ್ವತೀ ದೇವಿಯೇ ! ನಿನಗೆ ನಮಸ್ಕರಿಸುವೆನು. ಸೃಷ್ಟಿ, ಸ್ಥಿತಿ, ಲಯಗಳಿಗೆ ಕಾರಣೀಭೂತರಾದ ಬ್ರಹ್ಮ ವಿಷ್ಣು ಮಹೇಶ್ವರರೇ ! ನಿಮಗೆ ನನ್ನ ಸಾಷ್ಟಾಂಗ ನಮಸ್ಕಾರಗಳು. ತ್ರಿಮೂರ್ತಿ ರೂಪನಾದ ದತ್ತಾ ತ್ರೆಯ ಮಹಾ ಗುರುವೇ ! ನಿನಗೆ ನನ್ನ ಅನಂತ ನಮಸ್ಕಾರಗಳನ್ನು ಸಲ್ಲಿಸುತ್ತೇನೆ, ಶ್ರೀ ಗುರು ಚರಿತ್ರೆಯನ್ನು ವಿವರಿಸಲು, ನೀವೆಲ್ಲರೂ ನನಗೆ ಶ್ರದ್ಧೆ ಭಕ್ತಿ ಜ್ಞಾನಾದಿಗಳನ್ನು ನೀಡಿ ಆಶೀರ್ವದಿಸಿ.

ಶ್ರೀ ಗುರು ಚರಿತ್ರೆಯು ಕಾಮಧೇನು, ಕಲ್ಪವೃಕ್ಷಗಳಂತೆ ತಕ್ಷವೇ ಫಲದಾಯಕವಾಗಿರುತ್ತದೆ. ಅದನ್ನು ಓದುವದರಿಂದಲೂ, ಕೇಳು ವದರಿ೦ದಲೂ, ಸುಜ್ಞಾನ ಉಂಟಾಗುತ್ತದೆ, ಬ್ರಹ್ಮ ವಿಷ್ಣು ಮಹೇಶ್ವರರು ದತ್ತಾತ್ರೇಯ ರೂಪದಿಂದ ಭೂಮಿಯಲ್ಲಿ ಅವತರಿಸಿದರು. ಮುಂದೆ ಅವರೇ 'ಶ್ರೀಪಾದ ಶ್ರೀವಲ್ಲಭ' ಎಂಬ ಹೆಸರಿಂದ ಕುರುವ ಪುರದಲ್ಲಿ (ಈಗಿನ ಕುರು ಗಡ್ಡೆಯಲ್ಲಿ) ಅವತರಿಸಿ,ಕೆಲಕಾಲ ಭಕ್ತದೋದರಕ ಕಾರ್ಯ ಮಾಡಿದರು. ನಂತರ, ಅದೇ ಗುರುಗಳೇ ಶ್ರೀ ನೃಸಿಂಹ ಸರಸ್ವತೀ ಯತಿಗಳೆಂಬ ಅಭಿ ದಾನದಿಂದ ಅವತರಿಸಿ, ಔದುಂಬರ (ಭಿಲ್ಲವಡಿ) ನರಸಿಂಹವಾಡಿ, ಗಾಣಗಾಪುರದಲ್ಲಿ ವಾಸ ಮಾಡಿದರು. ಗುರುಗಳು ವಾಸ ಮಾಡಿದ ಗ್ರಾಮಗಳ ಮಹಿಮೆಯು ಅಪಾರವಾಗಿರುತ್ತದೆ. ಪ್ರತಿನಿತ್ಯ ಅಲ್ಲಿ ಜಾತ್ರೆಗೆ ಬ೦ದು ಭಕ್ತರು ಸೇರುತ್ತಾರೆ. ಶ್ರದ್ಧೆ ಭಕ್ತಿಗಳಿಂದ ಅಲ್ಲಿ ನಿಂತು, ಸೇವೆ, ಆರಾಧನೆ ಗಳನ್ನು ಮಾಡಿ, ತಮ್ಮ ಮನೋಪೇಕ್ಷೆಯ ಫಲಗಳನ್ನು ಪಡೆದು ಧನ್ಯ ರಾಗಿ ಹೋಗುತ್ತಾರೆ

