Shri Guru Charitre - Chapter 4





ಅಧ್ಯಾಯ ೪

|| ಹರಿಃ ಓಂ ಶ್ರೀ ಗುರುಭೋನಮಃ || 

ಎಲೈ ಶಿಷ್ಯತ್ತಮನೇ ಕೇಳು! ಬ್ರಹ್ಮದೇವನು ಸೃಷ್ಟಿಕಾರಕ್ಕೆ ಅನುಕೂಲವಾಗಲೆಂಬ ಉದ್ದೇಶದಿಂದ ಮೊದಲು, ಅತ್ರಿ, ಮರೀಚಿಯೇ ಮುಂತಾದ ಏಳು ಜನ ಮಾನಸ ಪುತ್ರರನ್ನು ನಿರ್ಮಿಸಿದನು, ಆ ಮಾನಸ ಪುತ್ರರಲ್ಲಿ ಅತ್ರಿಯಿಂದಲೇ ಗುರು ಪೀಠದ ಪೀಳಿಗೆ ಆರಂಭವಾಯಿತು. 

ಅದು ಹೇಗೆಂದರೆ ಅತ್ರಿ ಋಷಿಯ ಹೆಂಡತಿಯಾದ ಅನುಸೂಯೆಯು ಮಹಾಪತಿವ್ರತೆ ಯಾಗಿದ್ದಳು. ಆಕೆಯ ಪಾತಿವ್ರತ್ಯವನ್ನು ಭ್ರಷ್ಟಗೊಳಿಸಬೇಕೆಂಬ ದುರುದ್ದೇಶದಿಂದ ಒಂದು ಸಲ ಬ್ರಹ್ಮ ವಿಷ್ಣು ಮಹೇಶ್ವರ ಮೂವರು ಪ್ರಯತ್ನಕ್ಕಿಳಿದರು. ಅವರು ಭಿಕ್ಷುಕರ ವೇಷದಲ್ಲಿ ಬಂದಿದ್ದರು. ಅವರು ಬಂದ ಸಮಯದಲ್ಲಿ ಅತ್ರಿಮುನಿಗಳು ಅನುಷ್ಠಾನಕ್ಕಾಗಿ ನದಿಗೆ ಹೋಗಿದ್ದರು. ಅನುಸೂಯಯು ಅತಿಥಿಗಳನ್ನು ಆದರದಿಂದ ಸ್ವಾಗತಿಸಿದಳು. ಅತಿಥಿಗಳು " ಅಮ್ಮಾ! ನೀನು ಅತಿಥಿ ಸತ್ಕಾರದಲ್ಲಿ ನಿಸ್ಸೀಮಳೆಂದು ಕೇಳಿದ್ದೇವೆ, ನಾವು ಹಸಿದು ಬಂದಿರುವವು ನಮಗೆ ನೀನು ಇಚ್ಛಾಭೋಜನ ಮಾಡಿಸಬೇಕು !'' ಎಂದು ನುಡಿದರು. ಅನುಸೂಯೆಯು ಅವರ ಅಪೇಕ್ಷೆಗೆ ಸಮ್ಮತಿಸಿ, ಬಹುಬೇಗ ಪಂಚಪಕ್ವಾನ್ನಗಳನ್ನು ಸಿದ್ಧಪಡಿಸಿ, ಅತಿಥಿಗಳಿಗೆ ಎಲೆ ಹಾಕಿ ಬಡಿಸಿದಳು. ಹಾಗೂ ಅತಿಥಿಗಳನ್ನು ಊಟಕ್ಕೆ ಸ್ವಾಗತಿಸಿದಳು. ಆಗ ಭಿಕ್ಷುಕ ವೇಷದಲ್ಲಿರುವ ತ್ರಿಮೂರ್ತಿಗಳು, “ದೇವೀ! ನೀನು ನಗ್ನ ಸ್ವರೂಪದಿಂದ ಉಣಬಡಿಸಿದರೆ ಮಾತ್ರ ನಾವು ಊಟ ಮಾಡುವವು. ಇದು ನಮ್ಮ ಇಚ್ಛಾ ಭೋಜನದ ಪದ್ಧತಿಯಾಗಿದೆ. ಎಂದು ನಿರ್ಲಜ್ಜತನದಿಂದ ನುಡಿದರು. ಅನುಸೂಯೆಯು ಕ್ಷಣಕಾಲ ಗೊಂದಲಕ್ಕೆ ಬಿದ್ದಳು. ನಂತರ ಇವರು ದೈವೀಪುರುಷರೇ ಆಗಿರಬೇಕೆಂದು ವಿಚಾರಿಸಿ, “ಹಾಗೇ ಆಗಲಿ'' ! ಎಂದು ಅತಿಥಿಗಳಿಗೆ ಆಶ್ವಾಸನೆ ನೀಡಿ ಅಡುಗೆಯ ಮನೆಗೆ ಹೋದಳು. ಪತಿಯ ಪಾದಕಮಲಗಳನ್ನು ಮನದಲ್ಲಿಯೇ ಸ್ಮರಿಸಿದಳು. ನಾನಂತೂ ಪತಿವ್ರತಾ ಧರ್ಮದಂತೆ ಬಾಳಿದವಳು. ಅ೦ದಾಗ ಈ ಅತಿಥಿಗಳು ನನಗೆ ಮಕ್ಕಳ ಸಮಾನರಾಗಿದ್ದಾರೆ. ಅಂದಮೇಲೆ, ಅತಿಥಿಗಳ ಇಚ್ಛೆಯಂತೆ ಅವರಿಗೆ ಭೋಜನ ಮಾಡಿಸಲು ಅ೦ಜುವದೇಕೆ ? ಎಂದು ಯೋಚಿಸಿ ಪತಿಯ ಪಾದೋದಕವನ್ನು ಆ ಮೂವರು ಅತಿಥಿಗಳಿಗೆ ಸಿಂಪಡಿಸಿದಳು; ಕೂಡಲೇ ಅವಳ ಭಾವನೆಯಂತೆ ಆ ಮೂವರು ಅತಿಥಿಗಳು ಕೂಸುಗಳಾಗಿ ಮಾರ್ಪಟ್ಟು, ಮಣಿಗಳ ಮೇಲೆ ಮಲಗಿಕೊಂಡು ರೋದಿಸತೊಡಗಿದರು. ಆ ಮುದ್ದಾದ ಕೂಸುಗಳನ್ನು ನೋಡುತ್ತಲೇ ಅನುಸೂಯೆಯ ಮಾತೃ ಹೃದಯವು ಉಕ್ಕಿಬಂದಿತು. ಅವಳ ಸ್ತನಗಳಿಂದ ಹಾಲು ಸುರಿಯತೊಡಗಿತು. ಅವಳು ಪುತ್ರವಾತ್ಸಲ್ಯದಿಂದ ಮೂರು ಮಕ್ಕಳನ್ನು ಎತ್ತಿಕೊಂಡು ಬೆತ್ತಲೆಯಾಗಿ ಅತಿಥಿಗಳ ಇಚ್ಛೆಯಂತೆ ಅವರಿಗೆ ಹೊಟ್ಟೆ ತುಂಬ ಹಾಲು ಕುಡಿಸಿದಳು. ನಂತರ ಬಟ್ಟೆಯುಟ್ಟು, ಆ ಮಕ್ಕಳನ್ನು ತೊಟ್ಟಿಲಲ್ಲಿ ಹಾಕಿ ಜೋಗುಳ ಹಾಡತೊಡಗಿದಳು. 

