Shri Guru Charitre - Chapter 13
ಅಧ್ಯಾಯ ೧೩
||ಹರಿಃ ಓಂ ಶ್ರೀ ಗುರುಭ್ಯೋ ನಮಃ ||
ನಾಮಧಾರಕನೇ ಕೇಳು ! ಶ್ರೀ ನರಸಿಂಹ ಸರಸ್ವತಿ ಗುರುಗಳು ಪ್ರಯಾಗದಲ್ಲಿ ಕೆಲವು ದಿನ ಉಳಿದರು, ಅಲ್ಲಿ ಅವರಿಗೆ ಬಹಳಷ್ಟು ಜನ ಶಿಷ್ಯರಾದರು. ಅವರಲ್ಲಿ (1) ಮಾಧವ ಸರಸ್ವತಿ (2) ಕೃಷ್ಣ ಸರಸ್ವತಿ (3) ಬಾಲ ಸರಸ್ವತಿ (4) ಉಪೇಂದ್ರ ಸರಸ್ವತಿ (5) ಸದಾನಂದ ಸರಸ್ವತಿ (6) ಜ್ಞಾನಜ್ಯೋತಿ ಸರಸ್ವತಿ ಹಾಗೂ ಏಳನೆಯವನಾಗಿ ಸಿದ್ಧಯೋಗಿ ನಾಮದವನಾದ ನಾನು ಹೀಗೆ ಏಳು ಜನರು ಗುರುಗಳಿಗೆ ಅತ್ಯಂತ ಪ್ರೀತಿ ಪಾತ್ರರಾದ ಶಿಷ್ಯರಾಗಿದ್ದವು, ಪ್ರಯಾಗ ಕ್ಷೇತ್ರ ದಿಂದ ಹೊರಟ ಗುರುಗಳು ನಮ್ಮನ್ನೆಲ್ಲ ಸಂಗಡ ಕರೆದುಕೊಂಡು ದಕ್ಷಿಣ ದೇಶದ ತೀರ್ಥಗಳನ್ನೆಲ್ಲ ಸಂಚರಿಸುತ್ತ ತಮ್ಮ ಪೂರ್ವಾಶ್ರಮದ ಜನ್ಮ ಸ್ಥಳವಾದ ಕರಂಜ ನಗರಕ್ಕೆ ಆಗಮಿಸಿದರು, ಪೂರ್ವಾಶ್ರಮದ ತಂದೆ-ತಾಯಿ ಬಂಧು-ಬಳಗದವರಿಗೆಲ್ಲ ದರ್ಶನಕೊಟ್ಟರು. ಅನೇಕ ರೂಪಗಳನ್ನು ಏಕ ಕಾಲದಲ್ಲಿಯೇ ಧರಿಸಿ, ಎಲ್ಲರ ಮನೆಯಲ್ಲಿಯೂ ಭಿಕ್ಷೆ ಸ್ವೀಕರಿಸಿದರು. ಅವರ ಅಗಾಧ ಮಹಿಮೆಯನ್ನು ಕಂಡ ಭಕ್ತರು ಗುರುಗಳನ್ನು ಸಾಕ್ಷಾತ್ ವಿಷ್ಣು ಸ್ವರೂಪರೆಂದು ಹಾಡಿ ಹೊಗಳಿದರು. ತಾಯಿ-ತಂದೆಗಳು ಶ್ರೀ ಗುರುಗಳನ್ನು ಪೂಜಿಸುವಾಗ, ಗುರುಗಳು ತಾಯಿಗೆ ಶ್ರೀಪಾದ ಶ್ರೀವಲ್ಲಭ ಯತಿಗಳ ರೂಪದಲ್ಲಿ ಕಾಣಿಸಿಕೊಂಡು, ವಿಸ್ಮಯವನ್ನುಂಟು ಮಾಡಿದರು. ಅಂಬಿಕೆ ತನ್ನ ಪೂರ್ವಜನ್ಮದ ಘಟನೆಗಳನ್ನು ಸ್ಮರಣೆ ಬಂದು ಪತಿಯೆದುರು ಅವನ್ನೆಲ್ಲ ವಿವರವಾಗಿ ವರ್ಣಿಸಿ ಹೇಳಿದಳು, ತಂದೆ ತಾಯಿಗಳು ತಮಗೆ ಜೀವನ್ಮುಕ್ತಿ ನೀಡಬೇಕೆಂದು ಗುರುಗಳಲ್ಲಿ ಕೇಳಿಕೊಂಡರು. ಅದಕ್ಕೆ ಗುರುಗಳು ಸನ್ಯಾಸ ಸ್ವೀಕರಿಸಿದವನ 42 ಜನ್ಮದ ಮಾತಾ ಪಿತೃಗಳೂ ಸದ್ಗತಿ ಹೊಂದುವರು. ಆ ಬಗ್ಗೆ ನೀವೇನೂ ಚಿಂತಿಸಬೇಡಿ ! ನೀವು ವೃದ್ಧಾಪ್ಯದಲ್ಲಿ ಕಾಶೀಕ್ಷೇತ್ರದಲ್ಲಿ ವಾಸಿಸಿ, ಜೀವನ್ಮುಕ್ತಿ ಪಡೆಯುವಿರಿ !'' ಎಂದು ಅಭಯವನ್ನಿತ್ತರು.
ಶ್ರೀ ಗುರುಗಳ ತಂಗಿಯಾದ ರತ್ನಾಯಿಯು ಅವರಿಗೆ ನಮಸ್ಕರಿಸಿ, ತಾನೂ ತಪಸ್ಸಿಗೆ ಹೊರಡುವದಾಗಿ ಹಟಮಾಡತೊಗಿದಳು. ಗುರುಗಳು ಅವಳಿಗೆ ಸತಿಯೇ ದೇವರು. ಪತಿಯೇ ಶಿವನೆಂದು ಭಾವಿಸಿ ಬಾಳುವ ನಾರಿಗೆ ಬೇರೇ ತಪಸ್ಸಿನ ಅಗತ್ಯವಿಲ್ಲ ಎಂದು ಸಮಾಧಾನ ಹೇಳಿದರು. ರತ್ನಾಯಿಯು ತನ್ನ ಭವಿಷ್ಯವೇನೆಂದು ಕೇಳಿದಳು. ಅದಕ್ಕೆ ಗುರುಗಳು, ರತ್ನಾಯೀ! ನಿನ್ನ ಜೀವನದ ಪೂರ್ವಾರ್ಧವೇನೋ ಸಂತೋಷದಿಂದ ಕಳೆಯುವದು, ಆದರೆ ಉತ್ತರಾರ್ಧದಲ್ಲಿ ನೀನು ಬಹು ಕಷ್ಟ-ನಷ್ಟಗಳನ್ನು ಅನುಭವಿಸಬೇಕಾಗುವದು. ಯಾಕೆಂದರೆ ನೀನು ನಿನ್ನ ಹಿಂದಿನ ಜನ್ಮದಲ್ಲಿ ಗೋಮಾತೆಯನ್ನು ಒದ್ದಿರುವಿ; ಆ ಕಾರಣದಿಂದ ನಿನಗೆ ಕುಷ್ಟರೋಗ ತಗಲುವದು. ಪೂರ್ವಜನ್ಮದಲ್ಲಿ ನೀನು ಪ್ರೀತಿಯಿಂದಿದ್ದ ದಂಪತಿಗಳಲ್ಲಿ ಕಲಹ ಹುಟ್ಟಿಸಿರುವಿ, ಅದರಿಂದಾಗಿ ಈ ಜನ್ಮದಲ್ಲಿ ನಿನ್ನ ಪತಿಯು ಸನ್ಯಾಸಿಯಾಗಿ ನಿನ್ನನ್ನಗಲಿ ಹೋಗುವನು.'' ಎಂದು ನುಡಿಯಲು, ರತ್ನಾಯಿಯು ಆಳತೊಡಗಿದಳು. ಆಗ ಗುರುಗಳು ತಂಗೀ ದುಃಖಿಸಬೇಡ ! ಪಾಪ ಮಾಡಿದವರು ಅದರ ಫಲವನ್ನು ಅನುಭವಿಸಲೇಬೇಕು ! ನೀನೆಷ್ಟೇ ಕಷ್ಟ ಅನುಭವಿಸಿದರೂ ನಿನ್ನ ಕೊನೆಗಾಲದಲ್ಲಿ ನಾನು ನಿನಗೆ ದರ್ಶನಕೊಟ್ಟು ಸದ್ಗತಿ ನೀಡುತ್ತೇನೆ.” ಎಂಬುದಾಗಿ ಅಭಯ ನೀಡಿದರು. ಆಮೇಲೆ ಗುರುಗಳು ತ್ರಯಂಬಕೇಶ್ವರಕ್ಕೆ ಹೋದರು, ನಂತರ ಮಂಜರಿಕ ಕ್ಷೇತ್ರಕ್ಕೆ ಬಂದರು. ಅಲ್ಲಿ ಮಾಧವಾರಣ್ಯ ಎಂಬ ಹೆಸರಿನ ಯೋಗಿಯಿದ್ದನು. ಆತನು ನರಸಿಂಹ ದೇವರ ಆರಾಧಕನಾದದ್ದರಿಂದ, ಚಿತ್ತದಲ್ಲಿ ನರಸಿಂಹ ದೇವರನ್ನು ನಿಲ್ಲಿಸಿಕೊಂಡು ನಿತ್ಯದಲ್ಲೂ ಮಾನಸಪೂಜೆ ಸಲ್ಲಿಸುತ್ತಿದ್ದನು. ಗುರುಗಳು ಆ ಕ್ಷೇತ್ರಕ್ಕೆ ಕಾಲಿಟ್ಟಾಗ ಆತನ ಮಾನಸ ಪೂಜೆಯಲ್ಲಿ ನರಸಿಂಹ ದೇವರ ಬದಲಾಗಿ, ಗುರುಗಳು ಕಾಣಿಸಿಕೊಳ್ಳತೊಡಗಿದರು. ಅದರಿಂದ ಆಶ್ಚಯ್ಯಪಟ್ಟ ಮಾಧವಾರಣ್ಯನು, “ನೀನು ಪ್ರತ್ಯಕ್ಷ ನರಸಿಂಹ ದೇವರಿರುವಿ'' ಎನ್ನುತ್ತ ಗುರುಗಳಿಗೆ ನಮಸ್ಕಾರ ಮಾಡಿದನು. ಗುರುಗಳು ಆತನಿಗೆ ನರಸಿಂಹ ರೂಪದಲ್ಲಿಯೇ ದರ್ಶನ ನೀಡಿ ಆಶೀರ್ವದಿಸಿದರು.
ಆಮೇಲೆ ನರಸಿಂಹ ಸರಸ್ವತಿ ಯತಿಗಳು ವ್ಯಾಸರ ಬ್ರಹ್ಮೇಶ್ವರಕ್ಕೆ ಹೊರಟರು. ಒಂದು ದಿವಸ ಗುರುಗಳ ಸಮೇತ ಗೋದಾವರೀ ನದಿಗೆ ಸ್ನಾನಾರ್ಥವಾಗಿ ಬಂದಾಗ, ಒಬ್ಬ ಬ್ರಾಹ್ಮಣನು ಹೊಟ್ಟೆ ನೋವಿನ ತಾಪವನ್ನು ತಾಳಲಾರದೇ ನದಿಯಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದದ್ದನ್ನು ಕಂಡರು. ಆತನು ಅನ್ನ ಉಂಡ ಕೂಡಲೇ ಅವನಿಗೆ ಉದರವ್ಯಾಧಿ ಪ್ರಾರಂಭವಾಗುತ್ತಿತ್ತು. ಅಂದು ಮಹಾನವಮಿ ಇದ್ದದ್ದರಿಂದ ಅವನು ಯಥೇಷ್ಟವಾಗಿ ಊಟ ಮಾಡಿದ್ದರಿಂದಲೇ ಇಂಥಾ ವಿಪತ್ತಿಗೆ ಒಳಗಾಗಿದ್ದನು. ವ್ಯಾಧಿಯ ಪ್ರಮಾಣ ಹೆಚ್ಚಾದಾಗ ಆತನು ವೇದನೆಯಿ೦ದ “ಅಯ್ಯೋ ಗುರುನಾಥಾ! ಈ ವ್ಯಾಧಿ ತಾಳಲಾರೆ ! ನನಗೆ ಮರಣ ನೀಡು ಶಿವನೇ!'' ಎಂದು ಒಂದೇ ಸವನೇ ಚೀರಿಕೊಳ್ಳುತ್ತಿದನು. ಗುರುಗಳು ಆತ ಸ೦ಕಟಪಟ್ಟು ಆತ್ಮಹತ್ಯಕ್ಕೆ ಹೊರಟಿರುವದನ್ನು ತಡೆದರು ಮತ್ತು ಅವನಿಗೆ, “ಅಯ್ಯಾ ! ಆತ್ಮಹತ್ಯೆವು ಮಹಾಪಾಪ ! ನಿನ್ನ ಹೊಟ್ಟೆಶೂಲಿಗೆ ನಾವು ಮಂತ್ರೋಷದಿ ಕೊಡುತ್ತೇವೆ. ಇನ್ನು ಮೇಲೆ ನೀನು ಬೇಕಾದ್ದನ್ನು ಬೇಕಾದಷ್ಟು ಊಟ ಮಾಡಬಹುದು !' ಆಶ್ವಾಸನವನ್ನಿತ್ತರು. ಆತನು ಬಹು ಭಕ್ತಿ ಹಾಗೂ ಸ್ಥಿರಮನಸ್ಸುಗಳಿಂದ ಗುರುಚರಣಗಳಿಗೆ ನಮಸ್ಕರಿಸಿದನು. ಅಷ್ಟರಲ್ಲಿ ನದೀ ತೀರದ ಕಡೆಗೆ ಬಂದಿದ್ದ ಆ ಗ್ರಾಮದ ಅಧಿಕಾರಿಯು, ಗುರುಗಳನ್ನು ಕ೦ಡು ಭಕ್ತಿಯಿಂದ ನಮಸ್ಕರಿಸಿದನು. ಗುರುಗಳು ಆತನಿಗೆ “ನೀನು ಯಾರು ? ಹೆಸರೇನು ? ಎಲ್ಲಿ ವಾಸವಾಗಿರುವಿ? ಎಂದು ಪ್ರಶ್ನೆ ಮಾಡಿದರು.
ಅದಕ್ಕೆ ಆ ವ್ಯಕ್ತಿಯು ವಿನಯದಿಂದ, ಗುರುದೇವಾ ! ನಾನು ಕಡಗಂಚಿ ಗ್ರಾಮದವನು, ಕೌಂಡಿಣ್ಯಗೋತ್ರದ ಆಪಸ್ತಂಭ ಶಾಖೆಯ ಬ್ರಾಹ್ಮಣನು. ನನ್ನ ಹೆಸರು ಸಾಯಂದೇವ, ಉದರ ನಿರ್ವಹಣೆಗಾಗಿ ಯವನ ಸೇವೆ ಕೈಕೊಂಡಿರುವೆನು. ಕಳೆದ ವರ್ಷದಿಂದ ಈ ಗ್ರಾಮದ ಅಧಿಕಾರಿಯಾಗಿ ಸೇವೆ ಮಾಡುತಿರುವೆನು ತಮ್ಮ ದರ್ಶನದಿಂದ ನನ್ನ ಜನ್ಮ ಪಾವನವಾಯಿತು!”
