Shri Guru Charitre - Chapter 16
ಅಧ್ಯಾಯ ೧೬
||ಹರಿಃ ಓಂ ಶ್ರೀ ಗುರುಭ್ಯೋ ನಮಃ ||
ನಾಮಧಾರಕನೇ ! ಗುರುಗಳು ವೈಜನಾಥ ಕ್ಷೇತ್ರದಲ್ಲಿರುವಾಗ, ಒಂದು ದಿನ ಮುನಿ ವೇಷದ ಒಬ್ಬ ಬ್ರಾಹ್ಮಣನು ಅವರ ಬಳಿಗೆ ಬಂದು ನಮಸ್ಕರಿಸಿದನು. ಮತ್ತೂ ಭಕ್ತಿಯಿಂದ ಗುರುಗಳನ್ನು ಕುರಿತು, ''ಮಹಾತ್ಮಾ! ನಿನ್ನ ದರ್ಶನದಿಂದ ನಾನು ಪಾವನನಾದೆನು, ನಾನು ಬೇಕಾದಷ್ಟು ಶ್ರಮವಹಿಸಿ ತಪಸ್ಸನ್ನಾಚರಿಸಿದರೂ ನನಗೆ ಜ್ಞಾನೋದಯ ಅಥವಾ ಆತ್ಮಸಾಕ್ಷಾತ್ಕಾರಗಳು ದೊರೆಯದಾಗಿವೆ. ಸರ್ವ ಸಮರ್ಥನಾದ ನೀನೇ ನನಗೆ ಸರಿಯಾದ ಮಾರ್ಗದರ್ಶನ ಮಾಡಿ, ಉದ್ದರಿಸಬೇಕು !' ಎಂದು ಪ್ರಾರ್ಥಿಸಿಕೊಂಡನು. ಗುರುಗಳು ಕ್ಷಣಕಾಲ ಆತನನ್ನು ನಿರೀಕ್ಷಿಸಿ “ನೀನು ಗುರು ಇಲ್ಲದೆ ಮುನಿ ಆದದ್ದಾದರೂ ಹೇಗೆ?” ಎಂದು ಪ್ರಶ್ನೆ ಮಾಡಿದರು, ಅದಕ್ಕೆ ಆ ಬ್ರಾಹ್ಮಣನು ದುಃಖದಿಂದ ಸ್ವಾಮೀ ! ನನಗೊಬ್ಬ ಗುರುವು ಇದ್ದನು. ಆದರೆ ಆತನು ಬಹಳೇ ನಿಷ್ಟುರನಾಗಿದ್ದನು. ಮೇಲಿಂದ ಮೇಲೆ ಬಿರುನುಡಿಗಳನ್ನಾಡಿ ನನ್ನ ಮನಸ್ಸಿಗೆ ನೋವನ್ನುಂಟು ಮಾಡುತ್ತಿದ್ದನು, ನಾನೂ ನನ್ನ ಮೇಲೆ ಗುರುಕೃಪೆಯು ಇಂದು ಆದೀತು, ನಾಳೆ ಆದೀತು ಎಂದು ಯೋಚಿಸುತ್ತ ಬಹುದಿನಗಳವರೆಗೆ ಆತನ ಸೇವೆ ಮಾಡಿದನು. ಆದರೆ ಅದರಿಂದ ಏನೂ ಪ್ರಯೋಜನವಾಗಲಿಲ್ಲ. ಅದಕ್ಕಾಗಿ ನನಗವನ ಮೇಲೆ ಸಿಟ್ಟು ಬಂತು ಸಾರಿಗೆಯ ಎತ್ತಿನಂತೆ ಇವನ ಸೇವೆ ಮಾಡುವದಕ್ಕಿಂತ ಸ್ವತಂತ್ರವಾಗಿ ಏನಾದರೂ ಪ್ರಯತ್ನ ಮಾಡಿದರಾಯಿತೆ೦ದುಕೊ೦ಡು ಆತನ ಆಶ್ರಮದಿಂದ ಹೊರಟು ಬಂದು ಹತ್ತೆಂಟು ವರ್ಷಗಳು ಗತಿಸಿಹೋದವು. ನಾನೇನೇ ಪ್ರಯತ್ನ ಮಾಡಿದರೂ ನನ್ನ ತಪಸ್ಸು ಸಿದ್ಧಿಸದಾಗಿದೆ !” ಎಂದು ಇದ್ದ ವಿಷಯವನ್ನು ಇದ್ದಂತೆ ತಿಳಿಸಿಬಿಟ್ಟನು.
ಗುರುಗಳು ಆತನ ಮಾತನ್ನು ಕೇಳಿ ಸಿಟ್ಟಿಗೆದ್ದರು. ಎಲೋ ಆತ್ಮಘಾತುಕನೇ! ನೀನಂಥಾ ಮೂರ್ಖನಾಗಿರುವಿಯೋ ? ಉಣ್ಣುವ ಸ್ಥಳದಲ್ಲಿ ಹೇಸಿಗೆ ಮಾಡಿಕೊಂಡು, ಇದು ನನ್ನ ಪ್ರಾರಬ್ಧ'' ಎಂದು ನುಡಿದಂತಿದೆ ನಿನ್ನ ವಿಚಾರ. ನೀನು ನಿನ್ನಲ್ಲಿರುವ ದೋಷವನ್ನು ತಿದ್ದಿಕೊಳ್ಳಲು ಪ್ರಯತ್ನಿಸದೇ, ಗುರುವಿನಲ್ಲಿಯ ಗುಣ-ದೋಷಗಳನ್ನು ಎತ್ತಿ ಆಡಲು ಪ್ರಯತ್ನಿಸುತ್ತಿರುವಿ, ಅಂದ ಮೇಲೆ ನಿನ್ನಂಥ ಗುರು ದ್ರೋಹಿಗೆ ಎಂದಿಗೂ ಜ್ಞಾನವು ಸಿದ್ಧಿಯಾಗಲಾರದು, ಗುರುವನ್ನು ತ್ಯಜಿಸಿ ಬಂದ ನೀನು ಇಹ-ಪರ ಎರಡಕ್ಕೂ ಸಲ್ಲದ ತ್ರಿಶ೦ಖುವಿನಂತಾಗಿರುವಿ, ಗುರುಸೇವೆಯಲ್ಲಿ ಬೇಸರವನ್ನೆಣಿಸುವ ನಿನಗೆ ಅತ್ಮೋದ್ದಾರದ ದಾರಿ ಸಿಗುವದಾದರೂ ಹೇಗೆ.....? ಈ ಬಗ್ಗೆ ನಿನಗೊಂದು ಚರಿತ್ರೆ ಹೇಳುತ್ತೇವೆ ಕೇಳು !.....
ದ್ವಾಪರ ಯುಗದ ಕೊನೆಯ ಭಾಗದಲ್ಲಿ ' ಧೌಮ್ಯ'ರೆಂಬ ಹೆಸರಿನ ಬ್ರಹ್ಮಜ್ಞಾನಿಗಳಾದ ಮುನಿಗಳೊಬ್ಬರಿದ್ದರು ಅವರ ಬಳಿಯಲ್ಲಿ ಅರುಣ, ಬೈದ, ಉಪಮನ್ಯು, ಹೀಗೆ ಮೂರು ಜನ ಶಿಷ್ಯರು ನಿಷ್ಠೆಯಿಂದ ಗುರುಸೇವೆ ಮಾಡಿಕೊಂಡಿದ್ದರು. ಒಂದು ದಿನ ಗುರುಗಳು ಶಿಷ್ಯರಲ್ಲಿಯ ನಿಷ್ಠೆಯನ್ನು ಪರೀಕ್ಷೆಸುವದಕ್ಕಾಗಿ, ಅರುಣನನ್ನು ಕರೆದು ಎಲೋ ನಮ್ಮ ಬತ್ತದ ಗದ್ದೆಯಲ್ಲಿ ನೀರೇ ನಿಲ್ಲದಾಗಿದೆ, ಅದಕ್ಕಾಗಿ ನೀನು ಗದ್ದೆಗೆ ಹೋಗಿ ಗದ್ದೆಯ ತುಂಬಾ ಸರಿಯಾಗಿ ನೀರು ನಿಲ್ಲುವಂತೆ ವ್ಯವಸ್ಥೆ ಮಾಡು !?” ಎಂದು ಹೇಳಿದರು. ಅರುಣನು ಗುರುವಾಜ್ಞೆಯನ್ನು ನಿಷ್ಠೆಯಿಂದ ಕೇಳಿಕೊಂಡು ಗದ್ದೆಗೆ ಬಂದನು. ಗುರುಗಳ ಗದ್ದೆಗೆ ಕಾಲುವೆಯಿಂದ ಸಾಕಷ್ಟು ನೀರೇನೋ ಹರಿದು ಬರುತಿತ್ತು; ಆದರೆ ಗದ್ದೆಯ ಒಡ್ಡು ಒಡೆದು ಹೋದದ್ದರಿಂದ, ನೀರು ಅದರಲ್ಲಿ ಸ್ಥಿರವಾಗಿ ನಿಲ್ಲದೇ ಹೊರಟುಹೋಗಿ ಬಿಡುತ್ತಿತ್ತು ಅರುಣನು ಮೊದ ಮೊದಲು ಆ ಒಡ್ಡನ್ನು ಕಲ್ಲು ಮಣ್ಣುಗಳಿಂದ ಪ್ರತಿಬಂಧಿಸಲು ಪ್ರಯತ್ನ ಮಾಡಿದನು. ಆದರೆ ನೀರಿನ ಸೆಳವು ಹೆಚ್ಚಿಗೆ ಇದ್ದ ಪ್ರಯುಕ್ತ ಈತ ತಂದು ಹಾಕಿದ ಕಲ್ಲು ಮಣ್ಣುಗಳೆಲ್ಲ ನೀರಿನಲ್ಲಿ ಕೊಚ್ಚಿ ಹೋಗತೊಡಗಿದವು. ಗದ್ದೆಯಲ್ಲಿ ಏನಾದರೂ ಪ್ರಯತ್ನ ಮಾಡಿ ನೀರು ತುಂಬಿಸಲೇಬೇಕೆಂದು ಗುರುಗಳ ಆಜ್ಞೆಯಾಗಿತ್ತು. ಗುರುವಾಜ್ಞೆಯು ವೇದವಾಕ್ಯಗಳಿಗಿಂತ ಶ್ರೇಷ್ಠವಾದದ್ದು' ಎಂಬ ಭಾವನೆಯು ಅರುಣನ ಮನದಲ್ಲಿತ್ತು. ಅದಕ್ಕಾಗಿಯೇ ಆತನು ಒಂದು ಉಪಾಯವನ್ನು ಕಂಡು ಹಿಡಿದನು, ಗದ್ದೆಯ ಬದುವನ್ನು ನೀರು ಕೊಚ್ಚಿಕೊಂಡು ಹೋಗುತ್ತಿರುವ ಸ್ಥಳದಲ್ಲಿ ತಾನೇ ಅಡ್ಡವಾಗಿ ಮಲಗಿಬಿಟ್ಟನು. ಅದರ ಪರಿಣಾಮವಾಗಿ ಗದ್ದೆಯಲ್ಲಿ ಮೆಲ್ಲ ಮೆಲ್ಲನೆ ನೀರು ಏರತೊಡಗಿ, ಸ್ವಲ್ಪ ಸಮಯದಲ್ಲಿ ಗದ್ದೆಯ ತುಂಬಾ ಕೆರೆಯಂತೆ ನೀರು ನಿಂತು ಬಿಟ್ಟಿತು. ಮಧ್ಯಾಹ್ನವಾಯಿತು, ಅರುಣನು ಊಟಕ್ಕಾಗಿ ಆಶ್ರಮಕ್ಕೆ ಹೋಗಲಿಲ್ಲ. ಸಂಜೆಯಾಯಿತು, ಆಗಲೂ ಅರುಣನು ಮೇಲೇಳಲಿಲ್ಲ. ತಾನು ಮೇಲಕ್ಕೆದ್ದರೆ ಗದ್ದೆಯಲ್ಲಿಯ ನೀರೆಲ್ಲಾ ಮತ್ತೆ ಹೊರಗೆ ಹೋಗಿಬಿಡುವದು; ಅದರಿಂದ ಗುರುವಾಜ್ಞೆಗೆ ಭಂಗ ಬರುವದು'' ಎಂಬುದೊಂದೇ ಅರುಣನ ವಿಚಾರವಾಗಿತ್ತು. ಮೂರು ತಾಸು ರಾತ್ರಿಯಾದರೂ ಅರುಣನು ಆಶ್ರಮಕ್ಕೆ ತಿರುಗಿ ಬಾರದಿರಲು, ಗುರುಗಳು ಕಳವಳಕ್ಕೀಡಾದರು, ತಮ್ಮ ಶಿಷ್ಯರಿಬ್ಬರನ್ನು ಸ೦ಗಡ ಕರೆದುಕೊಂಡು, ತಾವೇ ಕೈಯ್ಯಲ್ಲಿ ದೀವಟಿಗೆ ಹಿಡಿದುಕೊಂಡು ಅರುಣನನ್ನು ಹುಡುಕುತ್ತ ಗದ್ದೆಯ ಬಳಿಗೆ ಬಂದರು, ಗದ್ದೆಯು ನೀರಿನಿಂದ ತುಂಬಿ ತುಳುಕುತ್ತಿರುವದನ್ನು ನೋಡಿ ಆನ೦ದಿತರಾದರು. ಆದರೆ ಅವರಿಗೆ ತಮ್ಮ ಶಿಷ್ಯನೆಲ್ಲಿರುವನೆಂಬ ಸುಳಿವೇ ಸಿಕ್ಕಲಿಲ್ಲ, ದೀವಟಿಗೆಯ ಬೆಳಕಿನಲ್ಲಿ ಅತ್ತಿತ್ತ ಹುಡುಕಾಡುತ್ತ "ಮಗೂ ಅರುಣಾಽ ಎಲ್ಲಿದ್ದೀಯೋ ' ಎಂದು ಗಟ್ಟಿಯಾಗಿ ಕೂಗಿ ಕೇಳಿದರು. ಗುರುಗಳ ಧ್ವನಿಯನ್ನಾಲಿಸಿದ ಅರುಣನು ಮಲಗಿದಲ್ಲಿಂದಲೇ ಕೂಗಿ ಹೇಳಿದನು. ಗುರುಗಳೇ… ನಾನು ಒಡೆದ ಒಡ್ಡಿನ ಬಳಿ ಇದ್ದೇನೆ. ನಾನು ಎದ್ದರೆ ನೀರೆಲ್ಲಾ ಹೊರಟು ಹೋಗುತದೆ. ಅದಕ್ಕಾಗಿ ದಯವಿಟ್ಟು ತಾವೇ ಇಲ್ಲಿಯವರೆಗೆ ಬರುವ ಕೃಪೆ ಮಾಡಬೇಕು !' ಶಿಷ್ಯನ ಧ್ವನಿಯನ್ನಾಲಿಸಿ ಗುರುಗಳು ಅಲ್ಲಿಗೆ ಧಾವಿಸಿ ಬಂದರು. ಅರುಣನ ನಿಷ್ಠೆಯಿಂದ ಸಂತೃಪ್ತರಾದ ಅವರು, ಆತನನ್ನು ಮೇಲೆ ಬಿಸಿ ಆನಂದಾಶ್ರುಗಳನ್ನುದುರಿಸುತ್ತ, ಬಿಗಿದಪ್ಪಿಕೊಂಡರು. 'ಮಗೂ ನಿನ್ನ ಗುರುಭಕ್ತಿಗೆ ನಾವು ಮೆಚ್ಚಿದೆವು ! ನಿನಗೆ ವೇದ-ಶಾಸ್ತ್ರಗಳು ಸಂಪೂರ್ಣ ಜ್ಞಾನ ಉಂಟಾಗಲಿ ! ನೀನಿನ್ನು ನಿನ್ನ ಮನೆಗೆ ಹೋಗಿ, ಗ್ರಹಸ್ಥಾಶ್ರಮವನ್ನು ಸ್ವೀಕರಿಸಿ, ಸುಖವಾಗಿ ಬಾಳು!” ಎಂದು ಆಶೀರ್ವದಿಸಿದರು. ಕೂಡಲೇ ಅರುಣನಿಗೆ ಜ್ಞಾನೋದಯವಾಯಿತು. ಆತನು ಭಯ ಭಕ್ತಿಯಿಂದ ಗುರುಗಳಿಗೆ ನಮಸ್ಕರಿಸಿ ತನ್ನ ಊರಿಗೆ ಹೊರಟುಹೋದನು.