ಅಷ್ಟರಲ್ಲಿ ಆಶ್ರಮಕ್ಕೆ ಮರಳಿ ಬಂದ ಅತಿ ಋಷಿಗಳು ಜ್ಞಾನದೃಷ್ಟಿಯಿಂದ ಈ ಕೂಸುಗಳು ತ್ರಿಮೂರ್ತಿಗಳಂಬುದನ್ನು ಅರಿತು, ಸಂತೋಷಭರಿತರಾದರು, ಹೆಂಡತಿಯನ್ನು ಕೊಂಡಾಡಿದರು. ಮತ್ತೂ ಕೂಸುಗಳ ರೂಪದಲ್ಲಿರುವ ತ್ರಿಮೂರ್ತಿಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಿದರು. ಕೂಡಲೇ ಆ ಕೂಸುಗಳಿಗೆ ನಿಜರೂಪ ಲಭಿಸಿ, ಅವರು ತ್ರಿಮೂರ್ತಿಗಳಾಗಿ ಸಂಪ್ರೀತರಾಗಿ, ''ಅಮ್ಮಾ ! ನಿನ್ನ ಪಾತಿವ್ರತ್ಯದೆದುರು ನಾವು ಸೋತು ಕೂಸುಗಳಾದವು. ನಿಮಗಾವ ವರಬೇಕೋ ಕೇಳಿಕೊಳ್ಳಿರಿ !'' ಎಂದು ನುಡಿಯಲು, ಅನುಸೂಯೆಯು ಪತಿಯ ಅಭಿಪ್ರಾಯವನ್ನು ತಿಳಿದುಕೊಂಡು, ತ್ರಿಮೂರ್ತಿಗಳಿಗೆ ನೀವು ಮೂವರೂ ನನ್ನ ಮಕ್ಕಳಾಗಿಯೇ ಉಳಿಯಬೇಕೆಂದು ಪ್ರಾರ್ಥಿಸಿಕೊಂಡಳು. ತ್ರಿಮೂರ್ತಿಗಳು ಅದಕ್ಕೊಪ್ಪಿ, ತಮ್ಮ ತಮ್ಮ ಅಂಶೀಭೂತವಾದ ಸ್ವರೂಪವನ್ನು ಮಕ್ಕಳ ರೂಪದಲ್ಲಿಯೇ ಬಿಟ್ಟು ಹೊರಟುಹೋದರು. ನಂತರ ಆ ದಂಪತಿಗಳು ಸಂತೋಷದಿಂದ ಆ ಮಕ್ಕಳನ್ನೆತ್ತಿಕೊಂಡರು. ಬ್ರಹ್ಮನಿಗೆ ಚಂದ್ರನೆಂದೂ, ವಿಷ್ಣುವಿಗೆ ದತ್ತನೆಂದೂ, ರುದ್ರನಿಗೆ ದುರ್ವಾಸನೆಂದೂ ಹೆಸರಿಟ್ಟು ಬೆಳೆಸತೊಡಗಿದರು. ಕೆಲದಿನಗಳ ನಂತರ ಚಂದ್ರನು ತಾಯಿಯ ಅನುಮತಿ ಪಡೆದು ಚ೦ದ್ರ ಮಂಡಲಕ್ಕೆ ತೆರಳಿದನು. ದುರ್ವಾಸನು ತಂದೆ-ತಾಯಿಗಳ ಅನುಮತಿ ಪಡೆದು ತೀರ್ಥಯಾತ್ರೆ ಹಾಗೂ ತಪಸ್ಸುಗಳನ್ನಾಚರಿಸುವದಕ್ಕೆ ಹೊರಟು ಹೋದನು. ದತ್ತನು ಮಾತ್ರ ತಂದೆ-ತಾಯಿಗಳ ಸೇವೆ ಮಾಡುತ್ತ ಅಲ್ಲಿಯೇ ನಿಂತನು. ತ್ರಿಮೂರ್ತಿಗಳ ಐಕ್ಯತೆಯು ದತ್ತನಲ್ಲಿಯೇ ಆಡಕವಾಯಿತು. ದತ್ತಾತ್ರಯನೇ ಗುರು ಪರಂಪರೆಯ ಆದಿಪುರುಷನೆಂದು ನಾಮಧಾರಕನಿಗೆ ಸಿದ್ಧಮುನಿಯು ವಿವರಿಸಿದನೆ೦ಬಲ್ಲಿಗೆ ಸಾರರೂಪ ಗುರುಚರಿತ್ರೆಯ 4ನೇ ಅಧ್ಯಾಯ ಮುಕ್ತಾಯವಾಯಿತು.

Comments

Popular posts from this blog

Hanumane Tandeyu Hanumane Thayiyu lyrics

Sankshipta Guru Charitre in kannada

Sri Rama Chandirane