Shri Guru Charitre - Chapter 21
ಅಧ್ಯಾಯ ೨೧
||ಹರಿಃ ಓಂ ಶ್ರೀ ಗುರುಭ್ಯೋ ನಮಃ ||
ನಾಮಧಾರಕಾ | ಬ್ರಹ್ಮಚಾರಿಯು ಕೊನೆಯಲ್ಲಿ ಹೇಳಿದ ಮಾತು, ಆ ಬ್ರಾಹ್ಮಣ ಪತ್ನಿಗೆ ಸರಿ ಎನ್ನಿಸಿತು. ಅವಳು ಮಗುವಿನ ಶವವನ್ನು ಹೊತ್ತುಕೊಂಡು ಹೋಗಿ ಔದುಂಬರ ವೃಕ್ಷದಡಿಯಲ್ಲಿ ಹಾಕಿದಳು. ಗುರುವೇ! ನೀನೇ ನನ್ನ ಮಗನು ಶತಾಯುಷಿಯಾಗುವನೆಂದು ಅಭಯವಿತ್ತಿದ್ದಿ! ಈಗ ನೀನೇ ಅವನನ್ನು ಅಲ್ಪಾಯುಷ್ಯದಲ್ಲಿ ನಮ್ಮಿಂದ ಕಸಿದುಕೊಂಡು ಹೊರಟಿರುವಿಯಾ ? ನಾನು ನನ್ನ ಮಗನನ್ನು ಬಿಟ್ಟು ಕೊಡುವದಿಲ್ಲಾ ವಚನಭ್ರಷ್ಟನಾದ ನಿನ್ನ ಪಾದುಕೆಗಳಿಗೆ ತಲೆ ಅಪ್ಪಳಿಸಿ ನನ್ನ ಪ್ರಾಣ ಕೊಡುತ್ತೇನೆ !' ಎಂದು ರಂಭಾಟ ಮಾಡಿ ಅಳುತ್ತ ಗುರುಪಾದುಕೆಗಳಿಗೆ ಹಣೆಯನ್ನು ಜಜ್ಜತೊಡಗಿದಳು. ಹೊತ್ತು ಮುಳುಗಿತು. ಈ ಹಟಮಾರಿ ಹೆಂಗಸು ಮಗುವಿನ ಶವವನ್ನು ಸಂಸ್ಕಾರಕ್ಕೆ ಬಿಟ್ಟು ಕೊಡಲಾರಳೆ೦ದು ಬೇಸರ ಮಾಡಿಕೊಂಡು ಕೆಲವು ಜನರು ಹೊರಟು ಹೋದರು.
ರಾತ್ರಿಯಾಯಿತು. ಅವಳಿಗೆ ಸ್ವಲ್ಪ ನಿದ್ರೆಯ ಜೊಂಪು ಬಂದಂತಾಯಿತು. ಅವಳ ಸ್ವಪ್ನದಲ್ಲಿ ಗುರುಗಳು ಕಾಣಿಸಿಕೊಂಡು, ಅಮ್ಮಾ! ಯಾಕೆ ಸುಮ್ಮನೇ ನಮಗೆ ಅಪಕೀರ್ತಿ ನೀಡುವಿ ? ನಿನ್ನ ಮಗನು ಜೀವದಿಂದಿದ್ದಾನೆ ನೋಡು !” ಎಂದು ಮಗುವಿನ ಹಣೆಗೆ ಭಸ್ಮ ಲೇಪಿಸಿ ಹೊರಟು ಹೋದಂತಾಯಿತು. ಅವಳು ತಟ್ಟನೆ ಎಚ್ಚತ್ತು ಮಗುವಿನ ಶವದ ಕಡೆಗೆ ನೋಡಿದಳು, ಅವಳ ಮಗನು ನರಳುತ್ತ ಕೈಕಾಲುಗಳನ್ನೆಳೆದುಕೊಳ್ಳತೊಡಗಿದ್ದನು. ಅದನ್ನು ನೋಡಿ ತಾಯಿಗೆ ಅತ್ಯಾನಂದವಾಯಿತು. ಅವಳು ನಿದ್ರೆಯಲ್ಲಿದ್ದ ಗಂಡನನ್ನೆಬ್ಬಿಸಿ, ವಿಷಯ ತಿಳಿಸಿದಳು. ದಂಪತಿಗಳು ಗುರು ನಾಮಸ್ಮರಣೆ ಮಾಡುತ್ತ ಮಗುವನ್ನೆತ್ತಿಕೊಂಡರು, ಸ್ವಲ್ಪ ಸಮಯದಲ್ಲಿ ಮಗು ಎದ್ದು ಓಡಾಡತೊಡಗಿದನು, ಅಲ್ಲಿದ್ದ ಜನರಿಗೆ ಅತ್ಯಾಶ್ಚರ್ಯವಾಯಿತು. ಎಲ್ಲರೂ ಗುರುಗಳ ಹೆಸರಿನಿಂದ ಜಯಕಾರ ಮಾಡಿದರು. ಆ ದಂಪತಿಗಳು ಭಕ್ತಿಯಿಂದ ಗುರುಪಾದುಕೆಗಳನ್ನು ಪೂಜೆಮಾಡಿದರು. ಗುರು ಸನ್ನಿಧಾನದಲ್ಲಿ ದೊಡ್ಡದೊಂದು ಆರಾಧನೆಯನ್ನೇ ಮಾಡಿಸಿದರು. ಈ ರೀತಿಯಾಗಿ ನರಸೋಬವಾಡಿಯ ಗುರುಪಾದುಕೆಗಳಲ್ಲಿ ಇಂದಿಗೂ ಗುರುಗಳ ಸಾನ್ನಿಧ್ಯವಿದೆಯೆಂದು, ನಾಮಧಾರಕನಿಗೆ ಸಿದ್ಧ ಮುನಿಯು ತಿಳಿಸಿದನೆಂಬಲ್ಲಿಗೆ ಸಾರರೂಪ ಶ್ರೀ ಗುರು ಚರಿತ್ರೆಯ ಇಪ್ಪತ್ತೊಂದನೆಯ ಅಧ್ಯಾಯ ಮುಕ್ತಾಯವಾಯಿತು.
Comments
Post a Comment