ಆಗ ಗುರುಗಳು ಸಾಯ೦ದೇವಾ ! ನೀನೀಗ ಒಂದು ಕೆಲಸ ಮಾಡು ! ಆ ಬ್ರಾಹ್ಮಣನಿಗೆ ನಾವು ಹೊಟ್ಟೆಶೂಲಿ ಕಳೆಯುವದಕ್ಕಾಗಿ ಔಷಧಿ ಕೊಟ್ಟಿದ್ದೇವೆ, ಇಂದು ನೀನು ಇವನಿಗೆ ನಿನ್ನ ಮನೆಯಲ್ಲಿ ಮೃಷ್ಟಾನ್ನ ಭೋಜನವನ್ನು ಯಥೇಚ್ಚವಾಗಿ ಉಣಬಡಿಸು ! ಅಂದರೆ ಇವನ ರೋಗನಿವಾರಣೆ ಮಾಡಿದ ಪುಣ್ಯ ನಿನಗೇ ಬರುವದು!” ಎಂದು ಆಜ್ಞೆ ಮಾಡಿದರು. ಗುರುಗಳ ಮಾತಿನಲ್ಲಿ ವಿಶ್ವಾಸ ಹೊಂದಿದ್ದ ಸಾಯಂದೇವನು, ಗುರುಗಳನ್ನುದ್ದೇಶಿಸಿ, ಗುರುಗಳೇ ! ಈ ಬ್ರಾಹ್ಮಣನಷ್ಟೇ ಏಕೆ? ನೀವೂ ಸಹಿತ ನಿಮ್ಮ ಶಿಷ್ಯಪರಿವಾರದೊಂದಿಗೆ ಈ ಬಡವನ ಮನೆಗೆ ಭಿಕ್ಷೆಗೆ ಬರುವ ಕೃಪೆ ಮಾಡಬೇಕು !” ಎಂದು ಕೈಜೋಡಿಸಿ ಪ್ರಾರ್ಥಿಸಿಕೊಂಡ ಗುರುಗಳು ಅದಕ್ಕೆ ಸಮ್ಮತಿಯನ್ನಿತ್ತರು.
ಸಾಯಂದೇವನು ಗುರುಗಳನ್ನು ಪರಿವಾರ ಸಮೇತ ತನ್ನ ಮನೆಗೆ ಕರೆದೊಯ್ದನು, ಮನೆಯಲ್ಲಿ ದಂಪತಿಗಳಿಬ್ಬರೂ ಗುರುಗಳ ಪಾದಪೂಜೆಯನ್ನು ಬಹು ವೈಭವದಿಂದ ನೆರವೇರಿಸಿದರು. ವಾದ್ಯ ಮೇಳದೊಂದಿಗೆ ಆರತಿ ಬೆಳಗಿದರು. ನಂತರ ತರತರದ ಪಕ್ವಾನ್ನಗಳೊಂದಿಗೆ ಊಟಕ್ಕೆ ಬಡಿಸಿದರು, ಗುರುಗಳು ಶಿಷ್ಯ ಪರಿವಾರದೊಂದಿಗೆ ಊಟಕ್ಕೆ ಕುಳಿತರು, ತಮ್ಮ ಸಮೀಪದಲ್ಲಿಯೇ ಆ ಉದರಶೂಲಿಯ ಬ್ರಾಹ್ಮಣನಿಗೆ ಎಲೆ ಹಾಕಿಸಿ ಊಟಕ್ಕೆ ಕುಳ್ಳಿರಿಸಿಕೊಂಡಿದ್ದರು. ಆತನಿಗೆ ಹೋಳಿಗೆ ತುಪ್ಪ ಮುಂತಾದವುಗಳನ್ನು ಜುಲುಮೆ ಮಾಡಿಸಿ ಹೆಚ್ಚು ಹೆಚ್ಚಾಗಿ ಹಾಕಿಸಿದರು. ಬ್ರಾಹ್ಮಣನು ಹೊಟ್ಟೆ ತುಂಬ ಊಟ ಮಾಡಿದನು. ಗುರು ಕೃಪೆಯಿಂದ ಆತನ ಹೊಟ್ಟೆನೋವು, ಹೇಳ ಹೆಸರಿಲ್ಲದಂತೆ ಹೊರಟು ಹೋಯಿತು, ಇಂಥ ಸದ್ಗುರುವಿನ ಚರಿತ್ರೆಯನ್ನೋದುವ ಹಾಗೂ ಕೇಳುವ ಭಕ್ತರಿಗೆ ರೋಗಭಯವು ಬರಲಾರದೆಂದು ನಾಮಧಾರಕನಿಗೆ ಸಿದ್ಧಮುನಿಯು ಹೇಳಿದನೆಂಬಲ್ಲಿಗೆ ಸಾರರೂಪ ಶ್ರೀಗುರು ಚರಿತ್ರೆಯ ಹದಿಮೂರನೆಯ ಅಧ್ಯಾಯ ಮುಕ್ತಾಯವಾಯಿತು.
Comments
Post a Comment