ಇಂಥಾ ಮಹಾಮಹಿಮರಾದ ಗುರುಗಳ ಚರಿತ್ರೆಯನ್ನು ಬರೆ ಯುವದಕ್ಕಾಗಿ ಪ್ರೇರಣೆ ನೀಡಿರೆಂದು,'' ನಾನು ನನ್ನ ಪೂರ್ವಜರನ್ನು ಈಗ ಪ್ರಾರ್ಥಿಸಿಕೊಳ್ಳುತ್ತೇನೆ. ಆಪಸ್ತಂಭ ಶಾಖೆಯ, ಕೌಂಡಿಣ್ಯ ಗೋತ್ರದ ಸಾಯ೦ದೇವನೆ೦ಬವನು, ನಮ್ಮ ಮನೆತನದ ಮೂಲ ಪುರುಷನು. ಆತನ ಮಗನು ನಾಗನಾಥನು. ನಾಗನಾಥನ ಮಗ ದೇವರಾಯನು. ನನ್ನ ತಂದೆ ಯಾದ ಗಂಗಾಧರನು, ಈ ದೇವರಾಯನ ಮಗನು. ನಮ್ಮ ಪೂರ್ವಜ ರೆಲ್ಲರೂ ಗುರುಗಳಲ್ಲಿ ಅಪಾರ ಭಕ್ತಿಯುಳ್ಳವರಾಗಿದ್ದರು. ಅವರೆಲ್ಲರಿಗೂ ನನ್ನ ಭಕ್ತಿಯ ನಮಸ್ಕಾರಗಳು ಸಲ್ಲಲಿ..... ಪರಮ ಪತಿವ್ರತೆಯಾದ ನನ್ನ ತಾಯಿ ಚೆಂಪಾದೇವಿಗೂ ನಮನಗಳನ್ನು ಸಲ್ಲಿಸಿ, ಶ್ರೀಗುರು ಚರಿತ್ರೆಯನ್ನು ಪ್ರಾರಂಭಿಸುತ್ತೇನೆ. ಗುರುಗಳಾದ ನರಸಿಂಹ ಸರಸ್ವತಿ ಯತಿಗಳ ಹೆಸರೇ ನನ್ನದಾಗಿರುವದರಿಂದ, ಅರ್ಥಾತ್ ನನ್ನ ಹೆಸರೂ 'ಸರಸ್ವತಿ' ಎಂದು ಇರುವ ಪ್ರಯುಕ್ತ, ನಾನು ನನ್ನ ಹೆಸರನ್ನು ''ನಾಮಧಾರಕ'' ಎ೦ದು ಸೂಚ್ಯ ವಾಗಿ ಇಟ್ಟುಕೊಂಡು, ಈ ಪವಿತ್ರ ಕಥಾನಕವನ್ನು ಆರಂಭಿಸುತ್ತೇನೆ.

ನಾಮಧಾರಕನೆ೦ಬ ಗುರುಭಕ್ತನು ಬಹಳಷ್ಟು ಕಷ್ಟ-ನಷ್ಟಗಳಿಗೆ ಸಿಕ್ಕು, ಪ್ರತಿನಿತ್ಯ ಗುರುಧ್ಯಾನದಲ್ಲಿಯೇ ಬಹು ಪ್ರಯಾಸದಿಂದ ಕಾಲ ಕಳೆಯುತ್ತಿದ್ದನು. ಒಂದು ಸಲ ಆತನು ತನ್ನ ಕಷ್ಟ ವಿಮೋಚನೆಗಾಗಿ, ಗುರು ದರ್ಶನ ಮಾಡಿಕೊಳ್ಳಲೇಬೇಕೆಂಬ ಮನೋ ನಿರ್ಧಾರದಿಂದ ಗಾಣಗಾಪುರಕ್ಕೆ ಹೊರಟನು, ಗುರುದರ್ಶನವಾಗಬೇಕು; ಇಲ್ಲವೇ ತನ್ನ ದೇಹ ಪತನವಾಗಬೇಕು ! ಎಂಬ ಮನೋ ನಿರ್ಧಾರದಿಂದ ಆತನು ಹಗಲು ರಾತ್ರಿಯೆನ್ನದೇ ಅಖಂಡವಾಗಿ ಗುರುನಾಮಸ್ಮರಣೆ ಮಾಡುತ್ತ ಸಾಗಿದ್ದನು.