ಎರಡು ತಿಂಗಳ ಕಾಲ ಗತಿಸಿತು. ಗುರುಗಳ ಬತ್ತದ ಪೈರು ಮಾಗಿ ನಿಂತಿತ್ತು. ದೌಮ್ಯ ಋಷಿಗಳು ತಮ್ಮ ಎರಡನೆಯ ಶಿಷ್ಯನಾದ ಬೈದನನ್ನು ಕರೆದರು ಮತ್ತೂ ಗದ್ದೆಗೆ ಹೋಗಿ ಬತ್ತದ ಪೈರನ್ನು ಕೊಯ್ದು ವಕ್ಕಲಿ ಮಾಡಿಕೊಂಡು, ಬಂಡಿಯಲ್ಲಿ ಹೇರಿಕೊಂಡು ಬರಬೇಕೆಂದು ಆಜ್ಞೆ ಮಾಡಿದರು. ಗುರುಗಳ ಆಶ್ರಮದಲ್ಲಿ ಬಂಡಿಗೆ ಹೂಡಲು ಒಂದೇ ಕೋಣವಿತ್ತು ಬೈದನು ಆ ಕೋಣವನ್ನು ಒಂದು ಕಡೆ ಹೂಡಿಕೊಂಡು ಇನ್ನೊಂದು ಕಡೆಯ ನೊಗವನ್ನು ತಾನೇ ಜಗ್ಗುತ್ತಗದ್ದೆಯವರೆಗೆ ಬಂಡಿಯನ್ನೆಳೆದುಕೊಂಡು ಹೋದನು.
ಸರಸರನೇ ಬತ್ತವನ್ನು ಕೊಯ್ದನು. ಒಂದು ಕಡೆಗೆ ಕಣಮಾಡಿ ಬತ್ತವನ್ನು ಬಡಿದು ತೂರಿ ವಕ್ಕಲಿ ಮಾಡಿದನು. ಏಳೆಂಟು ಚೀಲಗಳಷ್ಟು ಬತ್ತದ ರಾಶಿಯಾಯಿತು. ಅದನ್ನೆಲ್ಲ ಚೀಲಗಳಲ್ಲಿ ತುಂಬಿ ಬಂಡಿಗೆ ಹೇರಿಕೊಂಡನು. ಒಂದು ಕಡೆಗೆ ಜತ್ತಿಗೆ ಹಚ್ಚಿ ಕೋಣವನ್ನು ಹೂಡಿದನು, ಮತ್ತೊಂದು ಕಡೆಯ ನೊಗವನ್ನು ಜತ್ತಿಗೆಯಿಂದ ತಾನೇ ಕುತ್ತಿಗೆಗೆ ಬಿಗಿದುಕೊಂಡು, ಕೋಣನೊಂದಿಗೆ ಬಂಡಿ ಎಳೆಯುತ್ತ ಆಶ್ರಮದ ಕಡೆಗೆ ನಡೆದನು. ಇಷ್ಟಾಗುವದರಲ್ಲಿಯೇ ಕತ್ತಲಾಗಿ ಹೋಗಿತ್ತು ಊಟದ ಪರಿವೆ ಕೂಡಾ ಇಲ್ಲದೇ ದುಡಿದದ್ದರಿಂದ ಬೈದನಿಗೆ ಅಷ್ಟು ಬೇಗ ಕಾಳನ್ನೊಕ್ಕಲು ಸಾಧ್ಯವಾಗಿತ್ತು. ಕತ್ತಲೆಯಲ್ಲಿ ಬಂಡಿಯನ್ನೆಳೆದು ಕೊಂಡು ಬರುತ್ತಿರುವಾಗ್ಗೆ ಬಂಡಿಯ ಗಾಲಿಗಳು ಒಂದು ಕಡೆಗೆ ಹುದುಲಿನಲ್ಲಿ ಸಿಕ್ಕಿಕೊಂಡವು. ಕೋಣವನ್ನು ಹುರಿದುಂಬಿಸಿ ತಾನೂ ಸಂಪೂರ್ಣ ಶಕ್ತಿ ಕೊಟ್ಟು ಹುದಲಿಗೆ ಸಿಕ್ಕ ಬಂಡಿಯನ್ನು ಕೀಳೆನ್ನಿಸತೊಡಗಿದನು. ಆದರೆ ಕುತ್ತಿಗೆಗೆ ಬಿಗಿದುಕೊಂಡಿರ ಜತ್ತಿಗೆಯು ಈತನಿಗೆ ಉರುಲಾಗಿ ಸಂಕಟಪಡತೊಡಗಿದನು, ಅಷ್ಟರಲ್ಲಿ ಆತನನ್ನು ಹುಡುಕುತ್ತ ಬಂದ ದೌಮ್ಯ ಋಷಿಗಳು, ಆತನ ಕೊರಳಿಗೆ ಬಿದ್ದಿರುವ ಜತ್ತಿಗೆಯ ಉರುಲನ್ನು ಕತ್ತರಿಸಿ ತೆಗೆದರು. ಶಿಷ್ಯನ ನಿಷ್ಠೆಯನ್ನು ಮೆಚ್ಚಿ, ಆಶೀರ್ವಾದದಿಂದಲೇ ಸಕಲ ವಿದ್ಯೆಗಳನ್ನು ಕರುಣಿಸಿದರು. ಇನ್ನು ಮೇಲೆ ಗ್ರಹಸ್ಥಾಶ್ರಮ ಸ್ವೀಕರಿಸಿ ಸುಖದಿಂದ ಬಾಳು!” ಎಂದು ಹರಸಿ ಕಳಿಸಿದರು.
