Shri Guru Charitre - Chapter 7



ಅಧ್ಯಾಯ ೭

||ಹರಿಃ ಓಂ ಶ್ರೀ ಗುರುಭೋನಮಃ || 

ಸಿದ್ಧಮುನಿಯು ಚರಿತ್ರೆಯನ್ನು ಮುಂದುವರಿಸುತ್ತಾ ನಾಮಧಾರಕನೇ ! ಈ ಗೋಕರ್ಣ ಕ್ಷೇತ್ರದ ಮಹಿಮೆಯನ್ನು ಹೇಳುತ್ತೇನೆ ಕೇಳು !” ಇಕ್ಷಾಕುವಂಶದ “ಮಿತ್ರಸಹ'ನೆಂಬ ಹೆಸರಿನ ರಾಜನು ಒಂದು ದಿನ ಬೇಟೆಗೆ ಹೋದಾಗ್ಗೆ ಒಬ್ಬ ರಾಕ್ಷಸನನ್ನು ಸ೦ಹರಿಸಿದನು. ಅದರ ಸೇಡು ತೀರಿಸಿಕೊಳ್ಳಬೇಕೆಂಬ ಉದ್ದೇಶದಿಂದ ಆತನ ತಮ್ಮನಾದ 'ಬಲಿ' ಎಂಬ ರಾಕ್ಷಸನು, ಕಪಟ ವೇಷದಿಂದ ರಾಜನಿಗೆ ಸೇವಕನಾಗಿ ನಿಂತನು. ಒಂದು ದಿನ ಮಿತ್ರ ಸಹನ ಮನೆಯಲ್ಲಿ ಶ್ರಾದ್ಧವಿತ್ತು ರಾಜನಿಂದ ವಶಿಷ್ಠಾದಿ ಋಷಿಗಳು, ಬ್ರಾಹ್ಮಣ ಸ್ಥಾನಕ್ಕೆ ಆಮಂತ್ರಿಸಲ್ಪಟ್ಟಿದ್ದರು, ಸೇಡು ತೀರಿಸಿಕೊಳ್ಳುವದಕ್ಕಾಗಿ ಸಮಯ ಕಾಯುತ್ತಿದ್ದ ಸೇವಕ ರೂಪದ ರಾಕ್ಷಸನು, ಯಾರಿಗೂ ಗೊತ್ತಾಗದಂತೆ ನರಮಾಂಸದಿಂದ ಅಡುಗೆಯನು ಸಿದ್ಧಪಡಿಸಿದ್ದನು. ಬ್ರಾಹ್ಮಣರಿಗೆ ಅದೇ ಅಡುಗೆಯನ್ನು ಎಲೆಗೆ ಬಡಿಸಲಾಯ್ತು, ಜ್ಞಾನಿಗಳಾದ ವಶಿಷ್ಟರಿಗೆ ಅದು ಗೊತ್ತಾಗಿ, ರಾಜನ ಮೇಲೆ ಕೋಪಗೊ೦ಡು, “ತಂದೆಯ ಶ್ರಾದ್ಧದ ದಿವಸ ಬ್ರಾಹ್ಮಣರಿಗೆ ನರಮಾಂಸ ಬಡಿಸಿದ ನೀನು ಹನ್ನೆರಡು ವರ್ಷ ರಾಕ್ಷಸನಾಗಿ ಸಂಚರಿಸು !'' ಎಂದು ಶಾಪಕೊಟ್ಟರು. ಕೂಡಲೇ ರಾಜನು ಕಲ್ಮಷಪಾದನೆಂಬ ಹೆಸರಿನ ರಾಕ್ಷಸನಾಗಿ ಕಾಡು ಸೇರಿದನು. ಒಂದು ದಿವಸ ಕಲ್ಮಷಪಾದನು ಹಸಿವೆಯಿಂದ ಬಳಲುತ್ತಿದ್ದಾಗ ಬ್ರಾಹ್ಮಣ ದಂಪತಿಗಳು ದೃಷ್ಟಿಗೆ ಬಿದ್ದರು. ಕಲ್ಮಷಪಾದನು ಹಿಂದು ಮುಂದಿನ ವಿಚಾರ ಮಾಡದೇ ಆ ಬ್ರಾಹ್ಮಣನನ್ನು ಕೊಂದು ತಿಂದು ಬಿಟ್ಟನು. ದುಃಖಿತಳಾದ ಬ್ರಾಹ್ಮಣಸತಿಯು “ಎಲೋ ರಾಕ್ಷಸಾ ! ನಿನಗಾದ ಶಾಪದ ಅವಧಿ ಮುಗಿದ ಮೇಲೆ ನೀನು ಮತ್ತೆ ರಾಜನಾಗುವಿ ! ಆಗ ನೀನು ನಿನ್ನ ಸತಿಯನ್ನು ಎಂದು ಮುಟ್ಟುವಿಯೋ ಅಂದೇ ನಿನಗೆ ಮರಣವುಂಟಾಗಲಿ!' ಎಂದು ಶಾಪಕೊಟ್ಟು, ಪತಿಯ ಪಾದುಕೆಗಳೊಂದಿಗೆ ಸಹಗಮನ ಮಾಡಿ ಪ್ರಾಣಬಿಟ್ಟಳು, ರಾಜನಿಗೆ ವಶಿಷ್ಟರು ಶಾಪಕೊಟ್ಟ ಅವಧಿ ಮುಗಿದೊಡನೆಯೇ, ಅವನು ಪುನಃ ನರದೇಹ ಪಡೆದು "ಮಿತ್ರಸಹ'' ರಾಜರಾಗಿ ಮಿಥಿಲಾ ನಗರದಲ್ಲಿದ್ದ ತನ್ನ ಅರಮನೆಗೆ ಬಂದನು. ಆದರೆ ವಿಪ್ರ ಸ್ತ್ರೀಯು ತನಗೆ ಕೊಟ್ಟ ಶಾಪದ ನೆನಪಾಗಿ, ಹೆಂಡತಿಗೆ ಆ ವಿಷಯ ತಿಳಿಸಿ ದುಃಖಿತನಾದನು. ನಂತರ ರಾಜನಿಗೆ ಗೌತಮ ಋಷಿಗಳ ದರ್ಶನವಾಯ್ತು, ಅವರು ರಾಜನ ಶಾಪ ನಿವಾರಣೆಗಾಗಿ ಗೋಕರ್ಣ ಕ್ಷೇತ್ರಕ್ಕೆ ಹೋಗಿ ಬರಲು ತಿಳಿಸಿ, ಆ ಕ್ಷೇತ್ರದ ಮಹಿಮೆಯನ್ನು ಈ ರೀತಿಯಾಗಿ ಹೇಳತೊಡಗಿದರು.

ಮಿತ್ರಸಹ ರಾಜನೇ ಕೇಳು! 'ಸೌದಾಮಿನಿ' ಎಂಬ ಹೆಸರಿನ ಬ್ರಾಹ್ಮಣ ಕನೈಯೊಬ್ಬಳಿದ್ದಳು. ದುರ್ದೈವದಿಂದಾಗಿ ಅವಳು ಚಿಕ್ಕಂದಿನಲ್ಲಿಯೇ ವಿಧವೆಯಾದಳು. ಪ್ರಾಯದ ತಾಪವನ್ನು ತಡೆಯಲಾರದೇ ಅವಳು ಒಬ್ಬ ಶೂದ್ರನನ್ನು ಕೂಡಿಕೊಂಡಳು, ಶೂದ್ರ ಸಂಸ್ಕಾರದಂತೆ ಇವಳು ಮಾಂಸ ಮದ್ಯಗಳನ್ನು ನಿರಾತಂಕವಾಗಿ ಸೇವಿಸತೊಡಗಿದಳು.ಗೋಹತ್ಯೆ ಮಾಡಿ ಇವಳು ಆಕಳ ಮಾಂಸವನ್ನೂ ಭಕ್ಷಿಸಿದಳು. ಕಾಲಾನುಕ್ರಮದಲ್ಲಿ ಅವಳಿಗೆ ಮುಪ್ಪು ಬಂದು ಮರಣವಪ್ಪಿದಳು. ಮುಂದೆ ಅವಳು ಸತ್ತಾಗ ಯಮದೂತರು ನರಕದಲ್ಲಿ ಎಸೆದು ಬಿಟ್ಟರು. ಯಮಲೋಕದ ಶಿಕ್ಷೆಯನ್ನು ಅನುಭವಿಸಿ ಮುಗಿಸಿದ ನಂತರ, ಇವಳು ಒಬ್ಬ ಚಾಂಡಾಲನ ಮಗಳಾಗಿ ಜನ್ಮ ತಳೆದಳು. ಹುಟ್ಟುವಾಗಲೇ ಇವಳು ಕುರುಡಿಯಾಗಿದ್ದಳು. ಹೀಗಾಗಿ ತಂದೆ ತೀರಿಕೊಂಡ ನಂತರ ಇವಳು ಭಿಕ್ಷಾಟನೆಯಿಂದಲೇ ಬದುಕಬೇಕಾಯಿತು. ಅವಳಿಗೆ ದಿನನಿತ್ಯ ಹೊಟ್ಟೆಗೆ ಸಾಲುವಷ್ಟು ಅನ್ನವೂ ದೊರೆಯದಾಯಿತು. ಅಂಥ ಪ್ರಸಂಗದಲ್ಲಿ ಅವಳಿಗೆ ಕುಷ್ಠರೋಗ ಆವರಿಸಿದ್ದರಿಂದ, ಇವಳನ್ನು ಯಾರೂ ಸನಿಹಕ್ಕೆ ಬರಿಸಿಗೊಡದಂತಾದಳು. ಎರಡು ದಿನಗಳಿಂದ ಊಟ ದೊರೆಯದ ಆ ಕುರುಡ ಭಿಕ್ಷುಕಿಯು, ಮಾರ್ಗದ ಬದಿಗೆ ನಿಂತು “ಭಿಕ್ಷೆ ನೀಡಿ'' ಎಂದು ಅಂಗಲಾಚುತ್ತಲೇ ಇದ್ದಳು. ಆ ದಾರಿಯಿಂದ ಗೋಕರ್ಣ ಕ್ಷೇತ್ರಕ್ಕೆ ಯಾತ್ರಿಕರ ಗುಂಪೊಂದು ಹೊರಟಿರುವದು ಭಿಕ್ಷುಕಿಗೆ ಗೊತ್ತಾಯಿತು. ಪುಣ್ಯ ಕ್ಷೇತ್ರದಲ್ಲಿ ತನಗೆ ಹೊಟ್ಟೆ ತುಂಬ ಅನ್ನ ದೊರೆಯ ಬಹುದೆ೦ಬ ಆಸೆಯಿಂದ, ಅವಳು ಆ ಯಾತ್ರಿಕರನ್ನನುಸರಿಸಿ ಗೋಕರ್ಣ ಕ್ಷೇತ್ರಕ್ಕೆ ಬಂದು ತಲುಪಿದಳು. ಮಾರ್ಗದ ಒಂದು ಬದಿಗೆ ಕುಳಿತು, ಭಿಕ್ಷೆ ನೀಡಿರಿ | ಅನ್ನ ನೀಡಿರಿ' ಎಂದು ಒಂದೇ ಸವನೇ ಕೂಗಿಕೊಳ್ಳತೊಡಗಿದಳು. ಅಂದು ಶಿವರಾತ್ರಿಯ ಉಪವಾಸವಿದ್ದ ಪ್ರಯುಕ್ತ ಯಾರೂ ಆ ಭಿಕ್ಷುಕಿಗೆ ಅನ್ನ ನೀಡಲಿಲ್ಲ. ಸಾಯಂಕಾಲವಾಯಿತು. ಭಿಕ್ಷುಕಿಗೆ ಅಂದು ಸಂಪೂರ್ಣ ಉಪವಾಸವೇ ಗತಿಯಾಗಿತ್ತು. ಆದರೂ ಅವಳು ಭಿಕ್ಷೆ' ಎಂದು ಕೂಗುತಲೇ ಇದ್ದಳು. ಭಕ್ತನೊಬ್ಬನು ಮೋಜಿಗಾಗಿ ಆ ಕುರುಡಿಯ ಭಿಕ್ಷಾಪಾತ್ರಯಲ್ಲಿ ಬಿಲ್ವಪತ್ರಿಯ ಗೊಂಚಲೊಂದನ್ನು ಹಾಕಿದನು. ಇದು ತಿನ್ನುವ ಪದಾರ್ಥವಲ್ಲವೆಂಬುದನ್ನು ಗುರುತಿಸಿದ ಆ ಹೆಂಗಸು, ಸಿಟ್ಟಿನಿಂದ ಅದನ್ನು ದೂರ ಎಸೆದಳು. ದೈವವಶಾತ್ ಆ ಬಿಲ್ವಗೊಂಚಲು ಶಿವಲಿಂಗದ ಮೇಲೆ ಹೋಗಿ ಬಿದ್ದಿತು. ಶಿವನು ಅಷ್ಟರಿಂದಲೇ ಸಂತುಷ್ಟನಾಗಿ ಹೋದನು. ನಂತರ
ಆ ಭಿಕ್ಷುಕೆಯು ಹಸಿವೆಯಿಂದ ಸತ್ತು ಹೋದಳು. ಶಿವದೂತರು ಅವಳನ್ನು ಕರೆದೊಯ್ಯಲೆ೦ದು ಪುಷ್ಪಕ ವಿಮಾನ ತಂದಿದ್ದರು. ಇದನ್ನು ನಾನು ಪ್ರತ್ಯಕ್ಷ ಕಂಡಿರುವ, ಆದಕಾರಣ ನೀನೂ ಗೋಕರ್ಣಕ್ಕೆ ಹೋಗೆ೦ದು, ಮುನಿಯು ಹೇಳಲು ರಾಜನು ಅದರಂತೆ ಮಾಡಿ ತನ್ನ ಶಾಪಕ್ಕೆ ನಿವೃತ್ತಿ ಪಡೆದುಕೊಂಡನ೦ಬಲ್ಲಿಗೆ ಸಾರರೂಪ ಶ್ರೀ ಗುರುಚರಿತ್ರೆಯ ಏಳನೆಯ ಅಧ್ಯಾಯ ಮುಕ್ತಾಯವಾಯಿತು.


Comments

Popular posts from this blog

Hanumane Tandeyu Hanumane Thayiyu lyrics

Sankshipta Guru Charitre in kannada

Sri Rama Chandirane