Shri Guru Charitre - Chapter 18
ಅಧ್ಯಾಯ ೧೮
||ಹರಿಃ ಓಂ ಶ್ರೀ ಗುರುಭ್ಯೋ ನಮಃ ||
ನಾಮಧಾರಕನೇ ! ಶ್ರೀ ಗುರು ಗಳು ಪಂಚಗಂಗಾ ಕೃಷ್ಣಾ ಸಂಗಮದಲ್ಲಿ ಹನ್ನೆರಡು ವರ್ಷ (1427-1439) ವಾಸವಾಗಿದ್ದರು. (ಈಗ ಈ ಸ್ಥಳವೇ ನರಸಿಂಹವಾಡಿಯಾಗಿದೆ) ಆಗ ದಿನಾಲೂ ಅವರವಾಡ ಗ್ರಾಮಕ್ಕೆ ಭಿಕ್ಷೆಗೆ ಹೋಗುತ್ತಿದ್ದರು. ಆ ಊರಲ್ಲಿ ವೇದಭ್ಯಾಸಿಯಾದ ಒಬ್ಬ ದರಿದ್ರ ಬ್ರಾಹ್ಮಣನಿದ್ದನು. ಆತನು ನಿತ್ಯದಲ್ಲಿ ಭಿಕ್ಷಾವೃತ್ತಿಯಿಂದ ಜೀವಿಸುತ್ತಿದ್ದನು, ಆತನ ಮನೆಯ ಅಂಗಳದಲ್ಲಿ ಒಂದು ಅವರೆಯ ಬಳ್ಳಿ ಇದ್ದಿತು, ಅದು ಮಾಳಿಗೆಗೆ ಹಬ್ಬಿಕೊಂಡು ಸದಾ ಕಾಲ ಹೂವು ಕಾಯಿಗಳಿಂದ ತುಂಬಿಕೊಂಡಿರುತ್ತಿತ್ತು ಬ್ರಾಹ್ಮಣನಿಗೆ ಭಿಕ್ಷೆ ದೊರೆಯದಿದ್ದಾಗ, ಆತನ ಮನೆಯವರೆಲ್ಲ ಆ ಅವರೆಯ ಕಾಯಿಯ ಪಲ್ಯದಿಂದಲೇ ಸಂತೃಪ್ತಿಪಡೆಯಬೇಕಾಗುತ್ತಿತ್ತು. ಹೀಗಿರುತ್ತಿರಲು ಒಂದು ದಿವಸ ಮಧ್ಯಾಹ್ನದ ವೇಳೆಗೆ ಗುರುಗಳು ಆ ಬ್ರಾಹ್ಮಣನ ಮನೆಗೆ ಭಿಕ್ಷೆಗೆ ಹೋದರು. ಗುರುಗಳನ್ನು ಕಂಡ ಬ್ರಾಹ್ಮಣ ದಂಪತಿಗಳು ಬಹು ಭಕ್ತಿಯಿಂದ ಗುರುಗಳನ್ನು ಸ್ವಾಗತಿಸಿ ಪಾದಪೂಜೆ ಮಾಡಿದರು. ತಮಗಾಗಿ ಸಿದ್ಧಪಡಿಸಿ ಇಟ್ಟುಕೊಂಡಿದ್ದ ಅವರೇ ಕಾಳಿನ ಪಲ್ಯವನ್ನೇ ಗುರುಗಳಿಗೆ ಭಿಕ್ಷೆ ನೀಡಿದರು. ಗುರುಗಳು ಅದರಿಂದಲೇ ತೃಪ್ತರಾಗಿ ನಿಮ್ಮ ದಾರಿದ್ರ ದೂರಾಗಲಿ !” ಎಂದು ಆಶೀರ್ವದಿಸಿದರು, ಮತ್ತೂ ಆ ಮನೆಯಿಂದ ಹೊರಗೆ ಬರುವಾಗ ಅಂಗಳದಲ್ಲಿದ್ದ ಆ ಅವರೆಯ ಬಳ್ಳಿಯನ್ನು ಬಡ್ಡೆಗೆ ಹಚ್ಚಿ ಮುರಿದೊಗೆದು ಬಂದು ಬಿಟ್ಟರು. ಬ್ರಾಹ್ಮಣನ ಹೆಂಡತಿಯು ಈ ಯತಿಗೆ ನಾವೇನು ಅನ್ಯಾಯ ಮಾಡಿದೆವೆಂದು ನಮ್ಮ ಅನ್ನ ಕಸಿದನು ?'' ಎಂದು ಹಳಹಳಿಸತೊಡಗಿದಳು, ವಿವೇಕಿಯಾದ ಬ್ರಾಹ್ಮಣನು ಅವಳಿಗೆ ಯತಿನಿಂದೆ ಮಾಡಬಾರದೆಂದು ಬುದ್ಧಿ ಹೇಳಿದನು. ಹುಟ್ಟಿಸಿದ ದೇವರು ಯಾವ ರೀತಿಯಿಂದಲಾದರೂ ರಕ್ಷಿಸಿಯೇ ರಕ್ಷಿಸುತ್ತಾನೆಂದು ಹೆಂಡತಿಗೆ ಧೈರ್ಯ ಹೇಳಿದನು. ಆ ಅವರೆಯ ಬಳ್ಳಿಯ ಮೊಟಕಾದ ಬೇರನ್ನು ಕಿತ್ತೆಸೆಯುವ ಉದ್ದೇಶದಿಂದ, ಗುದ್ದಲಿಯಿಂದ ಆ ಜಾಗೆಯನ್ನು ಅಗಿಯತೊಡಗಿದನು, ತಕ್ಷಣವೇ ಅಲ್ಲಿ ದ್ರವ್ಯ (ಬಂಗಾರ) ತುಂಬಿದ ಒಂದು ಪಾತ್ರೆ ದೊರೆಯಿತು, ದ೦ಪತಿಗಳಿಗೆ ಅತ್ಯಾನ೦ದವಾಯಿತು. ಈ ಯೋಗೀಶ್ವರನು ಮನುಷ್ಯನಲ್ಲ, ಇವನ ಕೃಪೆಯಿಂದಲೇ ನಮ್ಮ ದಾರಿದ್ರ ನಾಶವಾಯಿತು !' ಎಂದುಕೊಳ್ಳುತ್ರ ಸಂಗಮಕ್ಕೆ ಹೋದರು.
ನಡೆದ ವಿಷಯವನ್ನೆಲ್ಲ ಗುರುಗಳೆದುರಿಗೆ ಬಣ್ಣಿಸಿ, ಭಕ್ತಿಯಿಂದ ಅವರ ಪಾದ ಪೂಜೆ ಮಾಡಿದರು. ಪ್ರಸನ್ನ ಚಿತ್ತರಾದ ಗುರುಗಳು ಈ ವಿಷಯವನ್ನು ಬೇರೇ ಯಾರಿಗೂ ಹೇಳಕೂಡದೆಂದು ಆ ದಂಪತಿಗಳಿಗೆ ಅಪ್ಪಣೆ ಮಾಡಿ, ಆಶೀರ್ವದಿಸಿ ಕಳಿಸಿದರೆ೦ಬಲ್ಲಿಗೆ ಸಾರರೂಪ ಶ್ರೀ ಗುರುಚರಿತ್ರೆಯ 18ನೇ ಅಧ್ಯಾಯ ಮುಗಿಯಿತು.
Comments
Post a Comment