ಇನ್ನು ದೌಮ್ಯ ಋಷಿಗಳ ಮೂರನೆಯ ಶಿಷ್ಯನಾದ ಉಪಮನ್ಯುವಿನ ಚರಿತ್ರೆಯನ್ನು ಕೇಳು ! ಬುದ್ಧಿ ಮಂದನಾದ ಈತನಿಗೆ ಹಸಿವೆಯನ್ನು ತಡೆಯುವದಾಗುತ್ತಿರಲಿಲ್ಲ. ಗುರುಗಳು ಈತನಿಗೆ ಆಕಳುಗಳನ್ನು ಮೇಯಿಸಿಕೊಂಡು ಬರುವ ಕೆಲಸವನ್ನು ಹಚ್ಚಿದರು. ಮಧ್ಯಾಹ್ನದ ವೇಳೆಗೆ ಹಸಿವೆಯಾದೊಡನೇ ಇವನು ಆಕಳುಗಳನ್ನು ಆಶ್ರಮಕ್ಕೆ ಹೊಡಕೊಂಡು ಬಂದು ಬಿಡುತ್ತಿದ್ದನು. ಅವನು ಆಶ್ರಮದಲ್ಲಿ ಹೊಟ್ಟೆ ಬಿರಿಯುವಂತೆ ಊಟ ಮಾಡುತಿದ್ದನು, ಇದನ್ನು ಗಮನಿಸಿದ ದೌಮ್ಯರು, 'ಎಲೋ ನೀನು ಮಧ್ಯಾಹ್ನದ ವೇಳೆಗೆ ಬಂದು ಬಿಡಬೇಡ; ಹೊತ್ತು ಮುಳುಗುವವರೆಗೂ ಹಸುಗಳನ್ನು ಮೇಯಿಸಿಕೊಂಡು ಬಾ !” ಎಂದು ಆಜ್ಞೆಮಾಡಿದರು. ಉಪಮನ್ಯುವು ವಿಧೇಯತೆಯಿಂದ ಹಾಗೇ ಆಗಲಿ! ಗುರುಗಳೇ ಎಂದನು. ಮರು ದಿವಸ ಮಧ್ಯಾಹ್ನದ ವೇಳೆಗೆ ಹಸಿವೆಯಾದೊಡನೆಯೇ ದನಗಳನ್ನು ನೆರಳಲ್ಲಿ ನಿಲ್ಲಿಸಿ ಪಕ್ಕದಲ್ಲಿದ್ದ ನದಿಯಲ್ಲಿ ಸ್ನಾನಮಾಡಿ, ಸಮೀಪದಲ್ಲಿದ್ದ ನಾಲ್ಕಾರು ಮನೆಗಳಲ್ಲಿ ಮಧುಕರಿ ಬೇಡಿ, ಅದನ್ನೇ ಊಟಮಾಡಿ, ಸಂಜೆಯವರೆಗೆ ಮತ್ತೆ ದನಗಳನ್ನು ಮೇಯಿಸಿಕೊಂಡು ಆಶ್ರಮಕ್ಕೆ ಬರತೊಡಗಿದನು. ಈ ವಿಷಯ ವನ್ನು ಗುರುತಿಸಿದ ದೌಮ್ಯರು, ಎಲೋ ! ನೀನು ಮಧುಕರಿ ಬೇಡಿ ತಂದ ಭಿಕ್ಷಾನ್ನವನ್ನೆಲ್ಲ ನಮ್ಮ ಆಶ್ರಮಕ್ಕೆ ತಂದೊಪ್ಪಿಸಬೇಕು ಎಂದು ಅಪ್ಪಣೆ ಮಾಡಿದರು. ಅದಕ್ಕೊಪ್ಪಿದ ಉಪಮನ್ಯುವು ಮರುದಿನದಿಂದ ಗುರುಗಳ ಆಜ್ಞೆಯಂತೆ ಮಧುಕರಿಯ ಅನ್ನವನ್ನೆಲ್ಲ ಆಶ್ರಮಕ್ಕೇ ಮುಟ್ಟಿಸತೊಡಗಿದನು. ಅವನಿಗೆ ಹಸಿವೆಯ ಬಾಧೆಯಾಯಿತು. ಕರುಗಳು ಹಸುವಿನ ಹಾಲನ್ನು