Mahashivaratri (Part 1)
ನಾಡಿದ್ದು ಅಂದರೆ ೦೧.೦೩.೨೦೨೨, ಮಹಾಶಿವರಾತ್ರಿ ಹಬ್ಬ.
ನನಗೆ ಗುರು ಚರಿತ್ರೆಯ ಒಂದು ಪ್ರಸಂಗ ನೆನಪು ಆಯಿತು.
ಅದನೂ ನಾನೂ ನಿಮ್ಮ ಜೊತೆ ಹಂಚಿಕೊಳ್ಳುತಿದೀನಿ .
ಇದು ಗುರು ಚರಿತ್ರೆಯ ಅಧ್ಯಾಯ ೭ - ಆಯಿದ ಒಂದು ಭಾಗ. ಇದು ಗೋಕರ್ಣದಲ್ಲಿ ನೆಡೆಯುವ ಪ್ರಸಂಗ.
ಗೌತಮಮುನಿಯು, "ಮಹೀಪತಿ, ಸಾವಿರಾರು ಜನ ಮಹಾಪಾಪಿಗಳು ಆ ಕ್ಷೇತ್ರದಲ್ಲಿ ಮುಕ್ತರಾದದ್ದನ್ನು ನಾನು ಬಲ್ಲೆ. ಅದರಲ್ಲೊಂದನ್ನು ಹೇಳುತ್ತೇನೆ ಕೇಳು. ಒಂದುಸಲ ಮಾಘ ಕೃಷ್ಣ ಪಕ್ಷ ಶಿವರಾತ್ರಿಯ ದಿನ ನಾನು ಗೋಕರ್ಣ ಕ್ಷೇತ್ರದಲ್ಲಿದ್ದೆ. ಆಗ ಅಲ್ಲಿ ಅನೇಕ ಯಾತ್ರಿಕರು ಸೇರಿದ್ದರು. ಮಧ್ಯಾಹ್ನ ಸಮಯದಲ್ಲಿ ಒಂದು ಗಿಡದ ನೆರಳಿನಲ್ಲಿ ಕುಳಿತಿದ್ದೆ. ಅಲ್ಲಿಗೆ ರೋಗಪೀಡಿತಳಾದ ಚಂಡಾಲಿಯೊಬ್ಬಳು ಬರುತ್ತಿರುವ ಹಾಗೆ ಕಾಣಿಸಿತು. ಅವಳು ವೃದ್ಧೆ, ಬಾಡಿದ ಮುಖ, ಹಸಿದಿದ್ದಳು. ಮೈಯೆಲ್ಲಾ ವ್ರಣಗಳಾಗಿ, ಅದರಿಂದ ಕೀವು ರಕ್ತ ಸೋರುತ್ತಿತ್ತು. ದುರ್ವಾಸನೆ ಬರುತ್ತಿದ್ದ ಅವುಗಳ ಮೇಲೆ ನೊಣಗಳು ತುಂಬಿ ಕೂತಿದ್ದವು. ಗಂಡಮಾಲೆ ರೋಗವೂ ಆಕೆಯ ದೇಹದಲ್ಲಿ ವ್ಯಾಪಿಸಿತ್ತು. ಹಲ್ಲುಗಳು ಬಿದ್ದು ಹೋಗಿದ್ದವು. ಕಫ ಪೀಡಿತಳಾದ ಅವಳು ದಿಗಂಬರೆಯಾಗಿ ಮರಣದೆಶೆಯಲ್ಲಿದ್ದಳು. ಸೂರ್ಯಕಿರಣಗಳು ತಾಕಿದರೂ ಸಾಯುವವಳೇನೋ ಎಂಬಂತಹ ಸ್ಥಿತಿಯಲ್ಲಿದ್ದಳು. ಸರ್ವಾಯವಗಳೂ ಬಾಧಾಪೀಡಿತವಾಗಿರುವಂತೆ ಕಾಣುತ್ತಿದ್ದ ಆ ವಿಧವೆಗೆ ತಲೆಯಲ್ಲಿ ಕೂದಲೂ ಉದುರಿಹೋಗಿತ್ತು. ಹೆಜ್ಜೆಹೆಜ್ಜೆಗೂ ಒದ್ದಾಡುತ್ತಾ ಮರದ ನೆರಳಿಗೆ ಬಂದಳು. ನೋಡಲು ಅವಳು ಇನ್ನೇನು ಸಾಯುತ್ತಾಳೆ ಎಂಬ ಸ್ಥಿತಿಯಲ್ಲಿದ್ದಳು. ಮೆಲ್ಲಮೆಲ್ಲಗೆ ನಡೆಯುತ್ತಾಅ ಮರದ ನೆರಳಿಗೆ ಬಂದು ಅಲ್ಲಿ ಕುಸಿದು ಬಿದ್ದಳು. ಹಾಗೆ ಬಿದ್ದ ಅವಳು ನಾನು ನೋಡುತ್ತಿರುವಂತೆಯೇ ಪ್ರಾಣ ಬಿಟ್ಟಳು. ಅಷ್ಟರಲ್ಲಿಯೇ ಆಕಸ್ಮಿಕವೋ ಎಂಬಂತೆ ವಿಮಾನವೊಂದು ಸೂರ್ಯನಂತೆ ಬೆಳಗುತ್ತಾ ಬಂದು ನನ್ನ ಸಮೀಪದಲ್ಲೇ ಇಳಿಯಿತು. ಕೈಲಾಸದಿಂದ ಬಂದ ಆ ವಿಮಾನದಿಂದ ಶೂಲಖಟ್ವಾಂಗ ಧಾರಿಗಳಾದ ನಾಲ್ವರು ದೂತರು ಇಳಿದರು. ಅವರೆಲ್ಲರೂ ಶೈವರು. ಕಿರೀಟಧಾರಿಗಳು. ದಿವ್ಯರೂಪರು. ಆ ದೂತರನ್ನು ನೀವು ಏತಕ್ಕೆ ಬಂದಿದ್ದೀರಿ ಎಂದು ಕೇಳಿದೆ.
ಅದಕ್ಕೆ ಅವರು ಈ ಚಂಡಾಲಿಯನ್ನು ಕೈಲಾಸಕ್ಕೆ ಕರೆದುಕೊಂಡು ಹೋಗಲು ಬಂದಿದ್ದೇವೆ ಎಂದು ಹೇಳಿದರು. ಸೂರ್ಯಪ್ರಕಾಶದಂತೆ ಬೆಳಗುತ್ತಿದ್ದ ಆ ದಿವ್ಯ ವಿಮಾನ ಆ ಸತ್ತುಬಿದ್ದಿದ್ದ ಚಂಡಾಲಿಯನ್ನು ಕೈಲಾಸಕ್ಕೆ ಕರೆದುಕೊಂಡುಹೋಗಲು ಬಂದಿರುವುದನ್ನು ಕಂಡು ನಾನು ಆಶ್ಚರ್ಯಚಕಿತನಾಗಿಹೋದೆ. ಮಹದಾಶ್ಚರ್ಯಗೊಂಡ ನಾನು, 'ಇಂತಹ ಚಂಡಾಲಿ ದಿವ್ಯವಿಮಾನಕ್ಕೆ ಅರ್ಹಳೇ? ನಾಯಿಯನ್ನು ದಿವ್ಯಸಿಂಹಾಸನದಮೇಲೆ ಕೂಡಿಸಬಹುದೇ? ಇವಳು ಹುಟ್ಟಿದಾಗಿನಿಂದಲೇ ಮಹಾಪಾಪಗಳನ್ನು ಸೇರಿಸಿಕೊಂಡು ಬಂದಿದ್ದಾಳೆ. ಅಂತಹ ಈ ಪಾಪರೂಪಿಣಿ ಕೈಲಾಸಕ್ಕೆ ಹೇಗೆ ಸೇರಬಲ್ಲಳು? ಪಶುಮಾಂಸವನ್ನು ಆಹಾರವಾಗಿ ತಿಂದು ಇವಳು ವೃದ್ಧೆಯಾದಳು. ಜೀವಹಿಂಸಾ ಪರಾಯಣೆಯಾಗಿ, ಕುಷ್ಠುರೋಗ ಪೀಡಿತಳಾಗಿ, ಪಾಪಿನಿಯಾದ ಈ ಚಂಡಾಲಿ ಕೈಲಾಸಕ್ಕೆ ಹೇಗೆ ಅರ್ಹಳಾದಳು? ಇವಳಿಗೆ ಶಿವಜ್ಞಾನವಿಲ್ಲ. ತಪಸ್ಸು ಎಂದರೇನು ಎಂದು ತಿಳಿಯದು. ದಯೆ ಸತ್ಯಗಳು ಎನ್ನುವುವು ಇವಳಲ್ಲಿ ಇಲ್ಲವೇ ಇಲ್ಲ. ಶಿವಪೂಜೆಯನ್ನು ಎಂದೂ ಮಾಡಲಿಲ್ಲ. ಪಂಚಾಕ್ಷರಿ ಜಪ ಮಾಡಿಲ್ಲ. ದಾನ ಮಾಡಲಿಲ್ಲ. ತೀರ್ಥಗಳ ವಿಷಯ ಏನೂ ತಿಳಿಯದು. ಪರ್ವದಿನಗಳಲ್ಲಿ ಸ್ನಾನಮಾಡಲಿಲ್ಲ. ಯಾವ ವ್ರತವನ್ನೂ ಮಾಡಲಿಲ್ಲ. ಇವಳ ಪಾಪಗಳಿಂದಾಗಿ ಇವಳ ಶರೀರವೆಲ್ಲ ವ್ರಣಗಳಾಗಿ ದುರ್ಗಂಧದಿಂದ ಕೂಡಿದೆ. ವಣಗಳು ಸೋರುತ್ತಿವೆ. ದುಶ್ಚರಿತೆಯಾದ ಈ ಚಂಡಾಲಿಯ ಮುಖದಲ್ಲಾಗಿರುವ ವ್ರಣಗಳಿಂದ ಇವಳ ಪಾಪಫಲವಾಗಿ ಹುಳುಗಳು ಬೀಳುತ್ತಿವೆ. ಇವಳಿಗೆ ಗಳತ್ಕುಷ್ಠ ಎನ್ನುವ ಮಹಾ ರೋಗ ಪ್ರಾಪ್ತಿಯಾಗಿದೆ. ಚರಾಚರಗಳಲ್ಲೇ ನಿಂದ್ಯವಾದ ಇಂತಹ ಪಾಪಿಯನ್ನು ಶಿವಾಲಯಕ್ಕೆ ಸೇರಿಸಲು ಬಂದಿದ್ದೀರೇಕೆ? ಅದಕ್ಕೆ ಕಾರಣವನ್ನು ತಿಳಿಸಿ.” ಎಂದು ಆ ಶಿವದೂತರನ್ನು ಪ್ರಶ್ನಿಸಿದೆ.
ಒಂದುಸಲ ಮಾಘಮಾಸ ಬಂತು. ಅವಳಿದ್ದ ಊರಿನ ಜನರೆಲ್ಲರು, ಆಬಾಲವೃದ್ಧರಾದಿಯಾಗಿ ಗೋಕರ್ಣಕ್ಕೆ ಹೊರಟಿದ್ದರು. ಶಿವರಾತ್ರಿಗೆ, ಶಿವದರ್ಶನಕ್ಕೆಂದು ನಾನಾ ಕಡೆಗಳಿಂದ ಅನೇಕ ಜನ ಸಮೂಹಗಳು ಸೇರಿ ಹೊರಟಿದ್ದರು. ಇವಳೂ ಅವರ ಜೊತೆಯಲ್ಲಿ ಹೊರಟಳು. ಆ ಜನರಲ್ಲಿ, ಕೆಲವರು ಆನೆಗಳ ಮೇಲೆ ಕುಳಿತು, ಕೆಲವರು ಕುದುರೆಗಳ ಮೇಲೆ, ಕೆಲವರು ರಥಗಳಲ್ಲಿ, ಕೆಲವರು ಪಾದಚಾರಿಗಳಾಗಿ, ಅಲಂಕಾರ ಭೂಷಿತರಾಗಿ, ಹೀಗೆ ಅನೇಕ ರೀತಿಗಳಲ್ಲಿ, ಸಂತೋಷ ಸಂಭ್ರಮಗಳಿಂದ ಎಲ್ಲರೂ ಮಹಾಬಲೇಶ್ವರನ ದರ್ಶನಕ್ಕಾಗಿ ಹೊರಟಿದ್ದರು. ಎಲ್ಲ ವರ್ಗದ ಜನರೂ, ತಮತಮಗೆ ತೋಚಿದಂತೆ ಶಿವಸ್ಮರಣೆ ಮಾಡುತ್ತಾ ಹೊರಟಿದ್ದರು. ಅವರೊಡನೆ ಹೊರಟ ಚಂಡಾಲಿಯೂ, ಶಿವನಾಮೋಚ್ಚರಣೆಯೆಂಬ ಪುಣ್ಯದಿಂದ ಗೋಕರ್ಣ ಕ್ಷೇತ್ರವನ್ನು ಸೇರುವಂತಾಯಿತು. ಗೋಕರ್ಣವನ್ನು ಸೇರಿ ಅಲ್ಲಿ ಭಿಕ್ಷೆ ಮಾಡುತ್ತಿದ್ದಳು. "ಪೂರ್ವಜನ್ಮದಲ್ಲಿ ಮಾಡಿದ ಪಾಪಗಳಿಂದ ಪೀಡಿಸಲ್ಪಡುತ್ತಿರುವ ಈ ಪಾಪಿಗೆ ಸ್ವಲ್ಪ ಅನ್ನವನ್ನು ನೀಡಿ. ರೋಗಪೀಡಿತಳಾಗಿ, ತಿಂಡಿ ಊಟಗಳಿಲ್ಲದೆ, ಬಟ್ಟೆಯೂ ಇಲ್ಲದೆ ಇರುವ ನನ್ನನ್ನು ಛಳಿ ಬಾಧಿಸುತ್ತಿದೆ. ಈ ಕುರುಡಿಯ ಹಸಿವನ್ನು ಹೋಗಲಾಡಿಸಿ, ಸಜ್ಜನರು ಧರ್ಮ ಮಾಡಿ. ಬಹಳ ದಿನಗಳಿಂದ ಸಹಿಸುತ್ತಿರುವ ಕ್ಷುದ್ಘಾಧೆಯಿಂದ ನನ್ನನ್ನು ಮುಕ್ತಗೊಳಿಸಿ. ನಾನು ನನ್ನ ಹಿಂದಿನ ಜನ್ಮಗಳಲ್ಲಿ ಪುಣ್ಯ ಮಾಡಿಲ್ಲದಿರುವುದರಿಂದಲೇ ಇಷ್ಟು ಕಷ್ಟಪಡುತ್ತಿದ್ದೇನೆ. ಅಯ್ಯಾ ಸಜ್ಜನರೇ ದಯವಿಟ್ಟು ಧರ್ಮ ಮಾಡಿ.” ಎಂದು ಅನೇಕ ರೀತಿಗಳಲ್ಲಿ, ದೀನಳಾಗಿ, ಬೇಡಿಕೊಳ್ಳುತ್ತಾ ಆ ಜನರ ಹಿಂದೆ ಓಡಾಡುತ್ತಿದ್ದಳು.
ಅಂದು ಶಿವರಾತ್ರಿಯಾದದ್ದರಿಂದ ಯಾರೂ ಅವಳಿಗೆ ಅನ್ನ ನೀಡಲಿಲ್ಲ. ಕೆಲವರು ನಗುತ್ತಾ, "ಇಂದು ಶಿವರಾತ್ರಿ. ಉಪವಾಸವಾದದ್ದರಿಂದ ಅನ್ನವಿಲ್ಲ.” ಎಂದು ತಮ್ಮ ಕೈಯಲ್ಲಿದ್ದ ಬಿಲ್ವದಳಗಳನ್ನು ಅವಳ ಕೈಯಲ್ಲಿ ಹಾಕಿದರು. ಅವಳು ಅದನ್ನು ಮೂಸಿನೋಡಿ ಅದು ತಿನ್ನುವುದಲ್ಲ ಎಂಬುದನ್ನು ತಿಳಿದು ಕೋಪದಿಂದ ಬಿಸುಟಳು. ಹಾಗೆ ಅವಳು ಬಿಸಾಡಿದ ಬಿಲ್ವದಳ ಶಿವಲಿಂಗದ ತಲೆಯಮೇಲೆ ಬಿತ್ತು. ದೈವಯೋಗದಿಂದ ಅದು ಅವಳಿಗೆ ಶಿವಪೂಜೆಯ ಪುಣ್ಯವನ್ನು ತಂದಿತು. ಯಾರೂ ಅನ್ನ ಕೊಡಲಿಲ್ಲವಾಗಿ ಅವಳಿಗೆ ಉಪವಾಸವಾಯಿತು. ಅದರಿಂದ ಅವಳಿಗೆ ಉಪವಾಸ ಮಾಡಿದ ಪುಣ್ಯ ಲಭಿಸಿತು. ಹಸಿವಿನಿಂದಾಗಿ ಅವಳಿಗೆ ರಾತ್ರಿಯೆಲ್ಲಾ ನಿದ್ರೆ ಬರಲಿಲ್ಲ. ಅದರಿಂದ ಅವಳು ಜಾಗರಣೆ ಮಾಡಿದಂತಾಗಿ ಅವಳಿಗೆ ಜಾಗರಣೆ ಮಾಡಿದ ಪುಣ್ಯ ಲಭಿಸಿತು. ಆ ರೀತಿಯಲ್ಲಿ, ಅವಳಿಗೆ ಅರಿವಿಲ್ಲದೆಯೇ, ಅವಳ ವ್ರತ ಸಾಂಗವಾಗಿ ಮುಗಿದಂತಾಯಿತು. ಅವಳ ಪ್ರಯತ್ನವಿಲ್ಲದೆಯೇ ಅವಳಿಗೆ ವ್ರತ ಪುಣ್ಯವು ಲಭಿಸಿ, ಶಿವನು ಸಂತುಷ್ಟನಾಗಿ, ಅವಳಿಗೆ ಭವಾರ್ಣವ ತಾರಕನಾದನು. ಈ ವಿಧದಲ್ಲಿ, ರೋಗೋಪವಾಸಗಳಿಂದ ಶ್ರಾಂತಳಾಗುವ ಮಾರ್ಗವನ್ನರಿಯದ, ಹೆಜ್ಜೆ ಇಡಲೂ ಶಕ್ತಿಯಿಲ್ಲದ, ಈ ಚಂಡಾಲಿಗೆ ಮಹಾವ್ರತಫಲ ದೊರೆತು, ಪೂರ್ವ ಕರ್ಮಗಳಿಂದ ಮುಕ್ತಿ ದೊರೆತು, ಈ ಗಿಡದ ನೆರಳಿಗೆ ಬಂದು ಪ್ರಾಣ ಬಿಟ್ಟಳು. ಅದರಿಂದ ಶಿವನ ಆದೇಶದಂತೆ ನಾವು ಇಲ್ಲಿಗೆ ಬಂದೆವು. ಶಿವರಾತ್ರಿಯ ಬಿಲ್ವಾರ್ಚನೆ, ಉಪವಾಸ ಜಾಗರಣೆಗಳಿಂದ ದೊರೆತ ಪುಣ್ಯದಿಂದ ಇವಳ ಪಾಪಗಳೆಲ್ಲಾ ನಾಶವಾದವು. ನೂರು ಜನ್ಮಗಳಲ್ಲಿ ಸಂಪಾದಿಸಿದ್ದ ಪಾಪಗಳೆಲ್ಲಾ ಕ್ಷಯವಾಗಲು, ಇವಳು ಶಿವನಿಗೆ ಪ್ರೀತಿಪಾತ್ರಳಾದಳು.” ಎಂದು ಹೇಳಿ ಆ ಶಿವದೂತರು ಸೌದಾಮಿನಿಯ ಮೇಲೆ ಅಮೃತವನ್ನು ಚುಮುಕಿಸಿದರು. ತಕ್ಷಣವೇ ಅವಳು ದಿವ್ಯದೇಹಧಾರಿಯಾಗಿ, ಅವರ ಹಿಂದೆ ವಿಮಾನದಲ್ಲಿ ಹೊರಟಳು. " ಎಂದು ಗೌತಮ ಮುನಿಯು ಕಥೆಯನ್ನು ಹೇಳದರು.
ಎಲ್ಲರಿಗೂ ಶಿವರಾತ್ರಿ ಹಬ್ಬದ ಶುಭಾಶಯಗಳು.
ನೀವು ಶಿವರಾತ್ರಿ ಹಬ್ಬ ಹೇಗೆ ಆಚರಿಸುತೀರ ಅಂತ ಕಾಮೆಂಟ್ ಮಾಡಿ.
Comments
Post a Comment