Shri Guru Charitre - Chapter 20

 



ಅಧ್ಯಾಯ ೨೦

|| ಹರಿಃ ಓಂ ಶ್ರೀ ಗುರುಭ್ಯೋ ನಮಃ ||

ನಾಮಧಾರಕಾ | ಗುರುಗಳು ಗಾಣಗಾಪುರಕ್ಕೆ ಹೊರಟುಹೋದರು. 'ನರಸೋಬವಾಡಿಯಲ್ಲಿ ಅವರ ವಾಸ್ತವ್ಯ ಸ್ಥಿರವಾಗಿತ್ತು ಎಂಬ ಬಗ್ಗೆ ನಿನಗೆ ಇನ್ನೊಂದು ಉದಾಹರಣೆಯನ್ನು ಹೇಳುತ್ತೇನೆ ಕೇಳು! ಶಿರೋಳ ಗ್ರಾಮದಲ್ಲಿ ಇಬ್ಬರು ಬ್ರಾಹ್ಮಣ ದಂಪತಿಗಳಿದ್ದರು. ಅವರಿಗೆ ಐದು ಮಕ್ಕಳು ಹುಟ್ಟಿದರೂ ಶೈಶವಾವಸ್ಥೆಯಲ್ಲಿಯೇ ಮರಣ ಹೊಂದಿದವು. ಜ್ಯೋತಿಷಗಳಲ್ಲಿ ಇದಕ್ಕೆ ಕಾರಣವೇನೆಂದು ಕೇಳಿದಾಗ, ಅವರು “ಅಮ್ಮಾ! ನೀನು ಹಿಂದಿನ ಜನ್ಮದಲ್ಲಿ ಒಬ್ಬ ಬ್ರಾಹ್ಮಣನಲ್ಲಿ 100 ವರಹ ಸಾಲ ಪಡೆದು, ತಿರುಗಿ ಕೊಡಲಿಲ್ಲ. ಆತನು ಅದೇ ಚಿಂತೆಯಲ್ಲಿ ಸತ್ತು ಪಿಶಾಚಿಯಾಗಿದ್ದಾನೆ, ಆತನೇ ನಿನ್ನ ಮಕ್ಕಳ ಮೃತ್ಯುವಿಗೆ ಕಾರಣನಾಗಿದ್ದಾನೆ. ಈ ದೋಷ ಪರಿಹಾರವಾಗಬೇಕಾದರೆ, ನೀನು ಆ ಬ್ರಾಹ್ಮಣನ ಹೆಸರಿನಲ್ಲಿ ನೀನು 100 ವರಹಗಳನ್ನು ದಾನಮಾಡಬೇಕು ! ಹಾಗೂ ನರಸೋಬವಾಡಿಯಲ್ಲಿರುವ ಗುರುಪಾದುಕೆಗಳನ್ನು ಒಂದು ತಿಂಗಳ ಕಾಲ ಉಪವಾಸ ವೃತದೊಂದಿಗೆ ನಿತ್ಯ ಪೂಜೆ ಮಾಡಬೇಕು ! ಅ೦ದರೆ ಆ ದ್ರೋಹ ಪರಿಹಾರವಾಗಿ, ನಿಮಗೆ ಶತಾಯುಷಿಗಳಾದ ಮಕ್ಕಳು ಹುಟ್ಟುತ್ತಾರೆ' ಎಂದು ಭವಿಷ್ಯ ನುಡಿದರು, ಅದಕ್ಕೆ ಬ್ರಾಹ್ಮಣ ಪತ್ನಿಯು, ಸ್ವಾಮಿ! ನಾವು ಬಡಬ್ರಾಹ್ಮಣರು ನೂರು ವರಹಗಳು ನಮ್ಮ ಬಳಿಯಲ್ಲಿಲ್ಲ. ಹೇಗೆ ಮಾಡೋಣ ?'' ಎಂದು ಕೇಳಿದಳು. ಜ್ಯೋತಿಷಿಗಳು ಸ್ವಲ್ಪ ಯೋಚಿಸಿ, “ನೀವು ಗುರುಸೇವೆಯನ್ನಂತೂ ಮನಮೆಚ್ಚುವಂತೆ ಮಾಡಿರಿ ! ಆ ಗುರು
ನಾಥನೇ ನಿಮ್ಮ ಪಾಪಕ್ಷಾಲನ ಮಾಡುತ್ತಾನೆ. ನಿಮ್ಮ ಶಕ್ಯಾನುಸಾರ ದಾನ ಮಾಡಿರಿ !” ಎಂದು ಹೇಳಿ ಕಳಿಸಿದರು.

ಬ್ರಾಹ್ಮಣ ಪತ್ನಿಯು ನರಸೋಬ ವಾಡಿಗೆ ಬಂದಳು. ನದಿಯಲ್ಲಿ ಸ್ನಾನ ಮಾಡಿ ಗುರುಪಾದಕೆಗಳಿಗೆ ಪಂಚ ಪ್ರದಕ್ಷಿಣೆ ಹಾಕಿ, ಗುರು ನಾಮಸ್ಮರಣೆ ಮಾಡುತ್ತ ಔದುಂಬರ ವೃಕ್ಷದಡಿಯಲ್ಲಿ ನಿರಶನ ವ್ರತಸ್ಥಳಾಗಿ ಮೂರು ದಿನ ಕುಳಿತಳು, ಒಂದು ರಾತ್ರಿ ಅವಳಿಗೆ ಸ್ವಪ್ನದಲ್ಲಿ ಒಬ್ಬ ಕರಾಳರೂಪದ ಬ್ರಾಹ್ಮ ಣನು ಕಾಣಿಸಿಕೊಂಡು, ನನ್ನ ನೂರು ವರಹಗಳನ್ನು ಕೊಡದಿದ್ದರೆ, ನಿನ್ನನ್ನು ಕೊ೦ದು ಬಿಡುತ್ತೇನೆ.” ಎನ್ನುತ್ತ ಹೊಡೆಯ ಬಂದನು. ಬ್ರಾಹ್ಮಣ ಪತ್ನಿಯು ಗುರುವೇ ರಕ್ಷಿಸು !'' ಎಂದು ಕೂಗಿಕೊಂಡಳು. ಗುರುಗಳು ತಕ್ಷಣ ಧಾವಿಸಿ ಬಂದು, ಎಲೋ ಅವಳನ್ನೇಕೆ ದಂಡಿಸುವಿ?” ಎಂದು ಗರ್ಜಿಸಿದರು ಆ ಪಿಶಾಚಿ ರೂಪದ ಬ್ರಾಹ್ಮಣನು ಗುರುಗಳಿಗೆ ಕೈ ಮುಗಿದು, ಸ್ವಾಮೀ ಈ ದುಷ್ಟೆಯು ನನ್ನ ನೂರು ವರಹಗಳನ್ನು ಮುಳುಗಿಸಿದ್ದಾಳೆ. ಅದೇ ಕಾರಣದಿ೦ದಲೇ ನಾನು ಅಪಮೃತ್ಯು ಹೊಂದಿ ಪಿಶಾಚಿಯಾಗಿರುವೆ. ನನಗಾದ ಅನ್ಯಾಯದ ಸೇಡು ತೀರಿಸಿಕೊಂಡರೆ ತಪ್ಪೇನು ?” ಎಂದು ಪ್ರಶ್ನೆ ಮಾಡಿತು. ಗುರುಗಳು ಆ ಪಿಶಾಚಿಗೆ “ಎಲವೋ ! ಮೊದಲು ನೀನು ಈ ಪಿಶಾಚಿ ಜನ್ಮದಿಂದ ಪಾರಾಗುವ ಯತ್ನ ಮಾಡು ! ಬರೀ ಸೇಡು ತೀರಿಸಿಕೊಂಡ ಮಾತ್ರಕ್ಕೆ ನಿನ್ನ ಉದ್ಧಾರವಾದಂತಾಯೇ ! ನನ್ನ ಮಾತು ಕೇಳು ! ಈ ಬ್ರಾಹ್ಮಣ ಪತ್ನಿಯು ತನ್ನಲ್ಲಿದ್ದಷ್ಟು ದ್ರವ್ಯವನ್ನು ಖರ್ಚುಮಾಡಿ, ನಿನ್ನ ಉತ್ತರ ಕ್ರಿಯಾದಿಗಳನ್ನು ಮಾಡಿಸುತ್ತಾಳೆ. ಅದರಿಂದ ನಿನಗೆ ಸದ್ಧತಿಯುಂಟಾಗುವದು !” ಎಂದು ಹಿತೋಪದೇಶ ಮಾಡಲು, ಪಿಶಾಚಿಯು ಅದಕ್ಕೆ ಒಪ್ಪಿ ಗುರುವೇ! ನಿನ್ನಿಚ್ಛೆಗೆ ತಿಳಿದಂತೆ ಮಾಡು ! ಒಟ್ಟಾರೆ ನನ್ನ ಉದ್ಧಾರವಾದರೆ ಸಾಕು !” ಎಂದು ನುಡಿದು ಕಣ್ಮರೆಯಾಯಿತು. ಗುರುಗಳು ಆ ಬ್ರಾಹ್ಮಣಳಿಗೆ ಅಮ್ಮಾ! ನೀನು ಆ ಬ್ರಾಹ್ಮಣನ ಹೆಸರಿನಲ್ಲಿ ಸಂಕಲ್ಪ ಮಾಡಿ, ಹತ್ತು ದಿವಸ ಅಷ್ಟ ತೀರ್ಥಗಳಲ್ಲಿ ಸ್ನಾನ ಮಾಡು ! ಆತನ ಹೆಸರಿನಲ್ಲಿಯೇ ನಿತ್ಯವೂ ಔದುಂಬರಾಭಿಷೇಕ ಮಾಡಿಸು !ಅಂದರೆ ಈ ಪಿಶಾಚಿಗೆ ಜೀವನ್ಮುಕ್ತಿದೊರೆಯುವದು. ನಿನಗುಂಟಾದ ಬ್ರಹ್ಮಹತ್ಯಾ ದೋಷ ದೂರಾಗಿ, ನಿನಗೆ ಶತಾಯುಷಿಗಳಾದ ಇಬ್ಬರು ಮಕ್ಕಳು ಹುಟ್ಟುವರು.' ಎಂದು ಆಶೀರ್ವದಿಸಿ, ಎರಡು ಹಣ್ಣುಗಳನ್ನು ಕೊಟ್ಟರು. ಬ್ರಾಹ್ಮಣ ಪತ್ನಿಗೆ ತಟ್ಟನೇ ಎಚ್ಚರವಾಯಿತು. ಗುರುಗಳು ಸ್ವಪ್ನದಲ್ಲಿ ಕೊಟ್ಟ ಫಲಗಳು ಅವಳ ಸೆರಗಿನಲ್ಲಿ ಕಟ್ಟಲ್ಪಟ್ಟಿದ್ದವು. 

ಆ ದೃಷ್ಟಾಂತದಿಂದ ಬ್ರಾಹ್ಮಣಿಯು ಬಹಳೇ ಸ೦ತುಷ್ಟಳಾದಳು. ಗುರುಗಳು ಸೂಚಿಸಿದಂತೆ ಆ ಬ್ರಾಹ್ಮಣನ ಹೆಸರಿನಿಂದ ಔದುಂಬರಾಭಿಷೇಕವನ್ನು ಪತಿಯೊಂದಿಗೆ ಕೂಡಿಕೊಂಡು ಸಂಭ್ರಮದಿಂದ ಮಾಡಿದಳು. ತನ್ನ ಯೋಗ್ಯತೆಗೆ ತಕ್ಕಂತೆ ಬ್ರಾಹ್ಮಣರಿಗೆ ದಾನ-ಧರ್ಮಾದಿಗಳನ್ನು ಮಾಡಿ ಧನ್ಯಳಾದಳು. ಗುರುವಾಣಿಯಂತೆ ಮುಂದೆ ಅವಳಿಗೆ ಇಬ್ಬರು ಗಂಡು ಮಕ್ಕಳು ಜನಿಸಿದರು. ಹಿರಿಯ ಮಗನ ಮುಂಜಿವೆ ಹಾಗೂ ಚಿಕ್ಕ ಮಗನ ಚೌಲಕರ್ಮಕ್ಕೆ ಎಲ್ಲವನ್ನೂ ಸಿದ್ಧತೆ ಮಾಡಿಕೊಂಡರು. ಆದರೆ, ಆ ದಿನ ರಾತ್ರಿಯ ವೇಳೆಯಲ್ಲಿ ಚಿಕ್ಕ ಹುಡುಗನು ಧನುರ್ವಾಯು ಬೇನೆಗೆ ತುತ್ತಾಗಿ ಸತ್ತು ಹೋದನು. ಅದರಿಂದಾಗಿ ಬ್ರಾಹ್ಮಣ ಪತ್ನಿಯು ಶೋಕ-ಸಾಗರದಲ್ಲಿ ಮುಳುಗಿದಳು. “ಅಯ್ಯೋ ಕಂದಾ…! ನೀನು ಗುರುಪ್ರಸಾದದಿಂದ ಹುಟ್ಟಿದವನು. ನಿನಗೆ  ನೂರು ವರ್ಷಗಳ ಆಯುಷ್ಯ ಎಂದು ಗುರುಗಳು ನನಗೆ ಭಾಷೆ ಕೊಟ್ಟಿದ್ದರು. ಹೀಗಿದ್ದೂ ನೀನೇಕೆ ನಮ್ಮನ್ನಗಲಿ ಹೊರಟಿಯೋ ಮಗನೇ??? ಎಂದು ಹಾಡಿಕೊಂಡು ಅಳತೊಡಗಿದಳು, ತನ್ನ ಮಗನೊಂದಿಗೆ ತಾನೂ ಪ್ರಾಣಾರ್ಪಣ ಮಾಡುವದಾಗಿ, ರಂಭಾಟ ಮಾಡಿ ಅಳತೊಡಗಿದಳು. ಬೆಳಗಾಯಿತು. ಕೂಡಿದ ಜನರು ಅಂತ್ಯಕ್ರಿಯೆಗಾಗಿ ಮಗುವಿನ ಶವ ಕೇಳಿದರು, ಅದನ್ನು ಕೊಡಲಾರದಾದಳು. ಅನೇಕರು ಅನೇಕ ರೀತಿಯಿಂದ ತಿಳಿಸಿ ಹೇಳಿದರು. ಮರಣವು ಯಾರಿಗೂ ಬಿಟ್ಟದ್ದಲ್ಲವೆಂದು ವೇದಾಂತ ಹೇಳಿದರು. ಆದರೆ ಬ್ರಾಹ್ಮಣ ಪತ್ನಿ ಶವವನ್ನು ಕೊಡಲೊಪ್ಪಲಿಲ್ಲ. ಅವಳು ಆ ಜನರಿಗೆ “ನೀವು ಒಯ್ಯುವದಾದರೆ ನನ್ನ ಮಗನೊಂದಿಗೆ ನನ್ನನ್ನೂ ಎಳೆದೊಯ್ದು ಸುಟ್ಟುಬಿಡಿರಿ ! ಮಗನನ್ನು ಬಿಟ್ಟು ನಾನು ಬದುಕಲಾರೆ !'' ಎಂದು ಕರಳು ಬಿರಿಯುವಂತೆ ಅಳತೊಡಗಿದಳು, ಆಗ ಒಬ್ಬ ಬ್ರಹ್ಮಚಾರಿಯು ಅಲ್ಲಿಗೆ ಬಂದನು. ಆತನು ಆ ಬ್ರಾಹ್ಮಣಪತ್ನಿಯನ್ನು ಕುರಿತು, ಅಮ್ಮಾ ಯಾರ ಆಯುಷ್ಯ ಎಷ್ಟು ದಿನವೆಂದು ಬರೆದಿರುತ್ತದೆಯೋ ಅಷ್ಟು ಕಾಲ ಮಾತ್ರ ಮನುಷ್ಯ ಭೂಮಿಯ ಮೇಲೆ ಬಾಳಲು ಸಾಧ್ಯ...! ಅಲ್ಪಾಯುಷ್ಯದ ಮಗನನ್ನು ಹೆತ್ತು ಈತ ದೀರ್ಘಾಯುಷಿಯಾಗಿ ಬಾಳಲೀ ಎಂದು ಬಯಸಿದರೆ, ಅದು ಹೇಗೆ ಸಾಧ್ಯ?” ಎಂದು ಪ್ರಶ್ನೆ ಮಾಡಿದನು. ಅದಕ್ಕೆ ಆ ಬ್ರಾಹ್ಮಣಿಯು ಅಳುತ್ತ “ಇಲ್ಲಪ್ಪಾ ! ನನ್ನ ಮಗ ಶತಾಯುಷಿಯೆಂದು ಗುರುಗಳು ನನಗೆ ಮೊದಲೇ ತಿಳಿಸಿದ್ದಾರೆ ! ನಾನಿವನನ್ನು ನಿಮ್ಮ ವಶಕ್ಕೆ ಕೊಡಲಾರೆ !'' ಎಂದು ಮೊಂಡುತನದಿಂದ ಹೇಳಿದಳು. ಅದಕ್ಕೆ ಆ ಬ್ರಹ್ಮಚಾರಿಯು ಸರಿ, ಹಾಗಿದ್ದರೆ ನಿನ್ನ ಗುರುಗಳ ಮಾತಿನಲ್ಲಿ ನಿನಗಿಷ್ಟು ವಿಶ್ವಾಸವಿದ್ದರೆ, ಮಗುವಿನ ಶವವನ್ನು ಗುರುಗಳ ಬಳಿಗೆ ಹೊತ್ತುಕೊಂಡು ಹೋಗು ! ಈತ ಯಾಕೆ ಸತ್ತನೆಂದು ನಿನ್ನ ಗುರುಗಳಿಗೆ ಪ್ರಶ್ನೆ ಮಾಡಿ ಪರಿಹಾರ ಹುಡುಕಿಕೋ !” ಎಂದು ನುಡಿದು ಹೊರಟು ಹೋದನೆಂಬಲ್ಲಿಗೆ ಸಾರರೂಪ ಶ್ರೀ ಗುರು ಚರಿತ್ರೆಯ ಇಪ್ಪತ್ತನೆಯ ಅಧ್ಯಾಯ ಮುಗಿಯಿತು.

Comments

Popular posts from this blog

Hanumane Tandeyu Hanumane Thayiyu lyrics

Sankshipta Guru Charitre in kannada

Sri Rama Chandirane