ಕುಡಿಯುವಾಗ್ಗೆ ಅವುಗಳ ಕಟಬಾಯಿಗುಂಟ ಹಾಲಿನ ನೊರೆಯು ಸೋರುತ್ತಿದ್ದುದನ್ನು ಗಮನಿಸಿ ಅದನ್ನು ನೆಕ್ಕಿ ಹಸಿವೆ ಹಿಂಗಿಸಿಕೊಳ್ಳತೊಡಗಿದನು. ರಾತ್ರಿಯ ಒ೦ದೇ ಸಮಯ ಊಟ ಮಾಡುತ್ತಿದ್ದರೂ ಶಿಷ್ಯನು ಸೊರಗದೇ ಇರುವದನ್ನು ಗಮನಿಸಿ ದೌಮ್ಯರಿಗೆ ಆಶ್ಚರ್ಯವಾಯಿತು. ಅವರು ಉಪಮನ್ಯುವನ್ನು ಕರೆದು, “ನೀನೀಗ ಮಧ್ಯಾಹ್ನದ ಸಮಯದಲ್ಲಿ ಹೊಟ್ಟೆಗಾಗಿ ಏನು ಮಾಡುವಿ ?'' ಎಂದು ಕೇಳಿದರು. ಉಪಮನ್ಯುವು ಇದ್ದ ವಿಷಯ ವನ್ನು ಮರೆಮಾಚದೇ ಹೇಳಿದನು. ಗುರುಗಳು, “ಎಲೋ ! ಎಂಜಲನ್ನು ತಿಂದರೆ ಬುದ್ದಿ ಮಂದವಾಗುವದು. ನೀನು ಅಂಥ ಹಾಲನ್ನು ನೆಕ್ಕಕೂಡದು!” ಎಂದು ಆಜ್ಞೆ ಮಾಡಿದರು. ಉಪಮನ್ಯುವು ವಿಧೇಯತೆಯಿಂದ ಅದನ್ನೂ ಒಪ್ಪಿಕೊಂಡನು, ಮರುದಿವಸ ಹಸಿವೆಯ ಬಾಧೆಯಾದಾಗ ಉಪಮನ್ಯುವು ಬೇರೆ ಉಪಾಯ ಕಾಣದೇ, ಎಕ್ಕೆಯ ಹಾಲನ್ನು ಕುಡಿಯತೊಡಗಿದನು. ಎಕ್ಕೆಯ ಕುಡಿಯನ್ನು ಮುರಿಯುವಾಗ ಅದರ ಹಾಲು ರಭಸದಿಂದ ಉಪಮನ್ಯುವಿನ ಎರಡೂ ಕಣ್ಣುಗಳಿಗೆ ಸಿಡಿಯಿತು. ಆತನ ಕಣ್ಣು ಕಾಣದಂತಾದವು ಆಕಳುಗಳನ್ನು ಹುಡುಕಲು ಹೋಗಿ ಒಂದು ಹಾಳು ಬಾವಿಯಲ್ಲಿ ಬಿದ್ದನು. ರಾತ್ರಿಯಾಯಿತು. ದನಗಳೆಲ್ಲ ಆಶ್ರಮಕ್ಕೆ ಬಂದವು. ಆದರೆ ಉಪಮನ್ಯು ಮಾತ್ರ ಬರಲಿಲ್ಲ. ಗುರುಗಳು ದೀವಟಿಗೆ ಹಿಡಿದುಕೊಂಡು ಆತನನ್ನು ಹುಡುಕುತ್ತ ಹೊರಟರು. ಅರಣ್ಯದಲ್ಲಿ ಆತನ ಹೆಸರು ಹಿಡಿದು ಗಟ್ಟಿಯಾಗಿ ಕೂಗತೊಡಗಿದರು. ಗುರುಗಳ ಧ್ವನಿಯನ್ನಾಲಿಸಿದ ಉಪಮನ್ಯುವು ಬಾವಿಯೊಳಗಿಂದಲೇ 'ಗುರುಗಳೇ ನಾನು ಇಲ್ಲಿ ಬಿದ್ದಿದ್ದೇನೆ. ನನ್ನ ಕಣ್ಣು