ಗುರುಚರಣಗಳಲ್ಲಿಯೇ ಆತನ ಮನಸ್ಸು ಲೀನವಾದದ್ದರಿಂದ, ದೇಹದ ಆಯಾಸ, ಹಸಿವೆ, ನೀರಡಿಕೆಗಳ ಕಡೆಗೆ ಅವನ ಗಮನವಿರಲಿಲ್ಲ. ಆತನು ಮನಸ್ಸಿನಲ್ಲಿಯೇ ಗುರುಗಳನ್ನು ಕುರಿತು ಈ ರೀತಿ ಪ್ರಾರ್ಥಿಸ ತೊಡಗಿದ್ದನು. ಅದು ಹೇಗೆಂದರೆ “ಹೇ ದಯಾಘನನಾದ ಗುರುದೇವಾ! ನನ್ನ ತಂದೆ-ತಾಯಿ ಬಂಧು-ಬಳಗ ಎಲ್ಲವೂ ನೀನೇ ಆಗಿರುವಿ. ನಿನ್ನ ಹೊರತಾಗಿ ನನ್ನ ಈ ತರದ ದೀನಾವಸ್ಥೆಯನ್ನು ಕಂಡು ನೀನು ಸುಮ್ಮನಿರುವಿಯಲ್ಲಾ? ಅಂದ ಮೇಲೆ ನಿನಗೆ ಕೃಪಾಸಾಗರನೆಂದು ಹೇಗೆ ಕರೆಯಬೇಕು ? ನೀನು ತ್ರಿಮೂರ್ತಿರೂಪನು. ಇಡೀ ವಿಶ್ವದಲ್ಲಿಯ ಇರುವೆ ಮೊದಲ್ಗೊಂಡು ಎಂಭತ್ತುನಾಲ್ಕು ಲಕ್ಷ ಜೀವ ರಾಶಿಗಳಿಗೂ ದಾತೃವೆನಿಸಿರುವಿ. ಅಂದ ಮೇಲೆ ನಿನ್ನನ್ನು ಬಿಟ್ಟು ನಾನು ಬೇರೆ ಯಾರಲ್ಲಿ ಮೊರೆಯಿಡಲಿ ?

ಒಂದು ವೇಳೆ ನನ್ನಿಂದ ಏನಾದರೂ ಪಡೆದುಕೊಂಡು ಫಲಕೊಡ ಬೇಕೆಂಬ ವಿಚಾರ ನಿನಗಿದ್ದರೆ, ನಾನು ನಿರುಪಾಯನು. ಯಾಕೆಂದರೆ ಮಗುವಿಗೆ ಹಸಿವೆಯಾದಾಗ ಅಳುವದೊಂದನ್ನು ಬಿಟ್ಟರೆ ಇನ್ನೇನೂ ಗೊತ್ತಿರುವದಿಲ್ಲ, ತಾಯಿಯಾದವಳೇ ತನ್ನ ಮಗುವಿನ ರೋದನದ ಧ್ವನಿಯನ್ನಾಲಿಸಿ, ಧಾವಿಸಿ ಬಂದು, ಮೊಲೆಯುಣಿಸುತ್ತಾಳೆ, ಅದರಂತೆ ನಿನ್ನ ನಾಮಸ್ಮರಣೆ ಮಾಡುವದೊಂದನ್ನುಳಿದು ನನಗೇನೂ ಗೊತ್ತಿಲ್ಲ, ನೀನೇ ನನ್ನ ದೀನ ಸ್ಥಿತಿಯನ್ನು ಗುರುತಿಸಿ, ಉದ್ಧರಿಸಬೇಕಾದದ್ದು ನಿನ್ನ ಹೊಣೆಗಾರಿಕೆಯಾಗಿದೆ. ನನ್ನ ತಂದೆ-ತಾತ- ಮುತ್ತಾತಂದಿರ ಕಾಲದಿಂದಲೂ ನಮ್ಮ ಮನೆತನದವರೆಲ್ಲ ನಿನ್ನ ಆರಾಧಕರಾಗಿದ್ದೇವೆ. ಹೀಗಿದ್ದೂ ನೀನೇಕೆ ನನ್ನ ಮೇಲೆ ಕೃಪೆ ಮಾಡದಾಗಿರುವಿ ? ನಾನು ಮಾಡಿರುವ ತಪ್ಪಾದರೂ ಏನು ? ಈ ದಿವಸ ಈ ದೇಹ ಪತನವಾದರೂ ಚಿಂತೆಯಿಲ್ಲ; ನಿನ್ನ ದರ್ಶನ ಪಡೆಯದೇ ನಾನು ಬಿಡುವದಿಲ್ಲ' ಎಂದು ಅನನ್ಯ ಭಕ್ತಿ-ನಿಷ್ಠೆಗಳಿಂದ ಮಾರ್ಗ ಕ್ರಮಿಸುತ್ತಿರಲು ಕೃಪಾಳುವಾದ ಗುರುದೇವನು ತಕ್ಷಣವೇ ಆತನ ಚಿತ್ತದಲ್ಲಿ ಪ್ರಕಟನಾದನು. ನಾಮಧಾರಕನು ಆನಂದದಿಂದ ಗುರುಮೂರ್ತಿಯನ್ನು ಶೋಡಶೋಪಚಾರಗಳಿಂದ ಪೂಜಿಸಿದನೆ೦ಬಲ್ಲಿಗೆ, ಸಾರರೂಪ ಗುರುಚರಿತ್ರೆಯ ಮೊದಲನೇ ಅಧ್ಯಾಯವು ಮುಗಿಯಿತು.

Comments

Popular posts from this blog

Hanumane Tandeyu Hanumane Thayiyu lyrics

Sankshipta Guru Charitre in kannada

Sri Rama Chandirane