Shri Guru Charitre - Chapter 22
ಅಧ್ಯಾಯ ೨೨
||ಹರಿಃ ಓಂ ಶ್ರೀ ಗುರುಭ್ಯೋ ನಮಃ ||
ನಾಮಧಾರಕನೇ ಮುಂದೆ ಕೇಳು ! ಶ್ರೀ ನರಸಿಂಹ ಸರಸ್ವತಿ ಗುರುಗಳು ಇಸ್ವಿ ಸನ್ 1439 ರಲ್ಲಿ ಗಾಣಗಾಪುರಕ್ಕೆ ಬಂದು, ಅಲ್ಲಿಗೆ ಸಮೀಪದಲ್ಲಿರುವ ಭೀಮಾ- ಅಮರಜಾ ಸಂಗಮದ ಬಳಿಯ ಔದುಂಬರ ವೃಕ್ಷದಡಿಯಲ್ಲಿ ಗುಪ್ತವಾಗಿ ಇರತೊಡಗಿದರು. ಮಧ್ಯಾಹ್ನ ಸಮಯದಲ್ಲಿ ಗಾಣಗಾಪುರಕ್ಕೆ ಭಿಕ್ಷೆಗಾಗಿ ಹೋಗುವ ಪದ್ಧತಿಯನ್ನಿಟ್ಟುಕೊಂಡಿದ್ದರು, ಆಗ ಗಾಣಗಾಪುರದಲ್ಲಿ ಅತೀ ಬಡವರಾದ ಬ್ರಾಹ್ಮಣ ದಂಪತಿಗಳಿಬ್ಬರು ಇರುತ್ತಿದ್ದರು. ಅವರ ಮನೆಯಲ್ಲಿ ಒಂದು ಹಳೆಯ ಬರಡೆಮ್ಮೆ ಇತ್ತು, ಹುಟ್ಟಿದಾರಭ್ಯದಿಂದಲೂ ಬಂಜೆಯಾಗಿದ್ದ ಆ ಎಮ್ಮೆಯನ್ನು ಆ ಬ್ರಾಹ್ಮಣನು ತೋಟದವರಿಗೆ ಕಪ್ಪಲೀ ಹೂಡಲು ಭಾಡಿಗೆಗೆ ಕೊಟ್ಟು ಅದರಿಂದಲೇ ನಿತ್ಯೋಪಜೀವನ ನಡೆಸುತ್ತಿದ್ದನು, ಭಾಡಿಗೆ ಸಿಗದ ದಿವಸ ಭಿಕ್ಷಾಟನೆಯಿಂದ ಅವರ ಉಪಜೀವನ ಸಾಗುತ್ತಿತ್ತು ಶ್ರೀ ಗುರುಗಳಿಗೆ ಬಡವರೆಂದರೆ ಬಲು ಪ್ರೀತಿ ! ಹೀಗಾಗಿ ನಿತ್ಯವೂ ಆ ಬಡಬ್ರಾಹ್ಮಣನ ಮನೆಗೆ ಭಿಕ್ಷೆಗೆ ಹೋಗುತ್ತಿದ್ದರು. ಒಂದು ದಿವಸ ಆ ಬ್ರಾಹ್ಮಣನ ಎಮ್ಮೆಯನ್ನು ಯಾರೂ ಭಾಡಿಗೆಗೆ ಒಯ್ದಿರಲಿಲ್ಲ. ಬ್ರಾಹ್ಮಣನು ಭಿಕ್ಷೆಗಾಗಿ ಊರಲ್ಲಿ ಹೋಗಿದ್ದನು. ಅದೇ ವೇಳೆಗೆ ಸರಿಯಾಗಿ ಗುರುಗಳು ಆ ಬ್ರಾಹ್ಮಣನ ಬಾಗಿಲಿಗೆ ಭಿಕ್ಷಾರ್ಥಿಗಳಾಗಿ ಬಂದರು. ಬ್ರಾಹ್ಮಣ ಪತ್ನಿಯು ಗುರುಗಳನ್ನು ಒಳಗೆ ಸ್ವಾಗತಿಸಿ, ಮಣಿ ಹಾಕಿ ಕೂಡ್ರಿಸಿದಳು. ಮತ್ತೂ ಗುರುಗಳಿಗೆ ನಮಸ್ಕರಿಸಿ ವಿನಯದಿಂದ, “ಸ್ವಾಮೀ ! ನಮ್ಮ ಯಜಮಾನರು ಮಧುಕರಿ ಬೇಡಲು ಊರಲ್ಲಿ ಹೋಗಿದ್ದಾರೆ. ಈಗ ಅವರು ಬರುವ ಸಮಯವಾಗಿದೆ. ಬಂದೊಡನೆಯೇ ತಮಗೆ ಭಿಕ್ಷೆ ನೀಡುವೆ ! ಸ್ವಲ್ಪ ಸಮಯ ಕುಳಿತುಕೊಳ್ಳಿರಿ.” ಎಂದು ವಿನಂತಿಸಿಕೊಂಡಳು. ಗುರುಗಳು ಹಸನ್ಮುಖಿಗಳಾಗಿ ಹಕ್ಕಿಯಲ್ಲಿ ಕಟ್ಟಿದ್ದ ಆ ಬರಡೆಮ್ಮೆಯತ್ತ ನೋಡುತ್ತ “ಅಮ್ಮಾ ಸಾದ್ವೀಮಣೀ ! ಮನೆಯಲ್ಲಿ ಎಮ್ಮೆ ಕಟ್ಟಿಕೊಂಡಿರುವಿರಿ; ನಮಗೆ ಸ್ವಲ್ಪ ಹಾಲನ್ನೇ ಭಿಕ್ಷೆ ನೀಡಿದರಾಗುವದಿಲ್ಲವೇ ??” ಎಂದು ಪ್ರಶ್ನೆ ಮಾಡಿದರು. ಗುರುಗಳ ಮಾತು ಕೇಳಿ ಆ ಸಾದ್ವಿಯು ವಿಷಾದದಿಂದ ನಗುತ್ತ “ಯತಿವರ್ಯರೆ! ಈ ಎಮ್ಮೆ ಹುಟ್ಟಿದಾಗಿನಿಂದಲೂ ಬಂಜೆಯಾಗಿಯೇ ಇದೆ. ಮನೆಯಲ್ಲಿ ಹುಟ್ಟಿದ ಈ ಪ್ರಾಣಿಯನ್ನು ಮಾರುವದಕ್ಕೆ ಮನಸ್ಸಿಲ್ಲದೇ ನಾವು ಇದನ್ನು ತೋಟಿಗರಿಗೆ ಕಪ್ಪಲೀ ಹೂಡಲು ಭಾಡಿಗೆಗೆ ಕೊಡುತ್ತಿದ್ದೇವೆ. ಅದರಿಂದಲೇ ನಮ್ಮ ಉಪಜೀವನಕ್ಕೊಂದು ದಾರಿಯಾಗಿದೆ. ಜೋಪಾನ ಮಾಡಿದ ನಮ್ಮ ಋಣವನ್ನು, ಈ ಮೂಕ ಪ್ರಾಣಿ ಹೈನು ನೀಡಿ ತೀರಿಸುವ ಯೋಗ್ಯತೆ ಹೊಂದಿಲ್ಲವಾದರೂ, ಮೈಮುರಿದು ದುಡಿದು ನಮ್ಮ ಋಣ ತೀರಿಸತೊಡಗಿದೆ ಅಷ್ಟೇ!' ಎಂದು ಹೇಳಿದಳು. ಅದಕ್ಕೆ ಗುರುಗಳು ಅದೇಕೆ ತಾಯೇ ? ಈ ಎಮ್ಮೆ ಬೇಕಾದಷ್ಟು ಹಾಲು ಕೊಡುವ ಯೋಗ್ಯತೆ ಹೊಂದಿದೆ ! ನೀವು ಅದನ್ನು ಪರೀಕ್ಷೆ ಮಾಡಿಲ್ಲ, ಬೇಕಿದ್ದರೆ ತಂಬಿಗೆ ತೆಗೆದುಕೊಂಡು ಬಂದು ನೋಡು; ಇದು ನಮ್ಮ ಭಿಕ್ಷೆಗಾಗಿ ಹಾಲನ್ನು ಕರೆದೇ ಕರೆಯುತ್ತದೆ'' ಎಂದು ಹೇಳಿದರು. ಯತಿ ವಾಕ್ಯಗಳಲ್ಲಿ ವಿಶ್ವಾಸವಿಟ್ಟ ಆ ಸಾದ್ವಿಯು ಒಳಗಿನಿಂದ ಪಾತ್ರೆ ತಂದು ಗುರುಗಳ ಸಮ್ಮುಖದಲ್ಲಿಯೇ ಎಮ್ಮೆಯನ್ನು ಹಿಂಡತೊಡಗಿದಳು. ಆಶ್ಚರ್ಯವೆನಿಸುವ ರೀತಿಯಲ್ಲಿ ಬರಡೆಮೈಯು ಎರಡು ತಂಬಿಗೆಗೂಮಿಕ್ಕಿ ಹಾಲು ಕರೆಯಿತು. ಬ್ರಾಹ್ಮಣ ಪತ್ನಿಯು ಬಹುಭಕ್ತಿಯಿಂದ ಗುರುಗಳಿಗೆ ಹಾಲಿನ ಭಿಕ್ಷೆ ನೀಡಿ ನಮಸ್ಕರಿಸಿದಳು. ಗುರುಗಳು ಭಿಕ್ಷೆ ಸ್ವೀಕರಿಸಿ ಆಶೀರ್ವದಿಸಿ ಹೊರಟು ಹೋದರು. ಮುಂದೆ ಸ್ವಲ್ಪ ಸಮಯದಲ್ಲಿ ಭಿಕ್ಷೆಗೆ ಹೋಗಿದ್ದ ಬ್ರಾಹ್ಮಣನು ಮನೆಗೆ ಬಂದನು. ಸತಿಯ ಬಾಯಿಂದ ಗುರುಲೀಲೆಯನ್ನು ಕೇಳಿ ಕೌತಕಪಟ್ಟನು. ಮರುದಿವಸದಿಂದ ಅವರು ನಿತ್ಯ ಸಂಗಮಕ್ಕೆ ಹೋಗಿ ಗುರು ಪೂಜೆಮಾಡಿ, ಹಾಲಿನ ನೈವೇದ್ಯವನ್ನರ್ಪಿಸಿ ಬರುವ ಪದ್ಧತಿಯನ್ನಿಟ್ಟುಕೊಂಡರು. ಅವರ ದಾರಿದ್ರ ದೂರಾಗಿ, ಗುರುಕೃಪೆಯಿಂದ ಸುಖವಾಗಿ ಬಾಳತೊಡಗಿದರೆಂದು ಸಿದ್ಧ ಮುನಿಯು ಹೇಳಿದನೆಂಬಲ್ಲಿಗೆ, ಸಾರರೂಪ ಶ್ರೀ ಗುರುಚರಿತ್ರೆಯ ಇಪ್ಪತ್ತೆರಡನೆಯ ಅಧ್ಯಾಯ ಮುಕ್ತಾಯವಾಯಿತು.
Comments
Post a Comment