ಕಾಣಿಸುತ್ತಿಲ್ಲ'' ಎಂದು ಕೂಗಿ ಹೇಳಿದನು. ಗುರುಗಳು ಹಾಳು ಬಾವಿಯ ದಂಡೆಗೆ ಬಂದು ನೋಡಿದರು. ಪರಿಸ್ಥಿತಿಯನ್ನು ತಿಳಿದು, ಉಪಮನ್ಯುವಿನ ಮೇಲೆ ಅವರಿಗೆ ಕರುಣೆಯುಂಟಾಯಿತು ! ಆತನಿಗೆ 'ಅಶ್ವಿನೀ ಕುಮಾರರ ಸ್ಮರಣೆ ಮಾಡೆಂದು' ಹೇಳಿದರು, ಅದರ ಪರಿಣಾಮವಾಗಿ ಆತನಿಗೆ ದೃಷ್ಟಿ ಬಂದಿತು. ಮೇಲೆ ಹತ್ರಿ ಎಂದು ಗುರುಗಳಿಗೆ ನಮಸ್ಕರಿಸಿದನು. ಗುರುಗಳು ಆತನ ನಿಷ್ಠೆಗೊಲಿದು, ವರದ ಹಸ್ತವನ್ನು ತಲೆಯ ಮೇಲಿಡಲು ಅವನಿಗೆ ಸಕಲ ವಿದ್ಯೆಗಳ ಜ್ಞಾನವುಂಟಾಯಿತು, ಮುಂದೆ ಆತನು ಪ್ರಸಿದ್ಧ ಗುರುವೂ ಆದನು. ಅಂದಮೇಲೆ ಬ್ರಾಹ್ಮಣನೇ ಗುರು ಸೇವೆಯಲ್ಲಿಯೇ ಸಕಲ ಸಿದ್ಧಿಗಳಿರುವಾಗ, ಗುರುದ್ರೋಹ ಮಾಡಿದರೆ ಗತಿ ಎಲ್ಲಿ ? ಜ್ಞಾನ ಪ್ರಾಪ್ತಿ ಎಲ್ಲಿ? ಹೊರಟುಹೋಗು !” ಎಂದು ಕಠೋರವಾಗಿ ನುಡಿದನು. ಬ್ರಾಹ್ಮಣನಿಗೆ ತಾನು ಗುರುದ್ರೋಹ ಮಾಡಿಬಂದದ್ದರ ಬಗ್ಗೆ ಪಶ್ಚಾತ್ತಾಪವಾಯಿತು. ಆತನು ತನಗಿನ್ನು ಗತಿ ಸಿಗಲಾರದೆಂದು ನಿಶ್ಚಯಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಸಿದ್ಧನಾದನು. ಆಗ ನರಸಿಂಹ ಸರಸ್ವತಿ ಯತಿಗಳಿಗೆ ಆತನ ಮೇಲೆ ಕರುಣೆಯುಂಟಾಯಿತು; ಎಲೋ ನೀನು ಪಶ್ಚಾತ್ತಾಪ ಪಟ್ಟಿದ್ದರಿಂದ ನಿನ್ನ ಪಾಪ ನಷ್ಟವಾಯಿತು. ಈಗ ನಿನ್ನ ಗುರುಸ್ಮರಣೆ ಮಾಡು!'' ಎನ್ನುತ್ತ ತಮ್ಮ ವರದ ಹಸ್ತವನ್ನು ಆತನ ತಲೆಯ ಮೇಲಿಡಲು, ಆ ಬ್ರಾಹ್ಮಣನಿಗೆ ದಿವ್ಯಜ್ಞಾನ ಉಂಟಾಯಿತೆಂಬಲ್ಲಿಗೆ ಸಾರರೂಪ ಶ್ರೀಗುರು ಚರಿತ್ರೆಯ 16ನೇ ಅಧ್ಯಾಯ ಮುಗಿಯಿತು.
Comments
Post a Comment